ವೃದ್ಧರ ಶಾಲೆಗಳೇ ವೃದ್ಧರ ಮತ್ತು ಅವರ ಮಕ್ಕಳ ನೆಮ್ಮದಿಗೆ ಪರಿಹಾರ..?

0
98

ಕೆ.ಟಿ.ಸೋಮಶೇಖರ: 

  ಮಾತೃ ದೇವೋಭವ, ಪಿತೃ ದೇವೋಭವ ಎಂಬ ಸಂಸ್ಕೃತಿ ಇದ್ದ ಸಮಾಜದಲ್ಲಿ ಇತ್ತೀಚೆಗೆ ವೃದ್ಧ ಅಪ್ಪ ಅಮ್ಮಂದಿರನ್ನು ಅವರ ಮಕ್ಕಳು ಸರಿಯಾಗಿ ನಡೆಯಿಸಿಕೊಳ್ಳದೆ, ಶುಶ್ರೂಷೆ ಮಾಡದೆ ಆಶ್ರಯ ಕೊಡದೆ ತೊಂದರೆ ಕೊಡುವುದು ಹೆಚ್ಚುತ್ತಿರುವುದು ವಿಪರ್ಯಾಸ! ಆದರೂ ಸತ್ಯ! ಇಂದಿನ ಸಮಾಜ ಹಾಗೆ ಬದಲಾಗಿದೆ.

ತಾವೇನು ವೃದ್ಧರೇ ಆಗುವುದಿಲ್ಲವೇನೋ ಎಂಬಂತೆ ಕೆಟ್ಟದಾಗಿ ವೃದ್ಧರನ್ನು ನಡೆಯಿಸಿಕೊಂಡು ಮನೆಯಿಂದ ಹೊರ ಹಾಕುವ ದೈಹಿಕವಾಗಿ ಹಲ್ಲೆ ಮಾಡುವ ಪ್ರಕರಣಗಳು ಹೆಚ್ಚಿವೆ! ಪ್ರಯುಕ್ತ ಕೇಂದ್ರ ಸರ್ಕಾರ ವೃದ್ಧ ಅಪ್ಪ ಅಮ್ಮಂದಿರನ್ನು ಅವರ ಮಕ್ಕಳು ನೋಡಿಕೊಳ್ಳದಿದ್ದರೆ ಹತ್ತು ಸಾವಿರ ನಿರ್ವಹಣ ವೆಚ್ಚ ಮತ್ತು ಮೂರು ತಿಂಗಳ ಕಾಲ ವಿಧಿಸುತ್ತಿದ್ದ ಜೈಲು ಶಿಕ್ಷೆಯನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಪುನರ್ ವಿಮರ್ಶೆಗೊಳಪಡಿಸುತ್ತಿದೆ! 3 ತಿಂಗಳ ಜೈಲು ಶಿಕ್ಷೆಯನ್ನು 6 ತಿಂಗಳಿಗೆ ಹೆಚ್ಚಿಸಲು, 10 ಸಾವಿರ ಪರಿಹಾರ ಮಿತಿಯನ್ನು ತೆಗೆದು ಹಾಕಿ ಎಷ್ಟು ಬೇಕಾದರೂ ಹೆಚ್ಚು ಮಾಡುವಂತಾಗಲು, ಮಕ್ಕಳು ಎಂಬ ವ್ಯಾಖ್ಯಾನವನ್ನು ಬದಲಿಸಲಾಗುತ್ತಿದೆ.

ಮಕ್ಕಳ ಜತೆಗೆ ಅಳಿಯಂದಿರು ಮತ್ತು ಸೊಸೆಯರಿಗೂ ವೃದ್ಧರ ಸೇವೆ ಮಾಡುವ ಜವಾಬ್ದಾರಿಯನ್ನು ಹೊರಿಸುವ ಸಾಧ್ಯತೆಯಿದೆ! ಹೀಗೆ ಮಾಡುವುದರಿಂದ ವೃದ್ಧರ ಸಮಸ್ಯೆಗಳಿಗೆ ಮುಕ್ತಿ ದೊರಕಬಹುದೆಂದು ಸರ್ಕಾರ ಭಾವಿಸಿದೆ. ಕೆಲವು ಮಕ್ಕಳಿಗೆ ವೃದ್ಧರ ಆಸ್ತಿ ಬೇಕೇ ಹೊರತು ಅವರನ್ನು ಶುಶ್ರೂಷೆ ಮಾಡುವುದು ಬೇಕಿಲ್ಲ! ಹಾಗೇ ಉದ್ದೇಶ ಪೂರ್ವಕವಾಗಿ ವೃದ್ಧರನ್ನು ನೋಡಿಕೊಳ್ಳಲು ಇಚ್ಚಿಸದವರ ಸಂಖ್ಯೆ ಕಡಿಮೆಯೇನೂ ಇಲ್ಲ! ಅಂತಹವರಿಗೆ ಇದು ಬೆದರುಬೊಂಬೆಯೆನಿಸಿದರೂ ಮಕ್ಕಳು ಅವರ ಸಂಗಾತಿಗಳು ಸೇವೆ ಮಾಡುವ ಮನಸ್ಸು ಮಾಡದಿದ್ದರೆ ವೃದ್ಧರ ಬದುಕಿಗೆ ನೆಮ್ಮದಿ ದೊರಕುವುದು ಅನುಮಾನ!

ಹಿಂದೆ ಇದ್ದ ಅವಿಭಕ್ತ ಕುಟುಂಬಗಳಲ್ಲಿ ಬಹಳಷ್ಟು ಜನ ಒಂದೇ ಮನೆ ಯಲ್ಲಿ ವಾಸಿಸುತ್ತಿದ್ದರು. ಕೆಲವರು ದುಡಿಯುತ್ತಿದ್ದರು. ಕೆಲವರು ದುಡಿಯ ದಿದ್ದರೂ ಸಂಸಾರ ನಿರ್ವಹಿಸಲು ಕಷ್ಟವಾಗುತ್ತಿರಲಿಲ್ಲ! ಒಬ್ಬರು ದುಡಿದರೆ ಮನೆಮಂದಿಯೆಲ್ಲಾ ಕುಳಿತು ಉಣಬಹುದಿತ್ತು! ದುಡಿಯುವವರು ದುಡಿಯದವರ ಮಧ್ಯೆ ವೈಮನಸ್ಸು ಇರುತ್ತಿರಲಿಲ್ಲ! ಎಲ್ಲರೂ ಒಂದಾಗಿ ಬೇಧ ಭಾವವಿಲ್ಲದೆ ಬದುಕುತ್ತಿದ್ದರು. ಮನೆಯಲ್ಲಿ ಹಿರಿಯರ ಮಾತು ವೇದ ವಾಕ್ಯವಾಗಿತ್ತು! ಇವರು ಅವರನ್ನೆಲ್ಲಾ ಸಮಾನವಾಗಿ ಕಾಣುತ್ತಿದ್ದರು. ಮನೆ ತುಂಬ ಜನರಿದ್ದುದರಿಂದ, ಪ್ರೀತಿಯ ಬಂಧನವಿದ್ದುದರಿಂದ, ಹಿರಿಯರ ಬಗ್ಗೆ ಗೌರವವಿದ್ದುದರಿಂದ ವಯಸ್ಸಾದವರು ಹೊರೆಯಾಗುತ್ತಿರಲಿಲ್ಲ! ಒಬ್ಬರನ್ನು ಸಹಾಯಕ್ಕೆ ಕರೆದರೆ ಇಬ್ಬರು ಮೂವರು ಬರುತ್ತಿದ್ದರು! ಕೆಲವೊಮ್ಮೆ ಆ ಮನೆಯಲ್ಲಿ ಯಾರೂ ಇರದಿದ್ದರೂ ನೆರೆ ಹೊರೆಯವರು ಮನೆಯವರಂತೆ ತೊಂದರೆಯಾದ ವೃದ್ಧರಿಗೆ ಸ್ಪಂದಿಸುತ್ತಿದ್ದರು. ಗಾಡಿಗಳಲ್ಲಿ ಆಸ್ಪತ್ರೆಗೆ ನೆರೆಯವರು ಕರೆದೊಯ್ಯಲು, ಕರೆತರಲು ಅಂತಹ ಖರ್ಚೇನೂ ಆಗುತ್ತಿರಲಿಲ್ಲ! ಶ್ರಮವಾದರೂ ಅವರಿಗೆ ಸಹಾಯ ನನ್ನಿಂದಾಯಿತಲ್ಲಾ ಎಂದು ಧನ್ಯರಾಗುತ್ತಿದ್ದರು. ಇಂದಿನಂತೆ ಒಂದು ದಿನದ ದುಡಿಮೆ ಹೋಯಿತಲ್ಲಾ ಎಂದು ಮರುಗುವ ಪರಿಸ್ಥಿತಿ ಅಂದು ಇರಲಿಲ್ಲ!

ಇಂದು ಆಧುನಿಕ ಜಗತ್ತು ಬಹಳಷ್ಟು ಬದಲಾಗಿದೆ. ಬದಲಾವಣೆ ಜಗದ ನಿಯಮ ! ಯಾವುದೇ ಬದಲಾವಣೆ ಗುಣ ಅವಗುಣಗಳೆರಡನ್ನೂ ಹೊಂದಿರುತ್ತದೆ. ಅವಿಭಕ್ತ ಕುಟುಂಬಗಳಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚು ಅವಕಾಶ ಗಳಿರಲಿಲ್ಲ. ಆದರೂ ಅದು ತ್ಯಾಗದ, ಮಮತೆಯ, ಸಹನೆಯ, ಸಹಕಾರದ, ಸನ್ನಡತೆಯ, ಸದಾಚಾರದ, ನೀತಿಯ, ಹೊಂದಾಣಿಕೆಯ, ಉತ್ತಮ ಸಂಸ್ಕಾರ ನೀಡುವ, ಮಾನವೀಯ ಸ್ಪಂದನದ, ಎಲ್ಲರೂ ಸಮ ಸಮ ಆರ್ಥಿಕ ಮಟ್ಟ ಹೊಂದುವ, ಒಬ್ಬರಿಗೊಬ್ಬರು ಹಗಲು, ಹೆಗಲು ಆಗಿರುವ, ಸಂಬಂಧಗಳ ಗಟ್ಟಿಗೊಳಿಸುವ, ಉತ್ತಮ ಮಾನವೀಯ ಮೌಲ್ಯಗಳ ಬೆಳೆಯಿಸುವ ಗರಡಿ ಮನೆಯಾಗಿತ್ತು ! ಇಂದು ಈ ಎಲ್ಲಾ ಗುಣಗಳು ಮಾಯವಾಗಿವೆ. ಇದಕ್ಕೆ ವ್ಯಕ್ತಿಯ ಸ್ವಾರ್ಥ, ಅಪರಿಮಿತ ಸ್ವಾತಂತ್ರ್ಯದ ಬಯಕೆ, ಸಂಬಂಧಗಳಿಗಿಂತ ಹಣ್ಣಕೆ ಹೆಚ್ಚು ಬೆಲೆ ಬಂದಿರುವುದು ಕಾರಣ. ಇದರ ಪ್ರತಿಫಲವೇ ವಿಭಕ್ತ ಕುಟುಂಬಗಳು.

ಕೆಲವು ವಿಭಕ್ತ ಕುಟುಂಬಗಳಲ್ಲಿ ಗಂಡ ಹೆಂಡತಿ, ಒಂದೋ ಎರಡೋ ಮಕ್ಕಳು ಇರುವುದನ್ನು ಕಾಣುತ್ತೇವೆ. ಇನ್ನು ಕೆಲವು ವಿಭಕ್ತ ಕುಟುಂಬಗಳಲ್ಲಿ ಅವರ ಜತೆಗೆ ವೃದ್ಧ ತಾಯಿ ತಂದೆ ಇರುತ್ತಾರೆ. ಮತ್ತೆ ಕೆಲವು ವಿಭಕ್ತ ಕುಟುಂಬಗಳಲ್ಲಿ ವೃದ್ಧ ತಂದೆ ಅಥವಾ ತಾಯಿ ಮಾತ್ರ ಇರುತ್ತಾರೆ. ಸಾಮಾನ್ಯವಾಗಿ ವೃದ್ಧ ತಾಯಿ ತಂದೆಯರ ಎಷ್ಟೋ ದೈನಂದಿನ ಕಾರ್ಯಗಳಿಗೆ ಇತರರ ಆಶ್ರಯಿ ಸುವುದು ಅನಿವಾರ್ಯ ಆಗಿರುತ್ತದೆ. ಇಂದ್ರಿಯಗಳು ಮಂದವಾಗಿ ಅವರ ಚಲನವಲನಗಳು ನಿಧಾನವಾಗಿರುತ್ತವೆ. ಚಟುವಟಿಕೆಯಿಂದ ಇರಲು ಅಶಕ್ತತೆ, ವೃದ್ಧಾಪ್ಯ ಬಿಡುವುದಿಲ್ಲ. ಕೆಲವರು ಶುಗರು, ಬಿಪಿ ಬೇರೆ ಬೇರೆ ಕಾಯಿಲೆಗಳಿಂದ ನರಳುತ್ತಿರುತ್ತಾರೆ. ಅವರಿಗೆ ಮಾತ್ರೆ, ಔಷಧ ಸಮಯಕ್ಕೆ ಸರಿಯಾಗಿ ಕೊಡಬೇಕಾಗುತ್ತದೆ. ಅವರನ್ನು ಆಗಾಗ ಆಸ್ಪತ್ರೆಗೆ ಕರೆದೊಯ್ಯಬೇಕಾಗಿರುತ್ತದೆ. ಕೆಲವರು ಹಾಸಿಗೆ ಹಿಡಿದಿರುತ್ತಾರೆ. ಅವರನ್ನು ಎಬ್ಬಿಸುವುದು, ಕೂಡಿಸುವುದು, ಮುಖ ತೊಳೆದು ಊಟ ಮಾಡಿಸುವುದು, ಹಾಸಿಗೆ ಹೊದಿಕೆ ಬದಲಿಸುವುದು, ಶುಚಿಗೊಳಿಸುವುದು ಮುಂತಾದವು ಮಾಡಬೇಕಾಗಿರುತ್ತದೆ. ಅವರ ಶುಶ್ರೂಷೆಗೆ ಒಬ್ಬರು ಅಗತ್ಯ. ಹೀಗಿರುವುದರಿಂದ ಇವರು ವಿಭಕ್ತ ಕುಟುಂಬಗಳಿಗೆ ಹೊರೆಯಾಗುತ್ತಿದ್ದಾರೆ.

ವೃದ್ಧರನ್ನು ನೋಡಿಕೊಳ್ಳುವುದು ಅವರ ಮಕ್ಕಳ ಆದ್ಯ ಕರ್ತವ್ಯ! ಆದರೆ ಇಂದು ಗಂಡ ಹೆಂಡತಿ ಇಬ್ಬರು ದುಡಿದರೂ ಸಂಸಾರ ನಿರ್ವಹಣೆ ಕಷ್ಟವಾಗಿದೆ. ಇರುವ ಒಂದು ಮಗುವನ್ನು ಶಾಲೆಗೆ ಸೇರಿಸಲು, ಒಳ್ಳೆಯ ವಿದ್ಯಾಭ್ಯಾಸ ಕೊಡಿಸಲು ಸಾಧ್ಯವಾಗದ ಸಮಾಜ ಸೃಷ್ಟಿಯಾಗಿದೆ. ಇಬ್ಬರೂ ಅವಸರ ಅವಸರವಾಗಿ ಮನೆಗೆಲಸ ಮುಗಿಸಿ ಇದ್ದ ಒಂದು ಮಗುವಿಗೆ ಸಮವಸ್ತ್ರ, ಟೈ, ಶೂ ಹಾಕಿ, ಉಣಿಸಿ ತಿನಿಸಿ, ತಿಂಡಿ ಬಾಕ್ಸ್ ತುಂಬಿಸಿ, ಆಟೋಕ್ಕೋ ಬಸ್ಸಿಗೋ ಕಾದು ಶಾಲೆಗೆ ಕಳುಹಿಸಿ, ಅವಸರ ಅವಸರವಾಗೆ ಮನೆಗೆ ಬಂದು ಆಹಾರ ನುಂಗಿ, ಆಫೀಸಿನ ಉಡುಗೆ ತೊಟ್ಟು ಬಸ್ಸೋ ಆಟೋನೋ ಹಿಡಿದು ಆಫೀಸು ತಲುಪುವ ಹೊತ್ತಿಗೆ ಯುದ್ಧ ಗೆದ್ದ, ಏನೋ ಸಾಧಿಸಿದ ಅನುಭವವಾಗಿರುತ್ತದೆ. ಹಾಗೇ ಕಚೇರಿ ಕೆಲಸ ಮುಗಿಸಿ ಮಗು ಶಾಲೆಯಿಂದ ಹಿಂದಿರುಗಿ ಬರುವ ಸಮಯಕ್ಕೆ ಸರಿಯಾಗಿ ಮನೆಗೆ ಬರುವುದೂ ಹರಸಾಹಸವಾಗಿರುತ್ತದೆ! ಕೆಲವರು ಪ್ರತಿದಿನ ಈ ಒತ್ತಡ ಅನುಭವಿಸುವುದು ಬೇಡಾ ಎಂದು ಚಿಕ್ಕ ಮಕ್ಕಳನ್ನೇ ಬೋರ್ಡಿಂಗ್ ಶಾಲೆಗೆ ಸೇರಿಸಿರುತ್ತಾರೆ.

ಸೇರಿಸದವರು ಅವಸರ ಅವಸರವಾಗಿ ಮನೆಗೆ ಬರುವರು. ಕಚೇರಿಯಿಂದ ಮನೆ ತಲುಪುವ ಹೊತ್ತಿಗೆ ದಣಿದು ವಿಶ್ರಾಂತಿ ಬಯಸುವಂತಾಗಿರುತ್ತದೆ! ಆಧುನಿಕ ಜೀವನ ಯಾಂತ್ರಿಕ, ಕೃತಕ, ಒತ್ತಡದ ಬದುಕಾಗಿರುವುದರಿಂದ ಯಾವ ಕ್ಷಣವನ್ನೂ ಆಸ್ವಾದಿಸಲು ಬಿಡದೆ ಅಶಾಂತವಾಗಿ ನಿಸ್ಸಾರವೆನಿಸುತಿದೆ . ಪ್ರಯುಕ್ತ ಸಂಸಾರ ಸಾಗಿಸಲು ದಣಿಯುತ್ತಿದ್ದಾರೆ! ಹೀಗಿರುವಾಗ ವಯಸ್ಸಾದ ಜೀವವನ್ನು ಹೇಗೆ ಶುಶ್ರೂಷೆ ಮಾಡುವುದು? ಆ ಮುದಿ ಜೀವಕೆ ಹೇಗೆ ಬೇಸರವಾಗದಂತೆ ನೋಡಿಕೊಳ್ಳುವುದು? ಇವರೇ ನೆಮ್ಮದಿ ಕಾಣದಿರುವಾಗ ಅವರಿಗೆ ಹೇಗೆ ಇವರು ನೆಮ್ಮದಿ ಕೊಟ್ಟಾರು? ಮುಪ್ಪಾದವರ ಬೇಕು, ಬೇಡಗಳನ್ನು ವಿಚಾರಿಸಲಾಗದ, ಅವರು ಬಯಸಿದ್ದು ತಂದುಕೊಡಲಾಗದ ಅವರನ್ನು ಸರಿಯಾಗಿ ಶುಶ್ರೂಷೆ ಮಾಡಲಾಗದ ಸಮಯಾಭಾವ, ಧರ್ಮಸಂಕಟ ಮಕ್ಕಳದ್ದಾಗಿ ದು:ಖಿಸುತ್ತಿದ್ದಾರೆ.

ಹಣಕಾಸಿನ ದೃಷ್ಟಿಯಿಂದ ಅಲ್ಲದಿದ್ದರೂ ಶುಶ್ರೂಷೆ ದೃಷ್ಟಿಯಿಂದ ಹೊರೆ ಯಾಗುವರು. ನಾವು ಹೇಗೆ ಇವರನ್ನು ಬೆಳೆಸಿದ್ವಿ, ಇವರು ನಮ್ಮನ್ನು ಸರಿಯಾಗಿ ನೋಡಿಕೊಳ್ಳಲಾಗುತ್ತಿಲ್ಲವೆಂಬ ಕೊರಗು ವೃದ್ಧ ತಂದೆ ತಾಯಿಯ ರದಾದರೆ, ಎಷ್ಟು ಚೆನ್ನಾಗಿ ನಮ್ಮನ್ನು ಸಾಕಿ ಸಲಹಿದರು ಅವರನ್ನು ಚೆನ್ನಾಗಿ ನೋಡಿ ಕೊಳ್ಳಲಾಗುತ್ತಿಲ್ಲವಲ್ಲ ಎಂಬ ನೋವು ಮಕ್ಕಳಿಗಾಗಿ ಇಬ್ಬರೂ ನೆಮ್ಮದಿಯಿಲ್ಲದೆ ಒಳಗೊಳಗೇ ಕೊರಗುವಂತಾಗಿದೆ.

ಕೆಲವರಿಗೆ ಮಕ್ಕಳೇ ಇರುವುದಿಲ್ಲ! ಇನ್ನೂ ಕೆಲವರಿಗಿದ್ದರೂ ದೂರದ ಪ್ರದೇಶಗಳಲ್ಲೋ ವಿದೇಶಗಳಲ್ಲೋ ಇರುತ್ತಾರೆ! ಕೆಲವರು ತಂದೆ ತಾಯಿ ಗಳ ಇಷ್ಟದ ವಿರುದ್ಧ ಲವ್ ಮ್ಯಾರೇಜ್ ಆಗಿ ಹೊಂದಾಣಿಕೆಯಿಲ್ಲದೆ ಜತೆಯಾಗಿಯೇ ಬದುಕುತ್ತಿರುವುದಿಲ್ಲ. ಕೆಲವು ಕುಟುಂಬಗಳಲ್ಲಿ ಗಂಡ ಹೆಂಡತಿಯರ ಮಧ್ಯ ಅನ್ಯೋನ್ಯತೆ, ಹೊಂದಾಣಿಕೆಯಿಲ್ಲದೆ ಸದಾ ಜಗಳ ಕಾಯುತ್ತಿರುತ್ತಾರೆ. ಹಲವರು ವಿವಾಹ ವಿಚ್ಛೇದನಗಳಿಗೆ ಕೋರ್ಟ್ ಮೊರೆ ಹೋಗಿರುತ್ತಾರೆ. ಬಹಳಷ್ಟು ಸಂಸಾರಗಳು ಕೋರ್ಟಿಗೆ ಹೋಗದಿದ್ದರೂ ಕೂಡಿ ಬಾಳುತ್ತಿರುವುದಿಲ್ಲ! ಕೆಲವರು ಯಾಂತ್ರಿಕವಾಗಿ ಜತೆಗಿರುತ್ತಾರೆ. ಕೆಲವರು ವಿಚ್ಛೇದನ ಪಡೆದು ಒಂಟಿಯಾಗಿರಲೂ ಒಂದಾಣಿಕೆ ಮಾಡಿಕೊಂಡಿರಲೂ ಆಗದೆ ಇರುವ ಒಂದು ಮಗುವಿಗಾಗಿ ಇಬ್ಬರೂ ನಮಗೆ ಬೇಕು, ನನಗೆ ಬೇಕು ಅಂತ ಕೋರ್ಟಿಗೆ ಅಲೆಯುತ್ತಾ ಕಿತ್ತಾಡುತ್ತಿರುತ್ತಾರೆ. ಇವರೇ ಹೀಗೆ ನೆಮ್ಮದಿಗೆಟ್ಟು ಅಲೆಯುತ್ತಿರುವಾಗ ಅವರ ವೃದ್ಧ ತಂದೆ ತಾಯಂದಿರಿಗೆ ಹೇಗೆ ನೆಮ್ಮದಿ ಕೊಟ್ಟಾರು? ಇವರನ್ನು ಬಿಟ್ಟರೆ ಯಾರೂ ನೋಡಿಕೊಳ್ಳಲು ಮನೆಯಲ್ಲಿ ಇರುವುದಿಲ್ಲ! ಹೀಗಾಗಿ ವೃದ್ಧರ ಮತ್ತು ಅವರ ಮಕ್ಕಳ ಬದುಕು ಅಶಾಂತವಾಗಿದೆ! ವೇದನಾಮಯವಾಗಿದೆ!

ಎಷ್ಟೋ ಅವಿಭಕ್ತ ಕುಟುಂಬಗಳು ಇಂತಹ ಪರಿಸ್ಥಿತಿಯಿಂದ ನರಳುತ್ತಿವೆ. ಇಂಥಾ ಸಂದಿಗ್ಧ, ಅಸಂತೃಪ್ತ ಜೀವನ ಎಲ್ಲರದ್ದೂ ಆಗಬಾರದು. ಇಂತಹ ಕುಟುಂಬಗಳಿಗೆ, ವೃದ್ದರ ಮತ್ತು ಅವರ ಮಕ್ಕಳ ಹಿತ ದೃಷ್ಟಿಯಿಂದ ವೃದ್ದಾಶ್ರಮಗಳು ಅಥವಾ ವೃದ್ಧರ ಶಾಲೆಗಳು ಪರಿಹಾರ! ಅಶಕ್ತ, ಅನಾಥ ವೃದ್ಧರಿಗೆ ವೃದ್ಧಾಶ್ರಮಗಳಲ್ಲಿ, ಸಶಕ್ತರಿಗೆ ವೃದ್ಧರ ಶಾಲೆಗಳಲ್ಲಿ ಸಮಾನ ಮನಸ್ಕರು, ವಯಸ್ಕರು ದೊರೆಯುವುದರಿಂದ ಮನದ ಸಂಗತಿಗಳನ್ನು ಹಂಚಿಕೊಂಡು ಮನ ಹಗುರ ಮಾಡಿಕೊಳ್ಳಲು ಉತ್ತಮ ತಾಣ ! ಅವಶ್ಯಕತೆಗನುಗುಣವಾಗಿ ವೃದ್ಧಾಶ್ರಮಗಳು ಇರಬೇಕು. ಸೇವಾ ಮನೋಭಾವದ ವೃದ್ಧರ ಸೇವಕರು ಅಲ್ಲಿ ಇರುವಂತಾಗಬೇಕು. ವೃದ್ಧಾಶ್ರಮಗಳು ವೃದ್ಧರ ಶಾಲೆಗಳೂ ಆಗಬೇಕು. ಅಂದರೆ ಮಕ್ಕಳು ಪ್ರತಿದಿನ ಶಾಲೆಗೆ ಹೋಗಿಬರುವಂತೆ ದೈಹಿಕ ಸಾಮರ್ಥ್ಯ ಹೊಂದಿರುವ ವೃದ್ಧರು ನಿಗದಿಗೊಳಿಸಿದ ವಾಹನದಲ್ಲಿ ಅಲ್ಲಿಗೆ (ವೃದ್ಧರ ಶಾಲೆಗೆ) ಹೋಗಿ ಹಿಂತಿರುಗಿ ಮನೆಗೆ ಬರುವಂತಾಗಬೇಕು! ಅವರಿಗೆ ವೃದ್ಧರ ಶಾಲೆಗಳಲ್ಲಿ ಗ್ರಂಥಾಲಯ, ದಿನ ಪತ್ರಿಕೆ, ವಾರ ಪತ್ರಿಕೆ, ಎಲ್ಲಾ ನಿಯತ ಕಾಲಿಕಗಳು, ಕೇರಂ, ಚೆಸ್, ಟಿ.ವಿ., ಪಾರ್ಕ್, ಜೋಕಾಲಿ, ಶೆಟಲ್ ಬ್ಯಾಟ್ಮಿಟನ್, ಈಜು ಕೊಳ ಮುಂತಾಗಿ ಬೇಸರ ನೀಗುವ ವ್ಯವಸ್ಥೆ ಇರಬೇಕು!

ನಿತ್ಯ ಚಿಂತನಗಳು, ಪ್ರಾರ್ಥನೆ, ಭಜನೆ, ಆಧ್ಯಾತ್ಮ ವಿಚಾರಗಳ ಚರ್ಚೆಗಳು, ಕೀರ್ತನೆ, ಆರೋಗ್ಯ ಸುಧಾರಣೆಯ ಸಲಹೆಗಳು, ವೃದ್ಧರನ್ನು ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಗಳು ಅವುಗಳನ್ನು ತಾವೇ ಬಗೆಹರಸಿಕೊಳ್ಳುವಂತೆ ಸಲಹೆಗಳನ್ನು ನೀಡಬೇಕಾದ ಕಾರ್ಯಕ್ರಮಗಳು, ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ವ್ಯವಸ್ಥೆ, ಸಂತೋಷ ಕೂಟಗಳು, ನಗೆಕೂಟಗಳು, ಆಗಾಗ ಅಗತ್ಯ ಕಿರು ನಾಟಕಗಳು, ಮನರಂಜನೆ ಕಾರ್ಯಕ್ರಮಗಳು ಇರಬೇಕು! ಇವುಗಳಲ್ಲಿ ವೃದ್ಧರು ಭಾಗವಹಿಸಲು ಅವಕಾಶ ಇರಬೇಕು. ಹೀಗೆ ವೃದ್ಧರಿಗೆ ಮನೆಗಿಂತ ವೃದ್ಧರಶಾಲೆಗಳೇ ಉತ್ತಮ ಎಂಬ ಭಾವನೆ ಬರುವಂತೆ ಇದ್ದಾಗ ವೃದ್ಧರ ಮತ್ತು ಅವರ ಮಕ್ಕಳ ನೆಮ್ಮದಿಗೆ ಕಾರಣವಾಗುತ್ತವೆ.

ವೃದ್ಧರಿಗೆ ಮಗ ಸೊಸೆ ಅಥವಾ ಮಗಳು ಅಳಿಯ ಉದ್ಯೋಗಕ್ಕೆ , ಮೊಮ್ಮಕ್ಕಳು ಶಾಲೆಗೆ ಹೋದ ಮೇಲೆ ಮನೆಯಲ್ಲಿ ಒಬ್ಬರೇ ಇದ್ದೂ ಇದ್ದೂ ಮತ್ತೆ ಮತ್ತೆ ಮಲಗುವುದು ಏಳುವುದು ಮಾಡಿ ಮಾಡಿ, ಟಿ.ವಿ. ನೋಡುವುದು ಕುಳಿತಕೊಳ್ಳುವುದು, ಒಂದೇ ಭಂಗಿಯಲ್ಲಿ ಕುಳಿತು, ಮಲಗಿ ಸಾಕಾಗಿ ಮತ್ತೆ ಮತ್ತೆ ಭಂಗಿಗಳನ್ನು ಬದಲಿಸುವುದು, ದೇಹ ನೋವಾಗುವುದು.

ಮಾತನಾಡುವವರು, ಕಷ್ಟ ಸುಖ ಹಂಚಿಕೊಳ್ಳುವವರಿಲ್ಲದೆ ಒಂಟಿತನ ಕಾಡಿ ಮನವು ಕೊರಗುವಂತಾಗಿ ದೇಹ ಮನಸು ಅನೇಕ ರೋಗಗಳ ತವರು ಆಗುವುದು ಕಾಣುತ್ತಿದ್ದೇವೆ. ವೃದ್ಧರು ಶಾಲೆಗಳಿಗೆ ಹೋಗುವುದರಿಂದ ಈ ನೋವು ಸಂಕಟ ಇಲ್ಲವಾಗಿ ಆರೋಗ್ಯ ಸುಧಾರಣೆಯಾಗುತ್ತದೆ. ಮಕ್ಕಳಿಗೆ ಖರ್ಚು, ಶ್ರಮ, ಟೆನ್ಷನ್ ತಪ್ಪುತ್ತದೆ! ಸರ್ಕಾರ ವೃದ್ಧರಶಾಲೆಗಳನ್ನು ನಡೆಯಿಸಲು ಬೇಕಾಗುವ ಸಹಕಾರವನ್ನು ವೃದ್ಧರ ಮಕ್ಕಳಿಂದ, ದಾನಿಗಳಿಂದ ಪಡೆದು, ವೃದ್ಧಾಪ್ಯ ವೇತನ, ಯಶಸ್ವಿನಿ ಆರೋಗ್ಯ ಕಾರ್ಡ್ ವೃದ್ಧರಿಗೆ ಕೊಡಮಾಡುವ ಅನುಕೂಲಗಳನ್ನು ಬಳಸಿಕೊಂಡು ವೃದ್ಧರಿಗೆ ಅನುಕೂಲವಾಗುವಂತೆ ನಡೆಸ ಬೇಕು! ಸರ್ಕಾರ ವೃದ್ಧರನ್ನು ನಿರ್ಲಕ್ಷಿಸಿದವರ ಬಗ್ಗೆ ಕಠಿಣ ಕಾನೂನುಗಳ ರಚಿಸಿ ಶಿಕ್ಷಿಸಲು ಹೊರಡುವುದಕ್ಕಿಂತಾ ಅಗತ್ಯ ವೃದ್ಧಾಶ್ರಮಗಳನ್ನು ವೃದ್ದರ ಶಾಲೆಗಳ (ವೃದ್ಧರ ಆಶ್ರಮಗಳು ಮತ್ತು ಶಾಲೆಗಳ) ನ್ನು ತೆರೆದು ವ್ಯವಸ್ಥಿತವಾಗಿ ನಡೆಯಿಸುವಂತಾದಾಗ ವೃದ್ಧರ ಹಿತ ರಕ್ಷಿಸಿದಂತಾಗಿ ವೃದ್ಧರಿಗೂ ಮತ್ತು ಅವರ ಮಕ್ಕಳಿಗೂ ಮುಕ್ತಿ ದೊರಕೀತು!

LEAVE A REPLY

Please enter your comment!
Please enter your name here