ವಿಷನ್ ಡಾಕ್ಯುಮೆಂಟ್-2025 ಕ್ಕೆ ಕನ್ವರ್‍ಜನ್ಸ್ ಯೋಜನೆ : ನಗರದ ಅಭಿವೃದ್ಧಿಗೆ 2232 ಕೋಟಿ ರೂ.ಗಳ ಮಾಸ್ಟರ್ ಪ್ಲಾನ್

0
36

ತುಮಕೂರು:

      ಸ್ಮಾರ್ಟ್ ಸಿಟಿಯ 1000 ಕೋಟಿ ರೂ. ಅನುದಾನ ಹಾಗೂ ವಿವಿಧ ಇಲಾಖೆಗಳ ಕ್ರೋಢೀಕೃತ ಯೋಜನೆಗಳು ಸೇರಿ ಒಟ್ಟು 2232.71 ಕೋಟಿ ರೂ.ಗಳ ಯೋಜನೆಯಲ್ಲಿ ತುಮಕೂರು ನಗರ ಅಭಿವೃದ್ಧಿ ಪಡಿಸಲು ಮಾಸ್ಟರ್ ಪ್ಲಾನ್ ರೂಪಿಸಲಾಗುತ್ತಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.

      ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ನ್ಯೂ ಇಂಡಿಯಾ 2022 ಮತ್ತು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್ 2025ರ ಹಿನ್ನೆಲೆಯಲ್ಲಿ ಜನತೆಯ ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸಲಾಗುತ್ತಿದೆ. ಫೋರಂ ಸಲಹೆಗಳ ಜೊತೆಗೆ ನಗರದ ಅಭಿವದ್ಧಿ ಆಸಕ್ತ ಜನತೆಯ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ತುಮಕೂರು ನಗರದ 12500 ಎಕರೆ ಭೂಮಿಯ ಸಮಗ್ರ ಅಭಿವೃದ್ಧಿ ಮತ್ತು ಸುಮಾರು 3,05,000 ಜನತೆಯ ಅಗತ್ಯಗಳನ್ನು ಒಳಗೊಂಡ ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸಲಾಗುವುದು ಎಂದರು.

      ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿರುವ ಯೋಜನೆ ಜಾರಿ ಮತ್ತು ನಿಯಮಗಳ ಪಾಲನೆಗೆ ಒತ್ತು ನೀಡಲಾಗುವುದು. ಎಲ್ಲ ಇಲಾಖೆಗಳು ಸಮರೋಪಾದಿಯಲ್ಲಿ ತಮ್ಮ ಇಲಾಖೆಯಲ್ಲಿನ ಯೋಜನೆಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಜಿ.ಐ.ಎಸ್. ಆಧಾರಿತ ನಕ್ಷೆಯೊಂದಿಗೆ ಸಿದ್ಧಪಡಿಸಲು ಸೂಚಿಸಿದ್ದೇನೆ. ಇದು ಡೇಟಾಬೇಸ್ ಯುಗ. ಪ್ರಧಾನಿಯವರ ಕನಸು ನನಸು ಮಾಡುವುದು ನನ್ನ ಗುರಿ. ಇದಕ್ಕೆ ರಾಜ್ಯ ಸರ್ಕಾರದ ಸಹಕಾರವೂ ದೊರೆಯಲಿದೆ ಎಂದರು.

      ಅಭಿವೃದ್ಧಿ ಅಭಿಯಾನ: ಆಗಸ್ಟ್ 4 ರಿಂದ 14ರವರೆಗೆ 10 ದಿನಗಳ ಕಾಲ ಸ್ಮಾರ್ಟ್‍ಸಿಟಿ ಯೋಜನೆಯಿಂದ ನಗರದ ಜನರ ನಿರೀಕ್ಷೆಗಳ ಬಗ್ಗೆ ಸಂಜೆ 6ರಿಂದ 7ಗಂಟೆಯವರೆಗೆ ತುಮಕೂರು ನಗರ ಶಾಸಕರ ಕಛೇರಿಯಲ್ಲಿರುವ ಅಧ್ಯಯನ ಕೇಂದ್ರದಲ್ಲಿ ಸಾರ್ವಜನಿಕ ಜಾಗೃತಿ ಅಭಿವೃದ್ಧಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಕೈಗೊಂಡಿರುವ , ಕೈಗೊಳ್ಳಲಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಾರ್ವಜನಿಕರು ಹಾಗೂ ನಾಗರಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದರು.

      ವಿಷನ್ ಡಾಕ್ಯುಮೆಂಟ್ ಸಿದ್ಧವಾದ ಮೇಲೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ತುಮಕೂರು ಸ್ಮಾರ್ಟ್‍ಸಿಟಿ ಅಡ್ವೈಸರಿ ಫೋರಂನಲ್ಲಿ ಮಂಡಿಸಲಾಗುವುದು. ನಂತರ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ವಿಶೇಷ ಪ್ಯಾಕೇಜ್ ನೀಡಲು ವಿರೋಧ ಪಕ್ಷದ ನಾಯಕರು ಮತ್ತು ಕೇಂದ್ರ ಸಚಿವರುಗಳ ನೇತೃತ್ವದಲ್ಲಿ ಪ್ರಧಾನ ಮಂತ್ರಿಗಳಿಗೆ ಸಲ್ಲಿಸಿ ಆರ್ಥಿಕ ನೆರವು ಪಡೆಯಲು ಯೋಚಿಸಲಾಗಿದೆ ಎಂದರು.

ನಾಗರಿಕ ಸಮಿತಿ:

      ವಿವಿಧ ಬಡಾವಣೆಗಳಲ್ಲಿರುವ ನಾಗರಿಕ ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತಾಗಬೇಕು. ಇದಕ್ಕಾಗಿ ಆಯಾ ಬಡಾವಣೆಗಳಲ್ಲಿ ಏನು ಅಭಿವೃದ್ಧಿ ಕೆಲಸವಾಗಬೇಕು ಎನ್ನುವುದನ್ನು ಆಯಾ ನಾಗರಿಕ ಸಮಿತಿಗಳೇ ನಿರ್ಧರಿಸಬೇಕು. ನಾಗರಿಕ ಸಮಿತಿ ನೀಡುವ ಯೋಜನೆಗಳಿಗೆ ಪೂರಕವಾಗಿ ತುಮಕೂರು ಮಹಾನಗರ ಪಾಲಿಕೆಯಲ್ಲಿ ಮಂಡಿಸಿ ವಿಷನ್ ಡಾಕ್ಯುಮೆಂಟ್ ಅಂತಿಮಗೊಳಿಸಲು ಉದ್ದೇಶಿಸಲಾಗಿದೆ ಎಂಧರು.

      ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಅಧ್ಯಯನ ಕೇಂದ್ರ ಕಛೇರಿಯಲ್ಲಿ ಒಂದು ವಿಷನ್ ಛೇಂಬರ್ ಮಾಡಿ ಅಲ್ಲಿ ನಗರದ ನಾಗರಿಕ ಸಮಿತಿಗಳು, ವಿಷನ್ ಮತ್ತು ಪ್ರಷರ್ ಗ್ರೂಪ್‍ಗಳು ಸಭೆಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗುವುದು ಎಂದರು.

 ಕೌಶಲ್ಯಾಭಿವೃದ್ಧಿ ಕೇಂದ್ರ:

      ಯಾವುದೇ ಉದ್ಯೋಗ ಮತ್ತು ಕಾರ್ಯಚಟುವಟಿಕೆಗಳಿಗೆ ಕೌಶಲ್ಯ ಬಹುಮುಖ್ಯವಾಗಿದ್ದು, ತುಮಕೂರು ನಗರದಲ್ಲಿ ಅತ್ಯಾಧುನಿಕ ಕೌಶಲ್ಯ ಅಭಿವೃದ್ಧಿ ಕೇಂದ್ರ ತೆರೆಯಲು ಯೋಚಿಸಲಾಗುತ್ತಿದೆ. ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದ ಅಡಿಯಲ್ಲಿ ಇದು ಸ್ಥಾಪನೆಯಾದರೆ ಒಳ್ಳೆಯದು. ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ಕೌಶಲ್ಯಾಭಿವೃದ್ಧಿ, ಹಸಿರು ತುಮಕೂರು, ಕಸಮುಕ್ತ ನಗರ ಮುಂತಾದುವುಗಳ ಬಗ್ಗೆ ಹೆಚ್ಚು ಗಮನ ಹರಿಸಲಾಗುವುದು.
                                                                           – ಜಿ.ಬಿ.ಜ್ಯೋತಿಗಣೇಶ್, ಶಾಸಕರು.

               

LEAVE A REPLY

Please enter your comment!
Please enter your name here