ಮಧುಗಿರಿ ತಾಲ್ಲೂಕಿನಲ್ಲಿ ಕಳೆದ ನಾಲ್ಕುವರ್ಷಗಳಿಂದ ಸಮಯಕ್ಕೆ ಸರಿಯಾಗಿ ಸಾಕಷ್ಟು ಮಳೆ ಬಾರದೆಯೆ ರೈತಾಪಿವರ್ಗದವರು ಕಂಗಾಲಾಗಿರುತ್ತಾರೆ. ಇಂತಹ ಸಂಕಷ್ಟದ ಕಾಲದಲ್ಲಿ ಜೂ.29 ರಂದು ಮಧ್ಯಾಹ್ನ 2-30 ಗಂಟೆಯಿಂದ 3-15 ಗಂಟೆವರೆವಿಗೆ ಆರಿದ್ರಾ ಮಳೆಯ ಅರ್ಧಪಾದದ ಕೊನೆಯದಿನದಂದು 65 ಮಿಲಿ ಮೀಟರ್ ಅಂದರೆ ಆರು ಸೆಂಟಿ ಮೀಟರ್ ದಾಖಲೆ ಮಳೆಬಿದ್ದಿದ್ದು ಈಭಾಗದ ರೈತಾಪಿ ವರ್ಗದವರು ನಾಳೆಯಿಂದಲೇ ಬಿತ್ತನೆ ಕಾರ್ಯ ಪ್ರಾರಂಭಗೊಳ್ಳಲಿದ್ದಾರೆ.
ಈ ಭಾಗದಲ್ಲಿ ಈರಣ್ಣನ ಬೆಟ್ಟದ ತಪ್ಪಲಿನಲ್ಲಿನ ಮಿಡಿಗೇಶಿ ಯಿಂದ ಐ.ಡಿ.ಹಳ್ಳಿ ರಸ್ತೆಯ ಬದಿಯಲ್ಲಿನ ದಾಸರಕಟ್ಟೆ, ಕೆಂಚಪ್ಪನಕಟ್ಟೆ, ಗುರುಮೂರ್ತಿ ಕಟ್ಟೆ, ಸೇರಿದಂತೆ ಹಲವಾರು ಕಟ್ಟೆಗಳಿಗೆ ಕಟ್ಟಗಳ ಅರ್ಧಭಾಗದಷ್ಠು ನೀರು ಸಂಗ್ರಹವಾಗಿದ್ದು, ರೈತರ ಹೊಲಗದ್ದೆಗಳಲ್ಲೂ ಮಳೆ ನೀರಿನಿಂದ ಬಿತ್ತನೆ ಕಾರ್ಯಕ್ಕೆ ಅತ್ಯಾನುಕೂಲಕರವಾಗಿದೆ. ಪೂರ್ವಿಕರು ಹೇಳುವ ಪ್ರಕಾರ ಆದಿದ್ರಾಮಳೆಯು ಬಾರದೆ ಹೋದಲ್ಲಿ ಮಳೆ ಪ್ರಾರಂಭದಿಂದ ಮಳೆ ಕೊನೆಗೊಳ್ಳುವ ಹದಿನೈದು ದಿನಗಳ ಅವಧಿಯಲ್ಲಿ ಗುಡುಗು ಗುಡುಗಿನ ಮಳೆ ಬಾರದೇ ಹೋದಲ್ಲಿ ಮುಂದಿನ ಆರು ಮಳೆಗಳು ಬರುವುದಿಲ್ಲ ಎಂಬುದಾಗಿರುತ್ತದೆ.
ಅಂತಹುದರಲ್ಲಿ ಆರಿದ್ರಾ ಮಳೆಯು ಬಂದಿರುವುದು ರೈತರಲ್ಲಿ ಮಂದಹಾಸ ಮೂಡಿಸಿದೆ. ಚಿನ್ನೇನಹಳ್ಳಿಯಿಂದ ಚಂದ್ರಬಾವಿ, ರೆಡ್ಡಿಹಳ್ಳಿಯಿಂದ ಐ.ಡಿ.ಹಳ್ಳಿಯವರೆಗೆ ಮಾತ್ರ ಸದರಿ ಮಳೆಯು ಬಂದಿದ್ದು ಕೆಲವು ರೈತರು ಖುಷಿಪಡುತ್ತಿದ್ದರೆ. ಮಳೆಬಾರದೆ ಇರುವ ಕಡೆಯ ರೈತರು ಮಳೆರಾಯನಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಒಟ್ಟಾರೆ ಮಿಡಿಗೇಶಿ ವ್ಯಾಪ್ತಿಯಲ್ಲಿ ಮಳೆ ಬಂದಿದ್ದರಿಂದ ದನ ಕರುಗಳು ಸೇರಿದಂತೆ ಎಲ್ಲಾ ಜೀವಂತ ಪ್ರಾಣಿಗಳಿಗೂ ಕುಡಿಯುವ ನೀರಿನ ಬವಣೆ ತೀರಿಸಿದಂತಾಗುತ್ತದೆ.