‘ಭಾರತ ಬಿಟ್ಟು ತೊಲಗಿ; ಚಳುವಳಿ ದೇಶದ ಐಕತ್ಯೆಯ ಸಂದೇಶಕ್ಕೆ ಸಾಕ್ಷಿ: ಮಹೇಶ್ವರಿ ಗುರು

0
35

ಬಳ್ಳಾರಿ:

      ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಭಾರತ ಬಿಟ್ಟು ತೊಲಗಿ ಚಳವಳಿ ದೇಶದ ಐಕ್ಯತೆಯ ಸಂದೇಶವನ್ನು ತೋರಿಸಿಕೊಟ್ಟಿದೆ ಎಂದು ಕುರುಗೋಡು ಪುರಸಭೆಯ ಅಧ್ಯಕ್ಷೆ ವಿ.ಮಹೇಶ್ವರಿ ಗುರು ಹೇಳಿದರು.

      ತಾಲೂಕಿನ ಕುರುಗೋಡಿನ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ಭಾರತ ಬಿಟ್ಟು ತೊಲಗಿ ಚಳವಳಿಯ ನೆನಪಿನ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸ್ವಾತಂತ್ರ ಹೋರಾಟಕ್ಕಾಗಿ ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ನಡೆದ ಈ ಚಳವಳಿ ಭಾರತದ ಸ್ವಾತಂತ್ರಕ್ಕಾಗಿ ನಡೆದ ಸಂಗ್ರಾಮದಲ್ಲಿ ವಿಶೇಷ ಮೈಲುಗಲ್ಲಾಗಿ ನಿಲ್ಲುತ್ತದೆ. ಈ ಚಳವಳಿ ಜನತಾ ಚಳುವಳಿಯಾಗಿ ರೂಪುಗೊಂಡು ಬ್ರಿಟೀಷರ ಆಡಳಿತದ ವಿರುದ್ಧ ದಂಗೆ ಏಳುವಂತೆ ಮಾಡಿತು ಎಂದು ಅವರು ಹೇಳಿದರು.

      ಕುರುಗೋಡಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕರಾದ ಹೆಚ್.ವಿಶ್ವನಾಥ ಗೌಡ ಅವರು ಮಾತನಾಡಿ,ಸ್ವಾತಂತ್ರ ಸಂಗ್ರಾಮದ ಎಲ್ಲಾ ಚಳವಳಿಗಳನ್ನು ಇಂದಿನ ಯುವ ಜನಾಂಗ ಸ್ಮರಿಸಿಕೊಂಡು ಮುನ್ನಡೆಯಬೇಕು. ಇತಿಹಾಸದಿಂದ ಪಾಠ ಕಲಿತು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು. ಈ ಸಂದರ್ಭದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಕೆ.ಎನ್.ನಾಗಭೂಷಣ, ಉಪ ಪ್ರಾಚಾರ್ಯ ರವೀಂದ್ರ, ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಉಪ ನಿರ್ದೇಶಕರಾದ ಡಾ.ಜಿ.ಡಿ.ಹಳ್ಳಿಕೇರಿ ಪ್ರಾಸ್ತಾವಿಕ ಮಾತನಾಡಿದರು. ಕ್ಷೇತ್ರ ಪ್ರಚಾರ ಸಹಾಯಕ ಎನ್.ರಾಮಕೃಷ್ಣ ಅವರು ನಿರೂಪಿಸಿ ವಂದಿಸಿದರು.

   ಜಾಗೃತಿ ಜಾಥಾ:

      ವೇದಿಕೆ ಕಾರ್ಯಕ್ರಮದ ಮುನ್ನ ಭಾರತ ಬಿಟ್ಟು ತೊಲಗಿ ಚಳವಳಿ ಮಹತ್ವ ಸಾರುವ ಸಂದೇಶ ಹೊತ್ತ ಜಾಗೃತಿ ಜಾಥಾವು ಕುರುಗೋಡು ಗ್ರಾಮದ ವಿವಿಧ ಮುಖ್ಯ ಬೀದಿಗಳಲ್ಲಿ ಸಂಚರಿಸಿತು. ಕುರುಗೋಡು ಪುರಸಭೆಯ ಉಪಾಧ್ಯಕ್ಷೆ ಗಾದಿಲಿಂಗಮ್ಮ ಅವರು ಚಾಲನೆ ನೀಡಿದರು. ಕಾರ್ಯಕ್ರಮದ ಅಂಗವಾಗಿ ರಸಪ್ರಶ್ನೆ, ಚಿತ್ರಕಲಾ ಹಾಗೂ ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.
 

LEAVE A REPLY

Please enter your comment!
Please enter your name here