ರಾಜ್ಯ ಹೆದ್ದಾರಿ (ಮುಖ್ಯರಸ್ತೆ) ಅಗಲೀಕರಣ ಆರಂಭಿಸುವಂತೆ ಆಗ್ರಹಿಸಿ ಆ.11 ರಿಂದ ಉಪವಾಸ ಸತ್ಯಾಗ್ರಹ

0
47

ಬ್ಯಾಡಗಿ:

   ನೆನೆಗುದ್ದಿಗೆ ಬಿದ್ದಿರುವ ಗಜೇಂದ್ರಗಡ-ಸೊರಬ ನಂ.136 ರಾಜ್ಯ ಹೆದ್ದಾರಿ (ಮುಖ್ಯರಸ್ತೆ) ಅಗಲೀಕರಣ ಆರಂಭಿಸುವಂತೆ ಆಗ್ರಹಿಸಿ ಆ.11 ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ಪಟ್ಟಣದ ಪ್ರವಾಸಿಮಂದಿರದಲ್ಲಿ ವಿವಿಧ ಸಂಘಟನೆಗಳ ಮುಖ್ಯರಸ್ಥರೊಂದಿಗೆ ನಡೆದ ಸಭೆಯಲ್ಲಿ ಸರ್ವಾನುಮತದ ನಿರ್ಣಯಕ್ಕೆ ಬರಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಗಲೀಕರಣ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ, ನಮ್ಮ ಮನವಿಗಳಿಗೆ ಸರ್ಕಾರ ಸ್ಪಂದನೆ ನೀಡುತ್ತಿಲ್ಲ ಅಂತ ರಾಷ್ಟ್ರೀಯ ಮಾರುಕಟ್ಟೆ ಹೊಂದಿರುವ ಬ್ಯಾಡಗಿ ಪಟ್ಟಣಕ್ಕೊಂದು ಸುಗಮ ವಾಹನ ಸಂಚಾರಕ್ಕೆ ದ್ವಿಪಥ ಸಂಚಾರ ಬೇಕೆಂಬುದು ಸಾರ್ವಜನಿಕರ ಆಶಯವಾಗಿದೆ ಆದರೆ ಇಲ್ಲಿಯವರೆಗೂ ಸರ್ಕಾರಗಳು ಮಾತ್ರ ಕಣ್ತರೆದು ನೋಡುತ್ತಿಲ್ಲ..? ಆದರೆ ವಾಹನ ಸಂಚಾರ ಇಂದಿಗೂ ದುಸ್ತರವಾಗಿದ್ದು ನಿತ್ಯ ಜನರಿಗೆ ನರಕಯಾತನೆ ಮಾತ್ರ ತಪ್ಪಿಲ್ಲ ಎಂದರು..

   ದಪ್ಪ ಚರ್ಮದ ಸರ್ಕಾರಕ್ಕೆ ಎಚ್ಚರಿಸುವುದು ಅನಿವಾರ್ಯ:ವಿಶ್ವವಿಖ್ಯಾತ ಮಾರುಕಟ್ಟೆಗೆ ಪ್ರತಿ ವರ್ಷ ಡಿಸೆಂಬರ್‍ನಿಂದ ಸಾಗರೋಪಾದಿಯಲ್ಲಿ ಮೆಣಸಿನಕಾಯಿ ಚೀಲಗಳು ಹರಿದು ಬರುತ್ತಿವೆ, ಅವುಗಳನ್ನು ಹೊತ್ತು ಸಾವಿರಾರು ವಾಹನಗಳು ನಿತ್ಯ ಮುಖ್ಯರಸ್ತೆಯಲ್ಲಿಯೇ ಸಂಚರಿಸಬೇಕಾಗುತ್ತದೆ, ಇದರಿಂದಾಗಿ ಕಿರಿದಾದ ರಸ್ತೆಯಲ್ಲಿ ವಾಹನ ಸಂಚಾರ ಇನ್ನಷ್ಟು ದುಸ್ತರವಾಗಿದ್ದು ನಿತ್ಯವೂ ಸರ್ಕಾರಕ್ಕೆ ಹಿಡಿಶಾಪ ಹಾಕದಿರುವ ದಿನಗಳಿಲ್ಲ, ದರ್ಪ ಚರ್ಮದ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ.. ಪ್ರತಿಭಟನೆಯ ಮೂಲಕ ಎಚ್ಚರಿಸುವುದು ಅನಿವಾರ್ಯವಾಗಲಿದೆ ಎಂದರು..

    ನೂತನ ಸರ್ಕಾರದಿಂದ ಅಗಲೀಕರಣಕ್ಕೆ ಹಿನ್ನೆಡೆ: ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಹಿಂದಿನ ಸರ್ಕಾರದ ಅವಧಿಯಲ್ಲಿಯೇ ಪಟ್ಟಣದ ಮುಖ್ಯರಸ್ತೆ ಅಗಲೀಕರಣ ಕಾರ್ಯ ಆರಂಭವಾಗಿದ್ದು ಮತ್ತು ಅದೇ ಅವಧಿಯಲ್ಲಿ ಕೂಡ ಮುಕ್ತಾಯಗೊಳ್ಳಬೇಕಾಗಿತ್ತು, ಮೊದಲ ಹಂತದಲ್ಲಿ 950 ಮೀಟರ್, ಎರಡನೇ ಹಂತದಲ್ಲಿ 1050 ಮೀಟರ್, ಅಗಲೀಕರಣ ಕಾಮಗಾರಿ ಹಿಂದಿನ ಅವಧಿಯಲ್ಲಿಯೇ ಪೂರ್ಣ ಗೊಂಡಿವೆ, ಆದರೆ ಪ್ರಮುಖವಾಗಿ ಆಗಬೇಕಾಗಿದ್ದ ಮುಖ್ಯರಸ್ತೆ ಯಲ್ಲಿ ಸುಮಾರು 750 ಮೀಟರ್ ರಸ್ತೆ ಅಗಲೀಕರಣ ಕಾಮಗಾರಿ ಇಂದಿಗೂ ಬಾಕಿ ಉಳಿದಿದೆ, ಹೀಗಿದ್ದರೂ ನೂತನ ಸರ್ಕಾರ ಚಾಲನೆ ನೀಡದೇ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳುವಂತೆ ಮಾಡಿದೆ ಎಂದರು..
ಸಾಯುವವರಿಗೆ ಬೆಲೆ ಇಲ್ಲವೇ..?: ಮಾಜಿ ಸೈನಿಕ ಮಲ್ಲೇಶ ಚಿಕ್ಕಣ್ಣನವರ ಮಾತನಾಡಿ, ಕಿಷ್ಕಿಂಧೆಯಾಗಿರುವ ಮುಖ್ಯರಸ್ತೆಯಲ್ಲಿ ಸಂಚಾರ ನಿಯಮ ಪಾಲನೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈಗಾಗಲೇ ನಾಲ್ಕು ಜನರು ಸಾವನ್ನಪ್ಪಿದ್ದಾರೆ, ಅಪಘಾತದಲ್ಲಿ ಮೃತಪ್ಪಟವರು ಮುಖ್ಯರಸ್ತೆ ಅಗಲೀಕರಣ ಆಗದಿರುವುದೇ ಪ್ರಮುಖ ಕಾರಣವೆಂದರೂ ತಪ್ಪಾಗಲಾರದು ಹೀಗಾಗಿ ಇನ್ನೆಷ್ಟು ಜೀವಗಳನ್ನು ಅಗಲೀಕರಣಕ್ಕಾಗಿ ಪಡೆಯಲಾಗುತ್ತಿದೆ..? ಹಾಗಿದ್ದರೇ ಮನುಷ್ಯನ ಜೀವಕ್ಕೆ ಬೆಲೆ ಇಲ್ಲವೇ..? ಎಂದು ಪ್ರಶ್ನಿಸಿದರು..

   ಸ್ಥಳೀಯ ಶಾಸಕರಿಂದ ಕೆಲವೇ ವ್ಯಕ್ತಿಗಳಿಗೆ ಮಣೆ: ಫರೀದಾಬಾನು ನದೀಮುಲ್ಲಾ ಮಾತನಾಡಿ, ಜನಸಂಖ್ಯೆ ಮತ್ತು ವಾಹನ ಸಂಖ್ಯೆಗೆನುಗುಣವಾಗಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರ್ಕಾರಗಳು ಕೋಟಿಗಟ್ಟಲೇ ಹಣವ್ಯಯಿಸಿ ರಸ್ತೆಗಳನ್ನು ದ್ವಿಪಥ, ಚತುಷ್ಪಥ, ಷಟ್ಪಥ ರಸ್ತೆಗಳನ್ನಾಗಿ ಅಗಲೀಕರಣಗೊಳಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದು ಸರ್ವೇ ಸಾಮಾನ್ಯ ಆದರೆ ಕೆಲವೇ ವ್ಯಕ್ತಿಗಳ ಆಶಯಕ್ಕೆ ಮಣೆ ಹಾಕುತ್ತಿರುವ ಸ್ಥಳೀಯ ಶಾಸಕರು ಅಗಲೀಕರಣದ ಬಗ್ಗೆ ಚಕಾರವೆತ್ತದೇ ಇರುವುದು ಹೋರಾಟಗಾರರಲ್ಲಿ ಸಾಕಷ್ಟು ಅನುಮಾನಗಳನ್ನು ಮೂಡಿಸಿವೆ ಎಂದರು..

   ಬೈಪಾಸ್ ಮಾಡಲು ಬಿಡುವುದಿಲ್ಲ:ಉಸ್ಮಾನ್ ಎರೇಶೀಮಿ ಮಾತನಾಡಿ, ಸ್ಥಳೀಯ ಶಾಸಕರು, ಮಾರುಕಟ್ಟೆ ಪ್ರಾಂಗಣಕ್ಕೆ ಹೋಗುವಂತಹ ವಾಹನಗಳಿಗೆ ಪ್ರತ್ಯೇಕ ಬೈಪಾಸ್ ರಸ್ತೆ ನಿರ್ಮಿಸುವ ಇಂಗಿತ ವ್ಯಕ್ತಪಡಿಸಿರುವ ಕ್ರಮ ಸ್ವಾಗತಾರ್ಹ, ಆದರೆ ಮುಖ್ಯರಸ್ತೆಯನ್ನು ಅಗಲೀಕರಣ ವಿಷಯದಲ್ಲಿ ನಿರ್ಲಕ್ಷ್ಯ ತೊರುತ್ತಿರುವುದನ್ನು ಖಂಡಿಸುತ್ತೇವೆ, ಒಂದು ವೇಳೆ ಮುಖ್ಯರಸ್ತೆ ಬಿಟ್ಟು ಬೈಪಾಸ್ ನಿರ್ಮಾಣಕ್ಕೆ ಮುಂದಾದಲ್ಲಿ ಯಾವುದೇ ಕಾರಣಕ್ಕೂ ರಸ್ತೆ ನಿರ್ಮಿಸಲು ಬಿಡುವುದಿಲ್ಲ ಈ ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸು ತ್ತಿದ್ದೇವೆ ಎಂದರು.. ಈ ಸಂದರ್ಭದಲ್ಲಿ ಪಾಂಡು ಸುತಾರ, ಪೀರಾಂಬಿ, ವೀರಭದ್ರಗೌಡ ಹೊಮ್ಮರಡಿ, ಮಂಜುನಾಥ ಪೂಜಾರ, ವಿನಾಯಕ ಕಂಬಳಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here