ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ

0
24

ಹಿರಿಯೂರು:
             ವಿದ್ಯಾರ್ಥಿಗಳು ವಿದ್ಯಾರ್ಥಿನಿಲಯದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವುದರ ಮೂಲಕ ತನ್ನ ಪೋಷಕರ ಕನಸುಗಳನ್ನು ನನಸಾಗಿಸಿ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಿ ಎಂದು ಶಾಸಕಿ ಕೆ.ಪೂರ್ಣಿಮಾ ಹೇಳಿದರು.
ನಗರದ ಅವಧಾನಿ ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪದವಿ ಪೂರ್ವ ಕಾಲೇಜಿನ ಬಾಲಕಿಯರ ವಿದ್ಯಾರ್ಥಿನಿಲಯದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
              ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ವಿದ್ಯಾರ್ಥಿಗಳು ಪುಸ್ತಕಗಳನ್ನು ಅಧ್ಯಯನ ಮಾಡಿ ಅಂಕಗಳನ್ನು ಗಳಿಸುವುದರ ಜೊತೆಗೆ ಸಾಮಾನ್ಯ ಜ್ಞಾನಕ್ಕೂ ಹೆಚ್ಚಿನ ಮಹತ್ವ ನೀಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಸುತ್ತಮುತ್ತಲಿನ ಪ್ರಾದೇಶಿಕ ಪರಿಸ್ಥಿತಿ ಹಾಗೂ ಅಧ್ಯಯನ ಮಾಡುವ ಸಂಸ್ಥೆಯ ಬಗ್ಗೆ ಅರಿವು ತಿಳಿದಿರಬೇಕು. ಇದು ಭವಿಷ್ಯತ್ತಿನ ಜೀವನಕ್ಕೆ ಉಪಯುಕ್ತ ಎಂದರು.
ಬಡ ಕುಟುಂಬದಲ್ಲಿ ಜನಿಸಿದ ಮಕ್ಕಳು ಕೂಡಾ ಉತ್ತಮ ಶಿಕ್ಷಣ ಪಡೆದರೆ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಬಹುದು ಎಂಬುದಕ್ಕೆ ಸರ್.ಎಂ.ವಿಶ್ವೇಶ್ವರಯ್ಯ, ಸಿ.ವಿ.ರಾಮನ್ ಅಬ್ದುಲ್ ಕಲಾಂ ಮುಂತಾದ ಮಹಾನ್ ವ್ಯಕ್ತಿಗಳು ನಮ್ಮೆಲ್ಲಾರಿಗೂ ಆದರ್ಶರಾಗಿದ್ದಾರೆ. ಕಲಿಕೆಗೆ ಶ್ರಮ ಹಾಗೂ ಸಮಯ ಅತ್ಯಾವಶ್ಯಕ ಎಂದರು.
          ನಗರಸಭೆ ಅಧ್ಯಕ್ಷ ಟಿ.ಚಂದ್ರಶೇಖರ್ ಮಾತನಾಡಿ ನಗರಸಭೆ ವತಿಯಿಂದ ನೀಡಿದ ಅನುದಾನ ಹಾಗೂ ಸವಲತ್ತುಗಳನ್ನು ಸಂಸ್ಥೆಯು ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ಗ್ರಾಮೀಣ ಹಾಗು ನಗರ ಪ್ರದೇಶದ ಬಡ ಮಕ್ಕಳಿಗೆ ಉಚಿತ ಪಠ್ಯಪುಸ್ತಕಗಳನ್ನು ನೀಡುವ ಮೂಲಕ ಉಚಿತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲೂ ಈ ಸಂಸ್ಥೆಯ ಅಭಿವೃದ್ದಿಗೆ ನಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
          ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಡಿ.ಟಿ.ಶ್ರೀನಿವಾಸ್ ಹಾಗೂ ಪ್ರಾಂಶುಪಾಲ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿದರು. ಬಿಜೆಪಿ ತಾಲೂಕು ಅಧ್ಯಕ್ಷ ದ್ಯಾಮೇಗೌಡ, ಮಾಜಿ ಜಿಪಂ ಸದಸ್ಯ ಎಂ.ಡಿ.ರವಿ, ಯಳನಾಡು ಉಪನ್ಯಾಸಕ ಎಚ್.ತಿಪ್ಪೇಸ್ವಾಮಿ, ಕಾರ್ಯದರ್ಶಿ ಶಾಂತಮ್ಮ, ಪ್ರೇಮನಾಥ್, ಓಂಕಾರಮ್ಮ, ಗಂಗಾಧರ್, ಹರೀಶ್, ಗಣೇಶ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here