ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು : ಸಚಿವ ಭರವಸೆ

0
23

ಗುಬ್ಬಿ
ಗ್ರಾಮೀಣ ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದರ ಜೊತೆಗೆ ಗ್ರಾಮ ಸಂಪರ್ಕ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದೆಂದು ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
      ತಾಲ್ಲೂಕಿನ ಸುರಿಗೇನಹಳ್ಳಿ ಶ್ರೀರಂಗನಾಥಸ್ವಾಮಿ ದೇವಾಲಯದಿಂದ ಕೊಡಗಿಹಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರತಿ ಗ್ರಾಮಗಳಿಗೂ ಸಂಪರ್ಕ ಕಲ್ಪಿಸುವ ಗ್ರಾಮ ಸಂಪರ್ಕ ರಸ್ತೆಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

      ಜಿಲ್ಲೆಗೆ ಹೇಮಾವತಿ ನೀರು ಹರಿಸುವಂತೆ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ನಿಯೋಗ ತೆರಳಿ  ಮುಖ್ಯಮಂತ್ರಿಗಳು ಮತ್ತು ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಲಾಗಿದ್ದು, ಜೂ.30ರಿಂದಲೆ ಜಿಲ್ಲೆಯ ನಾಲೆಗಳಿಗೆ ನೀರು ಹರಿಸಲಾಗುವುದೆಂದು ತಿಳಿಸಿದರು. ಜೂ.30 ರಂದು ಕ್ಯಾಬಿನೆಟ್ ಸಭೆ ಕರೆದಿದ್ದು, ಕಾವೇರಿ ವಲಯದ ಭಾಗಕ್ಕೆ ಆಗಿರುವಂತಹ ಸಮಸ್ಯೆ ಹಾಗೂ ಕೇಂದ್ರ ಸರಕಾರ ಮಾಡಿರುವಂತಹ ಕಾವೇರಿ ನೀರು ನಿರ್ವಹಣಾ ಮಂಡಳಿ ಸ್ಥಾಪನೆ ವಿರುದ್ಧ ಶನಿವಾರ ಸರ್ವ ಪಕ್ಷಗಳ ಸಭೆ ಕರೆದಿದ್ದು ಮುಂದೆ ಸರಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ ಎಂದರು.

      ಸಣ್ಣ ಕೈಗಾರಿಕೆಗಳಿಂದಲೆ ದೇಶದ ಶೇ.43 ರಷ್ಟು ಆದಾಯ ಸರಕಾರಕ್ಕೆ ಬರುತ್ತಿದೆ. ಶೇ.45 ರಷ್ಟು ಉದ್ಯೋಗವನ್ನು ಸಹ ನೀಡಲಾಗಿದೆ. ಪ್ರತಿ ತಾಲ್ಲೂಕುಗಳಲ್ಲಿಯೂ ಸಣ್ಣ ಕೈಗಾರಿಕೆ ಸ್ಥಾಪಿಸಲು ಮುಖ್ಯಮಂತ್ರಿಗಳು ಸಹ ಸಹಮತ ನೀಡಿದ್ದಾರೆ. ನಾನು ಸಹ ಅದರ ಬಗ್ಗೆ ಹೆಚ್ಚು ಉತ್ಸಾಹಕನಾಗಿದ್ದೇನೆ. ನಮ್ಮ ಇಲಾಖೆಯ ಅಧಿಕಾರಿಗಳಿಗೂ ಸಹ ಇದರ ಬಗ್ಗೆ ಮಾಹಿತಿ ನೀಡಿದ್ದು, ಈಗಾಗಲೆ 13 ಭಾಗದಲ್ಲಿ ಸಣ್ಣ ಕೈಗಾರಿಕೆ ಸ್ಥಾಪಿಸಲು ಸ್ಥಳ ಸಿಕ್ಕಿದೆ. ಪ್ರತಿ ತಾಲ್ಲೂಕು ಮಟ್ಟದಲ್ಲಿ ಸಣ್ಣ ಕೈಗಾರಿಕೆಗಳನ್ನು ಮಾಡಲು ಉದ್ಯಮಿಗಳು ಮುಂದೆ ಬಂದಲ್ಲಿ ಖಂಡಿತವಾಗಿಯು ಅದಕ್ಕೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು.

      ಗುಬ್ಬಿ ತಾಲ್ಲೂಕಿನಲ್ಲಿ ಸರಕಾರಿ ಬಸ್‍ಡಿಪೋ, ಡಿಪ್ಲೋಮಾ ಕಾಲೇಜು, ಕೈಗಾರಿಕಾ ತರಬೇತಿ ಸಂಸ್ಥೆಯನ್ನು ಪ್ರಾರಂಭಿಸಲು ತಾಲ್ಲೂಕಿನಲ್ಲಿ 17 ಎಕರೆ ಜಾಗವನ್ನು ಸಿದ್ದಮಾಡಲಾಗುತ್ತಿದೆ. ತಾಲ್ಲೂಕಿನ ಜನರಿಗೆ ಉದ್ಯೋಗ ನೀಡುವಲ್ಲಿ ಗಾರ್ಮೆಂಟ್ಸ್ ಮಾಡಲು ಸಹ ಇಚ್ಚೆಹೊಂದಿದ್ದೇವೆ. ಇದರಿಂದ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

 

LEAVE A REPLY

Please enter your comment!
Please enter your name here