ಪ್ರಜಾಪ್ರಗತಿ ಫಲಶ್ರುತಿ-ವರದಿಯಿಂದ ಎಚ್ಚೆತ್ತ ಅಧಿಕಾರಿಗಳು!!!

ತುಮಕೂರು :

      ತುಮಕೂರು ನಗರ ಹೊರವಲಯದಲ್ಲಿರುವ ಅಂತರಸನಹಳ್ಳಿ ಮಾರುಕಟ್ಟೆ ಪ್ರದೇಶವು ಸಮಸ್ಯೆಗಳ ಗೂಡಾಗಿ ಪರಿಣಮಿಸಿದೆ. ಈ ಬಗ್ಗೆ ಪ್ರಜಾಪ್ರಗತಿಯಲ್ಲಿ ವಿಸ್ತೃತ ವರದಿ ಪ್ರಕಟವಾಗಿತ್ತು. ಈ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಸ್ವಲ್ಪ ಮಟ್ಟಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ಅಲ್ಲಿನ ವ್ಯಾಪಾರಸ್ಥರು, ವರ್ತಕರು ಮತ್ತು ಗ್ರಾಹಕರಲ್ಲಿ ಈ ಬೆಳವಣಿಗೆ ಒಂದಿಷ್ಟು ಖುಷಿಯನ್ನಂತೂ ತಂದಿದೆ. ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಇದ್ದುದರಲ್ಲೇ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಪ್ರಯತ್ನಕ್ಕೆ ಕೈಹಾಕಿರುವುದು ಶ್ಲಾಘನೀಯ.

ಇದೇನು ಮಾರುಕಟ್ಟೆಯೋ..ಕೊಳಚೆ ಪ್ರದೇಶವೋ..?

      ಅ. 23 ಮತ್ತು 24ರಂದು `ದುರ್ನಾತ ಬೀರುತ್ತಿದೆ ಅಂತರಸನಹಳ್ಳಿ ತರಕಾರಿ ಮಾರುಕಟ್ಟೆ ಪ್ರಾಂಗಣ, ಇದೇನು ಮಾರುಕಟ್ಟೆಯೋ ಕೊಳಚೆ ಪ್ರದೇಶವೋ’ ಎಂಬ ಶೀರ್ಷಿಕೆಯಡಿಯಲ್ಲಿ ಮಾರುಕಟ್ಟೆಯ ದುಸ್ಥಿತಿ ವರದಿ ಪ್ರಕಟವಾಗಿತ್ತು. 8 ಎಕರೆ 20 ಗುಂಟೆಯಲ್ಲಿ ನಿರ್ಮಿಸಲಾದ ಈ ಮಾರುಕಟ್ಟೆಯಲ್ಲಿ ಸುಮಾರು 254 ಮಳಿಗೆಗಳು, 35 ಶೀಟ್ ವ್ಯವಸ್ಥೆಯ ಮಳಿಗೆಗಳು, 46 ತೆರೆದ ಶೀಟ್ ವ್ಯವಸ್ಥೆಯ ಮಳಿಗೆಗಳು ಹಾಗೂ 200ಕ್ಕೂ ಹೆಚ್ಚು ಅನಾಥ ರೈತರ ಮಳಿಗೆಗಳು ಇಲ್ಲಿವೆ. ಆದರೆ ಇವರಿಗೆ ಬೇಕಾದ ಮೂಲಭೂತ ಸೌಲಭ್ಯಗಳೇ ಇಲ್ಲದಿರುವುದು ವಿಪರ್ಯಾಸವೇ ಸರಿ. ಶುದ್ಧಕುಡಿಯುವ ನೀರಿನ ಘಟಕ ಉದ್ಘಾಟನೆ ಮಾಡಿ ಆರು ತಿಂಗಳಾಗಿದ್ದರೂ, ಕುಡಿಯುವ ನೀರೇ ಬರುತ್ತಿರಲಿಲ್ಲ. ಇದರೊಂದಿಗೆ ಮಾರುಕಟ್ಟೆ ಪ್ರದೇಶದಲ್ಲಿ ಸುಮಾರು 14ಕ್ಕೂ ಹೆಚ್ಚು ನಲ್ಲಿಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ ಇಂದಿಗೂ ನೀರು ಬರುತ್ತಿಲ್ಲ. ಈ ಬಗ್ಗೆ ಜಂಟಿ ಕಾರ್ಯದರ್ಶಿಗಳ ಗಮನಕ್ಕೆ ತರಲಾಗಿದ್ದು, ಅದನ್ನು ಸರಿಪಡಿಸಲು ಹೊಸ ಪೈಪ್‍ಲೈನ್ ಮಾಡಿಸಬೇಕಾಗಿದೆ. ಅದಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಕಳುಹಿಸಲಾಗಿದೆ ಎಂದು ಜಂಟಿಕಾರ್ಯದರ್ಶಿ ಕೋಡಿಗೌಡ ತಿಳಿಸಿದರು.

ಬೆಳಗುತ್ತಿರುವ ಬೀದಿ ದೀಪಗಳು

      ರಾತ್ರಿ ವೇಳೆ ಬೆಳಕಿನ ಸೌಲಭ್ಯ ಪೂರ್ಣಪ್ರಮಾಣದಲ್ಲಿರಲಿಲ್ಲ. ಮಾರುಕಟ್ಟೆ ಪ್ರದೇಶದಲ್ಲಿರುವ ವಿದ್ಯುತ್ ಕಂಬಗಳಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಬಲ್ಬ್‍ಗಳು ಕೆಟ್ಟು ನಿಂತಿದ್ದವು. ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ನಂತರ ಎಚ್ಚೆತ್ತ ಅಧಿಕಾರಿಗಳು ಅವುಗಳನ್ನು ಬದಲಿಸಿದ್ದು, ಈಗ ರಾತ್ರಿ ವೇಳೆ ಸಂಪೂರ್ಣ ಬೆಳಕು ಕಾಣುತ್ತಿದೆ. ಇದರಲ್ಲಿ ಇನ್ನೂ ಕೆಲ ಕಂಬಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದು ಅದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಕಂಬಗಳನ್ನು ಸರಿಪಡಿಸಲಾಗುವುದಾಗಿ ಎಂದು ಜಂಟಿ ಕಾರ್ಯದರ್ಶಿ ತಿಳಿಸಿದ್ದಾರೆ.

ಅಗತ್ಯವಾಗಿ ಪೈಪ್‍ಲೈನ್ ಅವಶ್ಯ:

      ಅಂತರಸನಹಳ್ಳಿ ಮಾರುಕಟ್ಟೆ ಪ್ರದೇಶದಲ್ಲಿ ನೀರಿನ ಸೌಲಭ್ಯಕ್ಕಾಗಿ ಎರಡು ಬೋರ್‍ಗಳನ್ನು ಕೊರೆಸಲಾಗಿತ್ತು. ಅದರಲ್ಲಿ ಎರಡು ದುಸ್ಥಿತಿಗೊಳಗಾಗಿ ನೀರು ಬಾರದೆ ಜನ ಪರದಾಡುತ್ತಿದ್ದರು. ನೀರಿನ ಬಳಕೆಗಾಗಿ ಪಾಲಿಕೆಯ ಟ್ಯಾಂಕರ್‍ಗಳನ್ನು ಅವಲಂಬಿಸಿದ್ದರು. ಈ ಬಗ್ಗೆ ವರದಿ ಬಂದ ನಂತರ ಅಧಿಕಾರಿಗಳು ಈಗಾಗಲೇ ಒಂದು ಬೋರನ್ನು ಕೊರೆಯಿಸಿದ್ದಾರೆ. ಈಗ ಅದು ವರ್ತಕರಿಗೆ ಅನುಕೂಲವಾಗಿದೆ. ಇನ್ನೊಂದು ಬೋರ್ ದುರಸ್ಥಿಗೊಳಿಸಲು ಪ್ರಯತ್ನಿಸಿದಾಗ ಹಳೆಯ ಪೈಪುಗಳು ಹಾಳಾಗಿರುವುದು ತಿಳಿದು ಬಂದಿದೆ. ಇದಕ್ಕೆ ಹೊಸ ಪೈಪ್‍ಲೈನ್ ಮಾಡಿಸಬೇಕು. ಇದು ಸುಮಾರು 8 ಅಡಿ ಆಳದಲ್ಲಿ ಪೈಪ್‍ಲೈನ್ ಇರುವುದರಿಂದ ಸ್ವಲ್ಪ ತಡವಾಗುತ್ತಿದೆ. ಇದಕ್ಕೆ ಸುಮಾರು 40 ಸಾವಿರ ರೂ.ಗಳ ವರೆಗೆ ಖರ್ಚು ಆಗಬಹುದು ಎಂದು ಲೆಕ್ಕಿಸಿದ್ದು, ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.

ರಸ್ತೆ ಹಾಗೂ ಬೀದಿ ದೀಪಗಳ ದುರಸ್ಥಿಗೆ ಜಿಲ್ಲಾಧಿಕಾರಿಗಳಲ್ಲಿ ಮನವಿ

      ಅಂತರಸನಹಳ್ಳಿ ಮಾರುಕಟ್ಟೆ ಪ್ರವೇಶದ ಪ್ರಾರಂಭದಲ್ಲಿಯೇ ತಗ್ಗುಗುಂಡಿಗಳು ದರ್ಶನ ನೀಡುತ್ತಿವೆ. ಮಾರುಕಟ್ಟೆ ಒಳಭಾಗದಲ್ಲಿಯೂ ಕೂಡ ಸರಿಯಾಗಿ ರಸ್ತೆಗಳು ಇಲ್ಲ. ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ಮಳೆ ಬಂದಾಗ ನೀರು ರಸ್ತೆ ಮೇಲೆ ನಿಲ್ಲುತ್ತವೆ. ಹಬ್ಬ ಹರಿದಿನಗಳಲ್ಲಿ ವರ್ತಕರಿಗೆ ಹೆಚ್ಚಿನ ತೊಂದರೆ ಉಂಟಾಗುತ್ತಿದೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದಾಖಲಾತಿಗಳನ್ನು ಸಲ್ಲಿಕೆ ಮಾಡಿ ಅವರ ಗಮನಕ್ಕೆ ತರಲಾಗಿದೆ. ಅವರ ನಿರ್ದೇಶನಕ್ಕಾಗಿ ಕಾಯುತ್ತಿದ್ದು, ಅವರ ಆದೇಶ ಬಂದರೆ ಕೂಡಲೇ ಕೆಲಸ ಪ್ರಾರಂಭಿಸಲಾಗುತ್ತದೆ.

ವಾಹನಗಳ ನಿಲುಗಡೆಗೆ ಪರ್ಯಾಯ ವ್ಯವಸ್ಥೆ

      ಮಾರುಕಟ್ಟೆ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸಲು ಮಾರ್ಕ್‍ಗಳನ್ನು ಹಾಕಲಾಗಿತ್ತು. ಅದಕ್ಕೆ ವರ್ತಕರೇ ಅಡ್ಡಿಪಡಿಸಿದ್ದರು. ಈ ಕಾರಣದಿಂದ ಮಾರುಕಟ್ಟೆ ಪ್ರಾಂಗಣದ ಹೊರಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಸಮಿತಿಯೊಂದಿಗೆ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ಮಾಡಿ, ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸಲಾಗುವುದು ಎಂದು ಕಾರ್ಯದರ್ಶಿಗಳು ತಿಳಿಸಿದ್ದಾರೆ.

 
      ಅಂತರಸನಹಳ್ಳಿ ಮಾರುಕಟ್ಟೆ ಪ್ರದೇಶದಲ್ಲಿ ಹಲವು ಸಮಸ್ಯೆಗಳು ಇದ್ದುದನ್ನು ಪ್ರಜಾಪ್ರಗತಿ ಪತ್ರಿಕೆ ಗಮನಿಸಿ ವರದಿ ಪ್ರಕಟಿಸಿತ್ತು. ಇದನ್ನು ಪರಿಶೀಲಿಸಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ತಿಳಿದು, ವರ್ತಕರಿಗೆ ಅನುಕೂಲವಾಗುವಂತೆ ಮಾಡಿದ್ದೇವೆ. ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟುಹೋಗಿತ್ತು. ಅದನ್ನು ಸರಿಪಡಿಸಿದ್ದೇವೆ. ರಾತ್ರಿ ವೇಳೆ ವಿದ್ಯುತ್ ದೀಪಗಳು ಉರಿಯುತ್ತಿರಲಿಲ್ಲ ಎಂದು ತಿಳಿದು ಬಲ್ಬ್‍ಗಳನ್ನು ಬದಲಾಯಿಸಿದ್ದೇವೆ. ನೀರಿನ ಸೌಲಭ್ಯಕ್ಕಾಗಿ ಇದ್ದ ಬೋರ್‍ಗಳು ಹಾಳಾಗಿದ್ದವು. ಅದರಲ್ಲಿ ಒಂದನ್ನು ಸರಿಪಡಿಸಲಾಗಿದೆ. ಅದರಲ್ಲಿ ಈಗ ನೀರು ಲಭ್ಯವಾಗುತ್ತಿದೆ. ಇನ್ನೊಂದು ಬೋರ್ ಅನ್ನು ಸರಿಪಡಿಸಲು ಎಂಜಿನಿಯರ್‍ಗೆ ಸೂಚಿಸಿದ್ದೇವೆ. ಈ ಸಮಸ್ಯೆಗಳ ಬಗ್ಗೆ ದಾಖಲಾತಿಗಳ ಮೂಲಕ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಮುಂದೆ ಅವರ ಆದೇಶಗಳಂತೆ ಕೆಲಸಗಳನ್ನು ಮಾಡಿ ವರ್ತಕರಿಗೆ ಅನುಕೂಲ ಮಾಡಿಕೊಡಲಾಗುವುದು.

-ಡಾ.ಕೆ.ಕೋಡಿಗೌಡ, ಜಂಟಿ ಕಾರ್ಯದರ್ಶಿ, ಕೃಷಿ ಮಾರುಕಟ್ಟೆ ಸಮಿತಿ.

      ಮಾರುಕಟ್ಟೆ ವ್ಯಾಪಾರ ಮಾಡುತ್ತಿದ್ದೇವೆ ಅನ್ನೋದು ಬಿಟ್ಟರೆ ನಮಗೆ ಬೇಕಾದ ಸೌಲಭ್ಯಗಳು ಇರಲಿಲ್ಲ. ಕಳೆದ ವಾರದಲ್ಲಿ `ಪ್ರಜಾಪ್ರಗತಿ’ ಭೇಟಿ ನೀಡಿ ಸಮಸ್ಯೆಯ ಬಗ್ಗೆ ಅರಿತು ಪತ್ರಿಕೆಯಲ್ಲಿ ಪ್ರಕಟಿಸಿದ ನಂತರ ಅಧಿಕಾರಿಗಳು ಕುಡಿಯುವ ನೀರಿನ ಘಟಕವನ್ನು ಸರಿಪಡಿಸಿ ಅನುಕೂಲ ಮಾಡಿಕೊಟ್ಟಿದ್ದಾರೆ. ಬೀದಿ ದೀಪಗಳ ಬಲ್ಬ್‍ಗಳನ್ನು ಬದಲಿಸಿದ್ದಾರೆ. ಇದರಿಂದ ಸ್ವಲ್ಪ ಮಟ್ಟಿಗೆ ಅನುಕೂಲವಾಗಿದ್ದು, ಇನ್ನೂ ಸಮಸ್ಯೆಯನ್ನು ಪೂರ್ಣವಾಗಿ ಬಗೆಹರಿಸಬೇಕಾಗಿದೆ. ಸಮಸ್ಯೆ ಇತ್ಯರ್ಥಕ್ಕೆ ಶ್ರಮಿಸಿದ ಪ್ರಜಾಪ್ರಗತಿ ಪತ್ರಿಕೆಗೆ ಧನ್ಯವಾದಗಳನ್ನು ತಿಳಿಸುತ್ತೇನೆ.

-ಆಯೂಬ್, ಹಣ್ಣಿನ ವ್ಯಾಪಾರಿ

      ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದೇವೆ. ಪ್ರಾರಂಭದಿಂದಲೂ ಇಲ್ಲಿಯೇ ಇದ್ದು ಹಲವು ಸಮಸ್ಯೆಗಳಿಂದ ಪರದಾಡುತ್ತಿದ್ದೆವು. ಕಳೆದ ವಾರದಲ್ಲಿ ಪ್ರಜಾಪ್ರಗತಿಯಲ್ಲಿ ನಮ್ಮ ಸಮಸ್ಯೆಯ ಬಗ್ಗೆ ವರದಿ ಪ್ರಕಟಗೊಂಡ ಮೇಲೆ ಈಗ ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಕುಡಿಯುವ ನೀರಿನ ಸೌಲಭ್ಯ ಮಾಡಿಕೊಟ್ಟಿದ್ದಾರೆ. ದೇವಸ್ಥಾನ ಪಕ್ಕದ ಬೋರ್‍ಅನ್ನು ಸರಿಪಡಿಸಿದ್ದಾರೆ. ಇದರಿಂದ ಅನುಕೂಲವಾಗಿದೆ.

-ನೇತ್ರ, ತರಕಾರಿ ವ್ಯಾಪಾರಿ

Recent Articles

spot_img

Related Stories

Share via
Copy link
Powered by Social Snap