ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲು ಸಿದ್ದೇಶ್ ಕರೆ

0
22

ದಾವಣಗೆರೆ:

      ಪೋಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಸಂಸದ ಜಿ.ಎಂ.ಸಿದ್ದೇಶ್ವರ್ ಶಿವಸಿಂಪಿ ಸಮಾಜ ಬಾಂಧವರಿಗೆ ಕರೆ ನೀಡಿದರು.

      ನಗರದ ಶಿವಯೋಗಾಶ್ರಮ ಆವರಣದಲ್ಲಿ ಭಾನುವಾರ ಶಿವಸಿಂಪಿ ಸಮಾಜದಿಂದ ಏರ್ಪಡಿಸಿದ್ದ ಜಿಲ್ಲಾ ಶಿವಸಿಂಪಿ ಸಮಾವೇಶ, ಕುಲಗುರು ಶಿವದಾಸಿಮಯ್ಯ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಸಮಾಜದ ಪರಿವರ್ತನೆ ಹಾಗೂ ಅಭಿವೃದ್ಧಿಗೆ ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದೆ. ಆದ್ದರಿಂದ ಶಿವಸಿಂಪಿ ಸಮಾಜದವರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಕಿವಿಮಾತು ಹೇಳಿದರು. 

      ಮಕ್ಕಳಿಗೆ ಶಿಕ್ಷಣ ಕೊಡಿಸುವುದರಿಂದ ಕುಟುಂಬದ ವೈಯಕ್ತಿಕ ಅಭಿವೃದ್ಧಿಯ ಜೊತೆಗೆ ಸಮಾಜವೂ ಬೆಳೆಯಲಿದೆ. ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಕಷ್ಟದಲ್ಲೇ ಓದಿ ದೊಡ್ಡ ವಿಜ್ಞಾನಿಯಾಗಿ ದೇಶದ ರಾಷ್ಟ್ರಪತಿಯಾದರು. ಅವರ ಹಾದಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ. ಆದ್ದರಿಂದ ವಿದ್ಯೆಗೆ ಹೆಚ್ಚಿನ ಮಹತ್ವ ಕೊಡಬೇಕು ಎಂದರು.

      ಸಮಾಜದ ಯುವಕರು ಓದಿ ವಿದ್ಯಾವಂತರಾಗಿ ಉನ್ನತ ಸ್ಥಾನಕ್ಕೇರಬೇಕು ಎಂದು ಸಲಹೆ ನೀಡಿದ ಅವರು, ಶಿವಸಿಂಪಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಸಂಸದರ ಅನುದಾನದಲ್ಲಿ ಅಗತ್ಯ ಅನುದಾನ ನೀಡುವುದಾಗಿ ಭರವಸೆ ನೀಡಿದರು.

      ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, 12ನೇ ಶತಮಾನದಿಂದಲೂ ಬಟ್ಟೆ ಹೊಲೆಯುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಶಿವಸಿಂಪಿ ಸಮಾಜದವರು, ಇತ್ತೀಚೆಗೆ ಜವಳಿ ವ್ಯಾಪಾರಸ್ಥರಾಗಿಯೂ ಹೆಸರು ಮಾಡಿದ್ದಾರೆ. ಆದರೆ, ಈ ಸಮಾಜದಲ್ಲೂ ಬಡವರಿದ್ದು, ಸಮಾಜವನ್ನು ಹಿಂದುಳಿದ ಪ್ರವರ್ಗ-2ಎಗೆ ಸೇರಿಸಬೇಕೆಂಬ ಸಮಾಜದ ಬೇಡಿಕೆ ನ್ಯಾಯಯುತವಾಗಿದೆ. ಇದರಿಂದ ಸಮಾಜದ ಹಿಂದುಳಿದವರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಸಮಾಜದ ಅಭಿವೃದ್ಧಿಗಾಗಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು. ಎಲ್ಲರೂ ಒಗ್ಗಟ್ಟಾದರೆ ಏನನ್ನಾದರೂ ಸಾಧಿಸಲು ಸಾಧ್ಯ. ಮುಂದಿನ ದಿನಗಳಲ್ಲಿ ಎಸ್.ಎ.ರವೀಂದ್ರನಾಥ್ ಮಂತ್ರಿಯಾಗುವುದು ನಿಶ್ಚಿತವಿದ್ದು, ಶಿವಸಿಂಪಿ ಸಮಾಜದ ಎಲ್ಲ ಬೇಡಿಕೆಗಳನ್ನು ಈಡೇರಿಸಲಿದ್ದಾರೆ ಎಂದು ಹೇಳಿದರು.

      ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎಂ.ಕೊಟ್ರೇಶ್ ಉಪನ್ಯಾಸ ನೀಡಿದರು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಗಣ್ಯ ಸಾಧಕರನ್ನು ಸನ್ಮಾನಿಸಲಾಯಿತು.

      ಕಾರ್ಯಕ್ರಮದ ಸಾನಿಧ್ಯವನ್ನು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ವಹಿಸಿದ್ದರು. ಶಿವಸಿಂಪಿ ಸಮಾಜದ ಜಿಲ್ಲಾಧ್ಯಕ್ಷ ಗುರುಬಸಪ್ಪ ಬೂಸ್ನೂರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬಿಜೆಪಿ ಮುಖಂಡ ಹೆಚ್.ಎಸ್.ನಾಗರಾಜ, ಶಿವಸಿಂಪಿ ಸಮಾಜದ ಗೌರವಾಧ್ಯಕ್ಷ ಚಿಂದೋಡಿ ಚಂದ್ರಧರ, ಪ್ರೊ.ಮಲ್ಲಿಕಾರ್ಜುನ ಜವಳಿ, ಜಗದೀಶ ಬಾವಿಕಟ್ಟೆ, ಇ.ಸಿ.ಎಸ್.ಮೂರ್ತಿ, ಎಸ್.ವಿ.ಕೊಟ್ರೇಶ, ಎಸ್.ಷಣ್ಮುಖಪ್ಪ, ರಾಜಶೇಖರ, ಪ್ರಕಾಶ ಬೂಸ್ನೂರು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here