ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ಸಲ್ಲದು

0
39

ಬೆಂಗಳೂರು:

Related image

      ಮೈತ್ರಿ ಸರ್ಕಾರವನ್ನು ಅಧಿಕಾರಿಗಳು ಲಘುವಾಗಿ ತೆಗೆದುಕೊಳ್ಳಬಾರದು. ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು ಅಷ್ಟೆ. ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ಹಾಗೂ ತಪ್ಪನ್ನು ಸಹಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಇಂದಿಲ್ಲಿ ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ.

      ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಎಲ್ಲ ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಎಲ್ಲ ಇಲಾಖಾ ಮುಖ್ಯಸ್ಥರುಗಳ ಎರಡು ದಿನಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಗಳಲ್ಲಿ ಸಮಸ್ಯೆಗಳನ್ನು ಪಟ್ಟಿ ಮಾಡಿದ್ದೀರಾ, ಪ್ರಮುಖ 10 ಸಮಸ್ಯೆಗಳು ಯಾವುದೆಂದು ಗುರುತು ಮಾಡಿಕೊಂಡಿದ್ದೀರಾ, ಆಸ್ಪತ್ರೆಗಳ ಸ್ಥಿತಿ ಹೇಗಿದೆ ಎಂಬುದನ್ನು ಗಮನಿಸಿದ್ದೀರಾ, ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವೇ, ಎಷ್ಟು ಜನ ಜಿಲ್ಲಾಧಿಕಾರಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದೀರಿ ಎಂದು ಅವರು ಅಧಿಕಾರಿಗಳ ವಿರುದ್ಧ ಗರಂ ಆದರು.

      ಗ್ರಾಮೀಣ ಸಾರಿಗೆ ಪರಿಸ್ಥಿತಿ ಹೇಗಾಗಿದೆ ಗೊತ್ತಾ? ಶಾಲಾ ಮಕ್ಕಳು ಬಸ್ಸುಗಳಿಲ್ಲದೇ ಶಾಲೆಗಳಿಗೆ ನಡೆದು ಹೋಗುವ ಪರಿಸ್ಥಿತಿ ಇದೆ. ಶಾಲೆಗಳ ಕಟ್ಟಡಗಳ ಸ್ಥಿತಿಯೂ ಚಿಂತಾಜನಕವಾಗಿದೆ. ಕಟ್ಟಡಗಳ ಹೆಂಚುಗಳು ಬಿದ್ದು ಹೋಗಿವೆ. ಯಾರಾದರೂ ಹೋಗಿ ನೋಡಿದ್ದೀರಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ನಮ್ಮ ಜಿಲ್ಲೆಯಲ್ಲಿ ಶಾಲೆಗಳ ಹೆಂಚುಗಳು ಬಿದ್ದು ಹೋಗಿವೆ, ಬನ್ನಿ ತೋರಿಸ್ತೀನಿ ಎಂದು ಸಿಟ್ಟಿನಿಂದ ಹೇಳಿದರು.

      ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾದಕ ವಸ್ತುಗಳು ವಿದ್ಯಾರ್ಥಿಗಳು ಹಾಗೂ ಯುವ ಜನರಿಗೆ ಲಭ್ಯವಾಗುತ್ತಿವೆ. ಈ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ. ಒಂದು ಸಣ್ಣ ಕೆಲಸಕ್ಕಾಗಿ ಜನ ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಾಗಿದೆ. ಪ್ರತಿ ಗ್ರಾ.ಪಂ.ಗಳಲ್ಲಿ ತಿಂಗಳಿಗೊಮ್ಮೆ ಜನರನ್ನು ಭೇಟಿ ಮಾಡುವ ಕಾರ್ಯಕ್ರಮ ಹಾಕಿಕೊಳ್ಳಿ. ಆಗ ಸಮಸ್ಯೆಗಳು ಪರಿಹಾರ ಆಗುತ್ತವೆ ಎಂದರು.

      ದೂರದ ಊರುಗಳಿಂದ ಮುಖ್ಯಮಂತ್ರಿಗಳ ಜನತಾದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ. ಈ ಜನತಾದರ್ಶನಕ್ಕೆ ಹೆಚ್ಚು ಜನ ಬಂದಂತೆಲ್ಲಾ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಸಮಸ್ಯೆಗಳು ಪರಿಹಾರವಾಗುತ್ತಿಲ್ಲ ಎಂದರ್ಥ. ಹಾಗಾಗಿ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು. ಸಮಸ್ಯೆಗಳ ಪರಿಹಾರಕ್ಕೆ ಗಮನ ಹರಿಸಬೇಕು ಎಂದು ಸೂಚನೆ ನೀಡಿದರು.

      ರಾಜ್ಯ ಸರ್ಕಾರದಲ್ಲಿ ಹಣದ ಕೊರತೆಯಿಲ್ಲ, ರಾಜ್ಯ ಅಭಿವೃದ್ಧಿ ವಿಚಾರದಲ್ಲಿ ದೇಶದ ಗಮನ ಸೆಳೆದಿದೆ. 31 ಇಲಾಖೆಗಳಲ್ಲೂ ರಾಷ್ಟ್ರ ಪ್ರಶಸ್ತಿ ಪಡೆದಿದೆ. ಇದನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಿ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

      ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕದ ಬಗ್ಗೆ ನೀಡಿರುವ ಹೇಳಿಕೆಗೆ ಬೇರೆ ಬೇರೆ ಅರ್ಥ  ಕಲ್ಪಿಸಲಾಗುತ್ತಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಎಷ್ಟು ಹಣ ಕೊಟ್ಟಿದೆ ಎಂಬುದನ್ನು ಅಧಿಕಾರಿಗಳೇ ಹೇಳಬೇಕು. ಹೈದರಾಬಾದ್ ಕರ್ನಾಟಕಕ್ಕೂ ವಿಶೇಷ ಸ್ಥಾನಮಾನ ನೀಡಲಾಗಿದೆ. ಯಾವುದೇ ಕಾರಣಕ್ಕೂ ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿಲ್ಲ. ಮಾಡುವುದೂ ಇಲ್ಲ ಎಂದರು.

      ಪ್ರಸ್ತುತ ಎದ್ದಿರುವ ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ. ಕರ್ನಾಟಕ ಅಖಂಡವಾಗಿಯೇ ಉಳಿಯಬೇಕು. ಅಧಿಕಾರಿಗಳು ವಾಸ್ತವವನ್ನು ಅರಿತು ಕೆಲಸ ಮಾಡಬೇಕು. ತುಮಕೂರು ಜಿಲ್ಲಾ ಪಂಚಾಯತ್ನ ಸಭೆಯಲ್ಲಿ ಅಧಿಕಾರಿಗಳು ಪ್ರತಿ ವರ್ಷ 5 ಲಕ್ಷ ಗಿಡ ನೆಟ್ಟಿರುವುದಾಗಿ ಮಾಹಿತಿ ನೀಡಿದ್ದರು. ಪ್ರತಿ ವರ್ಷ 5 ಲಕ್ಷ ಗಿಡದಂತೆ 10 ವರ್ಷಕ್ಕೆ 50 ಲಕ್ಷ ಗಿಡ ನೆಡಬೇಕಾಗಿರುತ್ತದೆ. ಹಾಗಾದರೆ ಕಾಡು ಎಲ್ಲಿ ಬೆಳೆದಿದೆ. ಇಂತಹ ಸುಳ್ಳು ವರದಿಗಳನ್ನೆಲ್ಲಾ ಹಿರಿಯ ಅಧಿಕಾರಿಗಳು ಗಮನಿಸಬೇಕು ಎಂದು ಅವರು ತಾಕೀತು ಮಾಡಿದರು.

      ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವಂತೆ ಕೆಲಸ ಮಾಡಿ, ಸರ್ಕಾರದ ಬಗ್ಗೆ ಲಘು ಭಾವನೆ ಬೇಡ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೂಚ್ಯವಾಗಿ ಹೇಳಿದರು.

LEAVE A REPLY

Please enter your comment!
Please enter your name here