ರೈಲು ಹೆಚ್ಚಳಕ್ಕೆ ಕೇಂದ್ರ ಸಚಿವರೊಂದಿಗೆ ಚರ್ಚೆ

0
32

ತುಮಕೂರು:

ುಮಕೂರು ನಗರ, ಜಿಲ್ಲೆಯ ಅಭಿವೃದ್ಧಿಯಲ್ಲಿ ರೈಲ್ವೇ ಪ್ರಮುಖ ಪಾತ್ರ ವಹಿಸಲಿದ್ದು, ರೈಲ್ವೇ ಮಾರ್ಗ ಮತ್ತು ರೈಲುಗಳ ಹೆಚ್ಚಳದ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ತಿಳಿಸಿದರು.ತುಮಕೂರು-ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ ವತಿಯಿಂದ ಭಾನುವಾರ ತುಮಕೂರು ನಗರ ರೈಲು ನಿಲ್ದಾಣ ಆವರಣದಲ್ಲಿ ನಡೆದ ಪ್ರತಿಭಾಪುರಸ್ಕಾರ, ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,

ತುಮಕೂರು ಜಿಲ್ಲೆಯಲ್ಲಿ ಆಗಬೇಕಿರುವ ರೈಲ್ವೇ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳನ್ನು ಕೇಂದ್ರ ಸಚಿವರೊಂದಿಗೆ ಚರ್ಚಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದರು.ಸುಮಾರು ಮೂರು ದಶಕಗಳ ಹಿಂದಿನಿಂದಲೂ ರೈಲ್ವೆ ಅಭಿವೃದ್ಧಿ ಬಗ್ಗೆ ಸತತ ಪ್ರಯತ್ನ ನಡೆಯುತ್ತಿದ್ದು, ಮಾಜಿ ಸಂಸದ ಜಿ.ಎಸ್.ಬಸವರಾಜು, ಹಾಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರಾದಿಯಾಗಿ ಎಲ್ಲರೂ ಶ್ರಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ರೈಲ್ವೇ ಪ್ರಯಾಣಿಕರ ವೇದಿಕೆಯೂ ಮಹತ್ವದ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು.ತುಮಕೂರು ನಗರ ಸಮಗ್ರ ಅಭಿವೃದ್ಧಿಯ ಬಗ್ಗೆ ತಾವು ಹಾಕಿಕೊಂಡಿರುವ ನೀಲಿ ನಕ್ಷೆಯನ್ನು ಪ್ರಸ್ತಾಪಿಸಿದ ಶಾಸಕ ಜ್ಯೋತಿ ಗಣೇಶ್, ಈ ನಿಟ್ಟಿನಲ್ಲಿ ವಿಶೇಷ ಘಟಕ ತೆರೆಯಲಾಗಿದ್ದು ಇಲ್ಲಿ ನಗರದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲ ವಲಯಗಳ ಬಗ್ಗೆಯೂ ಚರ್ಚಿಸಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ.

ನಗರ ಅಭಿವೃದ್ಧಿಯಲ್ಲಿ ನಾಗರಿಕರ ಭಾಗವಹಿಸುವಿಕೆಗೂ ಅವಕಾಶ ಕಲ್ಪಿಸಿದ್ದು, ಟೌನ್ ಹಾಲ್‍ನಲ್ಲಿರುವ ತಮ್ಮ ಕಚೇರಿಗೆ ಬಂದು ಅಭಿವೃದ್ಧಿ ಬಗ್ಗೆ ತಮಗಿರುವ ಕಲ್ಪನೆಗಳ ಬಗ್ಗೆ ಮಾಹಿತಿ ನೀಡಬಹುದು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ವೇದಿಕೆ ಪ್ರಧಾನ ಕಾರ್ಯದರ್ಶಿ ಕರಣಂ ರಮೇಶ್, ರೈಲು ಸೌಕರ್ಯ, ಸಂಪರ್ಕ, ಸೌಲಭ್ಯಗಳನ್ನು ಪ್ರಯಾಣಿಕರಿಗೆ ಒದಗಿಸುವ ನಿಟ್ಟಿನಲ್ಲಿ ವೇದಿಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ. ರೈಲ್ವೇ ಇಲಾಖೆಯಲ್ಲಿ ಎಲ್ಲವೂ ತಕ್ಷಣಕ್ಕೆ ಆಗುವುದಿಲ್ಲ. ನಿರಂತರ ಪ್ರಯತ್ನ ಹಾಗೂ ಸತತ ಒತ್ತಡಗಳಿಂದ ಪ್ರಯಾಣಿಕರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡುವ ಕೆಲಸ ಮಾಡುತ್ತಿದೆ. ಈ ದಿಸೆಯಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜು ಹಾಗೂ ಸಂಸದ ಎಸ್.ಪಿ. ಮುದ್ದಹನುಮೇಗೌಡ ಅವರ ಉತ್ತೇಜನ, ಸಹಾಯವನ್ನು ಎಂದೂ ಮರೆಯಲಾಗದು ಎಂದರು.ವೇದಿಕೆಯ ವತಿಯಿಂದ ಸಾಧ್ಯವಾಗಿರುವ ಕಾರ್ಯಗಳನ್ನು ತಿಳಿಸಿದ ಅವರು, ವೇದಿಕೆಯ ಕಾರ್ಯಗಳಿಗೆ ಎಲ್ಲ ಪ್ರಯಾಣಿಕರ ಸಲಹೆ, ಸಹಕಾರ ಹಾಗೂ ಮಾರ್ಗದರ್ಶನದ ಅಗತ್ಯವಿದ್ದು ಎಲ್ಲರ ಅಭಿಪ್ರಾಯಗಳಿಗೆ ಮುಕ್ತ ಅವಕಾಶವಿದೆ ಎಂದರು.ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಸಹಯೋಗ ನೀಡಿದ್ದ ಸಿದ್ದಗಂಗಾ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಪರಮೇಶ್ವರ್ ಮಾತನಾಡಿ, ಜನಸಾಮಾನ್ಯರಿಗೆ ಅಗತ್ಯವಾದ ಉತ್ಕøಷ್ಟ ಗುಣಮಟ್ಟದ ಚಿಕಿತ್ಸೆ ನೀಡಲು ಸಿದ್ದಗಂಗಾ ಆಸ್ಪತ್ರೆ ಕಂಕಣಬದ್ಧವಾಗಿದೆ. ರೈಲ್ವೇ ಪ್ರಯಾಣಿಕರ ವೇದಿಕೆಯ ಸಮಾಜಮುಖಿ ಕಾರ್ಯಗಳು ಶ್ಲಾಘನೀಯ ಎಂದರು.ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಸಹಯೋಗ ನೀಡಿದ್ದ ಶ್ರೀ ಸಾಯಿ ನೇತ್ರಾಲಯ ಅಂಡ್ ಡೆಂಟಲ್ ಕೇರ್‍ನ ಹಿರಿಯ ನೇತ್ರ ತಜ್ಞ ಡಾ. ಸುರೇಶ್ ಅವರು ಕಳೆದ ನಾಲ್ಕು ವರ್ಷಗಳಿಂದಲೂ ವೇದಿಕೆಯೊಂದಿಗೆ

ಸಂಪರ್ಕ ಹೊಂದಿದ್ದು, ಉಚಿತ ನೇತ್ರ ತಪಾಸಣೆ ನಡೆಸುತ್ತಿರುವುದು ಖುಷಿ ತಂದಿದೆ ಎಂದರು.ತುಮಕೂರು ರೈಲ್ವೇ ನಿಲ್ದಾಣದ ವ್ಯವಸ್ಥಾಪಕ ರಮೇಶ್ ಬಾಬು, ಆರ್‍ಪಿಎಫ್ ಸಬ್‍ಇನ್ಸ್‍ಪೆಕ್ಟರ್ ಕುಬೇರಪ್ಪ ಅವರು ಮಾತನಾಡಿ ರೈಲ್ವೇ ಇಲಾಖೆಯ ಸುರಕ್ಷಾ ಕಾರ್ಯಗಳಿಗೆ ನಾಗರಿಕರ ಸಹಕಾರ ಅಗತ್ಯವಿದೆ ಎಂದರು. ಜೆಸಿಐ ತುಮಕೂರು ಮೆಟ್ರೋ ಅಧ್ಯಕ್ಷೆ ಭಾಗ್ಯಲಕ್ಷ್ಮೀ ನಾಗರಾಜ್ ಅವರು ಮಾತನಾಡಿ, ವೇದಿಕೆಯ ಸಮಾಜಮುಖಿ ಕಾರ್ಯಗಳು ಶ್ಲಾಘನೀಯ ಎಂದರು. ವೇದಿಕೆಯ ಹಿರಿಯ ಸದಸ್ಯರಾದ ರಘೋತ್ತಮರಾವ್ ಅವರು ವೇದಿಕೆಯ ಬೇಡಿಕೆಗಳನ್ನು ಮಂಡಿಸಿದರು.ಕಳೆದ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಅಧಿಕ ಅಂಕ ಪಡೆದ ರೈಲ್ವೇ ಪ್ರಯಾಣಿಕರ ಮಕ್ಕಳನ್ನು, ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಶ್ಲಾಘಿಸಲಾಯಿತು. ಉದ್ಯೋಗ ನಿಮಿತ್ತ ನಿರಂತರ 25 ವರ್ಷ ರೈಲಿನಲ್ಲಿ ಪ್ರಯಾಣಿಸಿ ನಿವೃತ್ತರಾದವರನ್ನು ಅಭಿನಂದಿಸಲಾಯಿತು.ವೇದಿಕೆ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಸಿ.ನಾಗರಾಜ್ ಸ್ವಾಗತಿಸಿದರು. ಉಪಾಧ್ಯಕ್ಷ ಕುಮಾರಸ್ವಾಮಿ, ನಿರ್ದೇಶಕ ರಘು, ಸಹ ಕಾರ್ಯದರ್ಶಿ ರಾಜಶೇಖರ್ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಸಹ ಕಾರ್ಯದರ್ಶಿ ಸಗರ ಚಕ್ರವರ್ತಿ ಕಾರ್ಯಕ್ರಮ ನಿರೂಪಿಸಿ, ಸಹ ಕಾರ್ಯದರ್ಶಿ ರಾಜಶೇಖರ್ ವಂದಿಸಿದರು.

LEAVE A REPLY

Please enter your comment!
Please enter your name here