ವಿವಿಧ ಬೇಡಿಕೆಗಳ ಈಡೇರಿಕೆಗೆ ನೌಕರರ ಪ್ರತಿಭಟನೆ

0
26

ಬಳ್ಳಾರಿ:

      ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಮಾನವ ಸಂಪನ್ಮೂಲ ಸರಬರಾಜಿಗೆ ಕರೆದ ಟೆಂಡರ್‍ನ್ನು ಕೂಡಲೇ ರದ್ದುಪಡಿಸಬೇಕು, ಮಧ್ಯವರ್ತಿಗಳ ಮೂಲಕ ವೇತನ ಪಾವತಿಗೆ ಕಡಿವಾಣ ಹಾಕಬೇಕು, ನಿಗಧಿತ ಅವಧಿಗೆ ವೇತನ ಪಾವತಿಯಾಗಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ತುಂಗಭದ್ರ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳ ಟಾಸ್ಕ್ ವರ್ಕರ್ಸ್ ಸಂಘದ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಅನಿರ್ಧಿಷ್ಟ ಧರಣಿ ನಡೆಸಿದರು.

      ತುಂಗಭದ್ರ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳ ಟಾಸ್ಕ್ ವರ್ಕರ್ಸ್ ಸಂಘದ ಅಧ್ಯಕ್ಷ ಎಂ.ಧನಂಜಯ್ ಅವರು ಮಾತನಾಡಿ, ಕಳೆದ ಸುಮಾರು 20 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಸುಮಾರು 1818 ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಎಲ್ಲ ಕಾರ್ಮಿಕರಿಗೂ ಇಲಾಖೆಯಿಂದ ನೇರವಾಗಿ ವೇತನ ಪಾವತಿಯಾಗಬೇಕು. ಇದನ್ನು ಕೈಬಿಟ್ಟು ಗುತ್ತಿಗೆದಾರರ ಮೂಲಕ ವೇತನ ಪಾವತಿ ಪದ್ಧತಿ ಜಾರಿಯಾದರೇ ನಾನಾ ರೀತಿಯ ತೊಂದರೆಯಾಗಲಿದೆ. ಇಲಾಖೆ ಅಧಿಕಾರಿಗಳು ಈಗಾಗಲೇ ಈ ಕುರಿತು ಟೆಂಡರ್ ಕರೆದಿದ್ದು, ಸರ್ಕಾರ ಕೂಡಲೇ ಇದನ್ನು ರದ್ದುಪಡಿಸಿ, ಈ ಹಿಂದೆ ಇರುವ ಪದ್ದತಿಯನ್ನೇ ಮುಂದುವರೆಸಬೇಕು ಎಂದು ಒತ್ತಾಯಿಸಿದರು.

      ಮಾನವ ಸಂಪನ್ಮೂಲ ಸರಬರಾಜಿಗೆ ಕರೆದಿರುವ ಟೆಂಡರ್ ನ್ನು ಕೂಡಲೇ ಸರ್ಕಾರ ರದ್ದುಪಡಿಸಬೇಕು. ರಾಜ್ಯ ಪೌರ ಕಾರ್ಮಿಕರಿಗೆ ವೇತನ ಪಾವತಿಸಿದಂತೆ ನೇರವಾಗಿ ನಮಗೂ ಯಾವುದೇ ಮಧ್ಯವರ್ತಿಗಳಿಲ್ಲದೇ ವೇತನ ನೀಡಬೇಕು. ಈ ಬೇಡಿಕೆ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಈ ಹಿಂದೆ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ಅದಕ್ಕೆ ಅವರು ಒಪ್ಪಿಗೆಯನ್ನೂ ಸೂಚಿಸಿದ್ದಾರೆ. ಈ ಕಡತಕ್ಕೆ ಕೂಡಲೇ ಅನುಮೋದನೆ ನೀಡಬೇಕು. ಕಾರ್ಮಿಕರು ನಿರ್ವಹಿಸುವ ಹುದ್ದೆಗಳಿಗೆ ಅನುಗುಣವಾಗಿ ಕಾರ್ಮಿಕ ಕಾಯ್ದೆ ಪದ್ಧತಿಯಂತೆ ಕನಿಷ್ಠ ವೇತನ ಪಾವತಿಸಬೇಕು. ಪ್ರತಿ ವರ್ಷ ಕಾರ್ಮಿಕರಿಗೆ ವರ್ಷಪೂರ್ತಿ ಕೆಲಸ ನೀಡಬೇಕು. ಪ್ರತಿ ತಿಂಗಳು 7ನೇ ದಿನಾಂಕದೊಳಗೆ ವೇತನ ಪಾವತಿಸಬೇಕು. ಒಂದೇ ಸ್ಥಳದಲ್ಲಿ ಅವಧಿ ಮೀರಿ ಕೆಲಸ ನಿರ್ವಹಿಸುತ್ತಿರುವ ಪ್ರಭಾರಿ ಸಹಾಯಕ ಕಾರ್ಯಪಾಲಕ ಅಭಿಯಂತರರ ಎಚ್.ವಿಶ್ವನಾಥ್ ಅವರನ್ನು ವರ್ಗಾವಣೆ ಮಾಡಬೇಕು. ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಸಹಾಯಕ ಅಭಿಯಂತರರ ಹಿರೇಹಳ್ಳಿ ಯೋಜನೆ ವಿಭಾಗದ ಬಸವರಾಜ್ ಅವರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು. ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ 55ದಿನಗಳ ವರೆಗೆ ಮುಷ್ಕರ ನಡೆಸಿದ ಕಾರ್ಮಿಕರಿಗೆ ವೇತನ ಕಡಿತಗೊಳಿಸಿದ್ದು, ಕೂಡಲೇ ಅವರೆಲ್ಲರಿಗೂ ವೇತನ ಪಾವತಿಸಿಬೇಕು. ಕಾರ್ಮಿಕರಿಗೆ ಸೇವಾ ಭದ್ರತೆ ಮತ್ತು ಸುರಕ್ಷತಾ ಸಾಮಗ್ರಿಗಳನ್ನು ಒದಗಿಸಬೇಕು, ಕಳೆದ 2017ರ ಫೆ.27ರಂದು ರಚಿಸಿದ ಕರ್ನಾಟಕ ರಾಜ್ಯ ಗುತ್ತಿಗೆ ಕಾರ್ಮಿಕ ಸಲಹಾ ಮಂಡಳಿ ಸಮೀತಿ ಮುಂದೆ ಇರುವ ನಮ್ಮ ವರದಿಯನ್ನು ಕೂಡಲೇ ಅಂಗೀಕರಿಸಬೇಕು ಎಂದು ಒತ್ತಾಯಿಸಿದರು. ನಮ್ಮ ಬೇಡಿಕೆಗಳು ಈಡೇರುವವರೆಗೂ ಸ್ಥಳ ಬಿಟ್ಟು ಕದಲೋಲ್ಲ. ಕೂಡಲೇ ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

      ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಬಸಪ್ಪ, ಮುಖಂಡ ದಿಬ್ಬಲಿ ಮಾರೆಣ್ಣ, ಕಾರ್ಯದರ್ಶಿ ಶಿವಲಿಂಗಪ್ಪ ಕೆ.ಪಿ., ಮೃತ್ಯುಂಜಯ್, ಬಸವರಾಜ್, ಎಂ.ಶೇಖಣ್ಣ ಸೇರಿದಂತೆ ನೂರಾರು ಕಾರ್ಮಿಕರು ಇತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here