ಮೇ 31ರಿಂದ ನಮ್ಮ ನಡಿಗೆ ಚೆನ್ನಮ್ಮನ ನಾಡಿಗೆ

 -  -  1


    ದಾವಣಗೆರೆ:

ಹರಿಹರ ವೀರಶೈವ-ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀವಚನಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಮೇ 31ರಿಂದ “ನಮ್ಮ ನಡಿಗೆ ಚೆನ್ನಮ್ಮನ ನಾಡಿಗೆ” ಸದ್ಭಾವನಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪೀಠದ ಟ್ರಸ್ಟಿ ಬಾವಿ ಬೆಟ್ಟಪ್ಪ ತಿಳಿಸಿದರು.

ಬುಧವಾರ ಪೀಠದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 31ರಂದು ಸಂಜೆ 4 ಗಂಟೆಗೆ ಈ ಸದ್ಭಾವನಾ ಪಾದಯಾತ್ರೆಗೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಲಿದ್ದು, ನಂತರ ಯಾತ್ರೆಯು ಹರಿಹರೇಶ್ವರ ದರುಶನ ಪಡೆದು ನಂತರ ನಗರದಲ್ಲಿ ಸಂಚರಿಸಿ, ಕೊಡಿಯಾಲ ಹೊಸಪೇಟೆಗೆ ತೆರಳಿ ವಾಸ್ತವ್ಯ ಹೂಡಲಿದೆ ಎಂದು ಹೇಳಿದರು.

 ಸ್ವಾತಂತ್ರ್ಯಕ್ಕಾಗಿ ಪ್ರಪ್ರಥಮವಾಗಿ ಹೋರಾಟ ಮಾಡಿದ ವೀರಮಾತೆ ಕಿತ್ತೂರು ಚೆನ್ನಮ್ಮ ತಾಯಿಯ ಸ್ಮಾರಕ ಭವನ ರಾಷ್ಟ್ರೀಯ ಸ್ಮಾರಕ ಭವನ ಆಗಬೇಕು ಹಾಗೂ ಇದನ್ನು ಪ್ರವಾಸಿತಾಣವನ್ನಾಗಿ ಅಭಿವೃದ್ಧಿ ಪಡಿಸುವ ಮೂಲಕ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಚೆನ್ನಮ್ಮರ ಜೀವನ ಚರಿತ್ರೆಯ ಬಗ್ಗೆ ಮಾಹಿತಿ ನೀಡುವಂತಾಗಬೇಕು ಹಾಗೂ ಚೆನ್ನಮ್ಮ ಅವರನ್ನು ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಘೋಷಿಸಬೇಕು.
                                                              – ಶ್ರೀವಚನಾನಂದ ಸ್ವಾಮೀಜಿ,
                                            ಹರಿಹರ ವೀರಶೈವ-ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು.

ಈ ಸದ್ಭಾವನಾ ಯಾತ್ರೆಯೂ ಜೂ.1ರಂದು ಕೊಡಿಯಾಲ ಹೊಸಪೇಟೆಯಿಂದ ರಾಣೇಬೆನ್ನೂರು, ಜೂ.2ರಂದು ಮೊಟೇಬೆನ್ನೂರು, ಜೂ.3ರಂದು ಹಾವೇರಿ, ಜೂ.4ರಂದು ಬಂಕಾಪುರ, ಜೂ.5ರಂದು ತಡಸ ಕತ್ತರಿಗೆ, ಜೂ.6ರಂದು ಹುಬ್ಬಳ್ಳಿ, ಜೂ.7ರಂದು ಧಾರವಾಡ, ಜೂ.8ರಂದು ಕಿತ್ತೂರು ಸಂಚರಿಸಿ ಜೂ.9ರಂದು ವೀರರಾಣಿ ಕಿತ್ತೂರು ಚನ್ನಮ್ಮರ ಸಮಾಧಿ ಇರುವ ಬೈಲಹೊಂಗಲಕ್ಕೆ ತಲುಪಿ ಸಮಾಪ್ತಿಯಾಗಲಿದ್ದು, ಜೂ.10ರಂದು 11 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಹರಿಹರದಿಂದ ಬೈಲಹೊಂಗಲ 223 ಕಿ.ಮೀ. ದೂರವಿದ್ದು, ಯಾತ್ರೆಯು ಪ್ರತಿ ದಿನ 25ರಿಂದ 30 ಕಿ.ಮೀ. ಕ್ರಮಿಸಲಿದೆ ಎಂದರು.

ಹರಿಹರ ವೀರಶೈವ-ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀವಚನಾನಂದ ಸ್ವಾಮೀಜಿ ಮಾತನಾಡಿ, ತಾವು ಋಷಿಕೇಶದ ಹರಿಹರದ ಕೈಲಾಸ ಆಶ್ರಮದಲ್ಲಿ ವಿದ್ಯಾಭ್ಯಾಸ ಪಡೆದು, ಈ ಪೀಠಕ್ಕೆ ಜಗದ್ಗುರು ನೇಮಕ ಆಗುವ ವರೆಗೂ ರೋಗಮುಕ್ತ ಕರ್ನಾಟಕ ನಿರ್ಮಾಣಕ್ಕೆ ಶ್ರಮಿಸಿದ್ದೇವು. ಈಗ ಇದರ ಜೊತೆ, ಜೊತೆಗೆ ನಮ್ಮ ಪೀಠ ಇರುವ ಹರಿಹರವನ್ನು ಕೈಲಾಸ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇವೆ ಎಂದು ತಿಳಿಸಿದರು.

ಬ್ರಿಟೀಷರ ದಾಸ್ಯದಿಂದ ಈ ನಾಡನ್ನು ಮುಕ್ತ ಗೊಳಿಸಲು 1824ರಲ್ಲಿ ಸ್ವಾತಂತ್ರ್ಯ ಚಳವಳಿ ಆರಂಭಿಸಿದ ವೀರಮಾತೆ ಚೆನ್ನಮ್ಮರ ಕನಸು ಸಾಕಾರಗೊಳಿಸಲು ಹಲವರು ಪ್ರಯತ್ನಿಸಿದರು. ಇವರೆಲ್ಲರ ಪರಿಶ್ರಮದಿಂದ ಇಂದು ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಅಂಥಹ ವೀರಮಾತೆ ಚೆನ್ನಮ್ಮರ ವಂಶವಾಹಿಯಲ್ಲಿ ಹುಟ್ಟಿದ ನಾವು ಒಳ್ಳೆಯ ಕೆಲಸವನ್ನು ಆರಂಭಿಸುವ ಮುನ್ನ ನಮ್ಮ ಕುಲದ ತಾಯಿ ಚೆನ್ನಮ್ಮರ ಆಶೀರ್ವಾದ ಪಡೆಯಲು, ನಮ್ಮ ನಡಿಗೆ ಚೆನ್ನಮ್ಮರ ನಾಡಿಗೆ ಎಂಬ ಘೋಷವಾಕ್ಯದೊಂದಿಗೆ ಈ ಸದ್ಭಾವನಾ ಯಾತ್ರೆಯನ್ನು ಕಿತ್ತೂರು ಚೆನ್ನಮ್ಮರ ವೀರಭೂಮಿಯ ವರೆಗೆ ಕೈಗೊಂಡಿದ್ದೇವೆ ಎಂದು ವಿವರಿಸಿದರು.

ಯಾತ್ರೆಯ ಪ್ರತಿದಿನ ಬೆಳಿಗ್ಗೆ ಉಪಹಾರ ಸೇವನೆಗೂ ಮುನ್ನ ಭಕ್ತರೊಂದಿಗೆ ಯೋಗ, ಧ್ಯಾನ, ಭಜನೆ ನಡೆಸಲಾಗುವುದು. ನಂತರ ಭಜನೆಯ ಮೂಲಕವೇ ನಡಿಗೆಯಲ್ಲಿ ತೆರಳಿ ರಾತ್ರಿ ವಾಸ್ತವ್ಯ ಹೂಡುವ ಪ್ರತಿ ಊರುಗಳಲ್ಲಿ ಧರ್ಮಸಭೆ, ಸತ್ಸಂಗ ಹಾಗೂ ಧ್ಯಾನ ನಡೆಯಲಿದೆ. ಈ ಯಾತ್ರೆಯಲ್ಲಿ ಕೇವಲ ಪಂಚಮಸಾಲಿ ಬಾಂಧವರಲ್ಲ, ಎಲ್ಲ ಸಮಾಜದವರೂ ಭಾಗವಹಿಸಬೇಕೆಂದು ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪೀಠದ ಪ್ರಧಾನ ಕಾರ್ಯದರ್ಶಿ ಬಿ.ಸಿ.ಉಮಾಪತಿ, ಹಣಸಿ ಸಿದ್ದಣ್ಣ, ಜಿ.ಪಿ.ಪಾಟೀಲ್ ಹುನಗುಂದ, ಮಲ್ಲಣ್ಣ, ಚಂದ್ರಶೇಖರ್ ಪೂಜಾರ್, ಕರಿಬಸಪ್ಪ ಸೇರಿದಂತೆ ಹಲವರು ಹಾಜರಿದ್ದರು.

comments icon 0 comments
0 notes
3 views
bookmark icon

Write a comment...

Your email address will not be published. Required fields are marked *