ವಕೀಲರಿಗೆ ಬಿಗಿ ಹಚ್ಚಲ್ಲ, ಸಕ್ರಿಯಗೊಳಿಸ್ತೀವಿ

0
22

 ದಾವಣಗೆರೆ:

      ವಕೀಲರು ತಿಳಿದಿರುವಂತೆ ನಾವು ನಿಮ್ಮನ್ನು ಬಿಗಿ ಹಚ್ಚಲ್ಲ, ಸಕ್ರಿಯ(ಆಕ್ಟಿವೇಟ್)ಗೊಳಿಸುತ್ತೇವಷ್ಟೆ ಎಂದು ನೂತನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಂಬಾದಾಸ್ ಕುಲ್ಕರ್ಣಿ ತಿಳಿಸಿದರು.

      ನಗರದ ಹೊಸ ನ್ಯಾಯಾಲಯದ ಸಂಕೀರ್ಣದಲ್ಲಿರುವ ವಕೀಲರ ಭವನದಲ್ಲಿ ಶುಕ್ರವಾರ ಜಿಲ್ಲಾ ವಕೀಲರ ಸಂಘದಿಂದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿ ಬೇರೆಡೆಗೆ ವರ್ಗಾವಣೆಯಾಗಿರುವ ಹೆಚ್.ಎಸ್.ಹೊಸಗೌಡ್ರು ಹಾಗೂ 1ನೇ ಹೆಚ್ಚುವರಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ, ಕಾರವಾರ ಜಿಲ್ಲೆಯ ಜಿಲ್ಲಾ ನ್ಯಾಯಾಧೀಶರಾಗಿ ಬಡ್ತಿ ಪಡೆದು ವರ್ಗಾವಣೆಯಾಗಿರುವ ಶಿವಶಂಕರೇಗೌಡ ಇವರುಗಳಿಗಾಗಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

      ಕೆಲ ಬಾರೀ ನ್ಯಾಯದಾನ ಮಡುವ ಸಂದರ್ಭದಲ್ಲಿ ವಕೀಲರನ್ನು ಬಿಗಿ ಹಚ್ಚಲೇಬೇಕಾಗುತ್ತದೆ. ಏಕೆಂದರೆ, ಕಕ್ಷಿದಾರರು ತಮಗೆ ನ್ಯಾಯಸಿಗತ್ತದೆ ಎಂಬುದಾಗಿ ನಂಬಿ ನಿಮ್ಮ ಹಾಗೂ ನಮ್ಮ ಬಳಿ ಬಂದಿರುತ್ತಾರೆ. ಆದ್ದರಿಂದ ನಿಮ್ಮನ್ನ ಸಕ್ರಿಯಗೊಳಿಸಿದರೆ, ಉತ್ತಮವಾಗಿ ನ್ಯಾಯದಾನ ಮಾಡಬಹುದು ಎಂಬ ಕಾರಣಕ್ಕಷ್ಟೆ ಬಿಗಿ ಮಾಡುತ್ತೇವೆ ಎಂದರು.

      ಬೇಂಚ್ (ನ್ಯಾಯಾಧೀಶರು) ಮತ್ತು ಬಾರ್ (ವಕೀಲರ) ಮಧ್ಯೆ ಸಮನ್ವಯ ಇದ್ದರೆ, ಸಮರ್ಪಕವಾಗಿ ಜವಾಬ್ದಾರಿಯನ್ನು ನಿರ್ವಹಿಸಬಹುದಾಗಿದೆ. ಹಿಂದನ ನ್ಯಾಯಾಧೀಶರಿಗೆ ವಕೀಲರು ಸಹಕಾರ ನೀಡಿರುವಂತೆ ನನಗೂ ಸಹಕಾರ ನೀಡಿ, ಒಬ್ಬ ನ್ಯಾಯಾಧೀಶ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ, ಎಲ್ಲರ ಹೃದಯದಲ್ಲಿ ಅವರ ಹೆಸರು ಚಿರಸ್ಥಾಯುವಾಗಿ ಉಳಿಯಲಿದೆ ಎಂದು ಹೇಳಿದರು.

      ಆರು ತಿಂಗಳು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿ, ಬೆಂಗಳೂರಿಗೆ ವರ್ಗಾವಣೆಯಾಗಿರುವ ಹೆಚ್.ಎಸ್.ಹೊಸಗೌಡ್ರು ಸನ್ಮಾನ ಸ್ವೀಕರಿಸಿ ಮಾತನಾಡಿ, ಇನ್ನೂ ಹತ್ತು ತಿಂಗಳ ಬಳಿಕ ನನಗೆ ಇಲ್ಲಿ ಬೀಳ್ಕೊಡುಗೆ ಸಮಾರಂಭ ಆಗಿದ್ದರೆ, ಖುಷಿ ಆಗುತ್ತಿತ್ತು. ಏಕೆಂದರೆ, ಇನ್ನೂ ಹತ್ತು ತಿಂಗಳಿಗೆ ನಾವು ನಿವೃತ್ತಿಯಾಗುತ್ತಿದ್ದೇವು.

      ದಾವಣಗೆರೆಯೊಂದಿಗೆ ಸಣ್ಣವರಾಗಿದ್ದಾಗಿಂದಲೂ ಭಾವನಾತ್ಮ ಸಂಬಂಧ ಇದೆ. ನಮ್ಮ ವರ್ಗಾವಣೆ ಆಗುತ್ತದೆಂಬ ನಿರೀಕ್ಷೆ ಇರಲಿಲ್ಲ. ವರ್ಗಾವಣೆಯಿಂದ ತಾವು ಆಘಾತಗೊಂಡಿದ್ದು, ಅದರಿಂದ ಇನ್ನೂ ಹೊರ ಬರಲಾಗಿಲ್ಲ. ಇಲ್ಲಿಯ ವಕೀಲರು ನೀಡಿದ ಸಹಕಾರ ಬೇರೆ ಯಾವ ಜಿಲ್ಲೆಯಲ್ಲೂ ಸಿಕ್ಕಿರಲಿಲ್ಲ. ಇಲ್ಲಿ ಸೌಹಾರ್ದ ವಾತಾವರಣ ಇತ್ತು. ಇಲ್ಲಿ ಇನ್ನಷ್ಟು ಕೆಲಸ ಮಾಡಬೇಕೆಂಬ ಹಂಬಲವಿತ್ತು. ಆದರೆ, ವರ್ಗಾವಣೆಯ ಕಾರಣಕ್ಕೆ ಆ ಕೆಲಸಗಳನ್ನು ಮಾಡಲಾಗಲಿಲ್ಲ. ಪುನರ್ಜನ್ಮ ಎಂಬುದೇನಾದರೂ ಇದ್ದರೆ, ಆ ಜನ್ಮದಲ್ಲೂ ತಾವು ನ್ಯಾಯಾಧೀಶರಾದರೆ, ದಾವವಣಗೆರೆಯ ನ್ಯಾಯಾಧೀಶರಾಗಿಯೇ ಬರುತ್ತೇವೆ ಎಂದರು.

      2 ತಿಂಗಳ 8 ದಿನಗಳ ಕಾಲ 1ನೇ ಹೆಚ್ಚುವರಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ, ಕಾರವಾರ ಜಿಲ್ಲೆಯ ಜಿಲ್ಲಾ ನ್ಯಾಯಾಧೀಶರಾಗಿ ಬಡ್ತಿ ಪಡೆದು ವರ್ಗಾವಣೆಯಾಗಿರುವ ಶಿವಶಂಕರೇಗೌಡರು ಸನ್ಮಾನ ಸ್ವೀಕರಿಸಿ ಮಾತನಾಡಿ, ಹಿರಿಯ ವಕೀಲರು ಬಹಳಷ್ಟು ಕಲಿತಿರುತ್ತಾರೆ. ಹೀಗಾಗಿ ಅವರಿಗೆ ನಾವು ಇನ್ನೂ ಕಲಿಸುವ ಅವಶ್ಯಕತೆ ಇರುವುದಿಲ್ಲ. ಆ ಕಾರಣಕ್ಕಾಗಿಯೇ ತಾವು ಕಿರಿಯ ವಕೀಲರನ್ನು ಹೆಚ್ಚು ಟಾರ್ಗೇಟ್ ಮಾಡ್ತಿದ್ದೆ. ಹೀಗಾಗಿ ನನ್ನ ವರ್ತನೆಯಿಂದ ಯಾರಿಗಾದರೂ ಬೇಸರವಾಗಿದ್ದರೆ, ಕ್ಷಮಿಸಿ. ವಕೀಲರ ಬಗ್ಗೆ ತಾವೆಂದೂ ಕೆಟ್ಟದಾಗಿ ಮಾತನಾಡಿಲ್ಲ. ಆದರೆ, ಪ್ರಕರಣಗಳು ಬೇಗ ಇತ್ಯರ್ಥ ಆಗಬೇಕ್ಕೆನ್ನುದಷ್ಟೆ ನಮ್ಮ ಅಭಿಪ್ರಾಯವಾಗಿದೆ ಎಂದು ನುಡಿದರು.

      2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ನಾಗಶ್ರೀ ಮಾತನಾಡಿ, ಇಂದು ಬೀಳ್ಕೊಡುಗೆ ಪಡೆಯುತ್ತಿರುವ ಇಬ್ಬರೂ ನ್ಯಾಯಾಧೀಶರಿಗೆ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಬೇಕೆಂಬ ತುಡಿತ ಇತ್ತು. ಇವರು ಹೋಗುವ ಬೇರೆ ಜಿಲ್ಲೆಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿ ಎಂದು ಶುಭ ಹಾರೈಸಿದ ಅವರು, ನ್ಯಾಯಾಧೀಶರು ಡೇಟ್ ಕೊಡುವುದಿಲ್ಲ ಎಂಬುದಾಗಿ ಯಾವ ವಕೀಲರ ಭಾವಿಸಬಾರದು. ಏಕೆಂದರೆ, ನಾವು ಸಹ ಮೇಲಿಂದ ಬರುವ ನಿರ್ದೇಶನದಂತೆ ಕಾರ್ಯದೊತ್ತಡದಲ್ಲಿ ಕೆಲಸ ಮಾಡುತ್ತಿರುತ್ತೇವೆ. ಬೇಗ ಪ್ರಕರಣಗಳ ಇತ್ಯರ್ಥಕ್ಕೆ ವಕೀಲರ ಸಹಕಾರ ಇರಲಿ ಎಂದರು.

      ಹಿರಿಯ ವಕೀಲ ಹುದ್ದಾರ್ ಮಾತನಾಡಿ, ಈ ಇಬ್ಬರು ನ್ಯಾಯಾಧೀಶರು ತುಂಬ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದರು. ಹೆಚ್.ಎಸ್.ಹೊಸಗೌಡ್ರುರವರಂತು ಕಬ್ಬಡಿ ಆಟಗಾರರಂತೆ ಕಂಗೊಳಿಸುತ್ತಿದ್ದರೆ, ಶಿವಶಂಕರೇಗೌಡರು ಒಬ್ಬ ಉತ್ತಮ ಕ್ರಿಕೇಟ್ ಪಟುವಿನಂತೆ ಅತೀ ಕಡಿಮೆ ಬಾಲ್‍ಗಳಲ್ಲಿ ಹೆಚ್ಚು ರನ್ ಹೊಡೆಯುವಂತೆ, ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದರು ಎಂದು ಹೇಳಿದರು.

      ಮತ್ತೋರ್ವ ಹಿರಿಯ ವಕೀಲ ರಾಮಚಂದ್ರ ಕಲಾಲ್ ಮಾತನಾಡಿ, ಹೊಸ ಕರ್ನಾಟಕ ಭಾಗದವಾರದ ಹೆಚ್.ಎಸ್.ಹೊಸಗೌಡ್ರು ಹಾಗೂ ಹಳೇ ಮೈಸೂರು ಭಾಗದ ಶಿವಶಂಕರೇ ಗೌಡರ ಮಿಲನ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ನಡೆದಿತ್ತು. ಈ ಇಬ್ಬರೂ ನ್ಯಾಯಾಧೀಶರಿಗಿದ್ದ ಕಾರ್ಯತತ್ಪರತೆಯಿಂದಾಗಿ ಪ್ರಕರಣಗಳು ಬಹಳ ಬೇಗ ವಿಲೇಯಾಗುತ್ತಿದ್ದವು. ಈ ನ್ಯಾಯಾಧೀಶದ್ವಯರು ಕಡಿಮೆ ಅವಧಿಯಲ್ಲಿ ವಕೀಲರ ಮನಸ್ಸಿನಲ್ಲಿ ಛಾಪು ಮೂಡಿಸಿದ್ದರು. ಈಗ ಅವರ ಸೇವೆಯಿಂದ ವಂಚಿತರಾದರೇನೋ ಎಂಬ ಭಾವನೆ ವಕೀಲರನ್ನು ಕಾಡುತ್ತಿದೆ ಎಂದರು.

      ವಕೀಲರ ಸಂಘದ ಮಾಜಿ ಅಧ್ಯಕ್ಷ ಲೋಕಿಕೆರೆ ಸಿದ್ದಪ್ಪ ಮಾತನಾಡಿ, ಹೊಸಗೌಡರು ನಮ್ಮ ವಕೀಲರ ಸಂಘಕ್ಕೆ ತೋರಿಸಿದ ನಂಟು, ಪ್ರೀತಿ-ವಿಶ್ವಾಸವನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಇವರು 6 ತಿಂಗಳಲ್ಲಿ ಮಾಡಿರುವ ಕೆಲಸ ಸದಾ ನೆನಪಿನಲ್ಲಿರಲಿವೆ. ಇನ್ನೂ ಶಿವಶಂಕರೇಗೌಡರಂತು ಡೈನಾಮಿಕ್ ಹಿರೋರಂತೆ ನೇರ ನಡೆ-ನುಡಿ ಸ್ವಭಾವ ಹೊಂದಿದ್ದರು. ವಕೀಲರ ಮರಣೋತ್ತರಿ ಕಲ್ಯಾಣ ನಿಧಿ ಟ್ರಸ್ಟ್‍ಗೂ ಸಹಕಾರ ನೀಡಿದ್ದರು. ಇಂಥಹ ನ್ಯಾಯಾಧೀಶರು ಸಿಗುವುದು ವಿರಳ ಎಂದು ನುಡಿದರು.

      ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಡೆದ ವಕೀಲರ ಸಂಘದ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ದಯಾನಂದ್ ಅವರಿಗೆ ಸನ್ಮಾನಿಸಲಾಯಿತು.

      ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್ ವಹಿಸಿದ್ದರು. ಸಮಾರಂಭದಲ್ಲಿ ನ್ಯಾಯಾಧೀಶರುಗಳಾದ ಕೆಂಗಬಾಲಯ್ಯ, ಎಂ.ಸಾಬಪ್ಪ, ಜಿನಾಲ್ಕರ್, ಸೋಮಶೇಖರ್, ಚಂದ್ರಕಲಾ, ಐ.ಪಿ.ನಾಯ್ಕ್, ಶ್ರೀನಿವಾಸ್ ನಾವಲೆ, ಯತೀಶ್, ಚೇತನಾ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು. ವಕೀಲ ಅಜಯ್ ಪ್ರಾರ್ಥಿಸಿದರು, ದಿವಾಕರ್ ಸ್ವಾಗತಿಸಿದರು, ಲಿಂಗರಾಜ್ ನಿರೂಪಿಸಿದರು.
 

 ಜಡ್ಜ್ ಹುದ್ದೆಗೆ ಲಂಚ ಕೇಳಿದ್ರು!
      ತಮಗೆ ಮೀಸಲಾತಿ ಹೊರತು ಪಡೆಸಿ, ಜನರಲ್ ಕೋಟಾದಲ್ಲಿ ನ್ಯಾಯಾಧೀಶರಾಗಿ ನೇಮಕವಾಗಿದ್ದರೂ ಕೆಲ ಅಧಿಕಾರಿಗಳು ಸಿಂಧುತ್ವ ಪ್ರಮಾಣಪತ್ರ ನೀಡಲು ನಮ್ಮ ತಂದೆ-ತಾಯಿಯ ಬಳಿ 1 ಲಕ್ಷ ರೂ. ಹಾಗೂ ನಮ್ಮ ಸೀನಿಯರ್ ಅವರ ಬಳಿ 1 ಲಕ್ಷ ಲಂಚ ಕೇಳಿದ್ದರು. ಆದರೆ, ನಾನು ಮೊದಲಿನಿಂದ ಕಲಿತಿದ್ದ ಪ್ರಾಮಾಣಿಕತೆಯ ಪಾಠದಿಂದಾಗಿ, ಹೈಕೋರ್ಟ್‍ನ ಹಿರಿಯ ಅಧಿಕಾರಿಯೊಬ್ಬರನ್ನು ಭೇಟಿಯಾಗಿ ನಯಾ ಪೈಸೆ ಲಂಚ ನೀಡದೇ, ನ್ಯಾಯಾಧೀಶ ಹುದ್ದೆ ಪಡೆದು, ಆ ಪ್ರಾಮಾಣಿಕತೆಯನ್ನು ತಮ್ಮ ವೃತ್ತಿ ಜೀವನದಲ್ಲೂ ಮುಂದುವರೆಸಿದ್ದೇನೆ.

 –ಶಿವಶಂಕರೇಗೌಡರು,
ನ್ಯಾಯಾದೀಶರು.

 

LEAVE A REPLY

Please enter your comment!
Please enter your name here