ರೇಷನ್ ಕಾರ್ಡ್ ವಿತರಣೆಯಲ್ಲಿ ವಿಳಂಬ : ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ.

0
30

 ಹೊಸಪೇಟೆ :

      ತಾಲೂಕಿನಲ್ಲಿ ಪಡಿತರ ಚೀಟಿ ವಿತರಣೆಯಾಗದೆ ಜನರು ಪರದಾಡುತ್ತಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕಂದಾಯ ಇಲಾಖೆಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಬರುವವರೆಗೂ ಸಭೆ ನಡೆಸಬಾರದು ಎಂದು ಸದಸ್ಯ ಗಾದಿಲಿಂಗಪ್ಪ ಸೇರಿದಂತೆ ಇತರೆ ಸದಸ್ಯರು ಒತ್ತಾಯಿಸಿದರು.

      ಇಲ್ಲಿನ ತಾ.ಪಂ.ಯ ವಿದ್ಯಾರಣ್ಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು, ಅಧಿಕಾರಿಗಳು ಪಡಿತರ ಚೀಟಿ ವಿತರಣೆಯಲ್ಲಿ ವಿಳಂಬ ಮಾಡುತ್ತಿದ್ದಾರೆ. ಇದರಿಂದ ಜನ ಪರದಾಡುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳನ್ನು ಏನು ಮಾಡುತ್ತಿದ್ದಾರೆ ? ಎಂದು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಇದಲ್ಲದೇ ವೃದ್ಯಾಪ್ಯ ವೇತನ, ವಿಧವಾ ವೇತನವನ್ನು ಸರಿಯಾಗಿ ನಿರ್ವಹಿಸಬೇಕು ಎಂದರು.

      ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಇಲಾಖೆ ಅಧಿಕಾರಿ ಅಜ್ಜಪ್ಪ, ಚುನಾವಣೆ ಇದ್ದ ಹಿನ್ನೆಯಲ್ಲಿ ರೇಷನ್ ಕಾರ್ಡ್‍ಗಳ ವಿತರಣೆಯನ್ನು ತಡೆ
ಹಿಡಿಯಲಾಗಿತ್ತು. ಈಗ ಕಾರ್ಡ್‍ಗಳನ್ನು ವಿತರಿಸಲಾಗುತ್ತಿದೆ. 1203 ಅರ್ಜಿಗಳು ಪೆಂಡಿಂಗ್ ಇದ್ದು, ಆದಷ್ಟು ಬೇಗ ಕಾರ್ಡ್‍ಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.

      ಪ್ರಭಾರ ಸಿಡಿಪಿಒ ಪರಮೇಶ್ವರರಾವ್ ಮಾತನಾಡಿ, ಅಂಗನವಾಡಿ ಕಟ್ಟಡಗಳ ನಿರ್ವಹಣೆಗೆ 22 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಸದಸ್ಯರಿಗೆ ಕಾಮಗಾರಿ ಪಟ್ಟಿ ನೀಡುವಂತೆ ಕೋರಲಾಗಿದ್ದು, ಕೆಲವು ಸದಸ್ಯರು ಮಾತ್ರ ಕಾಮಗಾರಿ ಪಟ್ಟಿ ನೀಡಿದ್ದಾರೆ. ಈಗಾಗಲೇ ಅರ್ಧ ವರ್ಷ ಕಳೆದಿದ್ದು, ಇರುವ ಸ್ವಲ್ಪ ದಿನದಲ್ಲಿ ಕಾಮಗಾರಿಗೆ ಜಿಪಂಯಿಂದ ಅನುಮೋದನೆ ಪಡೆದು
ಕೆಲಸ ಆರಂಭಿಸಬೇಕಿದೆ ಎಂದು ತಿಳಿಸಿದರು.

      ಸದಸ್ಯರಾದ ಗಾದಿಲಿಂಗಪ್ಪ, ಷಣ್ಮುಖಪ್ಪ, ಮಹಾದೇವ ಇತರರು ಮಾತನಾಡಿ, 30-40 ಸಾವಿರ ರೂ. ವೆಚ್ಚದ ಕಾಮಗಾರಿ ನಿಗದಿಪಡಿಸಿದರೆ ಯಾವ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು. ಅಲ್ಲದೆ, ತಾಲೂಕಿನಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣದ ಗುತ್ತಿಗೆ ಪಡೆದ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಅರೆಬರೆಯಾಗಿ ಕೆಲಸ ಮಾಡುತ್ತಿದ್ದಾರೆ. ಅಂಗನವಾಡಿ ಕೇಂದ್ರಗಳಿಗೆ ಶುದ್ಧ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ತಾಪಂಯಲ್ಲಿ ನಡೆಯವ ಸಭೆಗಳಿಗೆ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಬರುತ್ತಿಲ್ಲ
ಎಂದು ಆರೋಪಿಸಿದರು.

      ಸದಸ್ಯೆ ಉಮಾದೇವಿ ಮಾತನಾಡಿ, ದೊಡ್ಡ ಊರಾಗಿರುವ ಶ್ರೀರಾಮರಂಗಾಪುರದಲ್ಲಿ ಕುಡಿವ ನೀರಿನ ಸಮಸ್ಯೆ ಅಧಿಕವಾಗಿದೆ. 8 ಬೋರ್‍ಗಳಿದ್ದರೂ ಓವರ್‍ಹೆಡ್ ಟ್ಯಾಂಕ್ ಇಲ್ಲ. ಬೋರ್ ಕೊರೆಸಲು ಜಾಗ ನೀಡುತ್ತಿದ್ದು, ಅಧಿಕಾರಿಗಳು ಗ್ರಾಮದಲ್ಲಿನ ಕುಡಿವ ನೀರಿನ ಸಮಸ್ಯೆ ನೀಗಿಸಬೇಕು ಎಂದು ಗ್ರಾಮೀಣ ಕುಡಿವ ನೀರು ಯೋಜನೆ ಅಧಿಕಾರಿಗೆ ಸೂಚಿಸಿದರು.

      ಕಾಕುಬಾಳು ಗ್ರಾಮದಲ್ಲಿ ಬೋರ್‍ವೆಲ್‍ಗೆ ಮೋಟಾರ್ ಅಳವಡಿಸಲು ಹೇಳಿದರೂ ಕೆಲಸ ಆಗಿಲ್ಲ ಎಂದು ಅಧ್ಯಕ್ಷೆ ಜೆ.ನೀಲಮ್ಮ ಬೇಸರ ವ್ಯಕ್ತಪಡಿಸಿದರು. ಅದಕ್ಕೆ ಧ್ವನಿಗೂಡಿಸಿದ ಮಲ್ಲೆ ಹನುಮಕ್ಕ, ಬುಕ್ಕಸಾಗರ ಗ್ರಾಮಕ್ಕೆ ಸಮರ್ಪಕವಾಗಿ ಕುಡಿವ ನೀರು ಪೂರೈಸುವಂತೆ 4 ವರ್ಷದಿಂದ ಹೇಳಿದರೂ ಅಧಿಕಾರಿಗಳು ನಿರ್ಲಕ್ಷೃವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ಚಿಲಕನಹಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕೂಲಿ ಕಾರ್ಮಿಕರ ಬದಲಾಗಿ ಬೇರೆಯವರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗಿದೆ. ಇದಕ್ಕೆ ಯಾರು ಹೊಣೆ. ಕೆಲಸ ಮಾಡಿದ ಕಾರ್ಮಿಕರ ಪಾಡೇನು. ಅರಣ್ಯ ಇಲಾಖೆಯಿಂದ ಸಸಿಗಳನ್ನು ನೆಡುವುದಕ್ಕೆ ಗುಂಡಿ ತೋಡಿದ ಕೆಲಸದಲ್ಲಿ ಎಡವಟ್ಟಾಗಿದೆ. ಈ ರೀತಿ ಆಗದಂತೆ ಅಧಿಕಾರಿಗಳು, ಗ್ರಾಪಂ ಪಿಡಿಒಗಳು ಎಚ್ಚರಿಕೆ ವಹಿಸಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ರಾಜಪ್ಪ ಸೂಚಿಸಿದರು.

ಮನೆ ನಿರ್ಮಾಣಕ್ಕೆ ಅನುದಾನ ಬಂದಿಲ್ಲ:

      ಮೆಟ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಸೇರಿ ತಾಲೂಕಿನಲ್ಲಿ ವಸತಿ ಯೋಜನೆಯಡಿ ಆಯ್ಕೆಯಾದ ಅನೇಕ ಫಲಾನುಭವಿಗಳು ಮನೆಗಳ ನಿರ್ಮಾಣಕ್ಕೆ ಬುನಾದಿ ಹಾಕಿದ್ದರೂ ಅನುದಾನ ಬಿಡುಗಡೆಯಾಗಿಲ್ಲ. ಪಿಡಿಒರನ್ನು ಕೇಳಿದರೆ, ಕೆಲವು ಫಲಾನುಭವಿಗಳ ಹೆಸರು ಬ್ಲಾಕ್ಲಿ ಸ್ಟ್‍ಗೆ ಸೇರಿವೆ. ಅದಕ್ಕಾಗಿ ಹಣ ಬರುತ್ತಿಲ್ಲ ಎಂದು ಹೇಳುತ್ತಾರೆ.

      ಮನೆ ನಿರ್ಮಿಸಿಕೊಳ್ಳುವಂತೆ ಅಧಿಕಾರಿಗಳೇ ವರ್ಕ್ ಆರ್ಡ್‍ರ್ ನೀಡಿದ್ದರೂ ಬ್ಲಾಕ್‍ಲಿಸ್ಟ್‍ಗೆ ಹೆಂಗೆ ಸೇರುತ್ತವೆ? ಎಂದು ಸದಸ್ಯ ಮಹಾದೇವಪ್ಪ, ಗಾದಿಲಿಂಗಪ್ಪ, ಈರಪ್ಪ ಇತರರು ಆಕ್ರೋಶ ವ್ಯಕ್ತಪಡಿಸಿದರು. ಫಲಾನುಭವಿಗಳಿಗೆ ಅನುದಾನ ನೀಡದಿದ್ದರೆ ಅವರೆಲ್ಲ ಮನೆ ಇಲ್ಲದೆ ಬಯಲಿನಲ್ಲಿ ಇರಬೇಕಾಗುತ್ತದೆ. ಇಒ ಸಾಹೇಬ್ರೇ ನೀವು ಸ್ಥಳ ಪರಿಶೀಲನೆ ಮಾಡಿ ವಸತಿ ನಿಗಮಕ್ಕೆ ವರದಿ ಸಲ್ಲಿಸಬೇಕು. ಎಲ್ಲದಕ್ಕೂ ತಲೆ ಅಲ್ಲಾಡಿಸುತ್ತಾ ಇದ್ದರೆ ಹೆಂಗೆ ಎಂದು ಇಒ ವೆಂಕೋಬಪ್ಪ ಅವರಿಗೆ ಸದಸ್ಯರು ಸೂಚಿಸಿದರು. 

      ಕೃಷಿ ಸಹಾಯಕ ನಿರ್ದೇಶಕ ವಾಮದೇವ ಕೊಳ್ಳಿ, ತೋಟಗಾರಿಕೆ ಇಲಾಖೆ ಸಹಾಯ ನಿರ್ದೇಶಕ ರಾಜೇಂದ್ರ , ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಡಿ.ಜೋಷಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಗತಿ ವರದಿ ವಾಚಿಸಿದರು. ತಾಪಂ ಅಧ್ಯಕ್ಷೆ ಜೋಗದ ನೀಲಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಿ.ಎಸ್.ಶಿವಮೂರ್ತಿ, ಸ್ಥಾಯಿಸಮಿತಿ ಅಧ್ಯಕ್ಷ ಬಿ.ಎಸ್.ರಾಜಪ್ಪ, ಅಧಿಕಾರಿಗಳು, ಗ್ರಾಪಂ ಪಿಡಿಒಗಳು ಇದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here