ವಿಶ್ವದಲ್ಲೇ ಅತಿ ಹೆಚ್ಚು ಸಂಸ್ಕೃತಿ ಹೊಂದಿದ ರಾಷ್ಟ್ರ ಭಾರತ

0
44

ಕೊರಟಗೆರೆ:
  ವಿಶ್ವದಲ್ಲೇ ಅತಿ ಹೆಚ್ಚು ಸಂಸ್ಕೃತಿ ಹೊಂದಿದ ರಾಷ್ಟ್ರ ಭಾರತವಾಗಿದ್ದು ಅದನ್ನು ಉಳಿಸಿ ಬೆಳೆಸುವ ಕೆಲಸ ಯುವ ಜನತೆಯ ಕರ್ತವ್ಯವಾಗಬೇಕಿದೆ ಎಂದು ಶ್ರೀ ಕ್ಷೇತ್ರ ಸಿದ್ದರಬೆಟ್ಟ ರಂಭಾಪುರಿ ಖಾಸಾ ಶಾಖಾ ಮಠದ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

      ಅವರು ತಾಲ್ಲೂಕಿನ ಸಿದ್ದರಬೆಟ್ಟ ಬಾಳೇಹೊನ್ನೂರು ಖಾಸಾ ಶಾಖಾ ಮಠದಲ್ಲಿ ಆಯೋಜಿಸಿದ್ದ 138 ನೇ ಬೆಳದಿಂಗಳ ಕೂಟ ಹಾಗೂ ಧರ್ಮಜಾಗೃತಿ ಸಮಾರಂಭದ ದಿವ್ಯ ಸಾನ್ನಿದ್ಯ ವಹಿಸಿ ಮಾತನಾಡಿದರು.

      ಇಡೀ ಜಗತ್ತಿನಲ್ಲಿ ಅತ್ಯಂತ ದೊಡ್ಡ ಹಾಗೂ ಪುರಾತನ ಸಂಸ್ಕೃತಿ ಹೊಂದಿರುವ ರಾಷ್ಟ್ರ ಭಾರತ ದೇಶವಾಗಿದ್ದು, ಅನೇಕ ದೇಶದ ಸಂಸ್ಕೃತಿ ನಶಿಸಿಹೋಗಿದ್ದು ಅಲ್ಲದೆ ಕೆಲವು ದೇಶದ ಸಂಸ್ಕೃತಿ ಹುಟ್ಟು ಸಾವುಗಳನ್ನು ಕಂಡಿದೆ, ಆದರೆ ಭಾರತ ದೇಶದ ಸಂಸ್ಕೃತಿ ಮಾತ್ರ ಅಂದಿನಿಂದ ಇಂದಿನವರೆಗೂ ಬೆಳೆಯುತ್ತಲೆ ಬರುತ್ತಿದೆ. ಭಾರತ ದೇಶದಲ್ಲಿ ಸಾಧು, ಸಂತರು ಮತ್ತು ತಾಯಂದಿರು ಭಾರತದೇಶದ ಪ್ರಜೆಯನ್ನು ಜಾಗೃತಗೊಳಿಸುತ್ತ ಧರ್ಮವನ್ನು ಅನುಸರಿಸುವಂತೆ ಮಾಡಿ ದೇಶದ ಸಂಸ್ಕೃತಿ ಉಳಿವಿಗೆ ಕಾರಣಕರ್ತರಾಗಿದ್ದಾರೆ.

      ಪ್ರಸ್ತುತ ಜಗತ್ತಿನಲ್ಲಿ ಎಷ್ಟೋ ಜನರನ್ನು ನೋಡುತ್ತೇವೆ ಗುರು, ತಂದೆ, ತಾಯಿಯರ ಮೇಲೆ ಶ್ರದ್ದೆ ಇಲ್ಲ, ಏಕೆಂದರೆ ಮನೆಯಲ್ಲಿ ಚಿಕ್ಕವಯಸ್ಸಿನಲ್ಲೆ ತಾಯಿಂದಿರು, ಗುರುಗಳು ಹಾಗು ಸಂತರು ಅವರಿಗೆ ನೀಡಿಬೇಕಾದ ಧರ್ಮ ಜಾಗೃತಿ ಮೂಡಿಸುವುದನ್ನು ಮರೆತು ಬಿಟ್ಟಿದ್ದಾರೆ, ಅದುದರಿಂದ ಇತ್ತೀಚೆಗೆ ಧರ್ಮದ ಬಗ್ಗೆ ಅಭಿಮಾನ ಶೂನ್ಯವಾಗುತ್ತಿದೆ .

      ಧರ್ಮವನ್ನು ಉಳಿಸಿ ಬೆಳೆಸಬೇಕಾದರೆ ನಾವೆಲ್ಲರೂ ಧರ್ಮದ ಜಾಗೃತಿಯ ಸಂಸ್ಕಾರವನ್ನು ಬೆಳೆಸುವುದು ಕಾಯಕ ಎಂದು ತಿಳಿದು ಮಕ್ಕಳಲ್ಲಿ ಬೆಳೆಸುವತ್ತ ಕಾರ್ಯಪ್ರವೃತ್ತರಾಗಿ ಬೆಳೆಸಿದರೆ ಮಾತ್ರ ಮುಂದಿನ ಪೀಳಿಗೆಗೆ ಸಂಸ್ಕೃತಿ ಮತ್ತು ಧರ್ಮವನ್ನು ಉಳಿಸಬಹುದು ಎಂದರು.

      ವಿಜಯಪುರ ಬಸವಕಲ್ಯಾಣ ಮಠದ ಶ್ರೀಮಹದೇವ ಸ್ವಾಮೀಜಿ ಮಾತನಾಡಿ ಕುಡಿಯುವುದಾದರೆ ಶುದ್ದ ನೀರನ್ನೇ ಕುಡಿಯಬೇಕು, ಕೇಳಬೇಕಾದರೆ ಆರೋಗ್ಯವಂತ ಮಾತಗಳನ್ನೇ ಕೇಳಬೇಕು, ಏಕೆಂದರೆ ಇಂದಿನ ದಿನಗಳಲ್ಲಿ ರಾಜ್ಯದಲ್ಲಿ ಅದರಲ್ಲೂ ಚಿಕ್ಕಬಳ್ಳಾಪುರ, ಪಾವಗಡ, ಕೊರಟಗೆರೆ ಹಾಗೂ ಮಧುಗಿರಿ ತಾಲೂಕುಗಳಲ್ಲಿ ಪ್ಲೋರೈಡ್‍ಯುಕ್ತ ನೀರು ಹೆಚ್ಚಾಗಿ ದೊರೆಯುವ ಕಾರಣ ಆರೋಗ್ಯ ಹಾಳಾಗುತ್ತಿದೆ.

      ಆರೋಗ್ಯಕ್ಕೆ ಹೇಗೆ ಶುದ್ಧ ನೀರು ಅವಶ್ಯಕವೂ ಅದೇ ರೀತಿ ಸುಸಂಸ್ಕೃತರಾಗಿ ಬಾಳಬೇಕಾದರೆ ಧರ್ಮ ಸಂಸ್ಕಾರವನ್ನು ಕಲಿಯಬೇಕು, ಧರ್ಮ ಸಂಸ್ಕಾರವನ್ನು ಕಲಿಯಬೇಕಾದರೆ ಗುರುಗಳನ್ನು ಗೌರವಿಸುವುದ ರೊಂದಿಗೆ ಗುರುಗಳು ಹೇಳುವ ಒಳ್ಳೆಯ ಹಿತವಚನಗಳನ್ನು ಕೇಳುವುದರಿಂದ ಮಾತ್ರ ಉತ್ತಮ ಸಂಸ್ಕಾರ ಬೆಳೆಯಲು ಸಾಧ್ಯ ಇದರಿಂದ ತಮ್ಮಲ್ಲಿರುವ ಕೆಟ್ಟಚಟಗಳು ದೂರವಾಗುವದರೊಂದಿಗೆ ಸಮಾಜದಲ್ಲಿ ಜನರ ಏಳಿಗೆ ಸಾಧ್ಯ ಎಂದರು.

      ಕಾರ್ಯಕ್ರಮದಲ್ಲಿ ಪರಿಸರದ ಮೇಲೆ ಹೆಚ್ಚು ಕಾಳಜಿ ಇಟ್ಟು ಗಿಡಮರಗಳನ್ನು ಪೋಷಿಸುತ್ತಿರುವ ಪರಿಸರ ಪ್ರೇಮಿ ಯಲ್ಲದಡ್ಲು ಚಂದ್ರಯ್ಯನವರನ್ನು ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here