ಲೈಂಗಿಕ ದೌರ್ಜನ್ಯ ತಡೆಗೆ ಕಾನೂನು ಬಿಗಿಯಾಗಬೇಕು

0
22

ಚಿತ್ರದುರ್ಗ:
            ಅಪ್ರಾಪ್ತ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗುವವರನ್ನು ಜೈಲಿಗೆ ಕಳಿಸುವ ಜೊತೆಗೆ ಫೋಕ್ಸೋ ಕಾಯಿದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜನಪರ ಹೋರಾಟಗಾರ ನರೇನಹಳ್ಳಿ ಅರುಣ್‍ಕುಮಾರ್ ಆಗ್ರಹಿಸಿದರು.
ಲೋಕಾಯುಕ್ತ ಕಚೇರಿ ಹಿಂಭಾಗ ಬಸವೇಶ್ವರ ವಿದ್ಯಾಸಂಸ್ಥೆ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಹೊಳಲ್ಕೆರೆ ತಾಲೂಕು ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಿಳೆಯರಿಗೆ ಕಾನೂನು ಮತ್ತು ಜಾಗೃತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
            ಹೆಣ್ಣಿನ ಮೇಲೆ ನಿರಂತರವಾಗಿ ದೌರ್ಜನ್ಯ, ದಬ್ಬಾಳಿಕೆ, ಹಿಂಸೆ, ಕ್ರೌರ್ಯ ನಡೆಯುತ್ತಿರುವುದನ್ನು ನೋಡಿಕೊಂಡು ಸುಮ್ಮನಿರಬಾರದು. ಪ್ರಶ್ನಿಸುವ ಎದೆಗಾರಿಕೆ ಬೆಳೆಸಿಕೊಳ್ಳಬೇಕು. ಇಲ್ಲಿಯವರೆಗೂ ಅಡುಗೆ ಮನೆಗೆ ಮೀಸಲಾಗಿದ್ದ ನೀವುಗಳು ಈಗ ಪೊಲೀಸ್ ಠಾಣೆಗೆ ಹೋಗಿ ಯಾವ ಕೇಸುಗಳು ಯಾವ ಹಂತದಲ್ಲಿವೆ ಎಂಬುದನ್ನು ಪ್ರಶ್ನಿಸುವ ಎದೆಗಾರಿಕೆ ಬೆಳೆಸಿಕೊಳ್ಳಬೇಕು ಎಂದು ಜಾಗೃತಿಗೊಳಿಸಿದರು.
            ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಎಷ್ಟು ಕೇಸು ದಾಖಲಾಗಿದೆ. ಮಕ್ಕಳು ಹಾಗೂ ಯುವತಿಯರು ಕಾಣೆಯಾಗಿರುವ ಬಗ್ಗೆ ದೂರುಗಳು ದಿನನಿತ್ಯವೂ ದಾಖಲಾಗುತ್ತಿರುತ್ತವೆ. ಆದರೆ ನಿಜವಾಗಿಯೂ ಅವರು ಎಲ್ಲಿದ್ದಾರೆ ಯಾರು ಅಪಹರಿಸಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ರಕ್ಷಿಸುವ ಕೆಲಸವನ್ನು ಎಷ್ಟರ ಮಟ್ಟಿಗೆ ಮಾಡುತ್ತಿದ್ದಾರೆ ಎಂಬುದನ್ನು ಪೊಲೀಸ್ ಠಾಣೆಯಲ್ಲಿ ವಿಚಾರಿಸುವಷ್ಟರ ಮಟ್ಟಿಗೆ ನೀವುಗಳು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
           ಸಂಸ್ಕತಿ, ಸಂಸ್ಕಾರವಿರುವ ಭಾರತದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರಗಳು ನಡೆಯುತ್ತಿರುವುದು ನಾಗರೀಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಯಾರೋ ಯಾರ ಮೇಲೆ ಹಲ್ಲೆ ಮಾಡುತ್ತಿದ್ದರೆ ನಮಗೆ ಸಂಬಂಧವಿಲ್ಲ ಎನ್ನುವಂತೆ ಇರಬಾರದು. ಅದಕ್ಕೆ ಬದಲಾಗಿ ಪ್ರಶ್ನಿಸಿ ರಕ್ಷಿಸುವ ಗುಣ ಬೆಳೆಸಿಕೊಳ್ಳಬೇಕು. ಹೆಣ್ಣು-ಗಂಡಿಗೆ ಎಲ್ಲಿ ಸಮಾನ ಸ್ಥಾನಮಾನ ಗೌರವ ಸಿಗುತ್ತದೋ ಅಲ್ಲಿ ಮಾತ್ರ ಸಮ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.
            ಹನ್ನೆರಡನೆ ಶತಮಾನದಲ್ಲಿ ಕ್ರಾಂತಿಕಾರಿ ಬಸವಣ್ಣನವರು ಅನುಭವ ಮಂಟಪದ ಮೂಲಕ ಮಹಿಳೆಗೆ ಸಮಾನತೆ ನೀಡಿದ್ದಾರೆ. ಅವರ ಆಚರಣೆ ತತ್ವ ಸಿದ್ದಾಂತಗಳು ನಿಜಜೀವನದಲ್ಲಿ ಪಾಲನೆಯಾಗಬೇಕು. ಆಗ ಸ್ತೀಸಮಾನತೆ ಕಂಡುಕೊಳ್ಳಬಹುದು ಎಂದರು.
ಶಿವಗಂಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ನೂತನ ಅಧ್ಯಕ್ಷ ದಗ್ಗೆಶಿವಪ್ರಕಾಶ್ ಮಾತನಾಡಿ ಗ್ರಾಮೀಣ ಭಾಗದ ಮಹಿಳೆಯರು ಕಡ್ಡಾಯವಾಗಿ ಗ್ರಾಮೀಣ ಸಹಕಾರ ಬ್ಯಾಂಕುಗಳಲ್ಲಿ ತಮ್ಮ ವಹಿವಾಟು ನಡೆಸಿದರೆ ಕೃಷಿ ಬ್ಯಾಂಕುಗಳು ಅಭಿವೃದ್ದಿಯಾಗುವುದರೊಂದಿಗೆ ಶೇ.4 ರ ಬಡ್ಡಿ ದರದಲ್ಲಿ ಮಹಿಳೆಯರು ಮತ್ತು ರೈತರಿಗೆ ಸಾಲ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ವಯೋವೃದ್ದರು ಅನಾಥರು, ಅಬಲೆಯರು, ಕಡ್ಡಾಯವಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಗುರುತಿನ ಚೀಟಿ ಪಡೆದುಕೊಂಡರೆ ಸರ್ಕಾರಿ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಶೀಘ್ರದಲ್ಲಿಯೇ ಬ್ರಹ್ಮಪುರ ಮತ್ತು ಸುತ್ತಮುತ್ತಲ ಗ್ರಾಮಗಳಸ ಎಲ್ಲಾ ವಯೋವೃದ್ದರು, ಹಿರಿಯ ನಾಗರೀಕರಿಗೆ ಗುರುತಿನ ಚೀಟಿ ಕೊಡಿಸುವಂತಹ ಕೆಲಸವನ್ನು ಕೈಗೆತ್ತಿಕೊಳ್ಳಲಾಗುತ್ತದೆಂದು ಭರವಸೆ ನೀಡಿದರು.
              ಬಸವೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಿ.ಕೆ.ಶಂಕರಪ್ಪ ಮಾತನಾಡಿ ಮಕ್ಕಳ ಸಹಾಯವಾಣಿ 1098 ನ್ನು ಸಾರ್ವಜನಿಕರು ಮತ್ತು ಮಹಿಳೆಯರು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಬಾಲ ಕಾರ್ಮಿಕರು, ಶಾಲೆಯಿಂದ ಹೊರಗುಳಿದ ಮಕ್ಕಳು ಮತ್ತು ಬಾಲ್ಯವಿವಾಹಗಳನ್ನು ತಡೆಗಟ್ಟಿ ರಕ್ಷಣೆ ನೀಡಲು 1098 ಸಂಖ್ಯೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಜಾಗೃತಿ ಕಾರ್ಯಾಗಾರದಲ್ಲಿ ಬಸವೇಶ್ವರ ವಿದ್ಯಾಸಂಸ್ಥೆಯ ಮಂಜುನಾಥ್ ನಾಡರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯ ತಾಲೂಕು ಸಂಯೋಜಕಿ ದ್ಯಾಮಕ್ಕ, ಚೈಲ್ಡ್‍ಲೈನ್ ಸಂಯೋಜಕಿ ಲಕ್ಷ್ಮಿ ಇನ್ನು ಮುಂತಾದವರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.
ರೂ.64 ಕೋಟಿ ಖನಿಜ ಪ್ರತಿಷ್ಠಾನ ನಿಧಿ ಕ್ರಿಯಾ ಯೋಜನೆ ಸಿದ್ದತೆಗೆ ಸೂಚನೆ

LEAVE A REPLY

Please enter your comment!
Please enter your name here