ರಾಜ್ಯದ ಖ್ಯಾತ ವೈದ್ಯ, ಬೆಂಗಳೂರು ಆಸ್ಪತ್ರೆಯ ಸಂಸ್ಥಾಪಕ ಡಾ.ಎಂ.ಎನ್. ಸುಬ್ರಹ್ಮಣ್ಯಂ ನಿಧನ

0
73

ತುರುವೇಕೆರೆ:

      ರಾಜ್ಯದ ಖ್ಯಾತ ವೈದ್ಯ, ಬೆಂಗಳೂರು ಆಸ್ಪತ್ರೆಯ ಸಂಸ್ಥಾಪಕ ಡಾ.ಎಂ.ಎನ್. ಸುಬ್ರಹ್ಮಣ್ಯಂ ಬುಧವಾರ ರಾತ್ರಿ ಮಾಯಸಂದ್ರದ ತಮ್ಮ ಸ್ವಗ್ರಾಮದಲ್ಲಿ ಹೃದಯಾಘಾತದಿಂದ ನಿಧನರಾದರು.

      ಅವರಿಗೆ 82 ವರ್ಷ ವಯಸ್ಸಾಗಿತ್ತು. ಪತ್ನಿ ರಾಜೇಶ್ವರಿ, ಇಬ್ಬರು ಪುತ್ರರು, ಒಬ್ಬ ಪುತ್ರಿ, ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಸ್ವಾತಂತ್ಯ್ರ ಹೋರಾಟಗಾರ ಎಂ.ಕೆ.ನರಸಿಂಹಯ್ಯ ಅವರ ಸುಪುತ್ರರಾದ ಡಾ.ಎಂ.ಎನ್.ಸುಬ್ರಹ್ಮಣ್ಯಂ ಬೆಂಗಳೂರಿನಲ್ಲಿ ಬೃಹತ್ ಆಸ್ಪತ್ರೆ ನಿರ್ಮಿಸಿ ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಸಾವಿರಾರು ಜನರಿಗೆ ಚಿಕಿತ್ಸೆ ನೀಡಿದ್ದರು. ಕೆಲ ವರ್ಷಗಳ ಹಿಂದೆ ಸ್ವಗ್ರಾಮ ಮಾಯಸಂದ್ರಕ್ಕೆ ವಾಪಸ್ ಬಂದು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು, ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಭಾಗದಲ್ಲಿ ಕೃಷಿ ಕ್ರಾಂತಿಯನ್ನೇ ಮಾಡಿದ್ದರು. ಪೂರ್ಣ ಪ್ರಮಾಣದ ತಂತ್ರಜ್ಞಾನವನ್ನು ಕೃಷಿಯಲ್ಲಿ ಅಳವಡಿಸಿಕೊಂಡ ಈ ಭಾಗದ ಮೊದಲ ಕೃಷಿಕ ಎಂಬ ಹೆಗ್ಗಳಿಕೆಗೆ ಡಾ.ಸುಬ್ರಹ್ಮಣ್ಯಂ ಪಾತ್ರರಾಗಿದ್ದರು. ಇಡೀ ತಾಲ್ಲೂಕಿಗೇ ಮೊದಲ ಬಾರಿ ಭತ್ತದ ನಾಟಿ ಯಂತ್ರವನ್ನು ಕೊಂಡುತಂದು ಯಶಸ್ವಿಯಾಗಿ ಪ್ರಯೋಗಿಸಿದ್ದರು. ಟ್ರಾಕ್ಟರ್‍ಗಳು, ಟಿಲ್ಲರ್‍ಗಳು, ಅಡಿಕೆ ಸುಲಿವ ಯಂತ್ರಗಳು, ಹನಿ ನೀರಾವರಿ ಉಪಕರಣಗಳು, ಸ್ಪ್ರಿಂಕ್ಲರ್‍ಗಳು ಹೀಗೆ ಅವರ ತೋಟ ಪಾರಂಪಾರಿಕ ದೇಸೀಜ್ಞಾನ ಹಾಗೂ ತಂತ್ರಜ್ಞಾನದ ಸಮ್ಮಿಲನಕ್ಕೆ ಸಾಕ್ಷಿಯಾಗಿದೆ
ಸಾವಿರಾರು ಜನರಿಗೆ ಸರ್ಜರಿ ಮಾಡಿದ ಡಾ.ಎಂ.ಎನ್. ಸುಬ್ರಹ್ಮಣ್ಯಂ ವ್ಯವಸ್ಥೆಗೆ ಸರ್ಜರಿ ಮಾಡುವ ಸಂಕಲ್ಪ ಕೈಗೊಂಡು ನವನಿರ್ಮಾಣ ವೇದಿಕೆ ಎಂಬ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಮಾಯಸಂದ್ರವನ್ನು ಆದರ್ಶ ಗ್ರಾಮವನ್ನಾಗಿಸುವ ಪ್ರಯತ್ನ ನಡೆಸಿದರು. ಡಾ. ಸುಬ್ರಹ್ಮಣ್ಯಂ ಅಮೇರಿಕಾದ ಶೌಲ್ಡರ್ ಟು ಶೌಲ್ಡರ್ ಸಂಸ್ಥೆಯ ಸಹಭಾಗಿತ್ವದೊಂದಿಗೆ ಹಲವು ಆರೋಗ್ಯ ಸಂಬಂಧಿ ಸಂಶೋಧನೆಗಳನ್ನು ನಡೆಸಿದ್ದರು. ದೂರದ ಅಮೇರಿಕಾದಿಂದ ವೈದ್ಯರ ತಂಡವನ್ನು ಗ್ರಾಮಕ್ಕೆ ಕರೆಸಿ ಬುದ್ದಿಮಾಂದ್ಯ ಮಕ್ಕಳ ಸಮೀಕ್ಷೆ, ಗಣತಿ ನಡೆಸಿ ಈ ಮಕ್ಕಳಿಗಾಗಿ ವಿಶೇಷ ತರಬೇತಿ ನೀಡಲು ಶಾಲೆಯೊಂದನ್ನು ತೆರೆದಿದ್ದರು. ಅಮೇರಿಕಾದ ಕೆಂಟಕಿ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ‘ಹೆಗಲಿನಿಂದ ಹೆಗಲಿಗೆ’ ಎಂಬ ವಿಶ್ವಸ್ಥ ಸಂಸ್ಥೆಯೊಂದನ್ನು ಸ್ಥಾಪಿಸಿ ತನ್ಮೂಲಕ ತಮ್ಮ ಗ್ರಾಮದ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು.

      ಡಾ.ಎಂ.ಎನ್.ಸುಬ್ರಹ್ಮಣ್ಯಂ ನಿಧನಕ್ಕೆ ನೂರಾರು ಗಣ್ಯರು, ಮಾಯಸಂದ್ರ ಸುತ್ತಮುತ್ತಲ ಹಳ್ಳಿಗಳ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಶುಕ್ರವಾರ ಬೆಳಿಗ್ಗೆ ತಮ್ಮ ಸ್ವಗೃಹ ಮಾಯಸಂದ್ರದಲ್ಲಿ ಮೃತರ ಅಂತ್ಯಕ್ರಿಯೆ ನಡೆದು ಶಾಸಕ ಮಸಾಲೆ ಜಯರಾಂ, ಕಾಂಗ್ರೆಸ್ ಮುಖಂಡರಾದ ಎನ್.ಆರ್.ಜಯರಾಮ್, ಎಂ.ಡಿ. ಲಕ್ಷ್ಮೀನಾರಾಯಣ್, ಚೌದ್ರಿರಂಗಪ್ಪ, ಸಾಹಿತಿ ಕೆ.ಭೈರಪ್ಪ, ಡಾ|| ನಾಗರಾಜು, ಸಾಹಿತಿ ತುರುವೇಕೆರೆ ಪ್ರಸಾದ್, ಮಾ.ಸು.ಅನಂತು ಸೇರಿದಂತೆ ಅನೇಕ ಗಣ್ಯರುಗಳು, ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗು ಸಾವಿರಾರು ಜನ ಪಾಲ್ಗೋಂಡು ಅಂತಿಮ ದರ್ಶನ ಪಡೆದರು.

LEAVE A REPLY

Please enter your comment!
Please enter your name here