ವಿಕೃತ ರಾಷ್ಟ್ರವಾದ ಹಿಮ್ಮೆಟ್ಟಿಸಲು ಸಾಧ್ಯ: ಚೆನ್ನಿ

ದಾವಣಗೆರೆ:

           ಇಡೀ ಭೂಮಿಯೇ ನಮ್ಮ ಕುಟುಂಬ ಎಂಬ ಪರಿಕಲ್ಪನೆಯಿಂದ ಮಾತ್ರ ವಿಕೃತ ಮತ್ತು ದ್ವೇಷದ ರಾಷ್ಟ್ರವಾದವನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಲಿದೆ ಎಂದು ಚಿಂತಕ ಡಾ.ರಾಜೇಂದ್ರ ಚೆನ್ನಿ ಪ್ರತಿಪಾದಿಸಿದರು.

            ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಸಂಜೆ ಬೆಂಗಳೂರಿನ ಗ್ರಾಮ ಸೇವಾ ಸಂಘಟನೆ ಮತ್ತು ಕರುಣಾ ಜೀವ ಕಲ್ಯಾಣ ಟ್ರಸ್ಟ್ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರವಾದ ಎಂಬುದು ಬಹುದೊಡ್ಡ ಪಿಡುಗಾಗಿದ್ದು, ಇದರಿಂದ ಇಡೀ ವಿಶ್ವದಲ್ಲಿ ಮನುಷ್ಯ ವಿರೋಧಿ ಚಿಂತನೆ ಬೆಳೆಯುತ್ತಿದೆ. ಯಾವುದೇ ಧರ್ಮ ಹಿಂಸೆಯನ್ನು ಪ್ರತಿಪಾದಿಸುತ್ತಿಲ್ಲ. ಆದರೆ, ಹುಸಿ ರಾಷ್ಟ್ರೀಯವಾದಿಗಳು ಸ್ವಾರ್ಥಕ್ಕಾಗಿ ಧರ್ಮಕ್ಕೆ ಉಗ್ರ ಸ್ವರೂಪ ಕೊಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

             ವಸುಧೇ (ಭೂಮಿ) ಕುಟುಂಬಕಂ ನಮ್ಮ ಸಂವಿಧಾನದ ಆಶಯ ವಾಕ್ಯವಾಗಬೇಕಾಗಿದೆ. ಅಂದು ಇಡೀ ಜಗತ್ತನ್ನು ನೋಡದ ಕವಿಯು ಇಡೀ ಪೃಥ್ವಿ, ಮನುಷ್ಯ ಜಗತ್ತು, ಸಕಲಜೀವಿ ಒಂದು ಕುಟುಂಬ ಎಂಬ ಅಧ್ಬುತ ಪರಿಕಲ್ಪನೆ ಬಂದಿತ್ತು. ಆದರೆ, ಇಂದು ಇಡೀ ಜಗತ್ತು ಹಾಗೂ ಬೇರೆ, ಬೇರೆ ಬ್ರಹ್ಮಂಡಗಳ ಬಗ್ಗೆ ಗೊತ್ತಿದ್ದರೂ ಈಗ ಇಡೀ ಜಗತ್ತು ಒಂದೇ ಕುಟುಂಬ ಎಂಬ ಪರಿಕಲ್ಪನೆಯನ್ನು ಉಹಿಸಿಕೊಳ್ಳಲಾಗುತ್ತಿಲ್ಲ. ಬದಲಿಗೆ, ನಮ್ಮ ರಾಷ್ಟ್ರ ಬೇರೆ, ನಿಮ್ಮ ರಾಷ್ಟ್ರ ಬೇರೆ, ಅದರಲ್ಲೂ ನಮ್ಮ ರಾಷ್ಟ್ರದಲ್ಲಿ ಇರುವ ನೀವು ಬೇರೆ ರಾಷ್ಟ್ರಗಳಿಂದ ನಮ್ಮ ರಾಷ್ಟ್ರದವರಲ್ಲ. ಆ ಧರ್ಮ, ಈ ಧರ್ಮ ಎಂಬ ಭಿನ್ನತೆ ವ್ಯಕ್ತವಾಗುತ್ತಿರುವುದು ವಿಪರ್ಯಾಸವಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

              ಮನೆ, ಕುಟುಂಬ, ಬಾಂಧವ್ಯ ಎಂಬುದನ್ನು ಬಿಟ್ಟು ನಕಾಷೆಗಳು ದೊಡ್ಡವು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಆ ನಕಾಷೆಯನ್ನು ದಾಟಿ ಬಂದವರನ್ನು ಕೊಲ್ಲಬೇಕೆಂಬ ಹುಸಿ ರಾಷ್ಟ್ರೀಯವಾದವನ್ನು ತುಂಬಲಾಗುತ್ತಿದೆ ಎಂದು ಆರೋಪಿಸಿದರು.
ಬಸವ ಕಟ್ಟಿದ ಚಳವಳಿ, ಬುದ್ಧ ಸ್ಥಾಪಿಸಿದ ಧರ್ಮ ಇವುಗಳೆಲ್ಲದರ ಆಶಯವೂ ಸಕಲಜೀವಿಗಳನ್ನು ಪ್ರೀತಿಸುವುದಾಗಿದೆ.

ಆದರೆ, ಇತ್ತೀಚೆಗೆ ಮನುಷ್ಯ ಕುಲವೇ ಶ್ರೇಷ್ಠ ಎಂಬ ಭಾವನೆ ಬಂದಿರುವುದರಿಂದ ಮನುಷ್ಯ ಸಂಬಂಧ ಹಾಳಾಗುತ್ತಿದೆ. ಅದರಲ್ಲೂ ಯೂರೋಪ್‍ನಲ್ಲಿ ರಾಷ್ಟ್ರ ಎಂಬ ಪರಿಕಲ್ಪನೆ ಶುರುವಾದಾಗಿನಿಂದ, ವಸಹತುಶಾಹಿಗಳು ಸ್ಥಾಪನೆಯಾಗಿ ಒಂದು ಸಂಸ್ಕೃತಿ, ಒಂದು ದೇಶ, ಒಂದು ರಾಷ್ಟ್ರ ಎಂಬ ಪರಿಕಲ್ಪನೆ ಅಸ್ತಿತ್ವಕ್ಕೆ ಬಂತು. ಭಾರತ ಸ್ವತಂತ್ರಗೊಂಡ ಮೇಲೂ ಬ್ರಿಟೀಷ್ ವಸಹತುಶಾಹಿ ಮಾದರಿಯಾಗಿರುವ ಏಕ ಸಂಸ್ಕೃತಿ , ಏಕ ಭಾಷೆಯನ್ನು ಮುಂದು ವರೆಸಿರುವ ಕಾರಣ ಇಂಡಿಯಾದಲ್ಲಿ ಅಸಹಿಷ್ಣುತೆ ವಾತಾವರಣ ಮನೆ ಮಾಡಿದೆ ಎಂದು ವಿಶ್ಲೇಷಿಸಿದರು.

              ಮಹಾತ್ಮ ಗಾಂಧೀ ರಾಷ್ಟ್ರವನ್ನು ನಿರಾಕರಿಸಿ, ಗ್ರಾಮ ಸ್ವರಾಜ್ಯ ಬಯಸಿದ್ದರು. ಅವರಂತೆ ರವೀಂದ್ರನಾಥ್ ಟ್ಯಾಗೂರ್ ಅವರು ಸಹ ರಾಷ್ಟ್ರ ಎನ್ನುವುದು ಒಂದು ರಾಕ್ಷಸ, ಅದು ಅತ್ಯಂತ ಅಪಾಯಕಾರಿ ಎಂಬುದಾಗಿ ಪ್ರತಿಪಾದಿಸಿದ್ದರು. ಆದ್ದರಿಂದ ನಾವು ರಾಷ್ಟ್ರ ಎಂಬ ಪರಿಕಲ್ಪನೆಯನ್ನು ಬಿಟ್ಟು, ನಮ್ಮ ಹಳ್ಳಿಗಳಿಗೆ ವಾಪಾಸು ಹೋಗಿ ಮನೆಯ ಚಾವಡಿಯಲ್ಲಿ ಕೂತು ಮಾತುಕತೆ ನಡೆಸಬೇಕಾಗಿದೆ ಎಂದರು.

ಧಾರವಾಡದ ಡಾ.ಸಂಜೀವ ಕುಲಕರ್ಣಿ ಮಾತನಾಡಿ, ನಾವುಗಳು ಧರ್ಮ ಮತ್ತು ಜಾತ್ಯಾತೀತವಾದ ಎಂಬ ಶಬ್ದಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ತಪ್ಪು ಮಾಡಿದ್ದೇವೆ. ಸರ್ವಮತ-ಸಮಭಾವ ಎಂಬುದು ಜಾತ್ಯಾತೀತ ತತ್ವದ ಆಶಯವಾಗಬೇಕಾಗಿದೆ. ಪ್ರಸ್ತುತ ಧರ್ಮ ಮತ್ತು ಆಧ್ಯಾತ್ಮಬೇಕಾಗಿದೆ. ಈ ಬಗ್ಗೆ ನಾವು ಮಾತನಾಡಲಾರಂಭಿಸಿದರೆ, ದೇಶದಲ್ಲಿ ಅಸಹಿಷ್ಣುತೆ ಹರಡುತ್ತಿರುವವರು ಈಗ್ಯಾಕೆ ಆ ಬಗ್ಗೆ ಮಾತನಾಡುತ್ತೀರೆಂಬ ತಕರಾರು ತಗೆಯುತ್ತಾರೆ. ಆದ್ದರಿಂದ ನಾವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ ಎಂದು ಹೇಳಿದರು.

             ಕನ್ನಡ ಬಹುತೇಕ ಸಾಹಿತಿಗಳು ಪರಿಸರದ ಮೇಲೆ ನಡೆಸುತ್ತಿರುವ ಅನ್ಯಾಯಗಳು ಅವರಿಗೆ ಕಾಣುತ್ತಿಲ್ಲ. ಕಂಡರೂ ಅದು ಸಾಹಿತ್ಯದಲ್ಲಿ ಅಭಿವ್ಯಕ್ತಗೊಳ್ಳುತ್ತಿಲ್ಲ. ಹೀಗಾಗಿ ಕನ್ನಡದ ಸಾಹಿತಿಗಳು ದಯನೀಯ ಸ್ಥಿತಿಯಲ್ಲಿದ್ದಾರೆ. ನಮ್ಮ ಜೀವನ ಶೈಲಿ ಮತ್ತು ಸಾಹಿತ್ಯವನ್ನೇ ಬೇರೆ, ಬೇರೆಯದನ್ನಾಗಿ ನೋಡುತ್ತಿದ್ದೇವೆ. ಹೀಗಾಗಿ ಸಮುದಾಯದ ವಿಶ್ವಾಸ ಗಳಸುವಲ್ಲಿ ಹಿಂದೆ ಬಿದ್ದಿದ್ದೇವೆ. ಆದ್ದರಿಂದ ಸಾಹಿತಿಗಳು ಸರಳ ಮತ್ತು ಶ್ರಮ ಪೂರ್ಣ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕಾಗಿದೆ ಎಂದು ಕಿವಿಮಾತು ಹೇಳಿದರು.

              ಅಧ್ಯಕ್ಷತೆಯನ್ನು ಪ್ರಸಿದ್ಧ ರಂಗಕರ್ಮಿ ಪ್ರಸನ್ನ ವಹಿಸಿಕೊಂಡು, ಅಧ್ಯಕ್ಷೀಯ ನುಡಿಗಳನ್ನಾಡಿದರು. ಕರುಣಾಜೀವ ಕಲ್ಯಾಣ ಟ್ರಸ್ಟ್‍ನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮ್ಮೇಳನದಲ್ಲಿ ಧಾರವಾಡದ ಬಸವಪ್ರಭು, ಶಂಕರ್ ಹಲಗತ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಅಭಿಲಾಷ್ ಸ್ವಾಗತಿಸಿದರು. ಚಂದ್ರಪ್ಪ ನಿರೂಪಿಸಿದರು. ನಾದಮಣಿ ನಾಲ್ಕೂರು, ಐರಣಿಚಂದ್ರು ಮತ್ತಿತರರು ಜಾಗೃತಗೀತೆಗಳನ್ನು ಹಾಡಿದರು.

Recent Articles

spot_img

Related Stories

Share via
Copy link
Powered by Social Snap