ಮೋದಿಗಾಗಿ ಮತ್ತೊಮ್ಮೆ ಬಿಜೆಪಿ ಬೆಂಬಲಿಸಲು ಮನವಿ

0
5

ದಾವಣಗೆರೆ:

      ಇಡೀ ಜಗತ್ತೇ ಮೆಚ್ಚುವಂತೆ ಆಡಳಿತ ನೀಡಿರುವ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕೆಂದು ವಿಧಾನ ಪರಿಷತ್ ಸದಸ್ಯ, ಪಕ್ಷದ ಜಿಲ್ಲಾ ಉಸ್ತುವಾರಿ ಆಯನೂರು ಮಂಜುನಾಥ್ ಮನವಿ ಮಾಡಿದರು.

       ಜಿಲ್ಲೆಯ ಹೊನ್ನಾಳಿ ಪಟ್ಟಣದ ಖಾಸಗಿ ಬಸ್ ನಿಲ್ದಾಣ ಸಮೀಪದ ಮೈದಾನದಲ್ಲಿ ಮಂಗಳವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅವಧಿಯಲ್ಲಿ ಭಾರತದ ಮಾನ ಮಣ್ಣುಪಾಲಾಗಿತ್ತು. 5 ವರ್ಷದಲ್ಲಿ ಭಾರತೀಯರು ಮಾತ್ರವಲ್ಲದೆ, ಜಗತ್ತಿನ ಎಲ್ಲ ರಾಷ್ಟ್ರದವರು ಮೆಚ್ಚುವ ರೀತಿಯಲ್ಲಿ ನರೇಂದ್ರ ಮೋದಿ ಆಡಳಿತ ನಡೆಸಿದ್ದಾರೆ ಎಂದರು.

      ದೇಶ ಬಿಟ್ಟು ಓಡಿ ಹೋಗಿರುವ ನೀರವ್ ಮೋದಿ, ವಿಜಯ ಮಲ್ಯರಂತಹ ಕಳ್ಳ ಉದ್ಯಮಿಗಳಿಗೆಲ್ಲಾ ಸಾಲ ನೀಡಿದ್ದು ಕಾಂಗ್ರೆಸ್ ಅವಧಿಯಲ್ಲಿ ಮೋದಿ ಆಡಳಿತದಲ್ಲಿ ತಮಗೆಲ್ಲಾ ಉಳಿಗಾಲವಿಲ್ಲವೆಂದು ಓಡಿ ಹೋಗಿದ್ದಾರೆ. ಅಂತಹವರನ್ನೆಲ್ಲಾ ಮರಳಿ ದೇಶಕ್ಕೆ ಎಳೆತರುತ್ತೇವೆ. ಬಿಜೆಪಿಗೆ ಹಾಕುವ ಒಂದೊಂದು ಮತವೂ ನರೇಂದ್ರ ಮೋದಿಯವರಿಗೆ ಶಕ್ತಿ ತುಂಬಲಿದೆ ಎಂದರು.

        ಪಕ್ಷದ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ದೇಶದ ರಕ್ಷಣೆ ಹಾಗೂ ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ನಡೆಯುತ್ತಿದೆ. ನರೇಂದ್ರ ಮೋದಿಯವರ 5 ವರ್ಷದ ಸಮರ್ಥ ಆಡಳಿತದಲ್ಲಿ ದೇಶ ಸಾಕಷ್ಟು ಅಭಿವೃದ್ಧಿಯಾಗಿದೆ. ಒಂದು ದಿನವೂ ರಜೆ ಪಡೆಯದೆ, ದಿನಕ್ಕೆ 18 ತಾಸು ದೇಶಕ್ಕಾಗಿ ದುಡಿಯುತ್ತಿರುವ ಮಹಾನ್ ನಾಯಕನನ್ನು ಜನತೆ ಬೆಂಬಲಿಸಬೇಕೆಂದು ಮನವಿ ಮಾಡಿದರು.

        ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಸರ್ಜಿಕಲ್ ಸ್ಟ್ರೈಕ್‍ಗೆ ಸಾಕ್ಷಿ ಕೇಳುವ ಕಾಂಗ್ರೆಸ್ಸಿಗರನ್ನು ಪೊರಕೆಯಲ್ಲಿ ಹೊಡೆಯಬೇಕು. ದೇಶ ಕಾಯುವ ಯೋಧ ಹಾಗೂ ಅನ್ನ ನೀಡುವ ರೈತರ ಬಗ್ಗೆ ಕಾಂಗ್ರೆಸ್ಸಿಗೆ ಗೌರವವಿಲ್ಲ. ಸೈನಿಕರನ್ನು ಸಂಶಯದಿಂದ ನೋಡುವವರಿಗೆ ನಾಚಿಕೆಯಾಗಬೇಕು. ಸತ್ತವರ ಲೆಕ್ಕ ಕೊಡಲು ಸೈನ್ಯವೇನೂ ಕಾಂಗ್ರೆಸ್ಸಿನವರ ಅಪ್ಪನ ಮನೆ ಆಸ್ತಿಯಲ್ಲ ಎಂದು ಹರಿಹಾಯ್ದರು.

        ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಕುರುಬ ಸಮಾಜದ ಚನ್ನಯ್ಯ ಒಡೆಯರ್, ಮುಸ್ಲಿಂ ಸಮಾಜದ ಸೈಯದ್ ಸೈಫುಲ್ಲಾಗೆ ಅನ್ಯಾಯ ಮಾಡಿದವರು ಇಂದು ಹಿಂದುಳಿದ ವರ್ಗ, ಸಾಮಾಜಿಕ ನ್ಯಾಯದ ಮಾತನಾಡುತ್ತಿದ್ದಾರೆ. ಸ್ವಂತದ ಅಧಿಕಾರಕ್ಕಾಗಿ ಭರಗೆಟ್ಟು ಪ್ರಚಾರ ಮಾಡುತ್ತಿದ್ದವರು ಈಗ ಯಾವ ರೀತಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂಬುದನ್ನು ಜನ ಗಮನಿಸುತ್ತಿದ್ದಾರೆ.

       ತಮ್ಮನ್ನು ತಾವು ಹಿಂದುಳಿದವರ ಪರವೆಂದು ಬಿಂಬಿಸಿಕೊಳ್ಳುವುದು, ತಮ್ಮನ್ನು ಕೈ ಬಿಟ್ಟಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪಲಿದೆ ಎಂಬ ಸಂದೇಶ ರವಾನಿಸುವುದೇ ಅಪ್ಪ-ಮಕ್ಕಳ ಉದ್ದೇಶವಾಗಿದೆ. ಇದಕ್ಕಾಗಿ ಕುರುಬ ಸಮಾಜದ ಹೆಚ್.ಬಿ.ಮಂಜಪ್ಪರನ್ನು ಅಭ್ಯರ್ಥಿಯಾಗಿ ನಿಲ್ಲಿಸಿ ಹರಕೆಯ ಕುರಿ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

        ಕಾರ್ಯಕ್ರಮದಲ್ಲಿ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಪ್ರೊ.ಎನ್.ಲಿಂಗಣ್ಣ, ಕರುಣಾಕರ ರೆಡ್ಡಿ, ಮಾಜಿ ಶಾಸಕರಾದ ಬಿ.ಪಿ.ಹರೀಶ, ಎಂ.ಬಸವರಾಜ ನಾಯ್ಕ, ಜೆ.ಎನ್.ಮೂರ್ತಿ, ಸುರೇಂದ್ರನಾಥ, ಶಾಂತರಾಜ ಪಾಟೀಲ್, ಗಾಯತ್ರಿ ಸಿದ್ದೇಶ್ವರ್, ಡಿ.ಜಿ.ರಾಜಣ್ಣ, ದಿಡಗೂರು ಪಾಲಾಕ್ಷಪ್ಪ, ಹೆಚ್.ಎನ್.ಶಿವಕುಮಾರ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here