ಶಾಮನೂರು ಮಹಾಸಭಾ ಅಜೀವ ಅಧ್ಯಕ್ಷರಾಗಲಿ

0
13

ದಾವಣಗೆರೆ:

      ವೀರಶೈವ ಧರ್ಮದ ಒಳ ಪಂಗಡಗಳನ್ನು ಒಗ್ಗೂಡಿಸಿಕೊಂಡು ಹೋಗುವ ಎದೆಗಾರಿಕೆ ಇರುವ ಡಾ.ಶಾಮನೂರು ಶಿವಶಂಕರಪ್ಪನವರು ಅಖಿಲ ಭಾರತ ವೀರಶೈವ ಮಹಾಸಭಾದ ಅಜೀವ ಅಧ್ಯಕ್ಷರಾಗಲಿ ಎಂದು ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಆಶಯ ವ್ಯಕ್ತಪಡಿಸಿದರು.

      ನಗರದ ಶ್ರೀಮದ್ ಅಭಿನವ ರೇಣುಕಾ ಮಂದರಿದಲ್ಲಿ ಶನಿವಾರ ಸಂಜೆ ರಾಷ್ಟ್ರೀಯ ವೀರಶೈವ ಮಠಾಧೀಶರ ಪರಿಷತ್ತು ಆಶ್ರಯದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪನವರಿಗಾಗಿ ಏರ್ಪಡಿಸಿದ್ದ ಅಭಿನಂದನಾ ಧರ್ಮ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

      ಕೆಲವರು ವೀರಶೈವ ಧರ್ಮದಿಂದ ಲಿಂಗಾಯತವನ್ನು ಬೇರ್ಪಡಿಸಲು ನಡೆಸಿದ ಷಡ್ಯಂತ್ರದ ಸಂದರ್ಭದಲ್ಲಿ ಮಹಾಸಭಾ ಅಧ್ಯಕ್ಷರಾಗಿರುವ ಡಾ.ಶಾಮನೂರು ಶಿವಶಂಕರಪ್ಪ ವೀರಶೈವ-ಲಿಂಗಾಯತ ಎರಡೂ ಒಂದೇ ಎಂಬ ಗಟ್ಟಿ ನಿಲುವು ತಳೆದಿದ್ದರು. ಅಕಸ್ಮಾತ್ ಇವರು ಅಧ್ಯಕ್ಷರಾಗದೇ ಇದ್ದಿದ್ದರೆ, ನಮಗೆ ಮತ್ತಷ್ಟು ಆಟವಾಡಿಸುತ್ತಿದ್ದರು. ಶಾಮನೂರು ಅವರದೇ ನಾಟಿ ಭಾಷೆಯಲ್ಲಿ ಧರ್ಮ ಕಟ್ಟುವ ಕಾರ್ಯ ಮಾಡುತ್ತಿದ್ದು, ವೈರಿಗಳನ್ನು ನಗು, ನಗುತಾ ಸ್ವಾಗತಿಸುವ ಅಜಾತ ಶತೃ ಆಗಿದ್ದಾರೆ. ಶಾಮನೂರು ಶಿವಶಂಕರಪ್ಪನವರು ಮಹಾಸಭಾದ ಅಜೀವ ಅಧ್ಯಕ್ಷರಾಗಲಿಕ್ಕೆ ನಮ್ಮೆಲ್ಲರ ಅಂತಃಕರಣದ ಆಶೀರ್ವಾದ ಮತ್ತು ಸಹಮತವಿದೆ ಎಂದು ಘೋಷಿಸಿದರು.

      ಮಹಾಸಭಾಕ್ಕೆ ಪೂರಕವಾಗಿ ಶಕ್ತಿ ತುಂಬುವ ಕೆಲಸವನ್ನು ಮಠಾಧೀಶರ ಪರಿಷತ್ತು ಮಾಡಿಕೊಂಡು ಬಂದಿದೆ. ವೀರಶೈವ ಲಿಂಗಾಯತ ಬೇರೆ, ಬೇರೆ ಎಂಬ ವಾದ-ವಿವಾದವನ್ನು ಕೇಳಿ, ಧರ್ಮ ಪೀಠಗಳಿಗೆ ಹಾಗೂ ಧರ್ಮ ನಿಷ್ಠರಿಗೆ ಆದ ನೋವು ಹೇಳಲೂ ಸಾಧ್ಯವಿಲ್ಲ. ಸಮಾಜ ಒಡೆದು ರಾಜಕೀಯ ಲಾಭ ಪಡೆಯಬೇಕೆಂಬ ಕಾರಣಕ್ಕೆ ಪವಿತ್ರ ಧರ್ಮದಲ್ಲಿ ಪ್ರವೇಶ ಮಾಡಿ ಜನರ ಮನಸ್ಸು ಘಾಸಿ ಗೊಳಿಸಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

      ವೀರಶೈವ ಧರ್ಮದಿಂದ ಲಿಂಗಾಯತವನ್ನು ಪ್ರತ್ಯೇಕಿಸಲು ಯಾರಿಂದಲೂ, ಎಂದಿಗೂ ಸಾಧ್ಯವಿಲ್ಲ. ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾಡನ ನೀಡಬೇಕೆಂಬುದಾಗಿ ಹಿಂದಿನ ಸರ್ಕಾರ ಮಾಡಿದ್ದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದರೂ, ಕಿಡಿ ಹೊತ್ತಿಸುವ ಕಿಡಿಗೇಡಿಗಳು ಇನ್ನೂ ಇದ್ದಾರೆ. ಅವರು ಎಲ್ಲೆ ಹೋದರೂ ಅವರಿಗೆ ಎಂದಿಗೂ ಜಯ ಸಾಧಿಸಲು ಸಾಧ್ಯವಿಲ್ಲ ಎಂದರು.

      ವೀರಶೈವ ಧರ್ಮದ ಆದರ್ಶಗಳನ್ನು ಕಂಡು ಆಕಷಿತರಾದ ಬಸವಣ್ಣನವರು ವೀರಶೈವ ಧರ್ಮವನ್ನು ಮತ್ತಷ್ಟು ಬೆಳೆಸಿದ್ದಾರೆಯೇ ಹೊರತು, ಅವರು ಹೊಸ ಧರ್ಮ ಕಟ್ಟಲಿಲ್ಲ. ಈ ಸತ್ಯವನ್ನು ಎಲ್ಲರಿಗೂ ತಿಳಿಸಬೇಕಾಗಿದೆ. ವೀರಶೈವ ಒಂದೇ ಧರ್ಮವಾಗಿದ್ದು, ಲಿಂಗಾಯತ ಅದರಲ್ಲಿ ಬರುವ ಆಚಾರವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕೆಂದು ಹೇಳಿದರು.

      ವೀರಶೈವ ಧಾರ್ಮದ ಆಚಾರ-ವಿಚಾರ, ಮೂಲ ಸಿದ್ಧಾಂತಗಳನ್ನು ಅರಿಯದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರನ್ನು ಕಂಡು ವ್ಯಥ ಎನಿಸುತ್ತದೆ. ವೀರಶೈವ ಧರ್ಮ ತನ್ನಷ್ಟಕ್ಕೆ ತಾನೇ ಬದುಕಿ ಬಾಳಿದ ಧರ್ಮವಲ್ಲ. ದೀನ-ದಲಿತರು, ಹಿಂದುಳಿದವರನ್ನು ತನ್ನ ತೋಳ ತೆಕ್ಕೆಯಲ್ಲಿ ಕೊಂಡ್ಡೊಯ್ದ ಧರ್ಮವಾಗಿದೆ. ಈ ಧರ್ಮದ ಆದರ್ಶವನ್ನು ತಿಳಿಯವದವರು ಸಮಾಜದಲ್ಲಿ ಕಲುಷಿತ ವಾತಾವರಣ ಸೃಷ್ಟಿಸುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.

      ವೀರಶೈವ ಧರ್ಮ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರು, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ವೀರಶೈವ ಲಿಂಗಾಯತ ವಿಚಾರದಲ್ಲಿ ಶಂಕರಪ್ಪನವರು ಗಟ್ಟಿ ನಿಲುವು ತಳೆದರು ಎಂಬುದಾಗಿ ಹೇಳುತ್ತಿದ್ದಾರೆ. ಆದರೆ, ನಾನು ಒತ್ತಡದ ಮಧ್ಯೆಯಲ್ಲಿ ನನ್ನ ಕರ್ತವ್ಯವನ್ನು ದಿಟ್ಟವಾಗಿ ನಿರ್ವಹಿಸಿದ್ದೇವೆ ಎಂದರು.

      ನಮ್ಮವರೇ ಕೆಲವರು ಒಗ್ಗಟ್ಟನ್ನು ಮುರಿದು ಹಾಳು ಮತ್ತು ಹೋಳು ಮಾಡುವ ಕೆಲಸ ಮಾಡಿದ್ದಾರೆ. ಜಾಮದಾರ್ ಅಧಿಕಾರದಲ್ಲಿದ್ದಾಗ ಒಬ್ಬರಿಗೂ ಕೆಲಸ ಮಾಡಿಕೊಡಲಿಲ್ಲ. ಆದರೆ, ಈಗ ನಾವೇ ಮುಂದೆ ಹುಟ್ಟಿದ್ದೇವೆ ಎನ್ನುತ್ತಾರೆ. ಬಾಯಿಗೆ ಬಂದಂಗೆ ಮಾತನಾಡುತ್ತಾರೆ. ಸಮಾಜ ಒಡೆಯುವ ಕೆಲಸ ಯಾರೂ ಸಹ ಮಾಡಬೇಡಿ. ವೀರಶೈವ ಧರ್ಮದಲ್ಲಿನ ಒಳ ಪಂಗಡಗಳಲ್ಲಿ ಹೆಣ್ಣು-ಗಂಡು ಕೊಡುಕೊಳ್ಳುವಿಕೆ ಮಾಡಿಕೊಳ್ಳುವ ಮೂಲಕ ಒಗ್ಗೂಡುವ ಕೆಲಸ ಮಾಡೋಣ ಎಂದರು.

      ಮಹಾಸಭಾದ ಉಪಾಧ್ಯಕ್ಷ ಅಥಣಿ ವೀರಣ್ಣ ಮಾತನಾಡಿ, ಮಹಾಸಭಾದಲ್ಲಿ ಶಾಮನೂರು ಶಿವಶಂಕರಪ್ಪನವರು ಅಜೀವ ಅಧ್ಯಕ್ಷರಾಗಲು ನನ್ನ ಅನುಮೋದನೆ ಇದೆ. ಎಲ್ಲಾ ಜಗದ್ಗುರುಗಳು ಶಾಮನೂರು ಶಿವಶಂಕರಪ್ಪ ಅಧ್ಯಕ್ಷರಾಗಿ ಮುಂದುವರೆಯಲು ಅವರ ಮನವೋಲಿಸಬೇಕು. ಸಮಾಜ ಛಿದ್ರವಾಗಲು ಅವಕಾಶ ನೀಡದಂತೆ ಹೋರಾಟ ಮಾಡಿದ ಶ್ರೀರಂಭಾಪುರಿ ಜಗದ್ಗುರುಗಳು ಹೆಸರು ಸಜರಾಮರವಾಗಿ ಉಳಿಯಲಿದೆ ಎಂದರು.

      ಉಜ್ಜಯಿನಿ ಜಗದ್ಗುರು ಶ್ರೀಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಾಗವತ್ಪಾದರು, ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಭಾಗವಾತ್ಪಾದರು ದಿವ್ಯ ಸಾನಿಧ್ಯ ವಹಿಸಿದ್ದರು. ನ್ಯಾಯವಾದಿ ಗಂಗಾಧರ್ ಗುರುಮಠ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆವರಗೊಳ್ಳದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ ಸ್ವಾಗತಿಸಿದರು. ಕೊಟ್ಟೂರು ಶ್ರೀಗಳು ಕಾರ್ಯಕ್ರಮ ನಿರೂಪಿಸಿದರು.

      ಈ ಸಂದರ್ಭದಲ್ಲಿ ಗಂಗಾಧರ್ ಗುರುಮಠ್, ಶಶಿಧರ್ ಶಾನ್‍ಭಾಗ್, ಅಣಬೇರು ರಾಜಣ್ಣ, ವೀರೇಶ್ ಆರ್. ಹಿರೇಮಠ, ಚಿದಾನಂದ್ ಮಠದ್, ಎಂ.ಎಸ್.ನರಿಬೊಳ್, ದಿವ್ಯಾ ಹಂಗರಗಿ, ವೀರಭದ್ರಪ್ಪ ವರದಾನಿ, ಆರ್.ಟಿ.ಪ್ರಶಾಂತ್, ದೇವರಮನಿ ಶಿವಕುಮಾರ್, ಪ್ರಸಾದ್ ಸಿರಿಮನೆ, ಆರ್.ಆರ್.ಹಿರೇಮಠ ಮತ್ತಿತರರಿಗೆ ಗುರು ರಕ್ಷೆ ನೀಡಲಾಯಿತು. ವಿವಿಧ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 ಹಡಬಿಟಿ ಹಣದಿಂದ ಮಾತು!

      ಹಡಬಿಟಿ ಮತ್ತು ಬೇನಾಮಿ ಲಂಚದ ಹಣದಿಂದ ಸೊಕ್ಕು ಜಾಸ್ತಿಯಾಗಿ ಕೆಲವರು ಸಮಾಜ ಒಡೆಯುವ ಮಾತನಾಡುತ್ತಿದ್ದಾರೆಂದು ಅಖಿಲ ಭಾರತ ವೀರಶೈವ ಮಹಸಭಾ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಟೀಕಿಸಿದ್ದಾರೆ.

      ವೀರಶೈವ ಧರ್ಮ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡಬೇಕೆಂದು ಕಳೆದ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಮಾಡಿದ್ದನ್ನೂ ಕೇಂದ್ರ ತಿರಸ್ಕರಿಸಿದ್ದರೂ, ಇನ್ನೂ ಕೆಲವರು ದೆಹಲಿಯಲ್ಲಿ, ಬೆಂಗಳೂರಿನಲ್ಲಿ ಹೋರಾಟ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದಕ್ಕೆ ಅವರೆಲ್ಲಾ ಲಂಚ ಪಡೆಯುವ ಮೂಲಕ ಹಡಬಿಟಿ ಹಣ ಗಳಿಸಿರುವುದರಿಂದ ಸೊಕ್ಕು ಬಂದಿರುವುದೇ ಕಾರಣವಾಗಿದೆ ಎಂದರು.

      ವೀರಶೈವ ಧರ್ಮವನ್ನು ಎರಡು ಹೋಳು ಮಾಡಲು ಯತ್ನಿಸಿದ ವಿನಯಕುಲ್ಕರ್ಣಿ ಸೇರಿದಂತೆ ಹಲವರು ಸೋತಿದ್ದಾರೆ. ಆದರೆ, ಎಂ.ಬಿ.ಪಾಟೀಲ್ ನೂರಾರು ಕೋಟಿ ಚೆಲ್ಲಿ ಗೆದ್ದು ಬಂದಿದ್ದಾನೆ. ಈ ಧರ್ಮ ಒಡೆದ ಕಾವು ನಮಗೂ ಉತ್ತರ ಕ್ಷೇತ್ರದಲ್ಲಿ ತಟ್ಟಿತು. ಕೆಲವರು ಅಲ್ಲಿ ಕುತಂತ್ರ ಮಾಡಿ ಎಸ್.ಎಸ್.ಮಲ್ಲಿಕಾರ್ಜುನ್ ಅನ್ನ ಸೋಲಿಸಿದ್ರು. ಆದರೆ, ದಕ್ಷಿಣದಲ್ಲಿ ಲಿಂಗಾಯತ ಅಂತಾ ಹೇಳಿಕೊಳ್ಳುವ ಗಂಡು ಯಾರೂ ಇರಲಿಲ್ಲ. ಹೀಗಾಗಿ ನಮಗೆ ಗೆಲುವು ಸಾಧ್ಯವಾಯಿತು ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here