ಮಹಾತ್ಮ ಗಾಂಧಿ ಕನಸು ನನಸು ಮಾಡಲು ಮೋದಿಯವರ ಸ್ವಚ್ಛ ಭಾರತ್ ಯೋಜನೆ ಜಾರಿಗೆ

0
56

ಚಿಕ್ಕನಾಯಕನಹಳ್ಳಿ:

      ಮಹಾತ್ಮ ಗಾಂಧೀಜಿಯವರ ಕನಸನ್ನು ನನಸು ಮಾಡಲು ಪ್ರಧಾನಮಂತ್ರಿ ನರೇಂದ್ರಮೋದಿ ಸ್ವಚ್ಛಭಾರತ್ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.

      ಪಟ್ಟಣದ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ 2018 ಸ್ವಚ್ಛ ಸರ್ವೇಕ್ಷಣಾ ಗ್ರಾಮ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಚ್ಛ ಭಾರತ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ನಗರ, ಪಟ್ಟಣ, ಗ್ರಾಮೀಣ ಭಾಗಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದೆ. ಸ್ವಚ್ಛತೆಗಾಗಿ ಗಂಗಾನದಿ ಸೇರಿದಂತೆ ದೇಶದ ಎಲ್ಲಾ ನದಿಗಳ ಸ್ವಚ್ಛ ಮಾಡಲು ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿದೆ. ಆಗಸ್ಟ್ 1ರಿಂದ 30ರ ವರೆಗೆ ಕೇಂದ್ರದ ತಂಡ ಪಟ್ಟಣದಲ್ಲಿ ಮೌಲ್ಯಮಾಪನ ಮಾಡಲು ಬರುತ್ತಿದೆ. ಉತ್ತಮ ಅಂಕ ಪಡೆದರೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಗ್ರಾಮ ಪಂಚಾಯ್ತಿ, ನಗರ, ಪಟ್ಟಣ ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಸರಿಪಡಿಸಿಕೊಂಡು ಸ್ವಚ್ಛತೆಯನ್ನು ಕಾಪಾಡಿ ಎಂದು ಸಲಹೆ ನೀಡಿದ ಅವರು, ಜನತೆ ನಿತ್ಯ ಸ್ನಾನ ಮಾಡಿ ಸ್ವಚ್ಛವಾಗಿರುತ್ತಾರೆ. ಆದರೆ ಮನೆಗಳಲ್ಲಿರುವ ಕಸವನ್ನು ದಾರಿಯಲ್ಲಿ ಹಾಕಿ ಅನೈರ್ಮಲ್ಯ ಸೃಷ್ಟಿ ಮಾಡುತ್ತಿದ್ದಾರೆ. ಸ್ವಚ್ಛತೆಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

      ತಾ.ಪಂ.ಸಹಾಯಕ ನಿರ್ದೇಶಕ ಹರೀಶ್ ಮಾತನಾಡಿ, ಸರ್ವೇಕ್ಷಣಾ ಜಾಥಾ ಶೆಟ್ಟಿಕೆರೆ ಹೋಬಳಿಯ ಗ್ರಾಮ ಪಂಚಾಯ್ತಿಗಳಾದ ಶೆಟ್ಟಿಕೆರೆ, ಜೆ.ಸಿ.ಪುರ, ದುಗಡಿಹಳ್ಳಿ, ಗೋಡೆಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ತಿಳಿಸಿದರು.

      ಜಾಥಾ ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯೆ ಮಂಜುಳಮ್ಮ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣನಾಯ್ಕ್, ತಾ.ಪಂ.ಸಹಾಯಕ ನಿರ್ದೇಶಕ ಹರೀಶ್, ಗ್ರಾ.ಪಂ.ಪಿಡಿಓಗಳು, ಪುರಸಭೆ ಮುಖ್ಯಾಧಿಕಾರಿ ನಿರ್ವಾಣಯ್ಯ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here