ಲೈಂಗಿಕ ದೌರ್ಜನ್ಯ ವಿರುದ್ಧದ ಸೈಕಲ್ ಜಾಥಾ ಆಗಮನ

 -  -  1


ದಾವಣಗೆರೆ:

ದೇಶದಲ್ಲಿ ನಡೆಯುತ್ತಿರುವ ಶಿಶು ಪೀಡನೆ ಹಾಗೂ ಲೈಂಗಿಕ ದೌರ್ಜನ್ಯ ವಿರುದ್ಧ ಪ್ರಚಾರ ಅಭಿಯಾನ ನಡೆಸಲು ಯುವಕರು ಕೈಗೊಂಡಿರುವ ಸೈಕಲ್ ಜಾಥಾವು ಗುರುವಾರ ಸಂಜೆ ನಗರದ ಜಯದೇವ ವೃತ್ತಕ್ಕೆ ಆಗಮಿಸಿತು.

ಈಗಾಗಲೇ ಮೇ 21 ರಿಂದ ಬೆಂಗಳೂರಿನಿಂದ ಮಹಷಿ ಸಂಕೇತ್ ಹಾಗೂ ಸುಖಾಂತ್ ಪಾಣಿಗ್ರಹಿ ಅವರ ನೇತೃತ್ವದಲ್ಲಿ ಸೈಕಲ್ ಜಾಥಾ ಹೊರಟಿರುವ 8 ಜನ ಯುವಕ ತಂಡವು, ಮಹಿಳೆಯರ ವಿರುದ್ಧ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಹಾಗೂ ಶಿಶು ಪೀಡನೆಯ ಬಗ್ಗೆ ವಿವರವಾದ ಕರಪತ್ರಗಳನ್ನು ಹೊತ್ತುಕೊಂಡು, ಪ್ರತಿದಿನ ಏರೇಳು ಗಂಟೆ ಸೈಕಲ್ ಸವಾರಿ ಮಾಡಿಕೊಂಡು ಅವರ ಪಯಣದ ಹಾದಿಯಲ್ಲಿ ಬರುವ ಪ್ರತಿ ಊರುಗಳಲ್ಲಿ ಕರಪತ್ರ ಹಂಚುವ ಮೂಲಕ ಜನ ಜಾಗೃತಿ ಮೂಡಿಸುತ್ತಿದ್ದು, ಈ ತಂಡ ನಗರದ ಜಯದೇವ ವೃತ್ತಕ್ಕೆ ಆಗಮಿಸಿ ಇಲ್ಲೂ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸೈಕಲ್ ಜಾಥಾ ರೂವಾರಿ ಮಹರ್ಷಿ ಸಂಕೇತ್, ಆಸಿಫಾ ಸೇರಿದಂತೆ ಹಲವಾರು ಬಾಲಕಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಹತ್ಯೆಗಳು ಈ ಜಾಥಾಕ್ಕೆ ಮೂಲ ಪ್ರೇರಣೆ ನೀಡಿದವು. ಶಾಲೆಗಳಲ್ಲೂ ಸಹ ಅನೇಕ ವಿದ್ಯಾರ್ಥಿನಿಯರು ಶಿಶು ಪೀಡನೆಗೆ ಒಳಗಾಗುತ್ತಿದ್ದಾರೆ. ಇದನ್ನು ಖಂಡಿಸಿಯೇ ಈ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಮೂಲತಃ ನಾನು ಚಿತ್ರರಂಗದಲ್ಲಿ ಕಲಾ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಚಿತ್ರಕಲೆಯಲ್ಲಿ ಅತೀವ ಆಸಕ್ತಿಯಿದೆ. ಅದಕ್ಕಾಗಿಯೇ ಬೆಂಗಳೂರಿನಲ್ಲಿ ಲೈಂಗಿಕ ದೌರ್ಜನ್ಯದ ಬಗ್ಗೆ ಚಿತ್ರಕಲೆ ಕಾರ್ಯಕ್ರಮ ಸಹ ಆಯೋಜಿಸಲಾಗಿತ್ತು. ಇಷ್ಟಕ್ಕೆ ಈ ಶಿಶು ಪೀಡನೆ ಹಾಗೂ ಮಹಿಳಾ ದೌರ್ಜನ್ಯದಂಥಹ ಹೀನ ಕೃತ್ಯಗಳು ನಿಲ್ಲುವುದಿಲ್ಲ. ಆದ್ದರಿಂದ ಇವುಗಳ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ತಮ್ಮ ಸ್ನೇಹಿತ ಸುಖಾಂತ್ ಪಾಣಿಗ್ರಹಿ ಜತೆ ಸೇರಿ ಸೈಕಲ್ ಜಾಥಾ ನಡೆಸುತ್ತಿದ್ದು, ತಮ್ಮೊಂದಿಗೆ ಇತರೆ ವಾಹನಗಳಲ್ಲಿ 8 ಜನರು ಸಹ ಭಾಗಿಯಾಗಿದ್ದಾರೆ ಎಂದರು.
ಭೇಟಿ ನೀಡಿದ ಕಡೆಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ. ‘ನನ್ ಹೀ ಕಲೀ ಕೋ ಕುಚಲ್ ನೇ ವಾಲೋ…. ಮಾಸೂಮ್ ಕೋ ಜುಲ್ಮ್ ಡಾಲ್ ನೇ ವಾಲೋ….’ ಅಂದರೆ ಅರಳುತ್ತಿರುವ ಮೊಗ್ಗುಗಳನ್ನು ಚಿವುಟಬೇಡಿರಿ ಎಂಬ ಅರ್ಥ ಗರ್ಭಿತವಾದ ಸಂಗೀತವನ್ನು ಮುಂಬೈ ತಲುಪಿದ ಮೇಲೆ ಲೋರ್ಕಾಪಣೆ ಮಾಡುತ್ತೇವೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್.ಅರುಣಕುಮಾರ್, ನೆರಳು ಬೀಡಿ ಕಾರ್ಮಿಕರ ಯೂನಿಯನ್‍ನ ಎಂ.ಕರಿಬಸಪ್ಪ, ಜಬೀನಾ ಖಾನಂ, ರೈತ ಮುಖಂಡ ಅರುಣಕುಮಾರ್ ಕುರುಡಿ ಮತ್ತಿತರರು ಹಾಜರಿದ್ದರು.

comments icon 0 comments
0 notes
3 views
bookmark icon

Write a comment...

Your email address will not be published. Required fields are marked *