ಲಾಲು ಪುತ್ರನ ಮದುವೆಗೆ ಜನಸಾಗರ: ಊಟ, ಉಡುಗೊರೆ ಹೊತ್ತೊಯ್ದ ‘ಕಾರ್ಯಕರ್ತರು’

0
10

ಪಾಟ್ನಾ:

ಬಿಹಾರಿ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ವಿವಾಹದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು, ಊಟ ಮತ್ತು ಅಪಾರ ಪ್ರಮಾಣದ ಉಡುಗೊರೆ ಮತ್ತು ಮಣ್ಣಿನ ಪಾತ್ರೆಗಳನ್ನು ಹೊತ್ತೊಯ್ದಿದ್ದಾರೆ ಎನ್ನಲಾಗಿದೆ.

ಶನಿವಾರ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಅದ್ಧೂರಿ ವಿವಾಹ ಕಾರ್ಯಕ್ರಮಕ್ಕೆ ಬಿಹಾರದ ಖ್ಯಾತನಾಮ ಗಣ್ಯರು ಸೇರಿದಂತೆ ಲಕ್ಷಾಂತರ ಕಾರ್ಯಕರ್ತರು ಆಗಮಿಸಿದ್ದರು. ವಿವಾಹಕ್ಕೆ ಅಪಾರ ಪ್ರಮಾಣದ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತಾದರೂ ನಿರೀಕ್ಷೆಗೂ ಮೀರಿ ಜನ ಆಗಮಿಸಿದ್ದು, ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು. ಏತನ್ಮಧ್ಯೆ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ಮುರಿದು ಜನ ಒಳ ಪ್ರವೇಶ ಮಾಡಿದ್ದು, ಈ ವೇಳೆ ಊಟ ಮತ್ತು ದುಬಾರಿ ಮಣ್ಣಿನ ಪಾತ್ರೆಗಳನ್ನು ಹೊತ್ತೊಯ್ದಿದ್ದಾರೆ ಎನ್ನಲಾಗಿದೆ.

ಬಂದವರೆಲ್ಲರೂ ಆರ್ ಜೆಡಿ ಕಾರ್ಯಕರ್ತರ ಸೋಗಿನಲ್ಲಿ ಬಂದು, ಈ ಕೃತ್ಯವೆಸಗಿದ್ದಾರೆ. ದುಷ್ಕರ್ಮಿಗಳನ್ನು ಕಾರ್ಯಕರ್ತರು ಹಿಂಬಾಲಿಸಿದರಾದರೂ ಅವರು ಪರಾರಿಯಾಗಿದ್ದಾರೆ. ಇದೇ ಸಂದರ್ಭದಲ್ಲೇ ವಿವಾಹ ಕಾರ್ಯಕ್ರಮದ ಸುದ್ದಿಗಾಗಿ ಬಂದಿದ್ದ ಪತ್ರಕರ್ತರ ಮೇಲೂ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಅದ್ದೂರಿಯಾಗಿ ನಡೆದ ವಿವಾಹ:

ಇನ್ನು ಆರ್ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾದವ್ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ವಿವಾಹ ಶನಿವಾರ ಐಶ್ವರ್ಯಾ ರಾಯ್ ಜತೆ ಶನಿವಾರ ವಿಶ್ವ ವಿದ್ಯಾಲಯದ ಆವರಣದಲ್ಲಿ ಅದ್ದೂರಿಯಾಗಿ ಜರುಗಿತು. ಬಹುಕೋಟಿ ಮೇವು ಹಗರಣದಲ್ಲಿ ಜೈಲು ಸೇರಿದ್ದ ಲಾಲು ಪ್ರಸಾದ್ಗೆ ಮಗನ ಮದುವೆಗೋಸ್ಕರ ಜಾರ್ಖಂಡ್ ಹೈಕೋರ್ಟ್ ಗುರುವಾರ ಮೂರು ದಿನಗಳ ಪೆರೋಲ್ ನೀಡಲಾಗಿತ್ತು. ಹಾಗೇ ಶುಕ್ರವಾರ ವೈದ್ಯಕೀಯ ಚಿಕಿತ್ಸಾ ಕಾರಣಗಳಿಗಾಗಿ 6 ವಾರಗಳ ಜಾಮೀನು ಸಿಕ್ಕಿತ್ತು. ಮದುವೆಗೆ ದೇಶದ ಬಹುತೇಕ ರಾಜಕಾರಣಿಗಳನ್ನುಲಾಲು ಆಹ್ವಾನಿಸಿದ್ದರು.

ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್, ಎನ್ಸಿಪಿ ಮುಖಂಡ ಪ್ರಫುಲ್ ಪಟೇಲ್, ಕೇಂದ್ರ ಸಚಿವ ರಾಮ್ ವಿಲಾಸ್ ಪಸ್ವನ್, ಪಾಟ್ನಾ ಸಾಹಿಬ್ ಸಂಸದ ಶತ್ರುಘ್ನ ಸಿನ್ಹಾ, ಶರದ್ ಯಾದವ್ ಮತ್ತಿತರರು ದಂಪತಿಗೆ ಶುಭ ಹಾರೈಸಿದರು. ವಿವಾಹ ಮಹೋತ್ಸವಕ್ಕೆ ಆಗಮಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ಕುಮಾರ್ಗೆ ಅದ್ದೂರಿ ಸ್ವಾಗತ ಕೋರಲಾಯಿತು. ಲಾಲೂ ಪ್ರಸಾದ್ ಯಾದವ್ ಅವರ ಕಿರಿಯ ಪುತ್ರ ತೇಜಸ್ವಿ ಯಾದವ್ ಹಾಗೂ ಮಗಳು ಮಿಸಾ ಭಾರತಿ ನಿತೀಶ್ ಕುಮಾರ್ ಕುಶಲೋಪರಿ ವಿಚಾರಿಸಿದರು. ಮದುವೆ ಸಂಭ್ರಮದಲ್ಲಿ ಸುಮಾರು 7000 ಜನರು ಭಾಗವಹಿದ್ದರು. 50ಕ್ಕೂ ಹೆಚ್ಚು ಆನೆ, ಕುದುರೆಗಳೊಂದಿಗಿನ ಮೆರವಣಿಗೆ ಮದುವೆಗೆ ಮೆರುಗು ನೀಡಿತ್ತು.

LEAVE A REPLY

Please enter your comment!
Please enter your name here