ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ

0
13

ಬೆಂಗಳೂರು:
  ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಲು ಬಿಜೆಪಿ ನಿರ್ಧರಿಸಿದೆ.

      ರೈತರ ಸಾಲ ಮನ್ನಾ, ಚುನಾವಣೆಗೂ ಮುನ್ನ ಉಭಯ ಪಕ್ಷಗಳು ನೀಡಿರುವ ಭರವಸೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೋರಾಟವನ್ನು ಇನ್ನಷ್ಟು ಬಿರುಗುಸೊಳಿಸಲು ತೀರ್ಮಾನಿಸಿದೆ.

      ಬಿಜೆಪಿ ಕಾರ್ಯಕಾರಣಿ ಸಭೆಗೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಾರಥ್ಯದಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

      ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಅರವಿಂದ ಲಿಂಬಾವಳಿ ಸುದ್ದಿಗಾರರ ಜತೆ ಮಾತನಾಡಿ, ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಹಾಗೂ ಕೇಂದ್ರದಲ್ಲಿ ನಾಲ್ಕು ವರ್ಷ ಯಶಸ್ವಿಯಾಗಿ ಅಧಿಕಾರ ಪೂರೈಸಿದ ಪ್ರಧಾನಿ ನರೇಂದ್ರಮೋದಿ ಸರ್ಕಾರದ ಸಾಧನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ತೀರ್ಮಾನಿಸಲಾಗಿದೆ ಎಂದರು.

      ಲೋಕಸಭಾ ಚುನಾವಣೆಯ ಸಿದ್ದತೆಗಳ ಬಗ್ಗೆಯೂ ಚರ್ಚೆ ನಡೆಸಲಾಗಿದ್ದು, ಪಕ್ಷದ ವರಿಷ್ಠರು ನೀಡಿರುವ 8 ಅಂಶಗಳ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಸಂಪರ್ಕ ಅಭಿಯಾನ, ಬೈಕ್ ರ್ಯಾಲಿ, ಗ್ರಾಮ ಸಭೆ, ಫಲಾನುಭವಿಗಳ ಸಭೆ, ಹಿರಿಯ ನಾಗರಿಕರ ಸಮಾವೇಶ, ಸ್ವಚ್ಚತಾ ಅಭಿಯಾನ ಇವುಗಳ ರೂಪುರೇಷೆಗಳನ್ನು ಅಂತಿಮಗೊಳಿಸಲಾಯಿತು ಎಂದರು.

      ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆ ಮಾಡುವ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಸಲಹೆಗಳು ಬಂದಿದ್ದು, ಪಕ್ಷದ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪನವರು ಪರಿಷತ್ತಿನ 20 ಬಿಜೆಪಿ ಸದಸ್ಯರ ಜತೆ ಚರ್ಚೆ ನಡೆಸಿ, ನಾಯಕನ ಆಯ್ಕೆಯನ್ನು ಅಂತಿಮಗೊಳಿಸುವರು ಎಂದು ಅವರು ಹೇಳಿದರು.

      ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ನಡೆದಿರುವ ಕಚ್ಚಾಟ, ಉಂಟಾಗಿರುವ ಬಿಕ್ಕಟ್ಟು, ಮುಖಂಡರ ಹೇಳಿಕೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದುಕೊಂಡು ಎಲ್ಲವನ್ನೂ ಗಮನಿಸಿ ಅಗತ್ಯ ಎನಿಸಿದಾಗ ವರಿಷ್ಠರಿಗೆ ಎಲ್ಲ ಬೆಳವಣಿಗೆಗಳ ಮಾಹಿತಿ ನೀಡುವ ತೀರ್ಮಾನವನ್ನು ಕೋರ್ ಕಮಿಟಿಯಲ್ಲಿ ಕೈಗೊಳ್ಳಲಾಗಿದೆ.

      ಪಕ್ಷದ ಕಚೇರಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಪಕ್ಷದ ಪ್ರಮುಖ ಸಭೆಯಲ್ಲಿ ಕೇಂದ್ರ ಸಚಿವರಾದ ಅನಂತಕುಮಾರ್, ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರರಾವ್, ಮುಖಂಡರಾದ ಸಿ.ಎಂ. ಉದಾಸಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಇವರುಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here