ರಸ್ತೆ ಕಾಮಗಾರಿಗೆ ಶಾಸಕ ಸಿ.ಎಂ.ಉದಾಸಿ ಚಾಲನೆ ನೀಡಿದರು.

0
25

ಹಾನಗಲ್ಲ :

ರೈತರು ಸೇರಿದಂತೆ ಈ ನಾಡಿನ ಜನತೆಗೆ ಈಗ ಜೀವಜಲವಾದ ನೀರಿನ ಮಹತ್ವದ ಅರಿವಾಗುತ್ತಿದ್ದು, ಮನುಷ್ಯ ಅದನ್ನು ಉಳಿಸಲು ಚಿಂತನೆ ನಡೆಸುತ್ತಿರುವಾಗ ಹಾನಗಲ್ಲ ತಾಲೂಕಿನ ಬಹುದಿನಗಳ ಬೇಡಿಕೆಯ ಬಾಳಂಬೀಡ ಏತ ನೀರಾವರಿ ಯೋಜನೆ ಶೀಘ್ರ ಜಾರಿಗೆ ಬರಲಿದೆ ಎಂದು ಶಾಸಕ ಸಿ.ಎಂ.ಉದಾಸಿ ವಿಶ್ವಾಸದಿಂದ ನುಡಿದರು.

   ಹಾನಗಲ್ಲ ತಾಲೂಕಿನ ಮೂಡೂರು ಗ್ರಾಮದಲ್ಲಿ ಚಿಕ್ಕಾಂಸಿಹೊಸೂರ-ಮೂಡೂರು ಕೂಡು ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಆಮ್ಲಜನಕದಷ್ಟೆ ಮನುಷ್ಯನಿಗೆ ನೀರು ಮಹತ್ವದ್ದಾಗಿದೆ. ಶುದ್ಧ ನೀರು, ಗಾಳಿ ಹಾಗೂ ಆಹಾರಕ್ಕಾಗಿ ಮನುಷ್ಯ ಮೊದಲ ಆದ್ಯತೆ ನೀಡಬೇಕಾಗಿದೆ. ಇದು ಆರೋಗ್ಯದ ಲಕ್ಷಣವೂ ಹೌದು. ಇತ್ತೀಚಿನ ದಿನಗಳಲ್ಲಿ ನೀರು ಸಮಸ್ಯೆಯ ಮೂಲವಾಗುತ್ತಿದೆ. ಇರುವಾಗ ಮನ ಬಂದಂತೆ ಬಳಸಿ ಈಗ ಅಂತರ್ಜಲವೂ ಕ್ಷೀಣವಾಗಿ ಕೊಳವೆ ಭಾವಿಗಳಲ್ಲಿ ನೀರು ಸಿಗದ ಪರಿಸ್ಥಿತಿ ಉಂಟಾಗಿದೆ. ಕೊಳವೆ ಭಾವಿ ನೆಚ್ಚಿಕೊಂಡು ಕೃಷಿ ಚಟುವಟಿಕೆಗೆ ಮುಂದಾದ ರೈತ ಈಗ ಅಂತರ್ಜಲ ಬತ್ತಿ ಕ್ಷೀಣಗೊಂಡಿದ್ದಾನೆ. ಹಾನಗಲ್ಲ ತಾಲೂಕಿನ ಉತ್ತರ ಭಾಗದ ಕೃಷಿ ಭೂಮಿಗೆ ನೀರಾವರಿ ಸೌಲಭ್ಯಕ್ಕಾಗಿ ಬಹುದಿನಗಳಿಂದ ಬೇಡಿಕೆ ಸಲ್ಲಿಸಲಾಗಿದೆ. ಈಗ ಬಾಳಂಬೀಡ ಏತ ನೀರಾವರಿ ಮೂಲಕ ಈ ಯೋಜನೆ ಜಾರಿಗೊಳ್ಳುವ ಕಾಲ ಸನ್ನಿಹಿತವಾಗಿದ್ದು, ಶೀಘ್ರವಾಗಿ ಈ ಭಾಗದ ನೂರಕ್ಕೂ ಅಧಿಕ ಕೆರೆಗಳನ್ನು ತುಂಬಿಸುವ ಮೂಲಕ ರೈತ ನೆಮ್ಮದಿಯ ನಿಟ್ಟುಸಿರು ಬಿಡಲು ಅವಕಾಶ ಮಾಡಿಕೊಡಲಾಗುತ್ತದೆ ಎಂದ ಅವರು, ಹಾನಗಲ್ಲ ತಾಲೂಕಿನ ಅಭಿವೃದ್ದಿಯ ವಿಷಯದಲ್ಲಿ ನನ್ನದು ಯಾವತ್ತೂ ರಾಜಿ ಇಲ್ಲ. ಜನ ನೀಡಿದ ಅಧಿಕಾರವನ್ನು ಜನತೆಯ ಹಿತಕ್ಕೆ ಸೇವೆ ಸಲ್ಲಿಸಲು ನಾನು ಬದ್ಧ ಎಂದರು.

   ಬಾಳಂಬೀಡ ಏತ ನೀರಾವರಿ ಯೋಜನೆಗೆ ಅಂದಾಜು 28 ಕೋಟಿ ರೂ ಅವಶ್ಯಕತೆ ಇದೆ. ಇದರೊಂದಿಗೆ 55 ಕೋಟಿ ರೂ ವೆಚ್ಚದಲ್ಲಿ ಹಿರೇಕಾಂಶಿ ಏತ ನೀರಾವರಿ ಯೋಜನೆಯನ್ನೂ ಅನುಷ್ಠಾನಕ್ಕೆ ತರಲಾಗುವುದು. ಇದರಿಂದ ಈ ಭಾಗದ 60 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದೆ. ಅಲ್ಲದೆ 32 ಕೋಟಿ ರೂ ವೆಚ್ಚದಲ್ಲಿ ಹುಲಗಟ್ಟಿ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಿ 17 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ ಎಂದ ಅವರು, ಹಾನಗಲ್ಲ ತಾಲೂಕಿನಲ್ಲಿ ಹಿಂದಿನ ಸರಕಾರದ ಅವಧಿಯಲ್ಲಿ ಪಿಎಂಜಿಎಸ್‍ವೈ ಅಡಿಯಲ್ಲಿ ನಡೆದ 10 ಕೋಟಿ ರೂ ವೆಚ್ಚದ ರಸ್ತೆ ಕಾಮಗಾರಿಗಳು ಕಳಪೆಯಾಗಿದ್ದು, ಮರು ಕಾಮಗಾರಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗುಣ ಮಟ್ಟದ ಕಾಮಗಾರಿ ವಿಷುಯದಲ್ಲಿ ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ ಎಂದು ಸಿ.ಎಂ.ಉದಾಸಿ ಸ್ಪಷ್ಟಪಡಿಸಿದರು.

   ಜಿಪಂ ಸದಸ್ಯ ರಾಘವೇಂದ್ರ ತಹಶೀಲ್ದಾರ, ಮಾಜಿ ಸದಸ್ಯ ರಾಜಣ್ಣ ಪಟ್ಟಣದ, ತಾಪಂ ಸದಸ್ಯ ಸಿದ್ದನಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ರೇಣುಕಾ ಕೊಂಡೋಜಿ, ಪದ್ಮವ್ವ ಪಾಟೀಲ, ವಿರೇಶ ಹೊಸದಿ, ಬಸವರಾಜ ತಿಪ್ಪಗೊಂಡರ, ಶಂಬಂಣ್ಣ ಉಪ್ಪಿನ, ರವಿಗೌಡ ಪಾಟೀಲ, ಅಭಿಯಂತರ ಅಂಗಡಿ, ಬಸವರಾಜ ಬೆಳವಡಿ, ಶಿವಕುಮಾರ ಮೊದಲಾದವರು ಈ ಸಂದರ್ಭದಲ್ಲಿದ್ದರು.

 

LEAVE A REPLY

Please enter your comment!
Please enter your name here