ರಾಷ್ಟ್ರೀಯ ಹೆದ್ದಾರಿ 150-ಎ ಮಾಸ್ಟರ್ ಪ್ಲಾನ್ ಸ್ಥಳಾಂತರಿಸಲು ಪಟ್ಟು

0
50

ಬಳ್ಳಾರಿ:

      ಬಳ್ಳಾರಿ-ಸಂಗನಕಲ್ಲು ಗ್ರಾಮ ಮಾರ್ಗವಾಗಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ-150 (ಎ) ಮಾಸ್ಟರ್ ಪ್ಲ್ಯಾನ್ ಅನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ದಲಿತ ಮಹಾಸಭಾದ ಜಿಲ್ಲಾ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮಂಗಳವಾರ ಮನವಿ ಸಲ್ಲಿಸಿದರು.

      ನಗರದ ಹೊರವಲಯದಲ್ಲಿ ಸಿರುಗುಪ್ಪ ಮತ್ತು ಅನಂತಪುರ ರಸ್ತೆ ನಡುವೆ ರಾಷ್ಟ್ರೀಯ ಹೆದ್ದಾರಿ 150-ಎ ರಸ್ತೆಯನ್ನು ನಿರ್ಮಿಸಲು ಈಗಾಗಲೇ ಮಾಸ್ಟರ್ ಪ್ಲಾನ್ ಸಿದ್ಧಗೊಂಡಿದ್ದು, ಸರ್ವೆ ಕಾರ್ಯವೂ ನಡೆಸಲಾಗಿದೆ. ಆದರೆ, ಈ ರಸ್ತೆಯು ಹಾದು ಹೋಗುವ ಅಕ್ಕಪಕ್ಕದಲ್ಲಿ ಬೃಹತ್ ಬಡಾವಣೆಗಳಿವೆ. ಪ್ರತಿಷ್ಠಿತ ವಿಜ್‍ಡಮ್ ಲ್ಯಾಂಡ್ ಶಾಲೆಯಿದೆ. ರಸ್ತೆ ನಿರ್ಮಾಣದಿಂದ ಪ್ರತಿಷ್ಠಿತ ಬಡಾವಣೆಗಳ ನಿವಾಸಿಗಳಿಗೆ, ಶಾಲೆಯ ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಸಾಧ್ಯತೆಯಿದ್ದು, ವಿದ್ಯಾಭ್ಯಾಸಕ್ಕೆ ತೊಡಕುಂಟಾಗಲಿದೆ. ಅಲ್ಲದೇ, ಈ ಪ್ರದೇಶದಲ್ಲಿ ಖಾಸಗಿ ಶಾಲೆ ಹಾಗೂ ಧಾರ್ಮಿಕ ಕೇಂದ್ರ, ವೃದ್ಧಾಶ್ರಮಗಳೂ ಕಾರ್ಯನಿರ್ವಹಿಸುತ್ತಿವೆ. ಹಾಗೂ ಅಕ್ಕಪಕ್ಕದಲ್ಲಿಯೂ ಸಣ್ಣಪುಟ್ಟ ಕೃಷಿ ಚಟುವಟಿಕೆ ನಡೆಯುತ್ತವೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪಡಿಸುವುದರಿಂದ ಅವೆಲ್ಲವೂ ನೆಲಸಮಗೊಳ್ಳುತ್ತವೆ. ಅದರಿಂದ ನಾನಾ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ತೊಂದರೆ ಎದುರಾಗಲಿದೆ. ಹಾಗಾಗಿ, ಆ ಯೋಜನೆಯನ್ನು ನಗರದ 20 ಕಿಲೋಮೀಟರ್ ವ್ಯಾಪ್ತಿಯೊಳಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಮುಂದಾಗಬೇಕು ಎಂದವರು ಮನವಿಯಲ್ಲಿ ಕೋರಿದ್ದಾರೆ.

      ಕೂಡಲೇ ಜಿಲ್ಲಾಡಳಿತ ಮಧ್ಯೆಪ್ರವೇಶಿಸಿ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯನ್ನು ಬೇರೆಡೆಗೆ ಸ್ಥಳಾಂತರಿಸಲು ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

      ಈ ಸಂದರ್ಭದಲ್ಲಿ ಮಹಾಸಭಾದ ಮುಖಂಡರಾದ ಸಿ.ಈಶ್ವರ್‍ರಾವ್, ಶಂಕರ್ ನಂದಿಹಾಳ್, ಸಿ.ಹನುಮೇಶ್, ಗೋನಾಳು ಮಲ್ಲಿಕಾರ್ಜುನ, ಟಿ.ಶೇಷಪ್ಪ, ಗೋನಾಳ್ ರಾಜಶೇಖರ್, ತಾಳೂರು ರಂಗಪ್ಪ, ಸಂಗನಕಲ್ಲು ಸಿ.ನಾಗಾರ್ಜುನ, ಸಂಗನಕಲ್ಲು ಗ್ರಾಮದ ಮಂಜು, ಸಿದ್ದ, ನಾಗರಾಜ, ಶರಣ, ವಿನೋದ್, ವೀರೇಂದ್ರ,ರವಿ,ದ್ವಾರಕೀಶ್, ಎಚ್.ರವಿಕುಮಾರ್, ಸಿ.ಮಹೇಶ್, ಸಿ.ಚಂದ್ರಶೇಖರ್ ಸೇರಿದಂತೆ ಇತರರು ಇದ್ದರು.

 

LEAVE A REPLY

Please enter your comment!
Please enter your name here