ಯಾರೂ ಪಕ್ಷ ತೊರೆಯಲ್ಲ : ಬಿಜೆಪಿಯ ಯತ್ನ ಫಲಿಸಲ್ಲ – ಡಾ||ಜಿ.ಪರಮೇಶ್ವರ್

 -  - 


ಬೆಂಗಳೂರು:

ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳುವ ದುರುದ್ದೇಶದಿಂದ ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿರುವ ಮಾಹಿತಿ ದೊರೆತಿದೆ, ಆದರೂ ಕಾಂಗ್ರೆಸ್‍ನ ಪ್ರತಿಯೊಬ್ಬ ಶಾಸಕರು ಪಕ್ಷವನ್ನು ತೊರೆಯುವುದಿಲ್ಲ ಎನ್ನುವ ವಿಶ್ವಾಸವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರನ್ನು ಸೆಳೆದುಕೊಳ್ಳುವ ಬಿಜೆಪಿ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದರು. ಪಕ್ಷದ ಮತ್ತೊಬ್ಬ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ಮಾತನಾಡಿ, ಎಲ್ಲಾ ಶಾಸಕರು ಕಾಂಗ್ರೆಸ್ ನಿರ್ಧಾರಕ್ಕೆ ಬೆಂಬಲ ನೀಡುವ ಬಗ್ಗೆ ಸಂದೇಹವೇ ಇಲ್ಲ, ರಾಜ್ಯದಲ್ಲಿ ಮುಂದಿನ ಸರ್ಕಾರವನ್ನು ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ರಚಿಸಲಿದೆ ಎಂದರು.

ವಿಧಾನಸಭಾ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಇಂದು ಪಕ್ಷದ ಶಾಸಕಾಂಗ ಸಭೆಯನ್ನು ನಡೆಸಲಾಯಿತು.

ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಹಿರಿಯ ನಾಯಕ ಗುಲಾಂ ನಬಿ ಆಜಾದ್, ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮತ್ತೊಬ್ಬ ನಾಯಕ ಡಿ.ಕೆ.ಶಿವಕುಮಾರ್, ಪಕ್ಷದ ಶಾಸಕರು ಮತ್ತು ಇನ್ನಿತರ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ನಂತರ ಸಭೆಯ ವಿವರಗಳನ್ನು ತಿಳಿಸಿದ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ, ಪಕ್ಷದ ಎಲ್ಲಾ ಶಾಸಕರು ನಾಯಕರ ಸಂಪರ್ಕದಲ್ಲಿದ್ದು, ಯಾವುದೇ ಪಕ್ಷ ಅವರನ್ನು ತನ್ನತ್ತ ಸೆಳೆದುಕೊಳ್ಳುವ ಆತಂಕವಿಲ್ಲ ಎಂದರು.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಬೇಕೆಂದು ಕಾಂಗ್ರೆಸ್‍ನ ಎಲ್ಲಾ ಶಾಸಕರು ಒಪ್ಪಿಕೊಂಡು ಸಹಿ ಮಾಡಿರುವ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗಿದೆ. ರಾಜ್ಯಪಾಲರ ನಿರ್ಧಾರದ ಮೇಲೆ ಮುಂದಿನ ಕ್ರಮ ತೀರ್ಮಾನವಾಗಲಿದೆ ಎಂದರು.

ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಗೆ 117 ಸದಸ್ಯರ ಬೆಂಬಲವಿದೆ. ಇದು ಬಿಜೆಪಿಗೆ ದೊರೆತಿರುವ ಸಂಖ್ಯೆಗಿಂತ ಹೆಚ್ಚಾಗಿದ್ದು, ರಾಜ್ಯಪಾಲರು ಸರ್ಕಾರ ರಚನೆಗೆ ಮೊದಲು ತಮಗೇ ಅವಕಾಶ ನೀಡಬೇಕು, ವಿಧಾನಸಭಾ ಚುನಾವಣೆಗಳಲ್ಲಿ ಅತಂತ್ರ ಫಲಿತಾಂಶದ ಸಂದರ್ಭದಲ್ಲಿ ಸರಳ ಬಹುಮತ ಪಡೆದಿರುವ ಪಕ್ಷವನ್ನೇ ಸರ್ಕಾರ ರಚನೆಗೆ ಕರೆಯಬೇಕೆಂದು ಸುಪ್ರೀಂ ಕೋರ್ಟಿನ ತೀರ್ಪಿನಲ್ಲಿ ಹೇಳಿಲ್ಲ, ನ್ಯಾಯಾಲಯದ ಇತ್ತೀಚಿನ ತೀರ್ಪಿನಂತೆ ಚುನಾವಣೆಯ ನಂತರ ಕೆಲವು ಪಕ್ಷಗಳು ಒಟ್ಟಾಗಿ ಮೈತ್ರಿ ಕೂಟ ರಚಿಸಿಕೊಂಡು ಹೆಚ್ಚಿನ ಸದಸ್ಯರ ಸಂಖ್ಯೆಯನ್ನು ಹೊಂದಿದ್ದ ಸಂದರ್ಭಗಳಲ್ಲಿ ಸರ್ಕಾರ ರಚನೆಗೆ ಆ ಪಕ್ಷಗಳಿಗೆ ಅವಕಾಶ ನೀಡಬೇಕೆಂದು ತಿಳಿಸಲಾಗಿದೆ.

ಗೋವಾ, ಮೇಘಾಲಯ ವಿಧಾನಸಭಾ ಚುನಾವಣೆ ಸಂದರ್ಭಗಳಲ್ಲಿ ಇದೇ ರೀತಿಯ ಸ್ಪಷ್ಟ ನಿದರ್ಶನಗಳಿವೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

comments icon 0 comments
0 notes
2 views
bookmark icon

Write a comment...

Your email address will not be published. Required fields are marked *