ವಾಲ್ಮೀಕಿ ಭವನ ವಿಳಂಬ : ನಾಯಕ ಸಮುದಾಯ ಆಕ್ರೋಶ

0
40

ಕೊರಟಗೆರೆ
             ಪಟ್ಟಣಕ್ಕೆ ವಾಲ್ಮೀಕಿ ಭವನಕ್ಕಾಗಿ 1.5 ಕೋಟಿ ರೂ.ಗಳ ಅನುದಾನ ಮಂಜೂರಾಗಿ 6 ವರ್ಷಗಳಾದರೂ ಕಟ್ಟಡ ಗುತ್ತಿಗೆ ಪಡೆದಿರುವ ನಿರ್ಮಿತಿ ಕೇಂದ್ರ ಕಾಮಗಾರಿ ಪ್ರಾರಂಭಿಸಿಲ್ಲ. ಇದು ತಾಲ್ಲೂಕಿನ ನಾಯಕ ಸಮುದಾಯದ ಬಗ್ಗೆ ಹಾಗೂ ಮಹರ್ಷಿ ವಾಲ್ಮೀಕಿ ಬಗ್ಗೆ ಮಾಡಿರುವ ತಾತ್ಸಾರ. ಇದರಿಂದ ನಾಯಕ ಸಮುದಾಯಕ್ಕೆ ಅವಮಾನವಾಗಿದೆ ಎಂದು ಪ.ಪಂ.ಸದಸ್ಯ ಕೆ.ಆರ್.ಓಬಳರಾಜು ತಿಳಿಸಿದರು.

               ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕೊರಟಗೆರೆ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಪಂಗಡ ಬ್ಲಾಕ್ ವತಿಯಿಂದ ನೂತನ ಪ.ಪಂ.ಸದಸ್ಯರಾದ ತಮಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

               ನಾಯಕ ಸಮುದಾಯವು ಶೋಷಿತ ಸಮುದಾಯವಾಗಿದ್ದು, ಜನಾಂಗದ ಅಭಿವೃಧ್ದಿಗೆ ಸರ್ಕಾರವು ಸಾಕಷ್ಟು ಯೋಜನೆಗಳನ್ನು ರೂಪಿಸಿ ಮಂಜೂರು ಮಾಡಿದ್ದರೂ, ಅದನ್ನು ಅಧಿಕಾರಿಗಳು ಜಾರಿಗೆ ತರದೆ ಬೇಜವಾಬ್ದಾರಿಯಿಂದ ನಡೆದು ಕೊಳ್ಳುತ್ತಿದ್ದಾರೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ 6 ವರ್ಷಗಳಿಂದ ಕೊರಟಗೆರೆ ಪಟ್ಟಣದಲ್ಲಿ ನಿರ್ಮಾಣವಾಗದೆ ನೆನೆಗುದಿಗೆ ಬಿದ್ದಿರುವ ವಾಲ್ಮೀಕಿ ಸಮುದಾಯ ಭವನವಾಗಿದೆ. ಈ ಭವನ ನಿರ್ಮಾಣಕ್ಕೆ ಡಾ.ಜಿ.ಪರಮೇಶ್ವರ್ ಶಾಸಕರಾಗಿದ್ದ ಸಂದರ್ಭದಲ್ಲಿ 1.5 ಕೋಟಿ ರೂ. ಮಂಜೂರು ಮಾಡಿಸಿದ್ದರು. ಆದರೆ ಇದನ್ನು ಗುತ್ತಿಗೆ ಪಡೆದಿರುವ ನಿರ್ಮಿತಿ ಕೇಂದ್ರದವರು ಸತತ 6 ವರ್ಷಗಳಿಂದ ಕಟ್ಟಡವನ್ನು ನಿರ್ಮಾಣ ಮಾಡದೆ ಬೇಜವಾಬ್ದಾರಿ ತನವನ್ನು ತೋರಿಸಿದ್ದಾರೆ. ಸಮುದಾಯದ ಎಲ್ಲಾ ಮುಖಂಡರು ಒಗ್ಗಟ್ಟಾಗಿ ಇದರ ಬಗ್ಗೆ ಪ್ರತಿಭಟನೆಯನ್ನು ನಡೆಸಬೇಕಾದ ಅನಿವಾರ್ಯತೆ ಇದೆ ಎಂದರು. ಇತರ ಪಕ್ಷಗಳಲ್ಲಿ ಸಮುದಾಯದ ಹೆಚ್ಚು ಅಭ್ಯರ್ಥಿಗಳು ಗೆದ್ದಿದ್ದಾರೆ. ಆದರೆ ಕಾಂಗ್ರೆಸ್‍ನಲ್ಲಿ ಟಿಕೆಟ್ ನೀಡಿಲ್ಲ. ಈ ಬಗ್ಗೆ ಹಿರಿಯ ನಾಯಕರ ಗಮನಕ್ಕೆ ತರಲಾಗುವುದು ಎಂದರು.
                ಈ ಸಂದರ್ಭದಲ್ಲಿ ಗ್ರಾಮಾಂತರ ಎಸ್.ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗರಾಜು, ಯುವಕಾಂಗ್ರೆಸ್ ಅಧ್ಯಕ್ಷ ವಿನಯ್‍ಕುಮಾರ್, ಜಿಲ್ಲಾ ಎಸ್.ಟಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕಿರಣ್‍ಕುಮಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕವಿತಾ, ಮಾಜಿ ಪ.ಪಂ.ಸದಸ್ಯರುಗಳಾದ ಲಾರಿಸಿದ್ದಪ್ಪ, ನರಸಿಂಹಮೂರ್ತಿ ಮುಖಂಡರುಗಳಾದ ನರಸಪ್ಪ, ದಿನ್ನೆಪಾಳ್ಯ ನಾರಾಯಣ್, ಕುಮಾರ್, ರಂಗಸ್ವಾಮಿ, ರಾಜಣ್ಣ, ಕಾರ್‍ಮಹೇಶ್, ಧರ್ಮೇಂದ್ರ ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here