ರೈತರು ಆರ್ಥಿಕ ಜ್ಞಾನವನ್ನು ರೂಢಿಸಿಕೊಳ್ಳಬೇಕು

0
20

 ತೋವಿನಕೆರೆ:

      ಕೃಷಿ ಚಟುವಟಿಕೆ, ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳು ಜೊತೆಗೆ ಪ್ರತಿ ಹಂತದಲ್ಲೂ ಆರ್ಥಿಕ ಜ್ಞಾನವನ್ನು ರೈತರು ಪಡೆದುಕೊಳ್ಳಬೇಕು ಎಂದು ಸಿದ್ದರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದ ವೀರಭದ್ರಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

      ತೋವಿನಕೆರೆ ರೈತ ಸಂಪರ್ಕ ಕೇಂದ್ರದ ಮುಂಭಾಗದ ಅವರಣದಲ್ಲಿ ಶನಿವಾರ ನಡೆದ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ಸರ್ಕಾರಗಳು ರೈತರ ಸಂಕಷ್ಟಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸೌಲಭ್ಯಗಳನ್ನು ನೀಡುತ್ತಿವೆ. ಮೊದಲು ಇವುಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬೇಕು.

      ಫಸಲ್ ಬಿಮಾ ಯೋಜನೆಯು ರೈತರಿಗೆ ಒಂದು ವರದಾನವಾಗಿದೆ. ಕಳೆದ ವರ್ಷ ಸಾವಿರಾರು ರೂ.ಗಳು ರೈತರ ಖಾತೆಗೆ ಬಂದಿದೆ. ರೈತರು ಇದರ ಉಪಯೋಗವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡಿಲ್ಲ ಎಂದು ವಿಷಾದಿಸಿದರು.
ಅಧಿಕಾರಿಗಳು ಹೇಳುವ ಮಾಹಿತಿಯನ್ನು ತಾಳ್ಮೆಯಿಂದ ಕೇಳಿ ಅನುಷ್ಠಾನದ ಬಗ್ಗೆ ಚಿಂತಿಸಬೇಕೆಂದು ತಿಳಿಸಿದರು.

      ಕೊರಟಗೆರೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರಭಾರ ನೂರ್ ಅಜೀಂ ಮಾತನಾಡಿ ಕಳೆದ ವರ್ಷ ರೈತರನ್ನು ಕಾಡಿದ ಸೈನಿಕ ಹುಳು ಬಾಧೆಯು ಈ ಸಲ ಮತ್ತೆ ಬರುವ ಮುನ್ಸೂಚನೆ ಕಂಡು ಬಂದಿದೆ. ಅದನ್ನು ತಡೆಯಲು ಕೈಗೊಳ್ಳ ಬಹುದಾದ ಕ್ರಮಗಳನ್ನು ವಿವರಿಸಿದರು. ಕೃಷಿ ಉಪಕರಣಗಳನ್ನು ಉಪಯೋಗಿಸಿಕೊಂಡು ವ್ಯವಸಾಯ ಮಾಡಿದರೆ ಆಗುವ ಲಾಭಗಳ ಬಗ್ಗೆ ಮಾಹಿತಿ ನೀಡಿದರು.

      ಮುಂಗಾರು ಮಳೆಯು ಉತ್ತಮವಾಗಿ ಬರದೇ ರಾಗಿ ನಾಟಿಗೆ ತೊಂದರೆಯಾಗಿದೆ. ತಡವಾಗಿ ಮಳೆ ಬಂದರೂ ನಾಟಿ ಮಾಡಬಹುದಾದ ರಾಗಿ ತಳಿಗಳ ಬಗ್ಗೆ ವಿವರವಾಗಿ ತಿಳಿಸಿದರು.

      ಮುಖಂಡರಾದ ನರಸಿಂಹರಾಜು ಮಾತನಾಡಿ ಹೆಚ್ಚಿನ ರೈತರು ಸರ್ಕಾರದ ಸೌಲಭ್ಯಗಳನ್ನು ದುರುಪಯೋಗ ಮಾಡುತ್ತಿರುವುದು ಕಂಡು ಬರುತ್ತಿದೆ. ಬಹಳ ನೋವಿನಿಂದ ಈ ಮಾತುಗಳನ್ನು ಹೇಳಬೇಕಾಗಿದೆ ಎಂದು ಉದಾಹರಣೆಗಳನ್ನು ನೀಡಿದರು.

      ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ರಮೇಶ್, ರಾಜ ಶೇಖರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.
ಕಾರ್ಯಕ್ರಮದ ಅಧ್ಯಕ್ಷೆ ವಹಿಸಿದ್ದ ತೋವಿನಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಆರ್.ಸಿದ್ದಗಂಗಮ್ಮ, ಸಿದ್ಧರಬೆಟ್ಟ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಂಗಸ್ವಾಮಯ್ಯ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಲಕ್ಷ್ಮಿನರಸಯ್ಯ ,ಪಶು ವೈದ್ಯಾಧಿಕಾರಿ ಮಂಜುನಾಥ, ತೋಟಗಾರಿಕೆ ಇಲಾಖೆಯ ಅಧಿಕಾರಿ ನಾಗರಾಜು, ಎಸ್.ಕೆ.ರಂಗನಾಥ, ಮಾತನಾಡಿದರು.

      ತಾಪಂ ಸದಸ್ಯೆ ಜ್ಯೋತಿ, ಕಸಬಾದ ಕೃಷಿ ಅಧಿಕಾರಿ ಅಂಜನ್, ತೋವಿನಕೆರೆ ರೈತ ಸಂಪರ್ಕ ಕೇಂದ್ರದ ಅಧಿಕಾರಿ ವಿಭಾ ಸೇರಿದಂತೆ ತಾಲ್ಲೂಕು ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

 

LEAVE A REPLY

Please enter your comment!
Please enter your name here