ವಯೋಮಾನಕ್ಕಿಂತ ಮೊದಲೆ ಮಾದುವೆ ಶಿಕ್ಷಾರ್ಹ ಅಪರಾಧವಾಗಿದೆ : ಶ್ರೀಮತಿ ಎಚ್.ಎಸ್.ರೇಣುಕಾದೇವಿ

ಹಾವೇರಿ

       ವಯೋಮಾನಕ್ಕಿಂತ ಮೊದಲೆ ಮದುವೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಮದುವೆಗಳು ಕಾನೂನು ಬಾಹೀರವಾಗಿವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಎಸ್.ಎಚ್.ರೇಣುಕಾದೇವಿ ಅವರು ಹೇಳಿದರು.

          ರವಿವಾರ ನಗರದ ನ್ಯಾಯಾಲಯಗಳ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಹಾವೇರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆಶಾಕಿರಣ ರೂರಲ್ ಡೆವಲಪ್‍ಮೆಂಟ್ ಸೊಸೈಟಿ ಸಹಯೋಗದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಜಿಲ್ಲೆಯ ಎಲ್ಲಾ ನ್ಯಾಯಾಧೀಶರುಗಳು, ಸರ್ಕಾರಿ ಅಭಿಯೋಜಕರು ಹಾಗೂ ಬಾಲ್ಯ ವಿವಾಹ ನಿಷೇಧಾದಿಕಾರಿಗಳಿಗೆ ಆಯೋಜಿಸಲಾದ ಒಂದು ದಿನದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

          ನಮ್ಮ ಸಮಾಜದಲ್ಲಿ ಮದುವೆಗೆ ಬಹಳ ದೊಡ್ಡ ಸಾಮಾಜಿಕ ಮನ್ನಣೆಯಿದೆ. ತಂದೆ-ತಾಯಿ ತಮ್ಮ ಜವಾಬ್ದಾರಿ ಕಳೆದುಕೊಳ್ಳಲು ಚಿಕ್ಕ ವಯಸ್ಸಿನಲ್ಲೆ ಮಕ್ಕಳಿಗೆ ಮದುವೆ ಮಾಡುವ ಪದ್ಧತಿ ಕೆಲವು ಕುಟುಂಬಗಳಲ್ಲಿ ಇನ್ನೂ ಜೀವಂತವಾಗಿರುವುದು ದುಃಖದ ಸಂಗತಿಯಾಗಿದೆ. 18 ವರ್ಷ ತುಂಬಿದ ಹೆಣ್ಣು ಮತ್ತು 21 ವರ್ಷ ದಾಟಿದ ಗಂಡಿಗೆ ಮಾತ್ರ ಮದುವೆ ಮಾಡಬೇಕು ಎಂದು ಹೇಳಿದರು.

          ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಸಹ ಈಗಲೂ ಬಾಲ್ಯ ಪದ್ಧತಿ ಉಳಿದಿವುದು ವಿಷಾಧಕರ ಸಂಗತಿ. ಅದರಲ್ಲೂ ಹೆಚ್ಚಾಗಿ ಹೆಣ್ಣಮಕ್ಕಳ ಬಾಲ್ಯ ವಿವಾಹ ನಡೆಯುತ್ತಿರುವುದು ಇನ್ನೂ ವಿಷಾಧಕರ ಸಂಗತಿಯಾಗಿದೆ. ಬಾಲ್ಯ ವಿವಾಹ ತಡೆಗಟ್ಟುವುದು ಅತ್ಯಂಯ ಮುಖ್ಯ ಅಂಶವಾಗಿದೆ. ಸಾರ್ವಜನಿಕರಿಗೆ ಬಾಲ್ಯವಿವಾಹದಿಂದ ಆಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಪ್ರಾಥಮಿಕ ಹಂತದ ಅರಿವು ಹೊಂದಿ ಜನಸಾಮಾನ್ಯರಿಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

           ಅಪ್ರಾಪ್ತ ಬಾಲಕಿಯನ್ನು ಮದುವೆಯಾದ ಗಂಡಿಗೆ ಕಲಂ 9ರನ್ವಯ ಹಾಗೂ ಬಾಲ್ಯ ವಿವಾಹಕ್ಕೆ ನೆರವಾದ ಇತರರು ಕಲಂ 10ರನ್ವಯ ಶಿಕ್ಷೆಗೆ ಗುರಿಯಾಗುತ್ತಾರೆ. ಮಕ್ಕಳ ಜೀವನದ ಬಗ್ಗೆ ಗುರುತರ ಜವಾಬ್ದಾರಿ ಹೊಂದಿದ ತಂದೆ-ತಾಯಿಗಳು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

           ಬೆಂಗಳೂರು ಚೈಲ್ಡ್ ರೈಟ್ಸ್ ಟ್ರಸ್ಟ್ ಕಾರ್ಯಕಾರಿ ನಿರ್ದೇಶಕ ಎನ್.ವಿ.ವಾಸುದೇವ ಶರ್ಮಾ ಅವರು ಮಾತನಾಡಿ, ಬಾಲ್ಯ ವಿವಾಹ ಪದ್ಧತಿ ಸಾಮಾಜಿಕ ಸಮಸ್ಯೆಯಾಗಿದೆ. ಬಾಲ್ಯ ವಿವಾಹಕ್ಕೆ ಇಂತವರೆ ನಿರ್ಧಿಷ್ಟ ಕಾರಣ ಎಂದು ದೂರುವುದು ಕಷ್ಟವಾಗಿದೆ. ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗಿ ನಡೆಯುತ್ತಿವೆ. ಬಾಲ್ಯ ವಿವಾಹ ಎಷ್ಟೇ ಜನರ ಮುಂದೆ ಶಾಸ್ತ್ರೋಕ್ತವಾಗಿ ನಡೆದರೂ ಸಹ ಅದು ಅನೂರ್ಜಿತ(ಅಸಿಂಧು)ವಾಗಿದೆ. ಸಾರ್ವಜನಿಕರಿಗೆ ಈ ಕುರಿತು ಸಾಕಷ್ಟು ತಿಳುವಳಿಕೆ ನೀಡಬೇಕು.

          ಬಾಲ್ಯವಿವಾಹವಾದ ಮಕ್ಕಳ ಶಿಕ್ಷಣ ಕುಂಟಿತಗೊಳ್ಳುತ್ತದೆ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಶೇ.50 ರಷ್ಟು ಹೆಣ್ಣುಮಕ್ಕಳಲ್ಲಿ ರಕ್ತಹೀನತೆ ಉಂಟಾಗುತ್ತಿದೆ. ಇಂತಹ ಮಹಿಳೆ ಜನ್ಮ ನೀಡುವ ಮಕ್ಕಳು ಸಹ ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದರು.

           ಬಾಲ್ಯ ವಿವಾಹ ತಡೆಯುವುದು ಮೊದಲ ಆದ್ಯತೆಯಾಗಿದೆ. ಬಾಲ್ಯ ವಿವಾಹವಾದನಂತರ ಪ್ರಕರಣಗಳು ಬೆಳಕಿಗೆ ಬಂದರೂ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ಸುಳ್ಳು ದಾಖಲೆಗಳ ಸೃಷ್ಟಿ ನಿಲ್ಲಿಸುವ ಕೆಲಸ ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕು ಎಂದ ಅವರು, ಬಾಲ್ಯ ವಿವಾಹ ತಡೆಗ ಹೇಗೆ?ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಪ್ರಚಲಿತ ಸಮಸ್ಯೆಗಳ ಕುರಿತು ಸಂವಾದ ನಡೆಸಿದರು.

          ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ವೈ.ಎಲ್.ಲಾಡಖಾನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬಾಲ್ಯ ವಿವಾಹ ನಿರ್ಮೂಲನೆ ಕಾನೂನಿನಿಂದ ಮಾತ್ರ ಸಾಧ್ಯವಿಲ್ಲ, ಜೊತೆಗೆ ಭಾರತದ ಪ್ರತಿಯೊಬ್ಬ ಪ್ರಜೆ ಹಾಗೂ ಪ್ರಜ್ಞಾವಂತ ವ್ಯಕ್ತಿಗಳು ಸಹಕಾರ ನೀಡಿದಾಗ ಬಾಲ್ಯ ವಿವಾಹ ನಿಷೇಧ ಕಾಯ್ದೆ ಯಶಸ್ವಿಯಾಗಲು ಸಾಧ್ಯ. ಇದೊಂದು ಸಾಮಾಜಿಕ ಪಿಡುಗಾಗಿದೆ, ಇದರ ನಿವಾರಣೆ ಹೇಗೆ ಮಾಡಬೇಕು ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಪ್ರತಿ ಹಂತದಲ್ಲಿ ಈ ಕಾಯ್ದೆ ಯಶಸ್ವಿಗೊಳಿಸೋಣ ಎಂದು ಹೇಳಿದರು.

            ಆಶಾಕಿರಣ ರೂರಲ್ ಡೆವಲಪ್‍ಮೆಂಟ್ ಸೊಸೈಟಿ ಅಧ್ಯಕ್ಷ ಮುತ್ತುರಾಜ ಮಾದರ ಅವರು ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಉಪನ್ಯಾಸ ನೀಡಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎನ್.ಮಾಳಗೇರ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಎಚ್.ಮಜೀದ ಉಪಸ್ಥಿತರಿದ್ದರು.ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮಾ ಕೆ.ಎಸ್. ಅವರು ಸ್ವಾಗತಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವಿನಾಯಕ ಗುಡಗೂರ ಕಾರ್ಯಕ್ರಮ ನಿರೂಪಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap