“ಶಾಸನ ಮತ್ತು ಕನ್ನಡಲಿಪಿಯ ವಿಕಾಸ-ಕಾರ್ಯಗಾರ”

0
31

ತುಮಕೂರು

            ಬಹುಕಾಲ ಉಳಿಯುವ ಗಟ್ಟಿಯಾದ ವಸ್ತುವಿನ ಮೇಲೆ ಕೊರೆದ ಪ್ರಾಚೀನ ಕಾಲದ ಲಿಪಿಯನ್ನು ಶಾಸನ ಎಂದು ಕರೆಯಬಹುದು. ಅದು ರಾಜನಿಂದ ಹೊರಡಿಸಲ್ಪಟ್ಟಿದುದರಿಂದ ಅದನ್ನು ರಾಜಾಜ್ಞೆ ಎನ್ನುವರು. ಇದರಿಂದ ಒಂದು ಭಾಷೆಯ ಲಿಪಿಯ ಬೆಳವಣಿಗೆಯನ್ನು ತಿಳಿಯಲು ಸಾಧ್ಯ ಎಂದು ತುಮಕೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಡಿ.ವಿ.ಪರಮಶಿವಮೂರ್ತಿ ನುಡಿದರು.
ಅವರು ನಗರದ ಶ್ರೀ ಸಿದ್ಧಗಂಗಾ ಮಹಿಳಾ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗಾಗಿ ಏರ್ಪಡಿಸಿದ್ದ “ಶಾಸನ ಮತ್ತು ಕನ್ನಡ ಲಿಪಿಯ ವಿಕಾಸ” ಎಂಬ ಕಾರ್ಯಗಾರದಲ್ಲಿ ಉದ್ಘಾಟನೆ ಮಾಡಿ ಮಾತನಾಡಿದರು.
            ಭಾತರದಲ್ಲಿ ಇದುವರೆಗೆ ಒಂದು ಲಕ್ಷ ವಿವಿಧ ಭಾಷೆಯ ಶಾಸನಗಳು ದೊರೆತಿವೆ. ಪ್ರಪಂಚದ ಬೇರೆ ಯಾವ ಭಾಷೆಯಲ್ಲಿಯೂ ಕೂಡಾ ಇಂಥಹ ಶಾಸನ ಸಂಪತ್ತು ದೊರೆತಿಲ್ಲ. ಕನ್ನಡ ಭಾಷೆಯಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಶಾಸನಗಳು ದೊರೆತಿವೆ. ಭಾರತದಲ್ಲಿ ತಮಿಳುನಾಡನ್ನು ಬಿಟ್ಟರೆ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಶಾಸನಗಳು ದೊರೆತಿರುವುದು. ಈ ಶಾಸನಗಳು ಭಾರತದ ಚರಿತ್ರೆಯು ಸಮಕಾಲೀನ ಘಟನೆಗಳ ಮುಖ್ಯ ಆಧಾರಗಳಾಗಿವೆ. ಇಷ್ಟೊಂದು ಶಾಸನ ಸಂಪತ್ತು ಭಾರತದಲ್ಲಿದ್ದರೂ ಅವುಗಳನ್ನು ಸಂಶೋಧಿಸಿ ಅಧ್ಯಯನ ಮಾಡಲಾರಂಭಿಸಿದವರೇ ಪಾಶ್ಚಿಮಾತ್ಯರು ಎಂದು ಹೇಳಿದರು.
             ಹಸ್ತಪ್ರತಿಗಳಲ್ಲಿ ಲಿಪಿಯ ಬೆಳವಣಿಗೆಯನ್ನು ಕುರಿತು ಮಾತನಾಡಿದ ಆಯುರ್ವೇದ ವೈದ್ಯರಾದ ಡಾ.ಬಿ.ನಂಜುಂಡಸ್ವಾಮಿಯವರು ಕಾಗದವೇ ಪರಿಚಯವಿಲ್ಲದ ಕಾಲದಲ್ಲಿ ನಮ್ಮ ಪೂರ್ವಿಕರು ಕರ್ನಾಟಕದಲ್ಲಿ ತಾಳೆಗರಿಯ ಮೇಲೆ ಉತ್ತರ ಭಾರತದವರು ಭೂಜ್ರ್ವ ಪತ್ರದ ಮೇಲೆ ಕಬ್ಬಿಣದ ಕಂಠದಿಂದ ಕೊರೆಯುತ್ತಿದ್ದರು. ಅವುಗಳನ್ನೇ ತಾಡೋಲೆಗಳು ಎಂದು ಕರೆಯಲಾಗಿದೆ. ಇಂಥಹ ತಾಡೋಲೆಗಳು ಕರ್ನಾಟಕದಲ್ಲಿ ಸಾವಿರಾರು ಕಟ್ಟುಗಳು ದೊರೆತಿವೆ ಎಂದು ಹೇಳಿದರು.
             ತಾಳೆಗರಿಗಳಲ್ಲಿ ಬರೆಯುವ ಪದ್ದತಿ 20ನೇ ಶತಮಾನದವರೆಗೂ ಮುಂದುವರಿದಿತ್ತು. ತುಮಕೂರಿನ ಭೀಮ ಸಮುದ್ರದಲ್ಲಿದ್ದ ಹಳನಯ್ಯ ಎಂಬ ವ್ಯಕ್ತಿಯೇ ತಾಳೆಗರಿಯ ಕೊನೆಯ ಬರಹಗಾರ. ಅವನು ಪುಸ್ತಕದಲ್ಲಿ ಮುದ್ರಿಸಿದ್ದನ್ನು ತಾಳೆಗರಿಯ ಮೇಲೆ ಕೊರೆದು ಅದನ್ನು ಅವರು ರಕ್ಷಿಸಿಟ್ಟುಕೊಳ್ಳುತ್ತಿದ್ದುದು ವಿಶೇಷವಾಗಿದೆ ಎಂದರು.
               ಕಾರ್ಯಗಾರದ ಅಧ್ಯಕ್ಷತೆ ವಹಿಸಿದ್ದ ಸಂಶೋಧಕ, ಪ್ರಾಂಶುಪಾಲರಾದ ಡಾ.ಡಿ.ಎನ್.ಯೋಗಿಶ್ವರಪ್ಪ ನವರು ಶಾಸನಗಳು ಚರಿತ್ರೆಯ ಜೀವನಾಡಿಗಳು. ಮಾನವ ಜನಾಂಗದ ಬದುಕಿನ ಚಿತ್ರಣವನ್ನು ತಿಳಿಯಲು ಶಾಸನಗಳು ಸಹಕಾರಿಯಾಗಿವೆ. ಆದರೆ ಇಂದು ಶಾಸನದ ಪ್ರಾಮುಖ್ಯತೆ ಗೊತ್ತಿಲ್ಲದೆ ಹಲವರು ಅವುಗಳನ್ನು ಕುಡುಗೋಲು ಮಸೆಯಲು, ದನಕರುಗಳನ್ನು ಕಟ್ಟಲು ಉಪಯೋಗಿಸುತ್ತಿದ್ದಾರೆ. ಅವುಗಳ ಸ್ಥಿತಿ ಇಂದು “ಬಿದ್ದರೆ ಅಗಸನ ಕಲ್ಲು, ಎದ್ದರೆ ಪೂಜಾರಿ ಕಲ್ಲು’ ಎಂಬಂತಾಗಿದೆ ಎಂದು ಅಭಿಪ್ರಾಯಪಟ್ಟರು.
             ತುಮಕೂರು ಜಿಲ್ಲೆಯಲ್ಲಿ ಇದರುವರೆಗೆ 983 ಶಾಸನಗಳು ದೊರೆತಿದ್ದು, ಹೊನ್ನುಡಿಕೆಯ ಜಲಗಾರ ದಿಬ್ಬದ ಮೇಲೆ ದೊರೆತಿರುವ ಶಾಸನವೇ ಅತಿ ಪ್ರಾಚೀನವಾದುದು. ಇಂಥಹ ಶಾಸನಗಳು ದೊರಕಿದ ಊರಿನಲ್ಲಿ ಒಂದೆಡೆ ಕ್ರೂಢೀಕರಿಸಿ ಶಾಲಾ ಕಾಲೇಜುಗಳ ಆವರಣದಲ್ಲಿ ಶಾಸನ ಸಂಗ್ರಹಾಲಯ ಮಾಡಬಹುದು. ಶಾಸನ ಸಂಪತ್ತು ದೇಶದ ಇತಿಹಾಸ ಸಂಪತ್ತು. ಅವುಗಳನ್ನು ರಕ್ಷಿಸುವ ಕಾರ್ಯ ಮತ್ತು ಮರು ಓದಿನ ಕಾರ್ಯ ತುರ್ತಾಗಿ ನಡೆಯದಿದ್ದರೆ ಭವಿಷ್ಯದ ಜನಾಂಗಕ್ಕೆ ಅವುಗಳ ಪರಿಚಯವೇ ಇಲ್ಲದಂತಾಗುತ್ತದೆ. ಪದವಿ ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಶಾಸನ ಅಧ್ಯಯನವನ್ನು ಪಠ್ಯಕ್ರಮದಲ್ಲಿ ಅಳವಡಿಸಿದರೆ ಕನ್ನಡ ಲಿಪಿಯ ಬೆಳವಣಿಗೆಯ ವಿವಿಧ ಹಂತದ ಪರಿಚಯವಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯಗಳು ಪ್ರಯತ್ನಿಸಬೇಕು ಎಂದರು.
             ವೇದಿಕೆಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ.ಕೆ.ಸಿ.ಮಂಗಳ ಹಾಜರಿದ್ದರು. ಶ್ರೀಮತಿ ಶಕುಂತಲ ಸ್ವಾಗತಿಸಿದರು. ಸಿ.ಎಸ್.ಶ್ವೇತ ವಂದಿಸಿದರು. ಶ್ರೀಮತಿ ಸೌಮ್ಯಶ್ರೀ ನಿರೂಪಿಸಿದರು.
ಭಾವಚಿತ್ರ
             ಶ್ರೀ ಸಿದ್ಧಗಂಗಾ ಮಹಿಳಾ ಪದವಿ ಕಾಲೇಜಿನಲ್ಲಿ “ಶಾಸನ ಮತ್ತು ಹಸ್ತಪ್ರತಿ ಅಧ್ಯಯನ” ಕಾರ್ಯಾಗಾರವನ್ನು ತುಮಕೂರು ವಿಶ್ವವಿದ್ಯಾನಿಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಡಿ.ವಿ.ಪರಮಶಿವಮೂರ್ತಿ ಉದ್ಘಾಟಿಸಿದರು. ಚಿತ್ರದಲ್ಲಿ ಸಂಶೋಧಕ ಡಾ.ಬಿ.ನಂಜುಂಡಸ್ವಾಮಿ, ಪ್ರಾಂಶುಪಾಲರಾದ ಡಾ.ಡಿ.ಎನ್.ಯೋಗೀಶ್ವರಪ್ಪ, ಕನ್ನಡ ವಿಭಾಗದ ಅಧ್ಯಾಪಕಿಯಾದ ಪ್ರೊ.ಕೆ.ಸಿ.ಮಂಗಳ, ಪ್ರೊ.ಸಿ.ವಿ.ಶಕುಂತಲ, ಡಾ.ಹೇಮಾವತಿ ಶ್ರೀಮತಿ ಸೌಮ್ಯಶ್ರೀ, ಶ್ರೀಮತಿ ಶ್ವೇತಾ, ಶೀಲಾ ಹಾಜರಿದ್ದರು.

LEAVE A REPLY

Please enter your comment!
Please enter your name here