ಶಿಕ್ಷಕರ ಸಮಸ್ಯೆ ನಿವಾರಣೆಗೆ ಶ್ರಮಿಸದ ಸಚಿವರು

 -  - 


ದಾವಣಗೆರೆ:

ಶಿಕ್ಷಕರ ಮುಂದಿರುವ ಸಮಸ್ಯೆಗಳ ಬಗ್ಗೆ ನಿವಾರಣೆಗೆ ಈ ವರೆಗೂ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿರುವ ಯಾವುದೇ ಸಚಿವರು ಪ್ರಮಾಣಿಕ ಪ್ರಯತ್ನ ಮಾಡಿಲ್ಲ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣ ಸ್ವಾಮಿ ಆರೋಪಿಸಿದ್ದಾರೆ.

ನಗರದ ಹೊಟೇಲ್ ಶಾಂತಿಪಾರ್ಕ್ ಸಭಾಂಗಣದಲ್ಲಿ ಗುರುವಾರ ಸಂಜೆ ವಿವಿಧ ಶಾಲಾ, ಕಾಲೇಜಗಳ ಶಿಕ್ಷಕರ ಮತ್ತು ಮುಖ್ಯಸ್ಥರ ಸಭೆ ನಡೆಸಿ ಮಾತನಾಡಿದ ಅವರು, ಶಿಕ್ಷಣ ಇಲಾಖೆಯು ಸಮಸ್ಯೆಗಳ ಆಗರವಾಗಿ ಮಾರ್ಪಟ್ಟಿದೆ. ಈ ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಯಾರೂ ಸಹ ಇಲ್ಲಿಯ ವರೆಗೆ ಪರಿಹಾರ ಹುಡುಕುವ ಗೋಜಿಗೆ ಹೋಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ತಾವು ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದ ಹಲವು ಸಮಸ್ಯೆಗಳ ಬಗ್ಗೆ ನೂರಾರು ಬಾರಿ ಸದನಗಳಲ್ಲಿ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದೆ. ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಅನಿವಾರ್ಯ ಕಾರಣಗಳಿಂದ ಹೆಬ್ಬಾಳ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಗೊಂಡು ಈ ಕ್ಷೇತ್ರದ ಸಂಪರ್ಕದಿಂದ ಕೆಲಕಾಲ ದೂರ ಉಳಿದಿದ್ದೆ. ನಾನು ಕ್ಷೇತ್ರ ಬದಲಾಯಿಸಿದ್ದು ಅಕ್ಷಮ್ಯ ಅಪರಾಧವಾಗಿದೆ. ಇನ್ನೂ ಮುಂದೆ ಅಂಥಹ ತಪ್ಪು ಮಾಡುವುದಿಲ್ಲ ಎಂದು ಹೇಳಿದರು.

ಇದೀಗ ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಅಪವಿತ್ರ ಮೈತ್ರಿಯ ಮೂಲಕ ಅಸ್ತಿತ್ವಕ್ಕೆ ಬಂದಿರುವ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ಮುಂದಿನ 6 ತಿಂಗಳ ಒಳಗೆ ಈ ಸರ್ಕಾರದ ಭವಿಷ್ಯ ನಿರ್ಧಾರವಾಗುತ್ತದೆ. ಆಗ ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದರಲ್ಲಿ ಎರಡು ಮಾತಿಲ್ಲ. ಆ ಸಂದರ್ಭದಲ್ಲಿ ವಿಧಾನ ಪರಿಷತ್ ಮೂಲಕ ಶಿಕ್ಷಣ ಇಲಾಖೆಗೆ ಹೊಸ ಆಯಾಮ ಕೊಡಿಸುವ ಪ್ರಯತ್ನ ಮಾಡಲಾಗುವುದು. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಯಡಿಯೂರಪ್ಪನವರ ಕೈ ಬಲ ಪಡಿಸಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಸುಜಾತ, ಸುಮತಿ ಜಯ್ಯಪ್ಪ, ಶಿವಶಂಕರ್, ಮಂಜಪ್ಪ, ಜಯ್ಯಪ್ಪ, ಸುರೇಶ್, ಪ್ರಕಾಶ್, ಡಾ.ಗಂಗಾಧರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

comments icon 0 comments
0 notes
4 views
bookmark icon

Write a comment...

Your email address will not be published. Required fields are marked *