ರೈತರ ಸಾಲಮನ್ನಾಕೆ ಆಗ್ರಹಿಸಿ ಪ್ರತಿಭಟನೆ

0
31

 ಹೂವಿನಹಡಗಲಿ :

      ರೈತರ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರ ಸಂಘಗಳ ಸಂಪೂರ್ಣ ಸಾಲಮನ್ನಾ ಮಾಡಬೇಕು, ಹಾಗೂ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಸೋಮವಾರ ಪಟ್ಟಣದ ಶಾಸ್ತ್ರೀ ವೃತ್ತದಲ್ಲಿ ಅಖಂಡ ಕರ್ನಾಟಕ ರೈತ ಸಂಘ, ಹಸಿರು ಸೇನೆಯಿಂದ ಪ್ರತಿಭಟನೆ ನಡೆಸಿದರು.

      ರೈತ ಸಂಘದ ಜಿಲ್ಲಾ ಅಧ್ಯಕ್ಷ ಭರಮಣ್ಣ ಮಾತನಾಡಿ ತಾಲೂಕಿನಲ್ಲಿ ರೈತರು ಸಾಲಮಾಡಿ ಬೆಳೆದ ಬೆಳೆಯು ಮಳೆ ಇಲ್ಲದೇ ಇರುವುದರಿಂದ ಸಂಪೂರ್ಣ ಬೆಳೆಗಳು ಹಾನಿಯಾಗಿವೆ. ಕೂಡಲೇ ಸರ್ಕಾರ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದರ ಮೂಲಕ ಬೆಳೆಗೆ ಪರಿಹಾರವನ್ನು ಕೊಡಗಬೇಕೆಂದು ಹೇಳಿದರು.

      ಬಗರ್‍ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು, ಸಿಂಗಟಾಲೂರು ಏತ ನೀರಾವರಿ ಕಾಲುವೆಗೆ ಭೂಮಿಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು, ರೈತರಿಗೆ ನಿರಂತರ 12 ತಾಸು ವಿದ್ಯುತ್ ನೀಡಬೇಕೆಂದು ಒತ್ತಾಯಿಸಿದರು.

      ತಾಲೂಕು ಅಧ್ಯಕ್ಷ ಅಂಚಿ ಮಂಜುನಾಥ ಮಾತನಾಡಿ ಸಿಂಗಟಾಲುರು ಏತ ನೀರಾವರಿ ಯೋಜನೆಯಡಿಯಲ್ಲಿ ಬಲದಂಡೆ ಕಾಲುವೆಗೆ ಸಂಬಂಧಪಟ್ಟ ರೈತರ ಜಮೀನಿನಲ್ಲಿ ಕಾಲುವೆಗಳು ನಿರ್ಮಾಣವಾಗಿದ್ದು, ಇದುವರೆಗೂ ಭೂಮಿಗೆ ಹನಿ ನೀರು ಹರಿಸಿಲ್ಲ ಎಂದು ಆರೋಪಿಸಿದರು.

      ಅಲ್ಲದೇ, ಭೂಮಿಕಳೆದುಕೊಂಡ ರೈತರಿಗೆ ಸಮರ್ಪಕವಾದ ಪರಿಹಾರವನ್ನು ನೀಡಿಲ್ಲ ಎಂದ ಅವರು, ಕೂಡಲೇ ರೈತರಿಗೆ ಸಮರ್ಪಕ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು. ತೆಲಂಗಾಣ ಮಾದರಿಯಲ್ಲಿ ದಿನದ 24 ಗಂಟೆಕೂಡಾ ನಿರಂತರ ವಿದ್ಯುತ್ ಸರಬರಾಜು ಮಾಡಬೇಕೆಂದು ಹೇಳಿದರು.

      ಜಿಲ್ಲಾ ಉಪಾಧ್ಯಕ್ಷ ಸೋಮಶೇಖರ್ ಮಾತನಾಡಿ ಗ್ರಾಮ ಪಂಚಾಯಿತಿ ಕಾರ್ಯಾಲಯದಿಂದ ಫಲಾನುಭವಿಗಳಿಗೆ ಮನೆ ನೀಡುವ ವಿಷಯದಲ್ಲಿ ಹಣವನ್ನು ವಸೂಲಿ ಮಾಡಲಾಗುತ್ತಿದ್ದು, ತಾ.ಪಂ. ಇ.ಓ.ರವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದರ ಮೂಲಕ ಅರ್ಹ ಫಲಾನುಭವಿಗಳಿಗೆ ನಿವೇಶನ ಹಾಗೂ ಮನೆ ನೀಡಬೇಕೆಂದು ಆಗ್ರಹಿಸಿದರು.

      ರೈತ ಸಂಘದ ಬಿ.ಶಿವನಗೌಡ, ಶಿವಪ್ಪ, ಪ್ರಕಾಶ್, ಟಿ.ಹಾಲಪ್ಪ, ದೇವಪ್ಪ,ಮಹೇಂದ್ರ, ವಿಶ್ವನಾಥ, ಸಿದ್ದಪ್ಪ, ಷಣ್ಮುಖಪ್ಪ, ದುರುಗಪ್ಪ, ಬಿ.ಹನುಮಂತಪ್ಪ, ಪಕ್ಕೀರಪ್ಪ, ಮುಜಬೂರ್ ರಹಿಮಾನ್ ಸೇರಿದಂತೆ ಹಲವರು ಇದ್ದರು. ನಂತರದಲ್ಲಿ ತಾಲೂಕಿನ ಅಧಿಕಾರಿಗಳು ಹಾಗೂ ತಹಶೀಲ್ದಾರರನ್ನು ಶಾಸ್ತ್ರೀ ವೃತ್ತಕ್ಕೆ ಕರೆಸಿ ಮನವಿ ಪತ್ರ ಸಲ್ಲಿಸಿದರು.

LEAVE A REPLY

Please enter your comment!
Please enter your name here