ಮಗನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಾತಾಯಿ !

0
20

ತುಮಕೂರು: ತಾನು ಹೆತ್ತ ಮಗನನ್ನೇ ಕೊಲೆ ಮಾಡಿದಾಕೆ ತಾಯಿಯೇ? ಇಂಥ ಮಹಿಳೆಯರೂ ಇರುತ್ತಾರೆಯೇ? ಕ್ರೂರಿಗಳಾಗಿರುವ ಇಂತಹವರು ಈ ಮನುಷ್ಯ ಜನ್ಮದಲ್ಲಿ ಹುಟ್ಟುವುದೇ ಮಹಾಪಾಪ… ಎಂಬಿತ್ಯಾದಿ ಪದಗಳಲ್ಲಿ ಬಹಳಷ್ಟು ಜನ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
      ದೊಡ್ಡಬಳ್ಳಾಪುರದ ತನ್ನ ಮನೆಯಲ್ಲಿ 13 ವರ್ಷದ ಮಗನ ಕತ್ತು ಕೊಯ್ದು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಮೀನಾ ಅವರ ಪ್ರಕರಣವಿದು. ತನ್ನ ಗಂಡ ನಿರೂಪಕ – ನಟ ಚಂದನ್ ದಾವಣಗೆರೆಯ ಹರಿಹರದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. ಇದರಿಂದ ಮಾನಸಿಕವಾಗಿ ಜರ್ಝರಿತಳಾಗಿದ್ದ ಮೀನಾ ಮನೆಯಲ್ಲಿಯೇ ಆ್ಯಸಿಡ್ ಸೇವಿಸಿ ಸಾವಿಗೆ ಶರಣಾಗಿದ್ದಾಳೆ. ಇದಕ್ಕೂ ಮೊದಲು ತನ್ನ ಮಗನನ್ನು ಭೀಕರವಾಗಿ ಕೊಲೆಗೈದಿದ್ದಾಳೆ.
      ತಾನು ಬೇಕಾದರೆ ಆತ್ಮಹತ್ಯೆ ಮಾಡಿಕೊಳ್ಳಲಿ, ಮಗು ಏನು ಮಹಾ ಪಾಪ ಮಾಡಿತ್ತು. ಅದನ್ನೇಕೆ ಸಾಯಿಸಬೇಕಾಗಿತ್ತು ಎಂಬ ಮಾತುಗಳು ಈಗ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ. ಆಕೆ ಮನುಷ್ಯಳೇ ಅಲ್ಲ ಎನ್ನುವ ಮಾತುಗಳೂ ಈ ಸಂದರ್ಭದಲ್ಲಿ ಕೇಳಿಬರುವುದುಂಟು. ಇಂತಹ ಘಟನೆಗಳನ್ನು ಯಾರೂ ಸಹಿಸಲಾರರು. ಅಂತಹ ಘೋರ ಕೃತ್ಯವಿದು. ವಿವೇಚನೆಯುಳ್ಳ ಯಾರೂ ಸಹ ಮಕ್ಕಳನ್ನು ಈ ಸ್ಥಿತಿಗೆ ತಂದೊಡ್ಡಿ ಸಾಯುವುದಿಲ್ಲ. ಆದರೆ ಆಕೆ ಇಂತಹ ಕೃತ್ಯ ಮಾಡಲು ಕಾರಣವಾದರೂ ಏನು ಎಂಬ ಪ್ರಶ್ನೆಗಳು ಕೆಲವರಲ್ಲಷ್ಟೇ ಉದ್ಭವಿಸಲು ಸಾಧ್ಯ.
      ಘಟನೆ, ಕೊಲೆ, ಸಾವು ಇಷ್ಟು ವಿಷಯಗಳಿಗಷ್ಟೇ ಸಾರ್ವಜನಿಕ ಚರ್ಚೆ ಸೀಮಿತವಾಗುತ್ತವೆ. ಅದರಾಚೆ ಯೋಚಿಸುವ ಮನಸ್ಥಿತಿ ಯಾರಲ್ಲೂ ಇರುವುದಿಲ್ಲ. ಕೆಲವರಷ್ಟೇ ಈ ವಿಷಯದಲ್ಲಿ ಆಳಕ್ಕಿಳಿದು ನೋಡುತ್ತಾರೆ. ಕಾರಣವೇನು ಎಂದು ಹುಡುಕುತ್ತಾರೆ. ಇದಕ್ಕೆ ಮನಃಶಾಸ್ತ್ರಜ್ಞರೇ ಬೇಕಾಗಿಲ್ಲ. ಮನೋವೈದ್ಯರ ಅಗತ್ಯವೂ ಇರುವುದಿಲ್ಲ. ಆ ಕ್ಷಣದಲ್ಲಿ ಏನಾಗಬಾರದಿತ್ತೋ ಅದು ಆಗಿ ಹೋಗಿರುತ್ತದೆ. ಇಂತಹ ಹಲವು ಉದಾಹರಣೆಗಳು ನಮ್ಮ ಕಣ್ಮುಂದೆ ಬಂದು ನಿಲ್ಲುತ್ತವೆ.
      ಕಳೆದ 2 ವರ್ಷಗಳ ಹಿಂದೆ ಮಿಡಿಗೇಶಿ ಗಡಿ ಭಾಗದ ಮಹಿಳೆಯೊಬ್ಬರು ರಾತ್ರೋರಾತ್ರಿ ಮನೆ ಬಿಟ್ಟು ಕೊರಟಗೆರೆಗೆ ಬಂದಿದ್ದಳು. ತನ್ನ ಹೆಣ್ಣು ಮಗುವಿನೊಂದಿಗೆ ಆಗಮಿಸಿದ್ದ ಈಕೆ ರಾತ್ರಿವೇಳೆ ಮಗುವನ್ನು ಹತ್ಯೆ ಮಾಡಿ ಚರಂಡಿ ಬಳಿ ಬಿಸಾಡಿ ಬಂದಿದ್ದಳು. ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಳು. ಆನಂತರ ಈಕೆಯೇ ಮಗು ಕಾಣೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ಪೊಲೀಸರ ವಿಚಾರಣೆಯ ನಂತರ ಈ ಕೃತ್ಯಕ್ಕೆ ತಾನೇ ಹೊಣೆಗಾರಳು ಎಂಬುದನ್ನು ಆಕೆ ಒಪ್ಪಿಕೊಂಡಳು.
      ಇಲ್ಲಿಗೆ ಮೂರು ವರ್ಷಗಳಿರಬಹುದು. ಗುಬ್ಬಿ ಬಳಿಯ ರೈಲ್ವೆ ನಿಲ್ದಾಣದಲ್ಲಿ ತನ್ನ ಮಗುವನ್ನು ಕಂಕುಳಲ್ಲಿ ಹೊತ್ತು ಸಾಗುತ್ತಿದ್ದ ಗೃಹಿಣಿಯೊಬ್ಬರು ತನ್ನ ತಂದೆಗೆ ದೂರವಾಣಿ ಕರೆ ಮಾಡುತ್ತಿದ್ದಳು. ಕೆಲವೇ ಸೆಕೆಂಡುಗಳಲ್ಲಿ ದಿಢೀರ್ ಶಬ್ದ ಕೇಳಿಬಂದಿತು. ಮಗುವಿನೊಂದಿಗೆ ಆಕೆ ರೈಲಿಗೆ ಸಿಕ್ಕಿದ್ದಳು. ಅದಕ್ಕೂ ಮುಂಚೆ ತಾನು ಇಹಲೋಕ ತ್ಯಜಿಸುತ್ತಿರುವ ಬಗ್ಗೆ ತನ್ನ ತಂದೆಯೊಂದಿಗೆ ಹೇಳಿಕೊಂಡಿದ್ದಳು.
      ಮೇಲ್ಕಂಡ ಎರಡೂ ಪ್ರಕರಣಗಳು ಘಟಿಸಿದಾಗ ಇಡೀ ಜಿಲ್ಲೆಯಾದ್ಯಂತ ವ್ಯಾಪಕ ಚರ್ಚೆಗಳು ನಡೆದಿದ್ದವು. ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಎರಡೂ ಪ್ರಕರಣಗಳಲ್ಲಿ ಇದಕ್ಕೆ ಕಾರಣರಾದ ಮಹಿಳೆಯರನ್ನು ವಾಚಾಮಗೋಚರವಾಗಿ ನಿಂದಿಸಲಾಗಿತ್ತು.
      ನಮ್ಮದು ಪುರುಷ ಪ್ರಧಾನ ಸಮಾಜ. ಹೆಣ್ಣು ಹುಟ್ಟಿದಾಗ ಪೋಷಕರ ಆಶ್ರಯದಲ್ಲಿ, ಮದುವೆಯಾದಾಗ ಗಂಡನ ಆಶ್ರಯದಲ್ಲಿ ಬೆಳೆಯುತ್ತಾಳೆ. ಅವಲಂಬಿತ ಜೀವನವೇ ಈಕೆಗೆ ಆಸರೆ. ತವರು ಮನೆಯನ್ನು ಬಿಟ್ಟು ಗಂಡನ ಮನೆಗೆ ಹೋದಾಗ ಆತನ ರಕ್ಷಣೆಯಲ್ಲಿಯೇ ಈಕೆ ಬದುಕುತ್ತಾಳೆ. ಒಂದು ವೇಳೆ ಆತ ಇಲ್ಲ ಎಂದರೆ ಬದುಕನ್ನು ಊಹಿಸಿಕೊಳ್ಳುವುದು ಕಷ್ಟ. ಇಂತಹ ವಾತಾವರಣ ಇರುವ ಸಮಾಜದಲ್ಲಿ ಗಂಡ ಮೃತಪಟ್ಟಾಗ ಮಾನಸಿಕವಾಗಿ ಆಕೆ ಕುಗ್ಗಿ ಹೋಗುತ್ತಾಳೆ. ಮುಂದಿನ ಭವಿಷ್ಯ ಹೇಗೆಂದು ಚಿಂತಿಸುತ್ತಾಳೆ.
      ಸಮಾಜದಲ್ಲಿ ಬದುಕುಬಹುದು. ಬದುಕಲು ಮಾರ್ಗಗಳನ್ನು ಹುಡುಕಿಕೊಳ್ಳಲೂಬಹುದು. ಆದರೆ ಕ್ರೂರ ವ್ಯವಸ್ಥೆಯಲ್ಲಿನ ಕಣ್ಣುಗಳು ಈಕೆಯ ನೆಮ್ಮದಿ ಬದುಕನ್ನು ಹಾಳು ಮಾಡುತ್ತವೆ. ಗಂಡ ಇಲ್ಲ ಎಂಬ ಮಾಹಿತಿ ತಿಳಿದರೆ ಸಾಕು ನಾಲ್ಕಾರು ಕಣ್ಣುಗಳು ಆಕೆಯತ್ತಲೇ ನೆಟ್ಟುಬಿಡುತ್ತವೆ. ಇದು ಮತ್ತಷ್ಟು ಘಾಸಿ ಮಾಡುವ ವಿಷಯ. ಈ ಕಾರಣಕ್ಕಾಗಿಯೇ ಎಷ್ಟೇ ಕಷ್ಟ ಬಂದರೂ ಗಂಡನ ಆಸರೆಯಲ್ಲಿಯೇ ಬದುಕಲು ಮಹಿಳೆ ಇಷ್ಟ ಪಡುವುದು.
      ಕಷ್ಟಪಟ್ಟು ವಿಧವೆಯ ಪಟ್ಟ ಸಹಿಸಿಕೊಂಡು ಜೀವನ ನಡೆಸಬಹುದಾದರೂ ತನ್ನ ಮಕ್ಕಳ ಚಿಂತೆ ಆಕೆಯಲ್ಲಿ ಸದಾ ಕಾಡುತ್ತದೆ. ಮಕ್ಕಳನ್ನು ಬೆಳೆಸುವ, ಓದಿಸುವ ವಿಚಾರಗಳು ತಲೆಯಲ್ಲಿ ಹೊಕ್ಕು ಮಾನಸಿಕವಾಗಿ ಅಧೈರ್ಯಳಾಗುತ್ತಾಳೆ. ಹೆಣ್ಣು ಮಕ್ಕಳು ಇದ್ದರೆ ಅವರ ಯೋಚನೆಯೇ ಹೆಚ್ಚಾಗಿ ಮಾನಸಿಕ ಅಸ್ವಸ್ಥತೆಗೂ ಕಾರಣವಾಗುತ್ತದೆ. ಹೀಗೆ ಗಂಡನ ಮೇಲೆ ಇದ್ದ ಗಾಢವಾದ ಪ್ರೀತಿ, ಪ್ರೀತಿಯಿಂದ ವಂಚಿತವಾಗುವ ಮಕ್ಕಳು, ಒಂಟಿ ಜೀವನ ಇವೆಲ್ಲವೂ ಆಕೆಯನ್ನು ಹತಾಶೆಗೊಳಿಸುತ್ತವೆ. ಮುಂದೆ ಮಕ್ಕಳಿಗೆ ಎದುರಾಗುವ ಗಂಡಾಂತರಗಳನ್ನು ತಾನೇ ಚಿಂತಿಸುತ್ತಾಳೆ. ಈ ಸಮಾಜದ ಸಹವಾಸವೇ ಬೇಡ ಎಂಬ ನಿರ್ಧಾರಕ್ಕೆ ಬಂದು ಮಕ್ಕಳನ್ನು ಸಾಯಿಸಿ ತಾನೂ ಸಾಯುವ ನಿರ್ಧಾರಕ್ಕೆ ಬಂದುಬಿಡುತ್ತಾಳೆ.
      ನಾಲ್ಕು ಗೋಡೆಗಳ ಚೌಕಟ್ಟು ಬಿಟ್ಟು ಸಮಾಜಮುಖಿಯಾಗಿ ಬೆರೆಯುವ, ಸಮಾಜವನ್ನು ಅರ್ಥ ಮಾಡಿಕೊಳ್ಳಬಲ್ಲ ಮಹಿಳೆಯರಿಗೆ ಸಮಾಜ ವಿಸ್ತಾರವಾಗಿ ಕಾಣುತ್ತದೆ. ಆದರೆ ಎಲ್ಲರಲ್ಲಿಯೂ ಆ ಮನೋಭಾವ ಇರಲಿಕ್ಕೆ ಸಾಧ್ಯವಿಲ್ಲ. ಸಂಕುಚಿತ ವ್ಯಾಪ್ತಿಯಲ್ಲಿಯೇ ಇರುವ ಮನಸ್ಸುಗಳು ಹತಾಶ ಸ್ಥಿತಿಗೆ ತಲುಪಿದಾಗ ಮಕ್ಕಳ ಕೊಲೆಯಂತಹ ಭೀಭತ್ಸ ಘಟನೆಗಳಿಗೂ ಕಾರಣರಾಗುತ್ತಾರೆ.
      ಅವಲಂಬಿತ ಜೀವನ ಸಾಗಿಸುತ್ತಿರುವಾಗ ಗಂಡ ಇಲ್ಲ ಎಂದಾದರೆ ಅದನ್ನು ಊಹಿಸಿಕೊಳ್ಳುವುದು ಕಷ್ಟ. ಮಕ್ಕಳ ಮೇಲಿನ ಪ್ರೀತಿ ಯಾವ ಮಟ್ಟಕ್ಕೆ ಬೇಕಾದರೂ ತೆಗೆದುಕೊಂಡು ಹೋಗಬಹುದು. ಮುಂದೆ ಕಷ್ಟದ ದಿನಗಳು ಬರುವುದೆಂಬ ಭೀತಿಯಲ್ಲಿ ಇಂತಹ ನಿರ್ಧಾರಕ್ಕೆ ಬಂದುಬಿಡುತ್ತಾರೆ. ಮಾನಸಿಕವಾಗಿ ಅಸಮತೋಲನ ಕಳೆದುಕೊಳ್ಳುವ ಇಂತಹವರಿಗೆ ನೈತಿಕ ಸ್ಥೈರ್ಯ ತುಂಬವ ಕೆಲಸವಾಗಬೇಕು. ಸಾಮಾಜಿಕ ವ್ಯವಸ್ಥೆಯೂ ಬದಲಾಗಬೇಕು ಎನ್ನುತ್ತಾರೆ ಮನೋವೈದ್ಯರಾದ ಡಾ.ಅನಿಲ್ ಕುಮಾರ್ ಹಾಗೂ ಆಪ್ತ ಸಮಾಲೋಚಕರಾದ ಸಿ.ಸಿ. ಪಾವಟೆ ಅವರುಗಳು.

-ಸಾ.ಚಿ.ರಾಜಕುಮಾರ್

LEAVE A REPLY

Please enter your comment!
Please enter your name here