ಮಂಗಳಮುಖಿಯರ ಸಬಲೀಕರಣಕ್ಕೆ ವಿನೂತನ ಯೋಜನೆ ಜಾರಿಗೆ ಕ್ರಮ: ಜಿ.ಪಂ. ಸಿಇಒ ಡಾ.ರಾಜೇಂದ್ರ.

0
50

ಬಳ್ಳಾರಿ:

      ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಮಂಗಳಮುಖಿಯರ ಸಬಲೀಕರಣ ಹಾಗೂ ಅವರ ಕಲ್ಯಾಣಕ್ಕೆ ಜಿಲ್ಲಾಡಳಿತ ಸಿದ್ದವಿದ್ದು, ಅವರಿಗೆ ಜಿಲ್ಲಾ ಖನಿಜ ನಿಧಿ(ಡಿಎಂಎಫ್) ಅಡಿ ವಿನೂತನ ಯೋಜನೆಯನ್ನು ಜಾರಿಗೆ ತರಲು ಕ್ರಮಕೈಗೊಳ್ಳಲಾಗುವುದು ಎಂದು ಜಿ.ಪಂ. ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ಹೇಳಿದರು.

      ನಗರದ ಗೋವಿಂದಪ್ಪ ಕಲ್ಯಾಣ ಮಂಟಪದಲ್ಲಿ ರಾಜ್ಯ ಏಡ್ಸ್ ಪ್ರಿವೆನ್‍ಷಿನ್ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿರ್ವಾಹಕ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸೌಖ್ಯ ಬೆಳಕು ಸಮುದಾಯ ಸೇವಾ ಸಂಸ್ಥೆ, ಅರ್ಧನಾರೀಶ್ವರಿ(ಮಂಗಳಮುಖಿ) ಸಂಘ, ಒಂದೇಡೆ ಸಂಸ್ಥೆ ಆಶ್ರಯದಲ್ಲಿ ಗುರುವಾರ ಮಂಗಳಮುಖಿಯರಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

      ಮಂಗಳಮುಖಿಯರ ಕಲ್ಯಾಣಕ್ಕಾಗಿ ವಿನೂತನ ಯೋಜನೆ ಜಾರಿಗೆ ತರುವುದರ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ ಅವರೊಂದಿಗೆ ಚರ್ಚಿಸಿ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ವಿವರಿಸಿದ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು, ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಮಂಗಳಮುಖಿಯರು ಸಮಾಜದ ಎಲ್ಲರೊಂದಿಗೆ ಸಮಾನರಾಗಿ ಬೇರೆಯಬೇಕು ಮತ್ತು ಮುಂದೆ ಬರಬೇಕು ಎಂಬ ದೃಷ್ಟಿಯಿಂದ ಸರಕಾರ ಕಂದಾಯ ಇಲಾಖೆ ಮೂಲಕ ಮಾಸಾಶನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿ ವಿವಿಧ ಇಲಾಖೆಗಳಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಇದರ ಪ್ರಯೋಜನವನ್ನು ತಾವು ಪಡೆದುಕೊಳ್ಳಬೇಕು ಎಂದರು.

      ಆರೋಗ್ಯಕ್ಕೆ ಮಾರಕವಾಗುವಂತ ಯಾವುದೇ ರೀತಿಯ ಚಟುವಟಿಕೆಗಳಲ್ಲಿ ತಾವು ತೊಡಗಿಸಿಕೊಳ್ಳಬೇಡಿ; ತಮ್ಮ ಸೊಂಕಿನ ಪರೀಕ್ಷೆಯನ್ನು ಕಡೆಗಣಿಸದೇ ಆರೋಗ್ಯದ ಮತ್ತು ತಮ್ಮ ಭವಿಷ್ಯದ ದೃಷ್ಟಿಯಿಂದ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದ ಜಿಪಂ ಸಿಇಒ ಅವರು ತಾವು ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಬದುಕು ನಡೆಸಬೇಕು ಎಂದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಬಿ.ಹಂದ್ರಾಳ್ ಅವರು ಮಾತನಾಡಿ, ತುಳಿತಕ್ಕೊಳಗಾದ ಮಂಗಳಮುಖಿ ಸಮುದಾಯಕ್ಕೆ ಏನಾದರೂ ಸ್ಥಾನಮಾನ ಮತ್ತು ಹಕ್ಕು ಎಂಬುದು ಸಿಕ್ಕಿದ್ದರೇ ಅದು ಸುಪ್ರೀಂಕೋರ್ಟ್ ತೀರ್ಪಿನ ಫಲದಿಂದ ಎಂದರು.

      ಸುಪ್ರೀಂ ಸೂಚನೆ ಅನ್ವಯ ಸರಕಾರಗಳು ತಮ್ಮ ಕಲ್ಯಾಣಕ್ಕಾಗಿ ನಾನಾ ಯೋಜನೆಗಳು ಜಾರಿಗೆ ತಂದಿದ್ದು,ಅವುಗಳ ಪ್ರಯೋಜನವನ್ನು ತಾವು ಪಡೆದುಕೊಳ್ಳಬೇಕು ಎಂದು ಹೇಳಿದ ಅವರು, ಮಂಗಳಮುಖಿ ಸಮುದಾಯಗಳಿಗೆ ಸಿಗುವ ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿಲ್ಲ, ಅನೇಕ ಕಡೆ ದೌರ್ಜನ್ಯ ಮತ್ತು ತೊಂದರೆ ಅನುಭವಿಸುತ್ತಿದ್ದಾರೆ ಎಂದು ವಿಷಾದಿಸಿದರು. ತಮಗೆ ಯಾವುದೇ ಕಾರಣಕ್ಕೂ ತಾರತಮ್ಯದಿಂದ ನೋಡುವ ಹಾಗಿಲ್ಲ. ಸಂವಿಧಾನದಲ್ಲಿ ನೀಡಲಾಗಿರುವ ಎಲ್ಲ ಸೌಲಭ್ಯಗಳಿಗೆ ಸಮಾನ ಅರ್ಹರು ತಾವು ಎಂದು ಹೇಳಿದ ಅವರು, ಮಹಾರಾಷ್ಟ್ರ, ಆಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಮಂಗಳಮುಖಿ ಸಮುದಾಯದಿಂದ ನ್ಯಾಯಾಧೀಶರಾಗಿದ್ದು,ಅವರು ಲೋಕ ಅದಾಲತ್‍ನಲ್ಲಿ ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಗೊಳಿಸುತ್ತಿದ್ದು,ಇದನ್ನು ನೋಡಿದರೇ ತಮ್ಮಲ್ಲಿ ಅಂತ ಪ್ರತಿಭೆಗಳಿವೆ ಎಂಬುದು ಗೊತ್ತಾಗುತ್ತದೆ ಎಂದರು.

      ಕಾನೂನುಬದ್ಧವಾಗಿ ತಮಗೆ ದೊರಕಬೇಕಾದ ಯಾವುದೇ ರೀತಿಯ ಸೌಲಭ್ಯಗಳ ಸಹಾಯದ ಬಗ್ಗೆ ಮಾಹಿತಿ, ಸಹಾಯ ಬೇಕಾಗಿದ್ದರೇ ಜಿಲ್ಲಾ ಸೇವೆಗಳ ಪ್ರಾಧಿಕಾರಕ್ಕೆ ಬನ್ನಿ ಎಂದು ಸಲಹೆ ನೀಡಿದ ನ್ಯಾ.ಹಂದ್ರಾಳ್ ಅವರು, 18 ವರ್ಷ ಮೇಲ್ಪಟ್ಟ ಬುದ್ದಿಮಾಂಧ್ಯ ಹೆಣ್ಮಕ್ಕಳÀ ಮತ್ತು ಎಚ್‍ಐವಿ ಪೀಡಿತ ಮಹಿಳೆಯರಿಗಾಗಿ ವಸತಿ ನಿಲಯಗಳನ್ನು ಸ್ಥಾಪಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದರು. ಸರಕಾರದಿಂದ ಸಿಗುವ ಸೌಲಭ್ಯಗಳು ಸಿಗದೇ ಇದ್ದಾಗ ಮತ್ತು ಮನೆಯಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ಸಿಗದಿದ್ದಾಗ ಮನೆಯಿಂದ ಹೊರಬರುವ ಮಂಗಳಮುಖಿಯರು ಅಪಾಯಕಾರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಇದ್ದು, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅವರ ಸಮಸ್ಯೆ ಆಲಿಸಿ ಕ್ರಮಕ್ಕೆ ಮುಂದಾಗಬೇಕು ಎಂದರು. ಮಕ್ಕಳ ಕಳ್ಳತನ ಮಾಡಿ ಆ ಮಕ್ಕಳನ್ನು ಮಂಗಳಮುಖಿಯರನ್ನಾಗಿ ಪರಿವರ್ತಿಸುವ ದುಸ್ಸಾಹಸಕ್ಕೆ ಯಾವುದೇ ಕಾರಣಕ್ಕೂ ಕೈಹಾಕದಿರಿ ಎಂದು ಸಲಹೆ ಮಾಡಿದ ಅವರು, ಆ ರೀತಿ ದುಸ್ಸಾಹಸಕ್ಕಿಳಿದಲ್ಲಿ ಮಹಿಳೆ ಮತ್ತು ಮಕ್ಕಳ ಸಾಗಾಣಿಕೆ ಕಾಯಿದೆ ಅಡಿ ಕ್ರಮಕೈಗೊಳ್ಳಲಾಗುವುದು ಎಂದರು.

      ಎಸ್ಪಿ ಅರುಣ ರಂಗರಾಜನ್ ಅವರು ಮಾತನಾಡಿ, ಮಹಿಳೆ ಮತ್ತು ಮಕ್ಕಳನ್ನು ಕಳ್ಳತನ ಮಾಡಿ ಆ ಮಕ್ಕಳನ್ನು ಅವರನ್ನು ಮಂಗಳಮುಖಿಯರನ್ನಾಗಿ ಪರಿವರ್ತಿಸಲಾಗುತ್ತಿದೆ ಎಂಬ ಪ್ರಕರಣಗಳು ಅಲ್ಲಲ್ಲಿ ಕೇಳಿಬರುತ್ತಿದ್ದು, ಅಂತವುಗಳು ಕಂಡುಬಂದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಕ್ರಮಕೈಗೊಳ್ಳಲಾಗುವುದು ಎಂದರು. ದೌರ್ಜನ್ಯದಿಂದ ಹಣ ವಸೂಲಿ ಮಾಡದಿರಿ ಎಂದು ಸಲಹೆ ನೀಡಿದರು.

      ಜಿಲ್ಲಾ ಎಚ್‍ಐವಿ,ಏಡ್ಸ್ ನಿರ್ವಹಣಾಧಿಕಾರಿ ಡಾ.ನಿಜಾಮುದ್ದೀನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳಮುಖಿ ಅವರ ಸಂಘದ ಅಧ್ಯಕ್ಷೆ ಎಸ್.ಲಕ್ಷ್ಮಮ್ಮ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗೇಶ ಬಿಲ್ವಾ, ಅರ್ಧನಾರೀಶ್ವರ(ಮಂಗಳಮುಖಿ) ಸಂಘದ ಕಾರ್ಯದರ್ಶಿ ಪರ್ವಿನ್, ವಿಜಯನಗರ ಶ್ರೀ ಕೃಷ್ಣ ದೇವರಾಯ ವಿವಿ ಪ್ರಾಧ್ಯಪಕ ಡಾ.ಮೋಹನ್‍ದಾಸ್, ಸೌಖ್ಯ ಬೆಳಕು ಸಮುದಾಯ ಸೇವಾ ಸಂಸ್ಥೆಯ ಲಕ್ಷ್ಮೀ, ಒಂದೆಡೆ ಸಂಸ್ಥೆಯ ಜಿಲ್ಲಾ ಸಂಯೋಜಕಿ ಮಧುಶ್ರೀ ಸೇರಿದಂತೆ ಐದು ನೂರಕ್ಕೂ ಹೆಚ್ಚು ಲಿಂಗ ಅಲ್ಪಸಂಖ್ಯಾತರು ಮತ್ತು ಮಂಗಳಮುಖಿಯರು ಕಾರ್ಯಾಗಾರದಲ್ಲಿ ಇದ್ದರು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಕೆಲ ಲಿಂಗ ಅಲ್ಪಸಂಖ್ಯಾತರು ಮತ್ತು ಮಂಗಳಮುಖಿಯರು ತಮ್ಮ ಸಮಸ್ಯೆಗಳ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಕೌಟುಂಬಿಕ ಮತ್ತು ಲೈಂಗಿಕ ದೌರ್ಜನ್ಯ, ಧ್ವನಿ, ಹಕ್ಕುಗಳು ಮತ್ತು ಘನತೆಗಾಗಿ ಹಕ್ಕೊತ್ತಾಯ ಎಂಬ “ಒಂದೆಡೆ” ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
 

LEAVE A REPLY

Please enter your comment!
Please enter your name here