ಯುವ ಶಕ್ತಿಯೇ ದೇಶದ ನಿಜವಾದ ಶಕ್ತಿ

0
111

ಪ್ರಶಾಂತ್ ಕುಮಾರ್: 

ಯುವ ಜನಾಂ ಗದಲ್ಲಿ ಮನೆ ಮಾಡಿರುವ ಜಡತ್ವ, ಸೋಮಾರಿತನವನ್ನು ತೊಲಗಿಸಿ, ಅವರಲ್ಲಿ ಅಡಗಿರುವ ಅದಮ್ಯ ಇಚ್ಛಾಶಕ್ತಿ ಹಾಗು ಅನನ್ಯ ಬಲವನ್ನು ಇಡೀ ವಿಶ್ವಕ್ಕೇ ಸಾರಲು, ಆ ದೇವರು ಕಳುಹಿಸಿದ ದೇವದೂತನೇ ಪೂಜ್ಯ ಸ್ವಾಮಿ ವಿವೇಕಾನಂದರವರು.

1863ರ ಜನವರಿ 12ರಂದು, ತಂದೆ ವಿಶ್ವನಾಥದತ್ತಾ ತಾಯಿ ಭುವನೇಶ್ವರಿ ದೇವಿಯವರ ಪುತ್ರನಾಗಿ ಜನಿಸಿದ ಸ್ವಾಮಿ ವಿವೇಕಾನಂದರ ಮೂಲ ಹೆಸರು ನರೇಂದ್ರನಾಥದತ್ತ. ಮುಂದೊಂದು ದಿನ, ಜಗದ್ಗುರು ಶ್ರೀರಾಮಕೃಷ್ಣ ಪರಮ ಹಂಸರ ಆಧ್ಯಾತ್ಮಿಕ ಬೋಧನೆಯ ಮೂಸೆಯಲ್ಲಿ ಕರಗಿ, ಕಾಳೀ ಮಾತೆಯ ಅನುಗ್ರಹದಿಂದ ನೂತನ ಶಿಲ್ಪವಾಗಿ ಮಾರ್ಪಟ್ಟು ಇಡೀ ಜಗತ್ತನ್ನೇ ಜಯಿಸಿದ ವಿಶ್ವ ವಿಜೇತರಾದರು ಪೂಜ್ಯ ಸ್ವಾಮಿ ವಿವೇಕಾನಂದರು.

1893ರಲ್ಲಿ ಅಮೇರಿಕಾದ ಚಿಕಾಗೋದಲ್ಲಿ ನಡೆದ ಬೃಹತ್ ಸರ್ವಧರ್ಮ ಸಮ್ಮೇಳನದಲ್ಲಿ ನೆರೆದಿದ್ದ ಸಮಸ್ತ ಸಭಿಕರನ್ನು ಸಹೋದರ ಸಹೋದರಿಯರೇ ಎಂದು ಸಂಭೋಧಿಸಿ, ಇಡೀ ಜಗತ್ತಿಗೆ ಭಾರತ ದೇಶದ ಪರಂಪರೆ ಹಾಗು ಭ್ರಾತೃತ್ವವನ್ನು ಸಾರಿ ಎಲ್ಲರ ಮನಗೆದ್ದರು.

ಮಾನವನ ಶ್ರೇಷ್ಠ ನಡವಳಿಕೆಗೆ ಆ ಭಗವಂತನೂ ಧರೆಗಿಳಿದು ಬರಬೇಕಾಗುತ್ತದೆ ಎಂಬ ದಿವ್ಯ ಸಂದೇಶದ ಮೂಲಕ, ಮಾನವ ಇತಿಹಾಸದಲ್ಲಿ ಮನುಷ್ಯ ಜೀವಿಗೆ ಘನತೆ, ಗೌರವ ತಂದುಕೊಟ್ಟ ಮಹಾನುಭಾವರು ಪೂಜ್ಯ ಸ್ವಾಮಿ ವಿವೇಕಾನಂದರು.
ಸುಂದರ ಭಾರತದ ಮೇಲೆ ತಾವು ಕಟ್ಟಿರುವ ಕನಸನ್ನು ನನಸು ಮಾಡಲು, ಯುವಕರ ಮೇಲೆ ತಮ್ಮ ಭರವಸೆಯನ್ನು ಇಟ್ಟಿದ್ದರು ವಿವೇಕಾನಂದರು. 

ಒಂದು ದೇಶದ ನಿಜವಾದ ಶಕ್ತಿ ಎಂದರೆ ಅಲ್ಲಿನ ಯುವ ಶಕ್ತಿಮಾತ್ರವೇ. ಯುವ ಜನತೆಯಿಂದ ಮಾತ್ರ ರಾಷ್ಟ್ರದ ರಕ್ಷಣೆ ಹಾಗು ದೇಶದ ಪ್ರಗತಿ ಸಾಧ್ಯ ಎಂದು ವಿವೇಕಾನಂದರು ಅಚಲ ನಂಬಿಕೆಯನ್ನಿಟ್ಟಿದ್ದರು. ಈ ಕಾರಣದಿಂದಾಗಿಯೇ ವಿವೇಕಾನಂದರು ಕರೆ ನೀಡಿದ್ದು, ಬಲಿಷ್ಠರೂ, ಉಕ್ಕಿನ ನರಗಳು, ಕಬ್ಬಿಣದಂತಹ ಮಾಂಸಖಂಡಗಳು, ಮಿಂಚಿನಂತಹ ಇಚ್ಛಾಶಕ್ತಿಯುಳ್ಳವರು, ಶ್ರದ್ಧಾನಿರತರು ಆದ ಕೇವಲ ನೂರು ಜನ ಯುವಕರನ್ನು ನನಗೆ ಕೊಡಿ ಇಡೀ ಜಗತ್ತನ್ನೇ ಕ್ರಾಂತಿಗೊಳಿಸುತ್ತೇನೆ ಎಂದು. ಇಂತಹ, ನೂರು ಮಂದಿ ಯುವಕರಿಗೆ ಗುಣ, ಶೀಲ, ಚಾರಿತ್ರ್ಯ, ಸಂಯಮ, ಶಿಸ್ತುಗಳನ್ನು ರೂಪಿಸಿದಾಗ ಅವರು ಭವ್ಯ ಭಾರತವನ್ನು ಕಟ್ಟಬಲ್ಲರು. ಏಕೆಂದರೆ, ಯುವಕರೇ ನವಭಾರತದ ನಿರ್ಮಾಣ ಶಿಲ್ಪಿಗಳು, ಅಮೃತ ಪುತ್ರರು.
ಸ್ವಾಮಿ ವಿವೇಕಾನಂದರ ಈ ರಾಷ್ಟ್ರಭಕ್ತಿಯಿಂದಾಗಿಯೇ, ಅವರನ್ನು ಭಾರತ ರಾಷ್ಟ್ರೀಯತೆಯ ಪಿತ ಎಂದು ತಿಲಕರು ಕರೆದಿದ್ದು. ಪ್ರತಿಯೊಬ್ಬ ಭಾರತೀಯನೂ,ರಾಷ್ಟ್ರಪಿತ ಗಾಂಧೀಜಿಯವರ ಜೊತೆಯಲ್ಲಿಯೇ ರಾಷ್ಟ್ರೀಯತೆಯ ಪಿತ ಸ್ವಾಮಿ ವಿವೇಕಾನಂದರನ್ನು ಹೆಮ್ಮೆಯಿಂದ ಸ್ಮರಿಸಬೇಕು.

‘ಮನುಷ್ಯನು ಅಳುತ್ತ ಈ ಜಗತ್ತಿನಲ್ಲಿ ಜನ್ಮವೆತ್ತಿ ಬರುತ್ತನೆ. ಗೋಳಾಡುತ್ತ ಜೀವಿಸುತ್ತಾನೆ. ನಿರಾಶೆಯಲ್ಲಿ ಸಾಯುತ್ತಾನೆ’ ಎಂಬ ಸುಭಾಷಿತ ವಾಣಿಯನ್ನು ವಿವೇಕಾನಂದರು ಬಹುವಾಗಿ ಮನಗಾಣಿದ್ದರು. ಈ ಕಾರಣದಿಂದಾಗಿಯೇ, ಬದುಕಿರುವ ಅಲ್ಪ ಸಮಯದಲ್ಲಿ, ಅತ್ಯುತ್ತಮ ಆದರ್ಶಗಳನ್ನು ಮೈಗೂಡಿಸಿಕೊಂಡು ಅತ್ಯದ್ಭುತವಾದದನ್ನು ಸಾಧಿಸಿ ತೋರಿಸಿಯೇ ಬಿಟ್ಟರು. ವಿದ್ಯಾರ್ಥಿಗಳಲ್ಲಿ ಆದರ್ಶದ ಅವಶ್ಯಕತೆ ಬಗ್ಗೆ ವಿವೇಕಾನಂದರು ಹೀಗೆ ಹೇಳುತ್ತಾರೆ. ಆದರ್ಶವನ್ನಿಟ್ಟುಕೊಂಡ ಒಬ್ಬ ವಿದ್ಯಾರ್ಥಿ ಒಂದು ಸಾವಿರ ತಪ್ಪು ಮಾಡಿದರೆ, ಆದರ್ಶವಿಲ್ಲದವನು ಐವತ್ತು ಸಾವಿರ ತಪ್ಪುಗಳನ್ನು ಮಾಡುತ್ತಾನೆ. ಹಾಗಾಗಿ ಆದರ್ಶಕ್ಕೆ ಜೋತು ಬೀಳುವುದು ಒಳ್ಳೆಯದು. ಯುವಜನತೆ ಎಂದೆನಿಸಿರುವ ಯುವಕ-ಯುವತಿಯರು (ಕಾಲೇಜು ವಿದ್ಯಾರ್ಥಿಗಳು) ನಾಣ್ಯದ ಎರಡು ಮುಖಗಳು ಇದ್ದ ಹಾಗೆ. ಅವರಿಗೆ ಸರಿಯಾದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ತರಬೇತಿಯನ್ನು ನೀಡಿ ಅಜ್ಞಾನದಿಂದ ಜ್ಞಾನದೆಡೆಗೆ ಹಾಗು ಕತ್ತಲಿನಿಂದ ಬೆಳಕಿನೆಡೆಗೆ ಕರೆದೊಯ್ಯುವಾಗ ಮಾತ್ರವೇ ನಮ್ಮ ದೇಶದ ಉನ್ನತ ಪ್ರಗತಿ ಸಾಧ್ಯ ಎಂದಿದ್ದಾರೆ ಸ್ವಾಮಿ ವಿವೇಕಾನಂದರು.

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಅರ್ಥಗರ್ಭಿತ ನುಡಿಯಂತೆ, ಯುವಜನತೆಗೆ ಚಿಕ್ಕ ವಯಸ್ಸಿನಿಂದಲೇ ಒಳ್ಳೆಯ ಬುದ್ಧಿ, ವಿದ್ಯೆಗಳೆಂಬ ಗೊಬ್ಬರಗಳನ್ನು ಕೊಟ್ಟು, ಮುಂದೆ ಪ್ರಗತಿಯೆಂಬ ಗಿಡ ಹೆಮ್ಮರವಾಗಿ, ಅದರಿಂದ ಉತ್ತಮ ಫಲ ದೊರೆಯುವುದರಲ್ಲಿ ಹಾಗು ರಾಷ್ಟ್ರವು ಸುರಕ್ಷಿತವಾಗಿರುವುದರಲ್ಲಿ ಸೂಜಿ ಮೊನೆಯಷ್ಟು ಸಂಶಯವಿರುವುದಿಲ್ಲ. ವಿವೇಕಾನಂದರುಕರೆ ನೀಡಿದ್ದಾರೆ, ಓ ನನ್ನ ಯುವಕ ಯುವತಿಯರೇ ನನ್ನ ಭರವಸೆಯೆಲ್ಲ ನಿಮ್ಮ ಮೇಲಿದೆ, ನಿಮ್ಮ ದೇಶದ ಕರೆಗೆ ಕಿವಿಗೊಡುವಿರೇನು?

ಪೂಜ್ಯ ಸ್ವಾಮಿ ವಿವೇಕಾನಂದರ ಕೆಲವೊಂದು ಧೀರತ್ವದ ಚೈತನ್ಯದಾಯಕ ನುಡಿಗಳು ಹೀಗಿವೆ….
1) ಶಕ್ತಿ! ಶಕ್ತಿ! ಜೀವನದಲ್ಲಿ ನಮಗೆ ಅತ್ಯಗತ್ಯವಾಗಿ ಬೇಕಾಗಿರುವುದು ಶಕ್ತಿ. ಏಕೆಂದರೆ, ದೌರ್ಬಲ್ಯತೆಯೇ ನಮ್ಮೆಲ್ಲ ಪಾಪಗಳಿಗೂ, ದುಃಖಗಳಿಗೂ ಮೂಲ ಕಾರಣ. ಹಾಗಾಗಿ, ಎಂದಿಗೂ ದುರ್ಬಲನಾಗದಿರು. ನೀನು ಸದಾಕಾಲ ಶಕ್ತನಾಗಿರಲೇಬೇಕು. ಏಕೆಂದರೆ, ಅಪರಿಮಿತ ಶಕ್ತಿ ಅಡಗಿದೆ ನಿನ್ನಲ್ಲಿ.

2) ನೀವು ಹೇಗೆ ಭಾವಿಸುವಿರೋ ಹಾಗೆಯೇ ಆಗುವಿರಿ. ನಿಮ್ಮನ್ನು ನೀವು ದುರ್ಬಲರೆಂದು ಭಾವಿಸಿದರೆ ದುರ್ಬಲರೇ ಆಗುವಿರಿ. ನಿಮ್ಮನ್ನು ನೀವು ಬಲಿಷ್ಠರೆಂದು ಭಾವಿಸಿದರೆ ಬಲಿಷ್ಠರೇ ಆಗುವಿರಿ. ನಿಮ್ಮನ್ನು ನೀವು ಪವಿತ್ರರೆಂದು ಭಾವಿಸಿದರೆ ಪವಿತ್ರರೇ ಆಗುವಿರಿ. ನಿಮ್ಮನ್ನು ನೀವು ಅಪವಿತ್ರರೆಂದು ಭಾವಿಸಿದರೆ ಅಪವಿತ್ರರೇ ಆಗುವಿರಿ. ಎಲ್ಲವೂ ನಿಮ್ಮಲ್ಲಿಯೇ ಅಡಗಿದೆ.

3) ಏಳು! ಎದ್ದೇಳು! ನಿರ್ಭೀತನಾಗು! ಬಲಾಢ್ಯನಾಗು!, ಎಲ್ಲ ಹೊಣೆಗಾರಿಕೆಯನ್ನು ನಿನ್ನ ಹೆಗಲಮೇಲೆಯೇ ಹೊತ್ತುಕೋ ನಿನ್ನ ಭವಿಷ್ಯದ ಶಿಲ್ಪಿ ನೀನೇ ಎಂಬುದನ್ನು ತಿಳಿದಿರು. ಎಲ್ಲ ಶಕ್ತಿ-ಸಾಮರ್ಥ್ಯಗಳೂ ನಿನ್ನೊಳಗೆ ಇವೆ!.

4) ವಿದ್ಯಾರ್ಥಿಗಳಿಗಾಗಿ, ಸ್ವಾಮಿ ವಿವೇಕಾನಂದರ ಸ್ಮರಣೀಯ ಮಾರ್ಗದರ್ಶನದ ನುಡಿ ಏನೆಂದರೆ,ನಾನು ಹೆಚ್ಚೆಚ್ಚು ಓದುತ್ತೇನೆ. ಹೆಚ್ಚೆಚ್ಚು ಅಧ್ಯಯನ ಮಾಡುತ್ತೇನೆ. ಅಧ್ಯಯನ ಮಾಡಿದ್ದನ್ನು ಅರ್ಥ ಮಾಡಿಕೊಳ್ಳುತ್ತೇನೆ ಮತ್ತು ಚೆನ್ನಾಗಿ ನೆನಪಿಟ್ಟುಕೊಳ್ಳುತ್ತೇನೆ. ಹೀಗೆ ಮಾಡುತ್ತಾ, ಸಕಾಲದಲ್ಲಿ ನಾನು ಶ್ರೇಷ್ಠ ವಿದ್ಯಾವಂತನಾಗಿಯೇ ತೀರುತ್ತೇನೆ. ಈ ಮೂಲಕ ತಂದೆತಾಯಿ ಹಾಗು ಭಾರತಾಂಬೆಯ ಸೇವೆಮಾಡಿ ಪರಿಶುದ್ಧನೂ, ಪವಿತ್ರನೂ ಆಗುತ್ತೇನೆ.

LEAVE A REPLY

Please enter your comment!
Please enter your name here