ರೈತರ ಹಿತದೃಷ್ಟಿಯೇ ನಮ್ಮ ಪ್ರಮುಖ ನಿಲುವು

0
23

ದಾವಣಗೆರೆ:

      ರೈತರ ಹಿತದೃಷ್ಟಿಯೇ ನಮ್ಮ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಪ್ರಮುಖ ನಿಲುವಾಗಿದೆ ಎಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು.

      ಜಿಲ್ಲೆಯ ಜೀವನಾಡಿ ಭದ್ರಾ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಭದ್ರಾವತಿ ತಾಲೂಕಿನ ಬಿ.ಆರ್.ಪ್ರಾಜೆಕ್ಟ್ ಬಳಿ ಭಾನುವಾರ, ಹರಿಹರ ಶಾಸಕ ಎಸ್.ರಾಮಪ್ಪ ಹಾಗೂ ಮಾಜಿ ಶಾಸಕರುಗಳಾದ ಡಿ.ಜಿ.ಶಾಂತನಗೌಡ, ಹೆಚ್.ಪಿ.ರಾಜೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಭದ್ರಾ ಜಲಾಶಯಕ್ಕೆ ಬಾಗಿನ ಸಮರ್ಪಿಸುವ ಮುನ್ನ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

      ನಮ್ಮ ಸರ್ಕಾರಕ್ಕೆ ರೈತರ ಹಿತದೃಷ್ಟಿಯೇ ಪ್ರಮುಖವಾಗಿರುವುದರಿಂದ ಈಗಾಗಲೇ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಸಿ, ನಾಲೆಗಳಲ್ಲಿ 100 ದಿನಗಳ ಕಾಲ ನಿರಂತವಾಗಿ ನೀರು ಹರಿಸುವಂತೆ ಆದೇಶಿಸಿದ್ದಾರೆ ಎಂದು ಹೇಳಿದರು.

      ಕಳೆದ 2-3 ವರ್ಷಗಳಿಂದ ಮಳೆ ಇಲ್ಲದೇ, ರೈತರು ತೀವ್ರ ಸಂಕಷ್ಠ ಅನುಭವಿಸುವಂತಾಗಿತ್ತು. ಪ್ರಸಕ್ತ ವರ್ಷ ಜುಲೈ ತಿಂಗಳಲ್ಲಿ ಅತೀ ಶೀಘ್ರವಾಗಿ ಭದ್ರಾ ಜಲಾಶಯ ಭರ್ತಿಯಾಗುವ ಮೂಲಕ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ ಎಂದು ಹರ್ಷ ವ್ಯಕ್ತಪಡಿಸಿದ ಅವರು, ಭದ್ರಾ ಜಲಾಶಯಯ ಸಂಪೂರ್ಣ ಭರ್ತಿಯಾಗಿರುವುದರಿಂದ ರೈತರ ಬೆಳೆಗಳಿಗೆ ಅನುಕೂಲ ಆಗುವಂತೆ ಹೆಚ್ಚು ದಿನಗಳ ಕಾಲ ನೀರು ಹರಿಸಲಾಗುವುದು. ಮುಂದಿನ ದಿನಗಳಲ್ಲಿ ಇದೇರೀತಿಯಲ್ಲಿ ಭದ್ರಾ ಜಲಾಶಯ ಭರ್ತಿಯಾಗಿ ಬಾಗಿನ ಅರ್ಪಿಸುವಂತಾಗಲಿ ಎಂದು ಆಶಿಸಿದರು.

      ಹರಿಹರ ಶಾಸಕ ಎಸ್.ರಾಮಪ್ಪ ಮಾತನಾಡಿ, ಭದ್ರಾ ಜಲಾಶಯ ಭರ್ತಿಯಾಗಿರುವುದು ರೈತರಲ್ಲಿ ಸಂತಸವನ್ನುಂಟು ಮಾಡಿದೆ. ಜಲಾಶಯ ಭರ್ತಿಯಾಗಿರುವುದರಿಂದ ಈಗ ನೀರಿನ ಸಮಸ್ಯೆಗೆ ಪರಿಹಾರ ದೊರೆತಂತಾಗಿದೆ. ಅಚ್ಚುಕಟ್ಟು ವ್ಯಾಪ್ತಿಯ ರೈತರು ನಾಲ್ಕು ಬೆಳೆಗಳಿಗೆ ನೀರು ದೊರೆಯದ ಕಾರಣಕ್ಕೆ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಆದ್ದರಿಂದ ಈಗ ನೀರಾವರಿ ಇಲಾಖೆ ಇಂಜಿನಿಯರ್‍ಗಳು ರೈತರ ಎಲ್ಲ ಬೆಳೆಗಳಿಗೆ ಸಮರ್ಪಕವಾಗಿ ನೀರು ತಲುಪಿಸುವ ವ್ಯವಸ್ಥೆ ಮಾಡಬೇಕೆಂದು ತಾಕೀತು ಮಾಡಿದರು.

      ಭದ್ರಾ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ನಯನಮನೋಹರ ದೃಶ್ಯ ನೋಡಲಿಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರಲಿದ್ದಾರೆ. ಆದ್ದರಿಂದ ಅವರಿಗೆ ತೊಂದರೆಯಾಗದಂತೆ ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು.

      ಕಾರ್ಯಕ್ರಮದ ನಂತರದಲ್ಲಿ ಇತಿಹಾಸದಲ್ಲೇ ಅತೀ ಶೀಘ್ರವಾಗಿ ಭರ್ತಿಯಾಗುವ ಮೂಲಕ ಮೈದುಂಬಿ ಹರಿದು ಮನಮೋಹಕವಾಗಿ ಕಂಗೊಳಿಸುತ್ತಿರುವ ಜಿಲ್ಲೆಯ ಜನರ ಜೀವನಾಡಿಯಾದ ಭದ್ರಾ ಜಲಾಶಯಕ್ಕೆ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಹರಿಹರ ಶಾಸಕ ಎಸ್.ರಾಮಪ್ಪ, ಭದ್ರಾವತಿ ಶಾಸಕ ಸಂಗಮೇಶ್, ಮಾಜಿ ಶಾಸಕರಾದ ಡಿ.ಜಿ.ಶಾಂತನಗೌಡ, ಹೆಚ್.ಪಿ.ರಾಜೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮತ್ತಿತರರು ಭದ್ರಾ ಜಲಾಶಯಕ್ಕೆ ಬಾಗಿನ ಸಮರ್ಪಿಸಿದರು.

      ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಶ್ರೀಮತಿ ಶೋಭಾ ಪಲ್ಲಾಘಟ್ಟೆ, ಉಪ ಮೇಯರ್ ಚಮನ್‍ಸಾಬ್, ಎಪಿಎಂಸಿ ಅಧ್ಯಕ್ಷ ಮುದೇಗೌಡ್ರ ಗಿರೀಶ್, ಉಪಾಧ್ಯಕ್ಷ ಹಾಲಪ್ಪ, ಜಿ.ಪಂ. ಸದಸ್ಯ ಕೆ.ಎಸ್.ಬಸವಂತಪ್ಪ, ಉದ್ಯಮಿಗಳಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಎಸ್.ಕೆ.ವೀರಣ್ಣ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here