ರೈತರ ಸಾಲಮನ್ನಾ : ಸಾಧಕ-ಬಾಧಕಗಳ ಪರಿಶೀಲನೆ

0
66

ಬೆಂಗಳೂರು:

Related image

      ರೈತರ ಸಾಲ ಮನ್ನಾ ಕುರಿತ ಸಾಧಕ – ಬಾಧಕಗಳ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಪರಿಶೀಲನೆ ನಡೆಸುತ್ತಿದ್ದು, ಇನ್ನೊಂದು ವಾರದಲ್ಲಿ ಸಮಗ್ರ ಆದೇಶ ಹೊರಡಿಸಲಿದೆ.

      ಸಾಲ ಮನ್ನಾ ಬಗ್ಗೆ ಹಣಕಾಸು ಇಲಾಖೆ, ಸಹಕಾರ ಮತ್ತಿತರ ಇಲಾಖೆಗಳು ಕಳೆದೊಂದು ವಾರದಿಂದ ನಿರಂತರ ಸಭೆಗಳನ್ನು ನಡೆಸುತ್ತಿದ್ದು, ಇನ್ನೊಂದು ವಾರದಲ್ಲಿ ಆದೇಶ ಹೊರ ಬೀಳಲಿದೆ.

      ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಸಾಲ ಮನ್ನಾ ವಿಚಾರದಲ್ಲಿ ಸರ್ಕಾರ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ. ಯಾವ ಹಂತದಲ್ಲಿ ಸಾಲ ಮನ್ನಾ ಆಗಲಿದೆ ಎನ್ನುವ ಎಲ್ಲಾ ಸಂಪೂರ್ಣ ಮಾಹಿತಿ ಆದೇಶದಲ್ಲಿರಲಿದೆ ಎಂದರು.

      ಸಾಲ ಮನ್ನಾ ವಿಚಾರದಲ್ಲಿ ಗ್ರಾಮೀಣ ಸಹಕಾರ ಸಂಸ್ಥೆಗಳಲ್ಲಿ ರೈತರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ರೈತರನ್ನು ವಂಚಿಸುವ, ಯಾಮಾರಿಸುವ ಬಗ್ಗೆ ಮಾಹಿತಿ ಬರುತ್ತಿದ್ದು, ರೈತರಿಗೆ ವಂಚಿಸಿದ ಬಗ್ಗೆ ದೂರುಗಳು ಬಂದರೆ ಸಹಕಾರಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನೇರವಾಗಿ ಸೇವೆಯಿಂದಲೇ ವಜಾ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಯಾವ ರೈತರ ಎಷ್ಟು ಸಾಲ ಮನ್ನಾ ಆಗಿದೆ ಎನ್ನುವ ಮಾಹಿತಿಯನ್ನು ಸಹಕಾರ ಸಂಸ್ಥೆಗಳ ಸೂಚನ ಫಲಕಗಳಲ್ಲಿ ಹಾಕುವುದು ಕಡ್ಡಾಯವಾಗಿದೆ. ಇಲ್ಲವಾದಲ್ಲಿ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

      ಹಿಂದಿನ ಸರ್ಕಾರ 8150 ಕೋಟಿ ರೂ ಸಾಲ ಮನ್ನಾ ಮಾಡಿದ್ದು, ಇದರ ಬಾಕಿ ಬಾಬ್ತು ಒಂದು ಸಾವಿರ ಕೋಟಿ ರೂ ಹಣವನ್ನು ಮೂರು ದಿನಗಳ ಹಿಂದೆ ಬಿಡುಗಡೆ ಮಾಡಲಾಗಿದೆ. ಒಂದೆರಡು ದಿನಗಳಲ್ಲಿ ರೈತರ ಕಾಖೆಗಳಿಗೆ ಜಮಾ ಆಗಲಿದೆ ಎಂದು ಬಂಡೆಪ್ಪ ಕಾಶೆಂಪೂರ್ ತಿಳಿಸಿದರು.

      ಹಿಂದಿನ ಸರ್ಕಾರ 8 ಸಾವಿರ ಹಾಗೂ ಈಗಿನ ಮೈತ್ರಿ ಸರ್ಕಾರ 9 ಸಾವಿರ ಕೋಟಿ ರೂ ಸಾಲ ಮನ್ನಾ ಮಾಡುತ್ತಿದ್ದು, ರೈತರಿಗೆ ಒಟ್ಟು 17 ಸಾವಿರ ಕೋಟಿ ರೂ ದೊರೆಯಲಿದೆ. ಇದರ ಜತೆಗೆ ರಾಷ್ಟ್ರೀಯಕೃತ ಬ್ಯಾಂಕ್‍ಗಳಲ್ಲಿ ರೈತರು ಪಡೆದಿರುವ ಸಾಲ ಮನ್ನಾ ಮಾಡುವ ದಿಟ್ಟ ತೀರ್ಮಾನ ತೆಗೆದುಕೊಂಡಿದೆ. ಸರ್ಕಾರ ರೈತರ ಪರ ಕಾರ್ಯನಿರ್ವಹಿಸುತ್ತಿರುವುದಕ್ಕೆ ಇದು ಜ್ವಲಂತ ನಿದರ್ಶನವಾಗಿದೆ ಎಂದು ಹೇಳಿದರು.

      ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯ ದೊರಕಿಸಿಕೊಡಲು ಸರ್ಕಾರ ಬದ್ಧವಾಗಿದ್ದು, ಸಾಲದ ಪ್ರಮಾಣ ಹೆಚ್ಚಿಸುವಂತೆ ನಬಾರ್ಡ್‍ಗೆ ಮನವಿ ಮಾಡಲಾಗಿದೆ. ನಬಾರ್ಡ್ ಇದೀಗ ಶೇ 40 ರಷ್ಟು ರೈತರಿಗೆ ಮರು ಸಾಲ ನೀಡುತ್ತಿದ್ದು, ಈ ಪ್ರಮಾಣವನ್ನು ಶೇ 75ಕ್ಕೆ ಹೆಚ್ಚಿಸುವಂತೆ ಸರ್ಕಾರ ಮನವಿ ಮಾಡಿತ್ತು. ಆದರೆ ಇತ್ತೀಚೆಗೆ ನಡೆದ ಸಭೆಯಲ್ಲಿ ಮರು ಸಾಲ ವಿತರಣೆ ಪ್ರಮಾಣವನ್ನು ಶೇ 60ಕ್ಕೆ ಹೆಚ್ಚಿಸಲು ಒಪ್ಪಿಗೆ ನೀಡಿದೆ ಎಂದು ಹೇಳಿದರು.

      ಈ ಬಾರಿ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಬೆಳೆಗಳಿಗೆ ಈ ಬಾರಿ ಕೇಂದ್ರ ಸರ್ಕಾರ 13 ಬೆಳೆಗಳಿಗೆ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ. ರಾಜ್ಯ ಸರ್ಕಾರ ಕೂಡ ಹೆಚ್ಚಿನ ಪ್ರೋತ್ಸಾಹ ಧನ ನೀಡುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಆಗಸ್ಟ್ ನಿಂದಲೇ ರೈತರನ್ನು ಬೆಂಬಲ ಬೆಲೆ ಯೋಜನೆಗೆ ನೋಂದಣಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದರು.

LEAVE A REPLY

Please enter your comment!
Please enter your name here