ವಿಶ್ವವಿದ್ಯಾನಿಲಯಗಳು ಸಂಶೋಧನೆಗೆ ಆದ್ಯತೆ ನೀಡಬೇಕು

0
37
 ತುಮಕೂರು:
  
      ಅಮೇರಿಕಾದ ಬಹುತೇಕ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆಯು ಬೋಧನೆಗಿಂತ ಮುಂಚೂಣಿ ಪ್ರಾಮುಖ್ಯತೆ ಪಡೆದಿದ್ದು ರಾಷ್ಟ್ರದ ಸಂಶೋಧನಾ ಅಗತ್ಯತೆಗಳನ್ನು ಪೂರೈಸುವ ಜವಾಬ್ದಾರಿಯನ್ನು ವಿಶ್ವವಿದ್ಯಾನಿಲಯಗಳು ನಿಭಾಯಿಸುತ್ತಿವೆ. ಬಹುತೇಕ ಅಮೇರಿಕಾದ ವಿಶ್ವವಿದ್ಯಾನಿಲಯಗಳು ‘ಸಂಶೋಧನೆ ಅಥವಾ ನಾಶ’ ಎನ್ನುವ ನೀತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವುದರಿಂದ ರಾಷ್ಟ್ರದ ಎಲ್ಲಾ ಕ್ಷೇತ್ರಗಳ ಸಂಶೋಧನಾ ಅಗತ್ಯತೆಗಳನ್ನು ವಿಶ್ವವಿದ್ಯಾನಿಲಯಗಳು ಪೂರೈಸಲು ಸಶಕ್ತವಾಗಿವೆ. ಭಾರತದ ವಿಶ್ವವಿದ್ಯಾನಿಲಯಗಳಲ್ಲಿಯೂ ಸಹ ಸಂಶೋಧನೆ ಮೊದಲ ಪ್ರಾಶಸ್ತ್ಯವಾಗಬೇಕು ಅದರಲ್ಲೂ ಸ್ಥಳೀಯ ಸಮುದಾಯಗಳ ಅಭಿವೃದ್ಧಿಗೆ, ಸ್ಥಳೀಯ ಕೈಗಾರಿಕೆಗಳ ಅಗತ್ಯತೆಗೆ, ಸ್ಥಳೀಯ ಸರ್ಕಾರಗಳ ಯೋಜನೆಗಳಿಗೆ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಬಳಕೆಗೆ ವಿಶ್ವವಿದ್ಯಾನಿಲಯಗಳು ಸಂಶೋಧನೆಯ ಮೂಲಕ ಪೂರಕ ಬೆಂಬಲವನ್ನು ನೀಡಿದರೆ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅಮೇರಿಕಾದ ನೆಬ್ರಾಸ್ಕಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಪ್ರೊ. ಶ್ರೀವತ್ಸ ಶೇಷಾದ್ರಿರವರು ತಿಳಿಸಿದರು.
      ಅವರು ತುಮಕೂರು ವಿಶ್ವವಿದ್ಯಾನಿಲಯದ ಆಂತರಿಕ ಗುಣಮಟ್ಟ ಖಾತರಿ ಕೋಶ (Iಕಿಂಅ) ವತಿಯಿಂದ ಆಗಸ್ಟ್ 7 ರಂದು ಆಯೋಜಿಸಿದ್ದ ‘ಸಂಶೋಧನಾ ಉತ್ಪಾದಕತೆಯನ್ನು ವರ್ಧಿಸುವಲ್ಲಿ ವಿಶ್ವವಿದ್ಯಾನಿಲಯ ಅಧ್ಯಾಪಕರ ಪಾತ್ರ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದರು. 
      ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆಗೆ ಪೂರಕವಾದ ನೀತಿನಿಯಮಗಳನ್ನು ಸರ್ಕಾರ ಮತ್ತು ವಿಶ್ವವಿದ್ಯಾನಿಲಯದ ಆಡಳಿತ ರೂಪಿಸಬೇಕು, ಅಧ್ಯಾಪಕರುಗಳು ತಮ್ಮ ಆಸಕ್ತ ಕ್ಷೇತ್ರದ ಅನ್ವಯ ಸಣ್ಣ ಸಂಶೋಧನಾ ವೃಂದಗಳನ್ನು ರಚಿಸಿಕೊಂಡು ಸ್ಥಳೀಯ ಆದ್ಯತೆಗಳನ್ನು ಪ್ರಾಶಸ್ತ್ಯದ ಮೂಲಕ ಆಯ್ದುಕೊಂಡು ಸಂಶೋಧನೆಗಳನ್ನು ನಡೆಸಲು ಸಲಹೆಗಳನ್ನು ನೀಡಿದರು.
      ಅಧ್ಯಾಪಕರು ತಾವು ನಡೆಸಿದ ಸಂಶೋಧನೆಗಳನ್ನು ತಮ್ಮ ವಿಶ್ವವಿದ್ಯಾನಿಲಯದ ಆಂತರ್ಜಾಲದ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಮತ್ತು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಸಮನ್ವಯ ಸಂಶೋಧನಾ ಸಮಿತಿಯು ಅಧ್ಯಾಪಕರು ಮತ್ತು ಸಂಶೋಧನೆಗೆ ಹಣ ನೀಡುವ ಸಂಸ್ಥೆಗಳೊಂದಿಗೆ ಮಧ್ಯಸ್ಥಿಕೆ ವಹಿಸಿದರೆ ಹಣಕಾಸು ಸರಬರಾಜು ಸಂಶೋಧನಾ ಮೂಲ ಸೌಲಭ್ಯಗಳನ್ನು ಸೃಷ್ಟಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ತಿಳಿಸಿದರು.
      ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಕುಲಪತಿಗಳಾದ ಪ್ರೊ. ವೈ ಎಸ್.ಸಿದ್ಧೇಗೌಡ ಅವರು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆಗೆ ಇನ್ನು ಮುಂದೆ ಹೆಚ್ಚಿನ ಆದ್ಯತೆ ನೀಡಲಾಗುವುದು, ವಿಶ್ವವಿದ್ಯಾನಿಲಯವು ಸಂಶೋಧನೆಗೆ ಅಗತ್ಯ ಪೂರಕ ವಾತಾವರಣ ನಿರ್ಮಿಸಲು ಹಲವು ಕ್ರಮಗಳನ್ನು ಕೈಗೊಂಡಿದ್ದು, ಸ್ಥಳೀಯ ಅಗತ್ಯತೆಯನ್ನು ಆದ್ಯತೆಯಾಗಿಸಿಕೊಂಡು ವಿಶ್ವವಿದ್ಯಾನಿಲಯವು ಸ್ಥಳೀಯ ಸಮುದಾಯಗಳ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸುವ ವಾತಾವರಣವನ್ನು ಸೃಷ್ಟಿಸಲಾಗುತ್ತದೆ ಎಂದು ತಿಳಿಸಿದರು.
      ತುಮಕೂರು ವಿಶ್ವವಿದ್ಯಾನಿಲಯದ ಆಂತರಿಕ ಗುಣಮಟ್ಟ ಖಾತರಿಕೋಶದ(Iಕಿಂಅ) ನಿರ್ದೇಶಕರಾದ ಡಾ.ರಮೇಶ್ ಬಿ ಅವರು ಸ್ವಾಗತಿಸಿ ವಿಶೇಷ ಉಪನ್ಯಾಸಕರನ್ನು ಪರಿಚಯಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕಿರಣ್, ಸಹಾಯಕ ಪ್ರಾಧ್ಯಾಪಕರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ಎಲ್ಲಾ ಅಧ್ಯಾಪಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
 

 

LEAVE A REPLY

Please enter your comment!
Please enter your name here