ಯಾವ ಬಟ್ಟೆಯನ್ನಾಗಲಿ ಕತ್ತರಿಸದೆ ಉಡುಪು ಸಿದ್ದಪಡಿಸಲಾಗುವುದೇ?

0
44

 

      ಹಬ್ಬ ಎಂದರೆ ಎಲ್ಲರಿಗೂ ಇಷ್ಟ! ಮಕ್ಕಳಿಗಂತೂ ತುಂಬಾನೆ ಇಷ್ಟ! ಮನೆಯ ಧೂಳು, ಜೇಡರ ಬಲೆ ತೆಗೆದು, ಬಣ್ಣದ ಹೊಸ ಉಡುಪು ಉಡಿಸಿ, ಮಕ್ಕಳಿಗೆ ಹೊಸ ಬಟ್ಟೆ, ಮನೆಯ, ದೇವರ, ದೇವರ ಕೋಣೆಯ, ಬಾಗಿಲ ಅಲಂಕಾರ, ಸುಂದರ ವಾತಾವರಣ, ಸಿಹಿತಿನಿಸು, ರುಚಿ ರುಚಿಯಾದ ಭಕ್ಷ್ಯ ಭೋಜ್ಯ, ನೆಂಟರಿಷ್ಟರ ಆಗಮನ ಮನೆಯ ವಾತಾವರಣ ಬದಲಾಯಿಸಿ ಸಂತೋಷ ನೀಡುವುದು! ಹೊಸ ಬಟ್ಟೆ ಮಕ್ಕಳಿಗೆ ತುಂಬಾ ಇಷ್ಟ! ಅದರಲ್ಲೂ ಬಣ್ಣ ಬಣ್ಣದ ಚಿತ್ತಾರದ ಹೊಸ ಬಟ್ಟೆ ಇನ್ನೂ ಇಷ್ಟ! ಅಂದು ಅವಳ ಅಪ್ಪ ಪೇಟೆಗೆ ಹೊರಟಿದ್ದ. ಅವಳು ಪ್ರತಿ ಹಬ್ಬಕ್ಕೂ ತರುವ ಸಿದ್ಧ ಉಡುಪು ( ready made ) ಧರಿಸಿ ಧರಿಸಿ ರೋಸಿ ಹೋಗಿದ್ದಳು. ಪ್ರತಿ ಹಬ್ಬಕ್ಕೂ ಸಿದ್ದವಲ್ಲದ ಉಡುಪು ಬಯಸುತ್ತಿದ್ದರೂ ತರಲಾಗಿರಲಿಲ್ಲ! ಈ ಬಾರಿ ಸಿದ್ಧ ಉಡುಪು ಬೇಡವೆಂದು ಜನುಮದ ಜೋಡಿ ಸಿನಿಮಾದಲ್ಲಿ ನಾಯಕಿ ಧರಿಸಿದ ಲಂಗ ಜಾಕೆಟ್ ತೊಟ್ಟೇ ತೀರಬೇಕೆಂದು ಹಟ ಮಾಡಿದ ಪ್ರಯುಕ್ತ ಅವಳ ತಾಯಿ ಒಲವಿನ ಚಿತ್ತಾರವಿರುವ ಬಣ್ಣ ಬಣ್ಣದ ಬಟ್ಟೆ ಕೊಡಿಸಿ ಹೊಲಿಯಲು ಟೈಲರಿಗೆ ಅಳತೆ ಕೊಡಿಸಿದ್ದರು.

Related image

    ಜನುಮದ ಜೋಡಿ ಉಡುಪು ಹೊಲೆಯುವಂತೆ ಆ ಬಣ್ಣ ಬಣ್ಣದ, ಚಿತ್ತಾರದ ರೇಷ್ಮೆ ಬಟ್ಟೆಯ ಟೈಲರಿಗೆ ಕೊಟ್ಟಮೇಲೆ ಅವಳು ಯಾವಾಗ ಆ ಉಡುಪು ಧರಿಸಿಯೇನು? ತನ್ನ ಗೆಳೆಯ ಗೆಳತಿಯರ ಮುಂದೆ ಅದನ್ನು ತೋರಿಸಿ ಕುಣಿದು ಕುಪ್ಪಳಿಸಿಯೇನು? ಎಂದು ಹಗಲು ರಾತ್ರಿ ಕನಸು ಕಾಣತೊಡಗಿದಳು. ಟೈಲರಿಗೆ ಹೊಲೆಯಲು ಕೊಟ್ಟ ಎರಡನೇ ದಿನದಿಂದನೇ ದಿನಕ್ಕೆ ಮೂರು ನಾಲ್ಕು ಬಾರಿ ಟೈಲರ್ ಅಂಗಡಿಗೆ ಹೋಗಿ ನನ್ನ ಉಡುಪು ಸಿದ್ಧಪಡಿಸಿದ್ದೀರಾ? ಇನ್ನು ಯಾಕೆ ಸಿದ್ದಪಡಿಸಿಲ್ಲ? ಯಾವಾಗ ಸಿದ್ಧಪಡಿಸುತ್ತೀರಿ? ಎಂದು ಮತ್ತೆ ಮತ್ತೆ ಹೋಗುವುದು ಹೊಲಿದಿರಾ? ಹೊಲಿದಿರಾ? ಎಂದು ಪ್ರಶ್ನಿಸುವ ಅವಳ ಕಾಟವನ್ನು ತಡೆಯಲಾರದೆ ಆ ಟೈಲರ್ ಅವಳ ಬಟ್ಟೆ ತೆಗೆದುಕೊಂಡು ಮಾರ್ಕ್ ಮಾಡಿ ಕತ್ತರಿಸಲು ಶುರು ಮಾಡಿದ. ಅದೇ ಸಮಯಕ್ಕೆ ಸರಿಯಾಗಿ ಮತ್ತೊಮ್ಮೆ ಆ ಹುಡುಗಿ ಅಲ್ಲಿಗೆ ಬಂದಳು. ತನ್ನ ಸುಂದರ ನವಿಲುಗಳ ಚಿತ್ತಾರವಿರುವ ರೇಷ್ಮೆ ಬಟ್ಟೆಯ ಅಳತೆ ಹಿಡಿದು ಮಾರ್ಕ್ ಮಾಡುವುದು ಅದಕ್ಕೆ ತಕ್ಕಂತೆ ಕತ್ತರಿಸುತ್ತಾ ಇರುವಾಗ ಒಂದು ಸುಂದರ ನವಿಲಿನ ಕತ್ತನ್ನು ಕತ್ತರಿಸುತ್ತಿದ್ದುದನ್ನು ಕಂಡಳು. ಕೋಪ ಆಸ್ಫೋಟಿಸಿತು, ದು:ಖ ಉಕ್ಕತೊಡಗಿತು! ಗಟ್ಟಿಯಾಗಿ ಚೀರಿ ದು:ಖ ಹೊರ ಹೊಮ್ಮಿಸಿ ಉಮ್ಮಳಿಸುತ್ತಾ ಟೈಲರ್ ಕೈಯಲ್ಲಿರುವ ಕತ್ತರಿಯನ್ನು ಕಿತ್ತು ಬಿಸಾಡಿ, ಮಾರ್ಕರನ್ನು ಪುಡಿ ಮಾಡಿ ತುಂಡು ತುಂಡಾದ ಬಟ್ಟೆಯನ್ನೆಲ್ಲಾ ಬಾಚಿ ತಬ್ಬಿಕೊಂಡು ಅವರ ಇನ್ನೊಂದು ಕೈಯಲ್ಲಿದ್ದ ಬಟ್ಟೆಯನ್ನು ಕಸಿದುಕೊಂಡು ಅವರನ್ನು ಬೈಯುತ್ತಾ ಶಪಿಸುತ್ತಾ ಎಷ್ಟು ದಿನದಿಂದ ಜನುಮದ ಜೋಡಿ ಚಿತ್ರದ ಲಂಗ ಬ್ಲೋಸು ಧರಿಸಬೇಕೆಂದು ಕನಸು ಕಂಡಿದ್ದೆ ಈ ಸಾರಿನೂ ಈ ಕೆಟ್ಟ ಟೈಲರ್ ನನ್ನ ಕನಸನ್ನು ಈಡೇರದಂತೆ ಮಾಡಿಬಿಟ್ಟ! ಬಟ್ಟೆನೆಲ್ಲಾ ತುಂಡ್ ತುಂಡ್ ಮಾಡಿದಾನೆ ಹೂ ಹೂಂ .. ಎಂದು ದು:ಖಿಸುತ್ತಾ ಅವನನ್ನು ಆ ಹುಹ್ ಹುಹ್ .. ಎಂದು ಅಳುತ್ತಾ ಮನೆಗೆ ಓಡೋಡಿ ಬಂದಳು! ಗಟ್ಟಿಯಾಗಿ ಅಬ್ಬರಿಸಿ ಅಳತೊಡಗಿದಳು!

Related image

      ಮನೆಮಂದಿಯೆಲ್ಲಾ ಗಾಬರಿಗೊಂಡು ಅವಳಿಗೆ ಏನಾಯಿತೋ ಎಂದು ಅವಳನ್ನು ಸುತ್ತುವರಿಯಿತು. ತಂದ ಬಟ್ಟೆ ತುಂಡುಗಳು ಚಲ್ಲಾಪಿಲ್ಲಿಯಾಗಿ ನೆಲದಮೇಲೆ ಬಿದ್ದಿರುವುದ ಕಂಡು ಏನಾಯಿತು? ಏನಾಯಿತು? ಯಾಕೆ ಅಳುತ್ತಿದ್ದೀಯೆ ಕಂದ? ಎಂದು ತಾಯಿ ಪ್ರಶ್ನಿಸಿದಳು. ಪ್ರಶ್ನಿಸಿದಂತೆಲ್ಲಾ ಮಾತನಾಡಲು ಆಗದಂತೆ ದುಃಖ ಹೆಚ್ಚಿ ಉಮ್ಮಳಿಸತೊಡಗಿದಳು. ದುಃಖದಲ್ಲಿ ಶಬ್ದಗಳು ಮಾತುಗಳು ಪೂರ್ತಿ ಹೊರಡಲದೆ ಗಂಟಲಲ್ಲೇ ಉಳಿದವು. ಎಲ್ಲರೂ ಸಮಾಧಾನವಾಗಿ ಏನಾಯಿತು ಏಕೆ ಅಳುತ್ತಿದ್ದೀಯೆ? ಏನು ಬೇಕು? ಅಳಬೇಡ, ಮೊದಲು ಅಳು ನಿಲ್ಲಿಸು, ನಂತರ ಮಾತನಾಡು ಎಂದು ತಲೆ ನೇವರಿಸುತ್ತಾ ಸಮಾಧಾನಪಡಿಸುತ್ತಿದ್ದರು. ಆ ಟೈಲರ್ ಲಂಗ ಜಾಕೆಟ್ ಹೊಲಿ ಎಂದರೆ ರೆ ರೆ … ಎಷ್ಟು ಸುಂದರವಾದ ಈ ಬಟ್ಟೆಯನ್ನೆಲ್ಲಾ ಕತ್ತರಿಸಿ ತುಂಡು ತುಂಡು ಮಾಡಿದ್ದಾನೇ ಏ ಏ …. ಎಂದು ಎರಡು ಕಣ್ಣುಗಳನ್ನು ಉಜ್ಜಿಕೊಳ್ಳುತ್ತಾ ದು:ಖಿಸತೊಡಗಿದಳು! ಸಾವರಿಸಿಕೊಂಡು ಇನ್ನೂ ಕತ್ತರಿಸಿ ಎಷ್ಟು ತುಂಡು ಮಾಡುತ್ತಿದ್ದನೋ ಏನೋ ಅಷ್ಟರಲ್ಲಿ ನಾನು ಹೋದೆ ಕತ್ತರಿಸುವುದನ್ನು ಕಂಡೆ ದುಃಖ ಉಕ್ಕಿ ಬಂದು ಅವನನ್ನು ಬೈದು, ಆಚೆಗೆ ದೂಡಿ, ಎಲ್ಲಾ ತುಂಡುಗಳ ಅವುಚಿಕೊಂಡು ತಂದೇ ಏ ಏ … ಹಬ್ಬಕ್ಕೆ ನಾನು ಏನು ತೊಡಲೀ ಇ ಈ … ಎಂದು ಬಿಕ್ಕಳಿಸತೊಡಗಿದಳು! ಈ ಹಬ್ಬಕ್ಕೂ ಜನುಮದ ಜೋಡಿ ಲಂಗ ಜಾಕೆಟ್ ಧರಿಸುವ ಅದೃಷ್ಟ ಇಲ್ಲದಂತೆ ಮಾಡಿದಾ ಆ ಆ … ಎಂದು ಒಂದೇ ಸಮನೆ ಅಳತೊಡಗಿದಳು.

Related image

      ಅವರಿಗೆ ಇವಳ ಮುಗ್ದತೆ ಕಂಡು ಅಳಬೇಕೋ ನಗಬೇಕೋ ತೋಚದಾಯಿತು! ಅವಳ ಅಮ್ಮ ತಬ್ಬಿಕೊಂಡು ಕಣ್ಣೀರು ಒರೆಸುತ್ತಾ ಸಮಾಧಾನ ಮಾಡತ್ತಾ ಅವಳ ಅಣ್ಣನ ಬಳಿ ಕರೆದೊಯ್ದಳು. ಅವನು ಹಬ್ಬಕ್ಕೆ ಮನೆ ಸಿಂಗರಿಸಲು ದೊಡ್ಡ, ದೊಡ್ಡ ಬಣ್ಣದ ಕಾಗದಗಳನ್ನು ಮಡಿಚಿ ಕತ್ತರಿಯಿಂದ ಕತ್ತರಿಸಿ, ಕತ್ತರಿಸಿ ಸುಂದರವಾದ ಹೂಗಳನ್ನು, ಚಂದದ ತೋರಣಗಳನ್ನು ಮಾಡುತ್ತಿದ್ದ. ಅದನ್ನು ತೋರಿಸಿ ಇದು ಹೇಗಿದೆ? ಅದು ಹೇಗಿದೆ? ನಿನಗೆ ಯಾವ ಹೂ ಇಷ್ಟವಾಯ್ತು? ಎಂದು ಕೇಳಿದಾಗ ಆ ಪಿಂಕ್ ಹೂವು ಆ ಆ ಕಾಫೀ ಕಲರ್ ತೋರಣ ತುಂಬಾ ಇಷ್ಟ ಆಯ್ತು ಎಂದು ದು:ಖಿಸುತ್ತನೇ ಉತ್ತರಿಸಿದಳು. ಅವರಮ್ಮ ನಿಮ್ಮ ಅಣ್ಣ ಹೂಗಳನ್ನು ಹೇಗೆ ಮಾಡುತ್ತಿದ್ದಾನೆ ನೋಡು ಎಂದು ಬಣ್ಣದ ಕಾಗದಗಳ ಕತ್ತರಿಸುತ್ತಾ ಹೂಗಳ ಮಾಡುತ್ತಿದ್ದವನನ್ನು ತೋರಿಸಿದಳು. ಬಣ್ಣದ ಕಾಗದ ಕತ್ತರಿಸದೆ ಸುಂದರ ಹೂಗಳನ್ನಾಗಲಿ, ಚಂದದ ತೋರಣವನ್ನಾಗಲಿ ಮಾಡುವುದು ಸಾಧ್ಯವಿಲ್ಲ! ಹಾಗೇ ಬಟ್ಟೆ ಎಷ್ಟೇ ಸುಂದರವಾದುದಾಗಲಿ ರೇಷ್ಮೆಯದೇ ಆಗಲಿ ಬೇಕಾದಂತೆ ಕತ್ತರಿಸಿ ತುಂಡು ಮಾಡದೆ ಬೇಕಾದಂತೆ ಜೋಡಿಸಿ ಹೊಲೆಯದೆ ಬಯಸಿದ ಉಡುಪು ಸಿದ್ದಪಡಿಸಲಾಗದು! ಎಂದು ಸಮಾಧಾನಪಡಿಸತೊಡಗಿದಳು.

      ಹಬ್ಬದ ದಿನ ಬಂದೇ ಬಿಟ್ಟಿತು. ಮನೆಮಂದಿಯೆಲ್ಲಾ ಹೊಸ ಉಡುಪು ಧರಿಸಿ ಸಮಭ್ರಮಿಸತೊಡಗಿತು. ಅವಳು ಹಳೆ ಉಡುಪಿನಲ್ಲಿ ಸಪ್ಪೆ ಮೋರೆ ಹಾಕಿಕೊಂಡು ಜನುಮದ ಜೋಡಿ ಚಲನಚಿತ್ರದ ಡ್ರೆಸ್ ಕಣ್ಣಲ್ಲಿ ತುಂಬಿಕೊಂಡು ಕಣ್ಣೀರ ಹೊರ ಹಾಕದೆ ಆ ಕಡೆಗೆ ಈ ಕಡೆಗೆ ಹೊರಳಿಸುತ್ತಾ ಕುಳಿತಿದ್ದಳು. ಅಷ್ಟರಲ್ಲಿ ಅವಳಪ್ಪ ಜನುಮದ ಜೋಡಿ ಚಲನಚಿತ್ರದಂಥ ಲಂಗ ಬ್ಲೋಸ್ ತಂದರು. ಕಂಡು ಅಚ್ಚರಿಗೊಂಡು, ತೊಟ್ಟು ಖುಷಿಯಿಂದ ಕುಣಿದು ಕುಪ್ಪಳಿಸಿದಳು. ಗುಬ್ಬಿ ತೋಳು ಎಗರಿಸಿ, ಕಾಲಿಗೆ ತೊಡರು ಕೊಡುವಷ್ಟು ಉದ್ದ ಇದ್ದ ಲಂಗವನ್ನು ಮೊಣಕಾಲಿನ ಹತ್ತಿರ ಎರಡೂ ಕೈಗಳಿಂದ ಹಿಡಿದು ಪಾದದ ಮೇಲಿನ ಕಾಲು ಕಾಣುವವರೆಗೆ ಮೇಲಕ್ಕೆತ್ತಿ ನಡು ಮನೆಯಲ್ಲಿ ವೃತ್ತಾಕಾರವಾಗಿ ಓಡುತ್ತಾ ಕೇಕೆ ಹಾಕುತ್ತಾ ಸಂಭ್ರಮಿಸತೊಡಗಿದಳು. ಮುಂಗಾರಿನಲ್ಲಿ ನವಿಲು ಗರಿಬಿಚ್ಚಿ ನರ್ತಿಸುವಂತೆ ಕಾಣುತ್ತಿದ್ದಳು. ಹೀಗೆ ಹೊಸ ಉಡುಪು ಧರಿಸಿ ನಲಿದು ಹೊಸ ಉಡುಪನ್ನೂ ಹಬ್ಬವನ್ನೂ ಸವಿದಳು.

Image result for tailor

      ಪಪ್ಪಾ, ಈ ಉಡುಪು ಎಲ್ಲಿಂದ ತಂದೆ ? ಎಂದು ಕೇಳಿದ್ದಕ್ಕೆ ನೀನು ಆ ತುಂಡು ಬಟ್ಟೆಗಳನ್ನು ಟೈಲರ್ ಅಂಗಡಿಯಿಂದ ಹಿಂದಕ್ಕೆ ತಂದಿದ್ದೆಯಲ್ಲಾ ಆ ತುಂಡು ಬಟ್ಟೆಗಳಿಂದನೇ ಈ ಉಡುಪು ಸಿದ್ದಪಡಿಸಿರುವುದು ಎಂದರು ಅವಳ ತಂದೆ! ತಕ್ಷಣ ನರ್ತನ ನಿಲ್ಲಿಸಿಬಿಟ್ಟಳು. ಹಾ! ಆ ತುಂಡು ಬಟ್ಟೆಗಳಿಂದ ಇಷ್ಟು ಸುಂದರ ಉಡುಪು ಸಿದ್ದಪಡಿಸಿದರೇ? ಆ ಟೈಲರ್ ಎಂದು ಕಣ್ಣರಳಿಸಿ ತಾನು ಉಟ್ಟ ಉಡುಪನ್ನು ಮೇಲಿಂದ ಕೆಳಕ್ಕೆ, ಹಿಂದೆ ಮುಂದೆ, ಗುಬ್ಬಿ ತೋಳು ವೀಕ್ಷಿಸುತ್ತಾ ಮುಟ್ಟಿ ಮುಟ್ಟಿನೋಡುತ್ತಾ ಕುತೂಹಲದಿಂದ ಕೇಳಿದಳು. ಹೌದು ಎಂದಾಗ ಹೌದ? ಹೌದ? ಎಂದು ಮತ್ತೆ ಮತ್ತೆ ಕುತೂಹಲದಿಂದ ಪ್ರಶ್ನಿಸಿ ಅಯ್ಯೋ! ಪಾಪ! ಆ ಟೈಲರನ್ನು ಸುಮ್ಮನೇ ಬೈದು ಶಪಿಸಿದೆನಲ್ಲಾ! ಮೊದಲು ಅವರನ್ನು ಕ್ಷಮೆ ಕೇಳಬೇಕು ಎಂದು ತಂದೆಯನ್ನು ಕೇಳಿದುದಕ್ಕೆ ನಿನ್ನ ಪರವಾಗಿ ಆ ಕೆಲಸ ಮಾಡಿ ಬಂದಿರುವೆ ಎಂದಾಗ ನಿಟ್ಟುಸಿರು ಬಿಟ್ಟು ಸ್ವಲ್ಪ ಸಮಯ ಮೌನ ಮುಡಿದು ನಂತರ ಗರಿಬಿಚ್ಚಿದ ಗಂಡು ನವಿಲಂತೆ ಸಂಭ್ರಮಿಸತೊಡಗಿದಳು!

Related image

      ಯಾವುದೋ ರೂಪ ಇರುವ ವಸ್ತುವಿಗೆ ಬಯಸಿದ ರೂಪ ಕೊಡಬೇಕೆಂದರೆ ಅ ವಸ್ತುಗಳನ್ನು ನಾವು ಬಯಸಿದ ಆಕಾರ ಬರುವಂತೆ ತಿದ್ದುವುದೋ ಶಾಖ ಕೊಟ್ಟು ಕಾಯಿಸಿ ಅದರಾಕಾರ ಬದಲಿಸುವುದೋ ಹಿಗ್ಗಿಸುವುದೋ ಕುಗ್ಗಿಸುವುದೋ ಸವೆಯಿಸುವುದೋ ಕತ್ತರಿಸುವುದೋ ಮುರಿಯುವುದೋ … ವಸ್ತುವಿನ ಗುಣಕ್ಕನುಗುಣವಾಗಿ ಮಾಡಬೇಕಾಗುತ್ತದೆ. ಕಗ್ಗಲ್ಲಿಗೆ ಬಯಸಿದ ಸುಂದರ ರೂಪಕೊಡಲು ಶಿಲ್ಪಿ ಸಾವಿರಾರು ಉಳಿ ಪೆಟ್ಟು ಕೊಟ್ಟು ಬೇಡವಾದುದ ತೆಗೆದುಹಾಕಬೇಕಾಗುತ್ತದೆ! ಹಾಗೇ ಅಕ್ಕಸಾಲಿಗ ಒಡವೆ ಲೋಹವ ಕಾಯಿಸಿ ಕರಗಿಸಿ, ಬಡಗಿ ಮರವ ಕೆತ್ತಿ ಉಜ್ಜಿ, ಕುಂಬಾರ ಮಣ್ಣನ್ನು ತುಳಿದು, ನಾದಿ ಮೃದುಗೊಳಿಸಿ ಬಯಸಿದ ಆಕಾರ ಕೊಡುವರು! ಹಾಗೆ ಟೈಲರ್…!

Related image

      ನದಿಯಲ್ಲಿರುವ ಬಣ್ಣ ಬಣ್ಣದ ಕಲ್ಲುಗಳು ಎಷ್ಟು ಸುಂದರವಾಗಿ ಕಾಣುತ್ತವಲ್ಲವೆ? ದಡದ ಮೇಲಿರುವ ಕಲ್ಲುಗಳು ಅಷ್ಟು ಸುಂದರವಾಗಿ ಏಕೆ ಕಾಣಿಸುವುದಿಲ್ಲ? ನದಿಯಲ್ಲಿ ನೀರು ಹರಿಯುವಾಗ ಕಲ್ಲುಗಳು ಅಡ್ಡಿ ಮಾಡುತ್ತವೆಂದು, ತನಗೆ ಚುಚ್ಚುತ್ತವೆಂದ ಅವುಗಳ ಮೇಲೆ ಸುಲಭವಾಗಿ ಜಾರಲು ಆಗುವುದಿಲ್ಲವೆಂದು ತೊಂದರೆ ಕೊಡುವ ಅವುಗಳ ಭಾಗಗಳ ನೀರು ಹರಿಯುವಾಗ ಸವೆಯಿಸಿ ತನಗೆ ತೊಂದರೆಯಾಗದಂತೆ ನುಣುಪು ಮಾಡಿಕೊಳ್ಳುತ್ತದೆ. ಸಣ್ಣ ಕಲ್ಲುಗಳ ಉರುಳಿಸಿ ಉರುಳಿಸಿ ಅವುಗಳ ಮೈ ಮೇಲಿನ ಉಬ್ಬು ತಗ್ಗು ಚೂಪುಗಳ ಓರೆ ಕೋರೆ ವರಟು ಮೇಲ್ಮೈಯನ್ನು ಸವೆಯಿಸಿ ಸವೆಯಿಸಿ ಉದ್ದದ ಬೋರೆ ಹಣ್ಣುಗಳಂತೆ, ಅದಕ್ಕಿಂತ ದೊಡ್ಡ ಕಲ್ಲುಗಳ ಬದನೆ, ಸವತೆ ಮುಂತಾದ ಆಕಾರಗಳ ಕೊಟ್ಟು ನುಣುಪಾದ ಸುಂದರವಾದ ಹೊಳೆಯುವ ಕಲ್ಲುಗಳ ಮಾಡುತ್ತದೆ. ಬಂಡೆಗಳ ನುಣುಪು ಗೊಳಿಸಿ ಸಮತಟ್ಟಾದ ಹಾಸು ಮಾಡುತ್ತದೆ. ಹೀಗೆ ಪ್ರಕೃತಿಯೆ ತನಗೆ ಬೇಡವಾದುದ ಹೇಗೆ ಇಲ್ಲವಾಗಿಸಿ ಅವುಗಳಿಗೆ ಹೇಗೆ ಸುಂದರಾಕಾರ ಕೊಡಬಹುದೆಂಬುದ ಮಾಡಿ ತೋರಿಸಿದೆ. ಮಾನವ ಅದನ್ನು ಅನುಕರಿಸುತ್ತಾನೆ, ಅನುಸರಿಸುತ್ತಾನೆ.

Related image

      ಅಮೂರ್ತ ರೂಪಗಳಿಗೂ ಬೇಡವಾದುದ ಕಿತ್ತೆಸೆದು ಬೇಕಾದುದ ಸೇರಿಸಿ ಸುರೂಪಗೊಳಿಸಬಹುದು! ವ್ಯಕ್ತಿಯಲ್ಲಿರುವ ಅವಗುಣಗಳ ಕಿತ್ತೆಸೆದು ಬೇಕಾದ ಸದ್ಗುಣಗಳ ಸೇರಿಸಿ, ಎಲ್ಲೆಲ್ಲೋ ಇರುವ ಸದ್ಗುಣಗಳ ಒಂದು ಕಡೆ ವ್ಯವಸ್ತಿತವಾಗಿ ಜೋಡಿಸಿ ಉತ್ತಮ, ಆದರ್ಶ ವ್ಯಕ್ತಿತ್ವ ರೂಪಿಸಬಹುದು! ಇಲ್ಲಿ ರೂಪಿಸಿದ್ದು ದೇಹವನ್ನಲ್ಲ! ಮನಸ್ಸನ್ನು! ಆದರೂ ಮನಸ್ಸಿನೊಂದಿಗೆ ದೇಹವೂ ಸುಂದರವಾಗುತ್ತದೆ. ಮನಸ್ಸು ಅಮೂರ್ತ! ಬೇಡವಾದ ಅವಗುಣಗಳೆಂಬ ಬಟ್ಟೆಯ ಭಾಗಗಳ ಕತ್ತರಿಸಿ ಬಿಸಾಡುವಂತೆ ಬೇಕಾದ ಸದ್ಗುಣಗಳೆಂಬ ಗುಂಡಿ, ಖಾಜಾ, ಲೇಸು, ದಾರ, ಕ್ಯಾನ್ ವಾಸ್, ಜಿಪ್ಪು … ಗಳ ಸೇರಿಸಿ ಆದರ್ಶ ವ್ಯಕ್ತಿಯೆಂಬ ಸುಂದರ ಉಡುಪನ್ನು ಸಿದ್ದಪಡಿಸಿ ಬಯಸಿದ ದೇಹಕೆ ಒಪ್ಪುವಂತೆ ಮಾಡಬಹುದು! ಅದು ವ್ಯಕ್ತಿಯ ವ್ಯಕ್ತಿತ್ವ ಹೆಚ್ಚಿಸುತ್ತದೆ. ಬಯಸಿದ ರೂಪ, ಸುಂದರ ಕಲಾಕೃತಿ ದಕ್ಕಬೇಕಾದರೆ ಬೇಡವಾದುದ ಇಲ್ಲವಾಗಿಸಿಯೋ ತೆಗೆದುಹಾಕಿಯೋ ಅದನ್ನು ಒಳ್ಳೆಯದಾಗಿ ಪರಿವರ್ತಿಸಲು ಸಾಧ್ಯವಾದರೆ ಪರಿವರ್ತಿಸಿಯೋ ಬೇಕಾದುದ ಸೇರಿಸಿಯೋ ರೂಪಿಸಬೇಕಿದೆ. ಆಧುನಿಕ ಜೀವನ ತಮ್ಮ ಮಕ್ಕಳ ಬೇಡವಾದ ಗುಣಗಳ ಕಿತ್ತೆಸೆಯಲು ಬೇಕಾದ ಸದ್ಗುಣಗಳ ಸೇರಿಸಲು ಸಮಯಾಭಾವವಾಗಿ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸಲು ಹೆಣಗುವಂತಾಗಿದೆ! ಸಮಯಾಭಾವದಿಂದ ಆದರ್ಶ ವ್ಯಕ್ತಿಯನ್ನು ರೂಪಿಸುವ ಸವಾಲನ್ನು ಎದುರಿಸುತ್ತಿದ್ದಾನೆ! ಬೇಡವಾದುದ ಇಲ್ಲವಾಗಿಸದೆ, ಬೇಕಾದುದ ತಂದು ಸೇರಿಸದೆ ಬಯಸಿದ ಸುಂದರ ಕಲಾಕೃತಿ ದಕ್ಕದು! ಕಲಾ ಜಗತ್ತು ನಿರ್ಮಾಣವಾಗದು!

– ಕೆ ಟಿ ಸೋಮಶೇಖರ ಹೊಳಲ್ಕೆರೆ. 

LEAVE A REPLY

Please enter your comment!
Please enter your name here