ಮದ್ಯಪಾನ ನಿಷೇಧ ಭಾಗ್ಯ ನೀಡಲಿ : ಸಾಣೇಹಳ್ಳಿಶ್ರೀ

0
39

ದಾವಣಗೆರೆ:

      ಸರ್ಕಾರ ಯಾವ್ಯಾವುದೋ ಭಾಗ್ಯ ನೀಡುವ ಬದಲು, ಮದ್ಯಪಾನ ನಿಷೇಧ ಭಾಗ್ಯ ನೀಡಲಿ ಎಂದು ಸಾಣೇಹಳ್ಳಿಯ ತರಳಬಾಳು ಶಾಖಾಮಠದ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು.

      ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟ್‍ನ ಕಚೇರಿಯಲ್ಲಿ ಬುಧವಾರ ಡ್ರಿಂಕ್ಸ್, ಡ್ರಗ್ಸ್, ಟೊಬ್ಯಾಕೋ (ಡಿಡಿಟಿ) ಇವುಗಳ ಬಳಕೆಯಿಂದ ಸಾರ್ವಜನಿಕರ ಮೇಲೆ ಬೀರುವ ದುಷ್ಪರಿಣಾಮದ ಬಗ್ಗೆ ಜನ ಜಾಗೃತಿ ಮೂಡಿಸಲು ಹಾಗೂ ಇವುಗಳ ನಿಷೇಧಕ್ಕಾಗಿ ಸಂಘಟಿತ ಚಳವಳಿ ಕಟ್ಟುವ ಉದ್ದೇಶದಿಂದ ಏರ್ಪಡಿಸಿದ್ದ ಮಠಾಧೀಶರ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

      ಸರ್ಕಾರ ನೀಡುತ್ತಿರುವ ಯಾವ್ಯಾವುದೋ ಭಾಗ್ಯಗಳು ನಮಗೆ ಬೇಕಾಗಿಲ್ಲ. ಬದಲಿಗೆ, ಜನರ ಪ್ರಾಣ ತೆಗೆಯುವ ಮದ್ಯ ನಿಷೇಧ ಭಾಗ್ಯವೊಂದನ್ನು ನೀಡಿದರೆ ಸಾಕು. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕಾಗಿದೆ ಎಂದು ಸಲಹೆ ನೀಡಿದರು.

      ದುಶ್ಚಟ ಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಒಬ್ಬಿಬ್ಬರಿಂದ ಸಾಧ್ಯವಿಲ್ಲ. ಇದಕ್ಕೆ ಮಠಾಧೀಶರು, ಶಿಕ್ಷಕರು,  ಮಾಧ್ಯಮಗಳು, ಮಹಿಳೆಯರು ಸೇರಿದಂತೆ ಸರ್ವರು ಸೇರಿ, ಸಂಘಟಿತ ಪ್ರಯತ್ನ ನಡೆಸಬೇಕಾಗಿದೆ. ಕನಿಷ್ಠ ಪಕ್ಷ ಒಬ್ಬೊಬ್ಬರು, ಒಬ್ಬೊಬ್ಬರನ್ನಾದರೂ ಮದ್ಯಪಾನ ಸೇರಿದಂತೆ ಇತರೆ ದುಶ್ಚಟಗಳಿಂದ ಬಿಡಿಸುವ ಸಂಕಲ್ಪ ಮಾಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

      ಸಮಾಜದ ಎಲ್ಲರೂ ಸೇರಿ ಸಂಘಟಿತ ಹೋರಾಟ ಕಟ್ಟುವ ಮೂಲಕ, ಸರ್ಕಾರದ ಮೇಲೆ ಒತ್ತಡ ಹಾಕಿ ಸಂಪೂರ್ಣ ಮದ್ಯಪಾನ ನಿಷೇಧಕ್ಕೆ ಒತ್ತಡ ಹೇರುವ ಪ್ರಯತ್ನ ಮಡೋಣ ಎಂದು ಕರೆ ನೀಡಿದರು.

      ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಮಾತನಾಡಿ, ಮದ್ಯಪಾನ, ಮಾದಕ ವಸ್ತುಗಳ ಸೇವನೆಯಂಥಹ ದುಶ್ಚಟಗಳು. ಭ್ರಷ್ಟಾಚಾರ, ಭಯೋತ್ಪಾದನೆಗಳಿಗಿಂತ ದೊಡ್ಡ ಸಮಸ್ಯೆಯಾಗಿದೆ. ಸಂಪೂರ್ಣ ಮದ್ಯಪಾನ ನಿಷೇಧ ಮಾಡುವ ಮೂಲಕ ಜನರ ಆರೋಗ್ಯ ಕಾಪಾಡಬೇಕಾದ ಸರ್ಕಾರವೇ ಮದ್ಯಪಾನದಿಂದ ಬರುವ ಆದಾಯಕ್ಕೆ ಜೋತು ಬಿದ್ದಿರುವುದು ಅತ್ಯಂತ ವಿಪರ್ಯಾಸವಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

      ಶಿವಯೋಗಾಶ್ರಮ ಟ್ರಸ್ಟ್‍ನಿಂದ ಪ್ರತಿವರ್ಷ ಶ್ರಾವಣಮಾಸದಲ್ಲಿ ಜಯದೇವ ಜೋಳಿಗೆ ಎಂಬ ವಿನೂತನ ಕಾರ್ಯಕ್ರಮದ ಮೂಲಕ ದುಶ್ಚಟಗಳನ್ನು ಜೋಳಿಗೆಗೆ ಹಾಕಿಸಿಕೊಳ್ಳುವ ಮೂಲಕ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಇಲ್ಲಿ ಫಲಿತಾಂಶ ಮುಖ್ಯವಲ್ಲ, ಕಾಯಕವಷ್ಟೇ ಮುಖ್ಯ ಎಂದರು.

      ಚನ್ನಗಿರಿಯ ಪಾಂಡೋಮಟ್ಟಿ ವಿರಕ್ತಮಠದ ಶ್ರೀಗುರುಬಸವ ಸ್ವಾಮೀಜಿ ಮಾತನಾಡಿ, ದೇಶವನ್ನಾಳುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಾದ ಚುನಾವಣೆಗಳ ಸಂದರ್ಭದಲ್ಲಿ ನಾವು ನೂರು ಜನರನ್ನು ಮದ್ಯಪಾನದಿಂದ ದೂರ ಮಾಡಲೆತ್ನಿಸಿದರೆ, ಸಾವಿರ ಜನರು ಮದ್ಯಪಾನಕ್ಕೆ ದಾಸರಾಗಿರುತ್ತಾರೆ. ಇದಕ್ಕೆ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಮತದಾರರಿಗೆ ಹೆಂಡದ ವ್ಯಾಮೋಹ ತೋರಿಸುತ್ತಿರುವುದೇ ಪ್ರಮುಖ ಕಾರಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

      ವಿಚಾರವಂತರ, ಮಠಾಧೀಶರ ದುಶ್ಚಟಮುಕ್ತ ಕಾರ್ಯಕ್ಕೆ ರಾಜಕಾರಣಿಗಳೇ ಅಡ್ಡಗಾಲು ಹಾಕುವುದು ಒಳ್ಳೆಯದಲ್ಲ. ಈ ನಿಟ್ಟಿನಲ್ಲಿ ಮದ್ಯವ್ಯಸನಿಗಳಲ್ಲಿ ಅರಿವು ಮೂಡಿಸುವ, ಬೀದಿ ನಾಟಕಗಳ ಮೂಲಕ ಮನಪರಿವರ್ತನೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗಿದೆ ಎಂದರು.

      ಯರಗುಂಟೆಯ ಶ್ರೀಪರಮೇಶ್ವರ ಸ್ವಾಮೀಜಿ ಮಾತನಾಡಿ, ಕೇವಲ ಸಾಮಾಜಿಕ ಸಂಘಟನೆಗಳು ಮತ್ತು ಸರ್ಕಾರದಿಂದ ಮಾತ್ರ ಮದ್ಯ ನಿಷೇಧ ಮಾಡುವುದು ಕಷ್ಟ. ಮುಖ್ಯವಾಗಿ ಪ್ರತಿಮನೆಯ ಮುಖ್ಯಸ್ಥನೇ ಇದರ ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕು. ತನ್ನ ಮನೆಯ ಕುಟುಂಬಸ್ಥರನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಮೂಲಕ ದುಶ್ಚಟಮುಕ್ತರನ್ನಾಗಿಸುವ ಕಾರ್ಯ ಆದರೆ, ಪ್ರತಿ ಮನೆ, ಓಣಿ, ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ, ದೇಶವನ್ನು ದುಶ್ಚಟ ಮುಕ್ತವಾಗಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

      ರಾಯಚೂರಿನ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ರಾಜ್ಯ ಸಂಚಾಲಕಿ ಸ್ವರ್ಣಾಭಟ್ ಮಾತನಾಡಿ, ಕುಡಿತಕ್ಕೆ ದಾಸರಾದವರಿಂದಲೇ ಇಂದಿನ ದಿನಮಾನಗಳಲ್ಲಿ ಮಹಿಳೆಯರ ಮೇಲೆ ಅತೀ ಹೆಚ್ಚು ದೌರ್ಜನ್ಯಗಳು ನಡೆಯುತ್ತಿವೆ. ಕಳೆದ 10 ವರ್ಷದಿಂದ ಈಚೆಗೆ ಶೇ.40ರಷ್ಟು ಮದ್ಯವ್ಯಸನಿಗಳು ಹೆಚ್ಚಾಗಿದ್ದು, 2013ರಲ್ಲಿ 11 ಸಾವಿರ ಕೋಟಿಗಳಿದ್ದ ಮದ್ಯದಿಂದ ಬರುವ ಆದಾಯ 2018ರಲ್ಲಿ 18 ಸಾವಿರ ಕೋಟಿಗೆ ಹೆಚ್ಚಳವಾಗಿದೆ. ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಮದ್ಯ ನಿಷೇಧಿಸಬೇಕೆಂದು ಠರಾವು ಪಾಸ್ ಮಾಡಬೇಕು. ಈ ನಿಟ್ಟಿನಲ್ಲಿ ಹೋರಾಟ, ಒತ್ತಾಯ ಅತ್ಯಗತ್ಯವಾಗಿದೆ ಎಂದರು.

        ಕಾರ್ಯಕ್ರಮದಲ್ಲಿ ಚನ್ನಗಿರಿಯ ಶ್ರೀಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ, ಜಡೇಸಿದ್ಧ ಶಿವಯೋಗೀಶ್ವರ ಶಾಂತಾಶ್ರಮದ ಶ್ರೀಶಿವಾನಂದ ಸ್ವಾಮೀಜಿ, ಶಿರಮಗೊಂಡನಹಳ್ಳಿ ಶ್ರೀಶಿವಾನಂದ ಗುರೂಜಿ, ಹರಪನಹಳ್ಳಿ ತೆಗ್ಗಿನಮಠದ ಶ್ರೀಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿ, ನೀಲಗುಂದದ ಶ್ರೀಚನ್ನಬಸವ ಶಿವಯೋಗಿ ಸ್ವಾಮೀಜಿ, ರಾಮಘಟ್ಟದ ಶ್ರೀರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ, ಶಿಕ್ಷಕ ಮನ್ಸೂರ್ ಅಹಮದ್, ಆವರಗೆರೆ ರುದ್ರಮುನಿ, ಶಿವಯೋಗಿ ಹಿರೇಮಠ ಮತ್ತಿತರರು ಮದ್ಯಪಾನ ನಿಷೇಧಿಸುವ ಕುರಿತು ಜನಾಂದೋಲನ ರೂಪಿಸಲು ಸಲಹೆ, ಮಾರ್ಗದರ್ಶನ ನೀಡಿದರು.
ಕುರಣಾ ಜೀವ ಕಲ್ಯಾಣ ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನಾಗರಾಜ್ ಪ್ರಾರ್ಥಿಸಿದರು.

  ಸಂಪೂರ್ಣ ಮದ್ಯಪಾನ ನಿಷೇಧಕ್ಕೆ ಆಗ್ರಹಿಸಿ ಮುಂದಿನ ತಿಂಗಳಲ್ಲಿ ತುಮಕೂರಿನಿಂದ ಸುಮಾರು 20 ಸಾವಿರ ಮಹಿಳೆಯರು ಬೆಂಗಳೂರಿನ ವಿಧಾನಸೌಧದ ವರೆಗೆ ಕಾಲ್ನಡಿಗೆ ಜಾಥಾ ನಡೆಸುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲು ತೀರ್ಮಾನಿಸಲಾಗಿದೆ.
                                                                    -ಸ್ವರ್ಣ ಭಟ್, ಕೂಲಿ ಕಾರ್ಮಿಕರ ಸಂಘಟನೆ ಸಂಚಾಲಕಿ,
 

LEAVE A REPLY

Please enter your comment!
Please enter your name here