ಭಾರತಾಂಬೆಯೊಂದಿಗೆ ಕನ್ನಡಾಂಬೆಯನ್ನು ಬೆಸೆದ ರಾಷ್ಟ್ರಕವಿ ರವೀಂದ್ರರು..

0
23

ಪ್ರಶಾಂತ್ ಕುಮಾರ್:

 ಪ್ರಪಂಚದ ಸುಂದರ ರಾಷ್ಟ್ರಗೀತೆಗಳಲ್ಲಿ ಒಂದು ಎಂಬ ಕೀರ್ತಿಯನ್ನು ಪಡೆದಿರುವ ನಮ್ಮ ದೇಶದ ರಾಷ್ಟ್ರಗೀತೆಯಾದ, ‘ಜನ ಗಣ ಮನ’ ಎಂಬ ಅರ್ಥಪೂರ್ಣ ಹಾಗು ದೇಶ ಪ್ರೇಮವನ್ನು ಇಮ್ಮಡಿ ಗೊಳಿಸುವ ಗೀತೆಯನ್ನು ರಚಿಸಿದ ಮಹಾಕವಿ, ಸಾಹಿತಿ ನಮ್ಮ ರವೀಂದ್ರನಾಥ್ ಟ್ಯಾಗೋರ್‌ರವರು.ರಾಷ್ಟ್ರಪಿತ ಮಹಾತ್ಮಗಾಂಧೀಯವರಿಂದ ‘ಗುರುದೇವ’ ಎಂದು ಕರೆಯಿಸಿಕೊಂಡ, ಭಾರತ ದೇಶ ಹಾಗು ವಿಶ್ವ ಕಂಡ ಶ್ರೇಷ್ಠ ಕವಿಯೇ ರವೀಂದ್ರನಾಥ್‌ರು.

ಪಿರಾಲೀ ಬ್ರಾಹ್ಮಣ ಸಮುದಾಯದಲ್ಲಿ 7ನೇ ಮೇ, 1861ರಂದು ಕಲ್ಕತ್ತಾದಲ್ಲಿ ರವೀಂದ್ರನಾಥರು ಜನಿಸಿದರು. ತಂದೆ ದೇವೇಂದ್ರನಾಥ ಟ್ಯಾಗೋರ್, ತಾಯಿ ಶಾರಾದಾದೇವಿ. ರವೀಂದ್ರರು ಬಾಲ್ಯದಲ್ಲಿಯೇ ಪ್ರಕೃತಿ ಪ್ರೇಮಿಯಾಗಿದ್ದರು. ಆ ಚಿಕ್ಕ ವಯಸ್ಸಿನಲ್ಲಿಯೇ, ಪಂಜರದ ಗಿಳಿಗೂ ಮತ್ತು ಕಾಡಿನಲ್ಲಿ ಸ್ವತಂತ್ರವಾಗಿ ಬದುಕುವ ಗಿಳಿಗೂ ನಡುವೆ ಇರುವ ವ್ಯತ್ಯಾಸವನ್ನು, ಆ ಎರಡು ಗಿಳಿಗಳ ನಡುವೆ ಸಂವಾದ ನೆಡೆದಂತೆ ಕಲ್ಪಿಸಿಕೊಂಡು ಒಂದು ಸೊಗಸಾದ, ಅರ್ಥಗರ್ಭಿತವಾದ ಕವನವನ್ನು ರಚಿಸಿದ್ದರಂತೆ.

ಮೂಲತಃ ಬಂಗಾಳಿ ಕವಿಗಳಾಗಿದ್ದ ರವೀಂದ್ರನಾಥರವರ ಮನಸ್ಸಿನಲ್ಲಿ ಬಂಗಾಳಿ ವಾಕ್ಯವಾದ ‘ಜಲ್ ಪಡೇ ಪಾತಾ ನಡೇ’ (ಮಳೆ ಬೀಳುತ್ತದೆ ಎಲೆ ಉದುರುತ್ತದೆ) ಬಹುಕಾಲ ಅಚ್ಚೊತ್ತಲ್ಪಟ್ಟಿತು.

ಅಂದಿನ ದಿನಗಳಲ್ಲಿ ರವೀಂದ್ರನಾಥರಿಗೆ ಶಾಲೆಯಲ್ಲಿ ಅನುಭವವಾಗುತ್ತಿದ್ದ ಶಿಕ್ಷೆ, ಶಿಸ್ತುಗಳಿಂದ ರೋಸಿಹೋಗಿ, ನಾನು ಒಬ್ಬ ಹುಡುಗಿಯಾಗಿ ಜನಿಸಬಾರದಿತ್ತೇ ಎಂದು ಎಷ್ಟೋ ಸಲ ಅಂದುಕೊಂಡಿದ್ದರಂತೆ. ಕಾರಣ, ಅಂದಿನ ಕಾಲದಲ್ಲಿ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಶಾಲೆಗೆ ಕಳುಹಿಸುವುದು ತುಂಬಾ ಕಡಿಮೆ. ಹಾಗಾಗಿ, ಹೆಣ್ಣುಮಕ್ಕಳೆಲ್ಲರೂ ಕವಡೆ ಆಡಿಕೊಂಡು ಸಂತೋಷವಾಗಿರುವುದನ್ನು ರವೀಂದ್ರರು ತಾವು ಶಾಲೆಗೆ ಹೋಗುವ ಸಮಯದಲ್ಲಿ ನೋಡಿದ್ದರು.
ರವೀಂದ್ರರಿಗೆ ಕಲೆ, ಕತೆ, ಸಾಹಿತ್ಯಾಸಕ್ತಿಗಳು ರಕ್ತಗತವಾಗಿ ಬಂದಿದ್ದವು. ತಂದೆ ಸ್ವತಃ ಪಂಡಿತರು, ಅಣ್ಣಂದಿರು ಕವಿಗಳು, ಸಾಹಿತ್ಯದ ಆರಾಧಕರಾಗಿದ್ದರು. ಟ್ಯಾಗೋರ್‌ರು ತಮ್ಮ 9ನೇ ವಯಸ್ಸಿನಲ್ಲಿಯೇ ಬಂಗಾಳಿ ಭಾಷೆಯಲ್ಲಿ ಮೊಟ್ಟಮೊದಲ ಕತೆಯನ್ನು ’ತಾವರೆ’ ಹೂವನ್ನು ಕುರಿತಾಗಿ ಬರೆದಿದ್ದರು. ಈ ಕತೆ ಅವರ ನೆರೆಹೊರೆಯವರಲ್ಲಿ ಹಾಗು ಬಂಧುಗಳಲ್ಲಿ ರವೀಂದ್ರರಿಗೆ ಸಾಹಿತ್ಯದಲ್ಲಿದ್ದ ಆಸಕ್ತಿಯನ್ನು ಪ್ರದರ್ಶಿಸಿತು.

ರವೀಂದ್ರನಾಥ್ ಟ್ಯಾಗೋರ್‌ರರು ಹದಿಹರಯಕ್ಕೆ ಕಾಲಿಡುತ್ತಲೇ, ಅವರಿಗೆ ಪದ್ಧತಿಯಂತೆ ಉಪನಯನವನ್ನು ಮಾಡಿಸಲಾಯಿತು. ಈ ಸಂದರ್ಭದಲ್ಲಿ ಅವರು ತಲೆಬೋಳಿಸಿಕೊಳ್ಳಬೇಕಾಗಿ ಬಂದುದು, ರವೀಂದ್ರರಿಗೆ ವಯೋಸಹಜವಾಗಿ ಕಿರಿಕಿರಿಯನ್ನು ತಂದುಕೊಟ್ಟಿತು. ಕಾರಣ, ಶಾಲೆಗೆ ಹೋದರೆ ಆಂಗ್ಲ ವಿದ್ಯಾರ್ಥಿಗಳು ಕೀಟಲೆ ಮಾಡುವರೋ ಎಂಬ ಆತಂಕ ಅವರಿಗೆ ಕಾಡುತ್ತಿತ್ತು.

ಇದೇ ಸಂದರ್ಭದಲ್ಲಿ, ತಂದೆ ದೇವೇಂದ್ರನಾಥ ಟ್ಯಾಗೋರರು ರವೀಂದ್ರರನ್ನು ಹಿಮಾಲಯಕ್ಕೆ ಕರೆದುಕೊಂಡು ಹೊರಟರು. ಹಿಮಾಲಯದ ಪ್ರಯಾಣದುದ್ದಕ್ಕೂ ಕಂಡುಬಂದ ನೋಟಗಳು, ರಮಣೀಯ ಸನ್ನಿವೇಶಗಳು ರವೀಂದ್ರರರ ಹೃದಯದಲ್ಲಿ ಅನೇಕ ಕತೆಗಳಿಗೆ ಜನ್ಮ ತಂದುಕೊಟ್ಟಿತು. ಅಲ್ಲಿ ಕಂಡುಬಂದ ಶಿಖರಗಳು, ನದಿ, ಸರೋವರಗಳು, ಸ್ವಚ್ಛತೆ, ಸೌಂದರ್ಯ ರವೀಂದ್ರರ ಮೇಲೆ ಬಿಸಿಲಿನ ಕಿರಣಗಳಂತೆ ಬಿದ್ದು, ಅವರಲ್ಲಿದ್ದ ಕತಾ ಶಕ್ತಿಯನ್ನು ಪ್ರವಾಹವಾಗಿ ಹರಿಯುವಂತೆ ಮಾಡಿತು.
1875ರಲ್ಲಿ ಜರುಗಿದ ಹಿಂದೂ ಮೇಳದಲ್ಲಿ, ರವೀಂದ್ರರು ಒಂದು ಕತೆಯನ್ನು ರಚಿಸಿ ಓದಿದರು. ಇದಾದ ನಂತರ, ಈ ಯುವ ಕವಿಗೆ ಪ್ರೋತ್ಸಾಹ, ಪ್ರಶಂಸೆಗಳು ಹೆಚ್ಚಾಗತೊಡಗಿದವು. 17ರ ಹರೆಯದಲ್ಲಿ ರವೀಂದ್ರರಿಗೆ ತನ್ನ ಅಣ್ಣನೊಂದಿಗೆ ಇಂಗ್ಲೆಂಡಿಗೆ ತೆರೆಳುವ ಸದವಕಾಶ ಒದಗಿ ಬಂತು. 1878ರಲ್ಲಿ ಅಣ್ಣ-ತಮ್ಮ ಇಬ್ಬರು ‘ಎಸ್. ಎಸ್. ಪೂನಾ’ ಎಂಬ ಹಡಗಿನಲ್ಲಿ ಇಂಗ್ಲೆಂಡಿಗೆ ತೆರೆಳಿದರು. ಇಂಗ್ಲೆಂಡಿನ ಪ್ರವಾಸ ಕಾಲ ಸಂದರ್ಭದಲ್ಲಿ ರವೀಂದ್ರರು ‘ಭಗ್ನತರಿ’ ಎಂಬ ಪದ್ಯವನ್ನು ರಚಿಸಿದರು. ತದನಂತರ ಭಗ್ನ ಹೃದಯ, ವಾಲ್ಮೀಕಿ ಪ್ರತಿಭಾ, ಕಾಲ್‌ಮೃಗಯಾ ಮುಂತಾದ ನಾಟಕಗಳನ್ನು ರಚಿಸಿ, ನಿರ್ದೇಶಿಸಿ, ನಟಿಸಿ, ಸಂಗೀತ ನೀಡಿ ಅಪಾರ ಜನ ಮನ್ನಣೆಯನ್ನು ಪಡೆದರು.

ರವೀಂದ್ರರಿಗೆ ಕನ್ನಡ ನಾಡಿನೊಂದಿಗಿದ್ದ ಅವಿನಾಭಾವ ಸಂಬಂಧ: ಅಣ್ಣ ಸತ್ಯೇಂದ್ರನಾಥರು ಕಾರಾವಾರದಲ್ಲಿ ಜಿಲ್ಲಾಧಿಕಾರಿ ಯಾಗಿದ್ದಾಗ ರವೀಂದ್ರನಾಥರು ಇಲ್ಲಿಗೆ ಬಂದಿದ್ದರು. ಕಾರಾವಾರದಲ್ಲಿದ್ದ ಅರ್ಧ ಚಂದ್ರಾಕೃತಿಯ ಕಡಲ ತೀರ, ಸುತ್ತಮುತ್ತಲಿನ ತೆಂಗಿನ ತೋಟಗಳು, ಬೆಟ್ಟಗುಡ್ಡಗಳು, ಕಂಗಿನ ಮರಗಳ ಸಾಲು, ಹೆಂಚಿನ ಮನೆಗಳು, ಬೆಸ್ತರ ಶ್ರಮಿಕ ಜೀವನ ಶೈಲಿ ಪ್ರತಿಯೊಂದು ರವೀಂದ್ರರ ಮನ ಸೂರೆಗೊಂಡವು. ಇದೇ ಸ್ಫೂರ್ತಿಯಿಂದ ಅವರು, ‘ಪ್ರಕೃತೀರ್ ಪ್ರತಿಶೋಧ’ ಎಂಬ ಹೆಸರಾಂತ ನಾಟಕದ ರಚನೆ ಮಾಡಿದರು. ಇದು ಮುಂದೆ ‘ಸನ್ಯಾಸಿ’ ಎಂಬ ಹೆಸರಿನಲ್ಲಿ ಇಂಗ್ಲಿಷ್‌ನಲ್ಲಿ ಪ್ರಕಟವಾಯಿತು.
1883ರಲ್ಲಿ ಭವತಾರಿಣಿ ಎಂಬ ಕನ್ಯೆಯೊಂದಿಗೆ ರವೀಂದ್ರನಾಥರ ವಿವಾಹವಾಯಿತು. ತನ್ನ ಪತ್ನಿಗೆ ‘ಮೃಣಾಲಿನಿ’ ಎಂಬ ಹೊಸ ಹೆಸರನ್ನಿಟ್ಟರು ರವೀಂದ್ರರು.

ರವೀಂದ್ರನಾಥರು ತಮ್ಮ ಪ್ರತಿಯೊಂದು ಕೃತಿಯ ನಂತರವೂ ಬೇರೆ ಬೇರೆ ಸ್ಥಳಕ್ಕೆ ಪ್ರವಾಸ ಹೋಗುವ ಅಭ್ಯಾಸವಿರಿಸಿಕೊಂಡಿದ್ದರು. ಎಲ್ಲೇ ಹೋದರೂ ಆ ಸ್ಥಳದ ಪ್ರಕೃತಿ ಸೌಂದರ್ಯ, ಹೊಸತನಗಳು ಅವರ ಮನಸ್ಸಿನಲ್ಲಿ ಕತೆಯೊಂದಕ್ಕೆ ಜನ್ಮ ನೀಡುತ್ತಿದ್ದವು. 1889ರಲ್ಲಿ ಪ್ರಕಟವಾದ ‘ಮಾನಸೀ’ ಎಂಬ ಕವನ ಸಂಕಲನವು ಅವರಿಗೆ ಬಂಗಾಳಿ ಕವಿಗಳಲ್ಲಿ ಅಗ್ರಸ್ಥಾನವನ್ನು ತಂದುಕೊಟ್ಟಿತು.

ರವೀಂದ್ರನಾಥ್ ಟ್ಯಾಗೋರ್‌ರವರ ಸಾಧನೆಗಳಲ್ಲಿ ಅವರು ಕಟ್ಟಿ ಬೆಳೆಸಿದ ಸಂಸ್ಥೆ ‘ಶಾಂತಿನಿಕೇತನ’ ಮೇರು ಶಿಖರವಾಗಿದೆ. ಅವರ ಕೀರ್ತಿಗೊಂದು ಶಾಶ್ವತ ಸ್ಮರಣಿಕೆಯಾಗಿ ಉಳಿದಿದೆ. ಶಾಂತಿನಿಕೇತನ ಒಂದು ವಸತಿ ಶಾಲೆ. ಅಲ್ಲಿ ಶಿಕ್ಷಣ ಬಂಗಾಳಿ ಮಾಧ್ಯಮವಾಗಿತ್ತು. ಶಾಂತಿನಿಕೇತನವು ಋಷಿ ಆಶ್ರಮ ಗಳಂತೆ ಹಸಿರು ಪ್ರಕೃತಿಯ ಮಡಿಲಿನಲ್ಲಿ ನೆಲೆಗೊಂಡಿತ್ತು. ಇದೇ ಶಾಂತಿನಿಕೇತನವು ಡಿಸೆಂಬರ್ 22ರ 1918ರಂದು ‘ವಿಶ್ವಭಾರತೀ’ ಎಂಬ ಹೆಸರಿನ ವಿಶ್ವವಿದ್ಯಾಲಯವಾಗಿ ರೂಪು ತಾಳಿತು.
ರವೀಂದ್ರರ ‘ಗೀತಾಂಜಲೀ’ ಕವನ ಸಂಕಲನ ಇಡೀ ವಿಶ್ವದ ಗಮನ ಸೆಳೆಯಿತು. ಅನ್ಯ ಸಂಸ್ಕೃತಿಯ ಜನರು ಕೂಡ ಈ ಕತೆಗಳಿಗೆ ಭಾವಪರವಶರಾಗಿ ಮಾರುಹೋದರು. 1913ರ ನವೆಂಬರ್ 13ರಂದು ಗೀತಾಂಜಲಿಗೆ ನೋಬೆಲ್ ಪ್ರಶಸ್ತಿ ಪ್ರಕಟವಾಯಿತು. 1914ರ ಜನವರಿ 29ರಂದು ಈ ಪ್ರತಿಷ್ಟಿತ ಪ್ರಶಸ್ತಿ ರವೀಂದ್ರರಿಗೆ ಪ್ರಧಾನವಾಯಿತು.

ವಯೋಸಹಜವಾಗಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ರವೀಂದ್ರರು 1941, ಆಗಸ್ಟ್ 7ರಂದು ತಮ್ಮ ಕೊನೆ ಉಸಿರೆಳೆದರು. ವಿಶ್ವ ಮಟ್ಟದಲ್ಲಿ ಶ್ರೇಷ್ಟ ಕವಿಯಾಗಿ, ಸಾಹಿತಿಯಾಗಿ ಪ್ರಸಿದ್ಧ ನೋಬೆಲ್ ಪ್ರಶಸ್ತಿಯನ್ನು ಪಡೆಯುವುದರ ಮೂಲಕ ಭಾರತ ದೇಶಕ್ಕೆ ಪ್ರಾಪಂಚಿಕವಾಗಿ ಅಪಾರ ಮನ್ನಣೆ ಹಾಗು ಕೀರ್ತಿಯನ್ನು ತಂದುಕೊಟ್ಟ ಹೆಗ್ಗಳಿಕೆ ನಮ್ಮ ಹೆಮ್ಮೆಯ ರವೀಂದ್ರರಿಗೆ ಸಲ್ಲುತ್ತದೆ.

LEAVE A REPLY

Please enter your comment!
Please enter your name here