ಮೂರ್ಛೆ ರೋಗದ ಬಗ್ಗೆ ಕೀಳರಿಮೆ ಸಲ್ಲ

0
133

ಹುಳಿಯಾರು:

      ಗ್ರಾಮೀಣ ಭಾಗದಲ್ಲಿ ಅಪಸ್ಮಾರ (ಮೂರ್ಛೆ) ರೋಗದ ಬಗ್ಗೆ ಸಾಕಷ್ಟು ಅಪನಂಬಿಕೆಗಳಿದ್ದು ಇವುಗಳ ಬಗ್ಗೆ ಗ್ರಾಮೀಣ ಜನರಿಗೆ ಅರಿವು ಮೂಡಿಸಿ, ಹೆಚ್ಚಿನ ಜನ ಜಾಗೃತಿ ನೀಡುವ ನಿಟ್ಟಿನಲ್ಲಿ ಅದಕ್ಕೆ ನೀಡಬಹುದಾದ ಪ್ರಥಮ ಚಿಕಿತ್ಸೆಯ ಬಗ್ಗೆ ಭಾರತೀಯ ಎಪಿಲೆಪ್ಸಿ ಸಂಸ್ಥೆಯಿಂದ ಹುಳಿಯಾರಿನ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್ ಹಾಗೂ ಎನ್‍ಎಸ್‍ಎಸ್ ಸಹಯೋಗದಲ್ಲಿ ಹುಳಿಯಾರಿನ ಪ್ರಮುಖ ಬೀದಿಗಳಲ್ಲಿ ಜಾಥ ಏರ್ಪಡಿಸಲಾಗಿತ್ತು.

      ಭಾರತೀಯ ಎಪಿಲೆಪ್ಸಿ ಸಂಸ್ಥೆ ಅಧ್ಯಕ್ಷ ಡಾ.ಜಿ.ಟಿ.ಸುಭಾಷ್ ಜಾಥ ಉದ್ಘಾಟಿಸಿ ಮಾತನಾಡಿ ಮೂರ್ಛೆ ರೋಗ, ಪಿಟ್ಸ್, ಅಪಸ್ಮಾರ, ಮಲರೋಗ ಮುಂತಾದ ಹೆಸರುಗಳಿಂದ ಕರೆಯುವ ಅಪಸ್ಮಾರ ಕಾಯಿಲೆಯನ್ನು ಆಂಗ್ಲ ಭಾಷೆಯಲ್ಲಿ ಎಪಿಲೆಪ್ಸಿ ಎಂದು ಕರೆಯುತ್ತಾರೆ.ಆಡು ಭಾಷೆಯಲ್ಲಿ ಪಿಟ್ಸ್ ಎನ್ನುತ್ತಾರೆ.ಮೂರ್ಛೆ ರೋಗ ಬರಲು ಕಾರಣ ಇನ್ನು ತಿಳಿದು ಬಂದಿಲ್ಲ.ಮೂರ್ಛೆ ರೋಗ ಖಂಡಿತವಾಗಿ ಅಂಟು ರೋಗವಲ್ಲ.ರೋಗಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಆರೈಕೆ ಮಾಡಿ.ಇದು ಒಬ್ಬರಿಂದ ಒಬ್ಬರಿಗೆ ಹರಡುವ ಅಂಟು ರೋಗವಲ್ಲ.ಮೆದುಳಿಗೆ ಆಘಾತವಾದಾಗ ಮತ್ತು ಮಿದುಳಿನ ಕಾರ್ಯಕ್ಷಮತೆಗೆ ಧಕ್ಕೆಯಾದಾಗ ಅಥವಾ ಮಿದುಳಿನ ನರಮಂಡಲದ ಸಂವಹನದ ಕೊರತೆಯಿಂದಾಗಿ ಅಪಸ್ಮಾರ ರೋಗ ಕಾಣಿಸಿಕೊಳ್ಳುತ್ತದೆ.ಈ ಕಾಯಿಲೆ ಯಾರಿಗೆ ಬೇಕಾದರೂ ಯಾವಾಗ ಬೇಕಾದರೂ ಬರಬಹುದಾಗಿದ್ದು ಇದು ಅನುವಂಶಿಕವಲ್ಲ ಎಂದರು.

      ಮೂರ್ಛೆ ರೋಗ ಸರಳವಾದ ಕಾಯಿಲೆಯಾಗಿದ್ದು ಇದೊಂದು ವಾಸಿ ಮಾಡಬಹುದಾದ, ನಿಯಂತ್ರಿಸಬಹುದಾದ, ಚಿಕಿತ್ಸೆ ನೀಡಬಹುದಾದ ಕಾಯಿಲೆ. ಮೂರ್ಛೆ ರೋಗ ಯಾರಿಗೆ ಬೇಕಾದರೂ, ಯಾವಾಗ ಬೇಕಾದರೂ ಬರಬಹುದಾಗಿದ್ದು,ವ್ಯಕ್ತಿಗೆ ಮೂರ್ಚೆ ರೋಗ ಎಂದು ತಿಳಿದ ಕೂಡಲೇ ದೊಡ್ಡ ಆಸ್ಪತ್ರೆಗೆ ಓಡಿ ಬರುವುದು ಬೇಡ.ಆಯಾ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತೋರಿಸಿ ಕಾಯಿಲೆಗೆ ಚಿಕಿತ್ಸೆ ಕೊಡಿಸಬಹುದು ಎಂದರು.

       ಕಾಯಿಲೆಗೆ ಚಿಕಿತ್ಸೆ ಇದ್ದು ಕೇವಲ ಮೂರು ವರ್ಷ ಚಿಕಿತ್ಸೆ ನೀಡಲಾಗುತ್ತದೆ.ಹೆಚ್ಚು ಅಂದರೆ ಐದು ವರ್ಷ ಚಿಕಿತ್ಸೆ ನೀಡಲಾಗುವುದಿದ್ದು, ವೈದ್ಯರ ಸೂಚನೆಯನ್ನು ಪಾಲಿಸಿ ಮಾತ್ರೆಯನ್ನು ನಿಗದಿಯಾಗಿ ತೆಗೆದುಕೊಂಡಲ್ಲಿ ರೋಗ ಗುಣವಾಗಬಲ್ಲದು.ವೈದ್ಯರು ಹೇಳುವ ತನಕ ಚಿಕಿತ್ಸೆ ನಿಲ್ಲಿಸದೆ ಮುಂದುವರಿಸಿ. ನೀವಾಗಿ ನೀವು ನಿಲ್ಲಿಸಬೇಡಿ. ಹಾಗೊಂದು ವೇಳೆ ಔಷಧಿ ಸೇವನೆ ನಿಲ್ಲಿಸಿದರೆ ಕೂಡಲೇ ಅಪಸ್ಮಾರಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದರು.

      ಭಾರತೀಯ ಅಪಸ್ಮಾರ ಸಂಸ್ಥೆಯ ಬೆಂಗಳೂರು ವಿಭಾಗದ ಮಾಜಿ ಅಧ್ಯಕ್ಷ ಮುರಳಿಧರ್, ಸದಸ್ಯ ಜಗದೀಶ್, ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಗಂಗಾಧರ್,ರಂಗಚೇತನ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ನಂಜುಂಡಸ್ವಾಮಿ ತೊಟ್ಟವಾಡಿ, ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ, ಸರ್ಕಾರಿ ಪದವಿ ಕಾಲೇಜಿನ ಎನ್ ಎಸ್ ಎಸ್ ಅದಿಕಾರಿ ಶಶಿಭೂಷಣ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
 
      ಪಿಟ್ಸ್ ಬಂದಿದೆ ಎಂದು ತಿಳಿದ ಕೂಡಲೇ ಬೀಗ ಕೊಡುವುದು,ಅಂಗಾತ ಮಲಗಿಸುವುದು,ಬಾಯಿಗೆ ನಾಲಿಗೆ ಕಡಿದುಕೊಳ್ಳಬಾರದೆಂದು ಸ್ಪೊನ್ ಮತ್ತಿತರ ವಸ್ತು ಇಡುವುದು, ತಕ್ಷಣ ನೀರು ಕೊಡುವುದು ಮಾಡಬಾರದು. ಅಂಗಾತ ಮಲಗಿಸಿ ತಕ್ಷಣವೇ ಬಾಯಿಗೆ ನೀರು ಕುಡಿಸುವುದರಿಂದ ಅಥವಾ ಮುಖದ ಮೇಲೆ ನೀರು ಸುರಿಯುವುದರಿಂದ ಉಸಿರಾಟಕ್ಕೆ ಮತ್ತಷ್ಟು ತೊಂದರೆಯಾಗುತ್ತದೆ. ಮೂರ್ಚೆ ರೋಗ ಬಂದ ಅಂತಹ ವ್ಯಕ್ತಿಯ ಕೈಗೆ ಚೂಪಾದ ಕಬ್ಬಿಣದ ಸರಳನ್ನು ನೀಡಿ ಸೆಳೆತ ನಿಲ್ಲಿಸಲು ಪ್ರಯತ್ನಿಸುವುದು ಮೂರ್ಖತನದ ಪರಮಾವಧಿ.ಅಪಸ್ಮಾರಕ್ಕೆ ಈಡಾದ ವ್ಯಕ್ತಿಯ ಬಿಗಿಯಾದ ಉಡುಪನ್ನು ಸಡಿಲಿಸಬೇಕು.ಆತ ಉಸಿರಾಡಲು ಅನುಕೂಲವಾಗುವಂತೆ ತಲೆಯನ್ನು ಒಂದು ಕಡೆಗೆ ವಾಲಿಸಿ ಹಿಡಿಯಬೇಕು.ಅಪಸ್ಮಾರದ ವ್ಯಕ್ತಿಯನ್ನು ನೆಲದ ಮೇಲೆ ಒಂದು ಬದಿಗೆ ಮಲಗಿಸಿ ಅಪಸ್ಮಾರ ನಿಲ್ಲುವವರೆಗೂ ವ್ಯಕ್ತಿಯನ್ನು ಗಮನಿಸಿ ತೀವ್ರತೆ ಕಡಿಮೆಯಾದ ನಂತರ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿಸಬೇಕು.
 
      ಅಪಸ್ಮಾರದ ಬಗ್ಗೆ ಸಾಕಷ್ಟು ಅಪನಂಬಿಕೆಗೆಳಿದ್ದು ಈ ರೋಗಿಗಳ ಬಗ್ಗೆ ಕೀಳರಿಮೆ ಯಾವತ್ತೂ ಸಲ್ಲ.ಮೂರ್ಛೆ ರೋಗದ ಬಗ್ಗೆ ರೋಗಿಗಳಲ್ಲಿ ಸಕಾರಾತ್ಮಕ ವಿಚಾರಗಳ ಬಗ್ಗೆ ತಿಳಿ ಹೇಳಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಹಾಗೂ ಜಾಗೃತಿ ಉಂಟು ಮಾಡುವ ಸಲುವಾಗಿ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯಿಂದ ಬೀದಿ ನಾಟಕಗಳನ್ನು ಆಯೋಜಿಸುವ ಮೂಲಕ ಹಾಗೂ ಪ್ರಶ್ನೋತ್ತರಗಳ ಮೂಲಕ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಭಾರತೀಯ ಎಪಿಲೆಪ್ಸಿ ಸಂಸ್ಥೆ ಮುಖ್ಯಸ್ಥರಾದ ಡಾ.ಜಿ.ಟಿ ಸುಭಾಷ್ ತಿಳಿಸಿದರು.

 

LEAVE A REPLY

Please enter your comment!
Please enter your name here