ವಿಧಾನಸಭಾ ಚುನಾವಣೆ ನಂತರ ಮತ್ತೊಂದು ಚುನಾವಣಾ ಹೊಸ್ತಿಲಲ್ಲಿ ಮತದಾರರು

0
53

ಮಧುಗಿರಿ :

      ಹೋದೆಯಾ ಪಿಶಾಚಿ ಎಂದರೆ ಬಂದೆ ಗಾವಾಕ್ಷಿಯಲ್ಲಿ ಎಂಬ ಗಾದೆ ಮಾತಂತೆ ಮತದಾರರಿಗೆ ಚುನಾವಣೆಗಳು ಒಂದರ ಹಿಂದೆ ಒಂದು ಬರುತ್ತಿರುವುದು ಖುಷಿ ತಂದರೂ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದ ಉಮೇದುವಾರರಿಗೆ ಮಾತ್ರ ಎದೆಯಲ್ಲಿ ನಡುಕ ಉಂಟಾಗುತ್ತಿದೆ.

      ಚುನಾವಣೆಯಲ್ಲಿ ಫಲಿತಾಂಶ ಏರುಪೇರಾದರೆ ಹಾಕಿದ ಬಂಡವಾಳ ಮತ್ತೆ ಹಿಂಪಡೆಯಲು ಸಾಧ್ಯವಿಲ್ಲ ಎನ್ನುವ ಆತಂಕದಿಂದ ಶತಾಯಗತಾಯ ಗೆಲ್ಲಲೇಬೇಕೆಂಬ ಹಠದಿಂದ ಪ್ರತಿದಿನ ಸೋರ್ಯದಯದ ನಂತರ ಮಧ್ಯರಾತ್ರಿಯವರೆವಿಗೂ ಮನೆ ಮನೆ ಸುತ್ತುತ್ತಿದ್ದು ತಾನು ನಿದ್ದೆ ಮಾಡದೆ ಮತದಾರನಿಗೂ ನಿದ್ದೆ ಮಾಡಲು ಬಿಡದೆ ಮತಯಾಚನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

      ವಿಧಾನ ಸಭಾ ಚುನಾವಣೆಯಲ್ಲಿ ಮತ ಚಲಾಯಿಸಿ 4 ತಿಂಗಳ ನಂತರ ಈಗ ಆ. 29ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಯ ಚುನಾವಣೆಯು ಶ್ರಾವಣ ಮಾಸದ ಮಹಾಲಕ್ಷ್ಮೀ ಹಬ್ಬಕ್ಕೆ ಉಡುಗೊರೆಯಾಗಿ ಬಂದಿದ್ದು, ತನ್ನ ಅಮೂಲ್ಯವಾದ (?) ಮತ ಚಲಾಯಿಸಲು ಹಾತೊರೆಯುತ್ತಿದ್ದಾನೆ. ಕಳೆದ ಬಾರಿ ಪುರಸಭೆ ಪ್ರವೇಶಿಸಿದ್ದ ಎಲ್ಲಾ ಸದಸ್ಯರು ಮತ್ತೊಮ್ಮೆ ನಿಮ್ಮ ಸೇವೆಗೆ ನನಗೆ ತಮ್ಮ ಅಮೂಲ್ಯವಾದ ಮತ ನೀಡಿ ಎಂದು ದುಂಬಾಲು ಬೀಳುತ್ತಿದ್ದಾರೆ.

      ಆ.10 ರಿಂದ ನಾಮಪತ್ರಗಳ ಸಲ್ಲಿಕೆ ಮತ್ತು ಸ್ವೀಕಾರಕ್ಕೆ ಸ್ಥಳೀಯ ಆಡಳಿತ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದ್ದರೂ ಸಹ ಕೆಲ ವಾರ್ಡಿನ ನಾಗರಿಕರು ಮತ ಪಟ್ಟಿಯಲ್ಲಿ ತಮ್ಮ ಹೆಸರುಗಳು ಇದೆಯೋ ಇಲ್ಲವೋ ಎಂಬ ಆತಂಕದಲ್ಲಿರುವುದು ಕಂಡುಬರುತ್ತಿದೆ. ಇನ್ನೂ ಕೆಲ ಮತದಾರರು ತಮ್ಮ ಸಂಬಂಧಿಕರ ಹೆಸರು ಸೇರ್ಪಡೆಗೆ ಕಾಲಾವಕಾಶ ಇರುವುದರಿಂದ ಚುನಾವಣಾ ಶಾಖೆಯ ಕದ ತಟ್ಟುತ್ತಿದ್ದಾರೆ. ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಜೆಡಿಎಸ್ ಪಕ್ಷಗಳ ಆಕ್ಷಾಂಕ್ಷಿಗಳು ಈಗಾಗಲೇ ಪಕ್ಷಗಳ ಮುಖಂಡರ ಬಳಿ ಟಿಕೆಟ್‍ಗಾಗಿ ತಮ್ಮ ಬೆಂಬಲಿಗರೊಂದಿಗೆ ಪೆರೆಡ್ ನಡೆಸುತ್ತಿರುವುದು ಕಂಡು ಬರುತ್ತಿದೆ.

      ಈ ಅಭ್ಯರ್ಥಿಗಳ ಕಾಟ ತಾಳಲಾರದೆ ನಡೆಯಿರಿ ಕ್ಷೇತ್ರಕ್ಕೆ ಅಲ್ಲಿಯೇ ಬಂದು ವಾರ್ಡಿನ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್ ಹಂಚಿಕೆಯ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹಿಂದಕ್ಕೆ ಕಳುಹಿಸಿರುವ ನಿದರ್ಶನಗಳೂ ಇವೆ. ಆದರೂ ಕೆಲ ಆಕ್ಷಾಂಕ್ಷಿಗಳು ಮಾತ್ರ ಟಿಕೆಟ್ ಪಡೆಯಲೇಕೆಂಬ ಛಲದೊಂದಿಗೆ ಮುಖಂಡರ ಹಿಂಬಾಲಕರಾಗಿ ಬಿಟ್ಟಿದ್ದಾರೆ.

      ಇತ್ತ ಈ ಹಿಂದೆ ಪುರಸಭೆಯ ಆಡಳಿತ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಪಕ್ಷದ ಹಿಂದಿನ ಶಾಸಕ ಕೆ.ಎನ್.ರಾಜಣ್ಣ ಈಗಾಗಲೇ ಬೃಹತ್ ಕಾರ್ಯಕರ್ತರ ಸಭೆಯನ್ನು ನಡೆಸಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಜವಾಬ್ದಾರಿಯನ್ನು ಈ ಹಿಂದೆ ಪುರಸಭೆಯ ಅಧ್ಯಕ್ಷರಾಗಿದ್ದ ತಂಡದವರ ಹೆಗಲಿಗೆ ನೀಡಿ ಅಭ್ಯರ್ಥಿಗಳ ಪಟ್ಟಿ ನೀಡುವಂತೆ ಸೂಚಿಸಿದ್ದಾರೆ.

      ಜೆಡಿಎಸ್ ಪಕ್ಷದ ಹಾಲಿ ಶಾಸಕ ಎಂ.ವಿ.ವೀರಭದ್ರಯ್ಯ ಕಾರ್ಯಕರ್ತರ ಸಭೆ ನಡೆಸಿ ಎಲ್ಲಾ ವಾರ್ಡ್‍ನ ಮಾಹಿತಿ ಪಡೆದು ಗೆಲ್ಲುವ ಕುದುರೆಗಳಿಗೆ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ. ನಿಗದಿಯಾಗಿರುವ ಮೀಸಲಾತಿಯಂತೆ ವಾರ್ಡ್‍ಗಳ ಟಿಕೆಟ್ ಆಕ್ಷಾಂಕ್ಷಿಗಳು ಈಗಾಗಲೇ ಪಕ್ಷಗಳ ಮುಖಂಡರ ಭರವಸೆ ಮಾತಿಗೆ ಬೆಲೆ ಕೂಡ ನೀಡುತ್ತಿದ್ದು, ತಮ್ಮ ಸಂಬಂಧಿಕರ ಪರಿಚಯಸ್ಥರ ಜಮೀನುಗಳಲ್ಲಿ ತಂಡಗಳನ್ನಾಗಿ ಮಾಡಿ ಬಾಡೂಟದ ಸಂಭ್ರಮಾಚರಣೆಯಲ್ಲಿ ಸೇರಿ ಸಣ್ಣ ಮೊತ್ತದ ಹಣ ಹಂಚಿಕೆಯಲ್ಲಿ ತೊಡಗಿಸಿ ಕೊಂಡಿದ್ದಾರೆ.

      ಬಿಜೆಪಿಯ ಸ್ಥಿತಿ ಪಟ್ಟಣದಲ್ಲಿ ಯಥಾ ಸ್ಥಿತಿಯಲ್ಲಿದ್ದು ಶ್ರೀರಾಮನೇ ಬಂದು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕಾದ ಪರಿಸ್ಥಿತಿ ಇದೆ. ಪಕ್ಷಗಳ ಬಿ ಫಾರ್ಮ್ ಆಕ್ಷಾಂಕ್ಷಿಗಳು ಟಿಕೆಟ್ ನನಗೆ ಖಚಿತವೆಂದು ಮತದಾರರ ಪಟ್ಟಿ ಹಿಡಿದು ಯುವಕರ ಗುಂಪುಗಳನ್ನು ಕಟ್ಟಿಕೊಂಡು ಮನೆಗಳ ಬಾಗಿಲು ಬಡಿಯುತ್ತಾ ನಾನು ಈ ಬಾರಿಯ ಪುರಸಭೆಯ ಚುನಾವಣೆಯಲ್ಲಿ ನಿಲ್ಲ್ಲುತ್ತಿದ್ದು ನಿಮ್ಮಗಳ ಆಶೀರ್ವಾದವಿರಲಿ ಎಂದು ಕೋರುತ್ತಿದ್ದಾರೆ.

      ಜತೆಗೆ ಆ.13ಕ್ಕೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟವಾಗುತ್ತೆಂಬ ಗುಂಗಿನಲ್ಲಿ ಕೆಲವರಿದ್ದು ಆ ವಾರ್ಡ್‍ಗಳಲ್ಲಿಯೇ ನಿಲ್ಲುತ್ತ್ತೇನೆಂಬ ಅಮಲಿನಲ್ಲಿ ತೇಲುತ್ತಿದು, ಅಧ್ಯಕ್ಷ ಸ್ಥಾನದ ಮೀಸಲಾತಿ ಒಂದು ವೇಳೆ ಏನಾದರೂ ಬದಲಾದರೆ ಚುನಾವಣೆಯಲ್ಲಿಯೇ ಸ್ಪರ್ಧಿಸುವುದಿಲ್ಲ ಎನ್ನುತ್ತಿದ್ದಾರೆ ಕೆಲ ಆಕ್ಷಾಂಕ್ಷಿಗಳು.

      ಮಧುಗಿರಿ ಪುರಸಭಾ ವ್ಯಾಪ್ತಿಯಲ್ಲಿ 23,408 ಒಟ್ಟು ಮತದಾರಿದ್ದು, 12,026 ಮಹಿಳಾ, 11,382 ಪುರುಷ ಮತದಾರರಿದ್ದಾರೆ. ಅಂತಿಮವಾಗಿ ಚುನಾವಣಾ ಫಲಿತಾಂಶದಲ್ಲಿ ಮಹಿಳೆಯರೇ ಪ್ರಮುಖ ಪಾತ್ರ ವಹಿಸಲಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 13, ಜೆಡಿಎಸ್ 7, ಇತರೆ ಸದಸ್ಯರು 3 ಜನ ಆಯ್ಕೆಯಾಗಿ ಕಾಂಗ್ರೆಸ್ ಪಕ್ಷ ಆಡಳಿತದ ಚುಕ್ಕಾಣಿ ಹಿಡಿದಿತ್ತು. ಯಾವುದೇ ಗುರುತಿನ ಚಿಹ್ನೆಯೊಂದಿಗೆ ಅಭ್ಯರ್ಥಿಗಳು ವಾರ್ಡ್‍ಗಳಿಗೆ ಭೇಟಿ ನೀಡಿದರೂ, ಮಹಿಳೆಯರಂತೂ ಆಮ್ ಆದ್ಮಿ ಪಕ್ಷದ ಚಿಹ್ನೆಯನ್ನು ಈಗಾಗಲೇ ಕೈಯಲ್ಲಿ ಹಿಡಿದು ನಿಂತಿದ್ದಾರೆ.

 

LEAVE A REPLY

Please enter your comment!
Please enter your name here