ಶಿರಾ ನಗರಕ್ಕಿಂದು ಸಾರಿಗೆ ಸಚಿವರ ಭೇಟಿ

0
29

ರಾತ್ರಿ ವೇಳೆ ಶಿರಾ ನಗರದೊಳಗೆ ಬಾರದ ಬಸ್ಸುಗಳಿಗೆ ಸಚಿವರು ತಾಕೀತು ಮಾಡುವರೇ….?
ಶಿರಾ:(ಬರಗೂರು ವಿರೂಪಾಕ್ಷ)

ಸ್ವಾತಂತ್ರ್ಯ ಬಂದು ವರ್ಷ ವರ್ಷಗಳೇ ಉರುಳಿದರೂ ಶಿರಾ ಭಾಗದ ಅದೆಷ್ಟೋ ಗ್ರಾಮಗಳ ಜನತೆ ಇಂದಿಗೂ ಕೆಂಪು ಬಸ್ಸಿನ ಮುಖವನ್ನೇ ನೋಡಿಲ್ಲ.
ಅಪರೂಪಕ್ಕೆಂಬಂತೆ ಕುಗ್ರಾಮಕ್ಕೆ ಕೆಂಪು ಬಸ್ಸನ್ನು ಹೋಗಿ ಬರಲು ಬಿಟ್ಟಾಗ ಇಡೀ ಗ್ರಾಮದ ಜನ ಹಬ್ಬದ ದಿನವನ್ನೇ ಆಚರಿಸಿದ ಅದೆಷ್ಟೂ ನಿದರ್ಶನಗಳು ತಾಲ್ಲೂಕಿನಲ್ಲಿ ಜ್ವಲಂತವಾಗಿಯೇ ಇವೆ. ಯಾವಾಗ ಗ್ರಾಮಕ್ಕೆ ಕೆಂಪು ಬಸ್ಸುಗಳು ಬರುತ್ತವೆಯೋ ಎಂದು ಹಳ್ಳಿಗರು ಕಾದು ಕೂರುವ ಸರದಿಯಂತೂ ಇನ್ನೂ ತಪ್ಪಿಲ್ಲ.
ಶಿರಾ ಸಾರಿಗೆ ಘಟಕದ ಆರಂಭಕ್ಕೆ ಮೊದಲು ಚಾಲನೆ ನೀಡಿದವರು ಈಗಿನ ಹಾಲಿ ಶಾಸಕ ಬಿ.ಸತ್ಯನಾರಾಯಣ್. ಶಿರಾ ಭಾಗದ ಜನ ಕೆಂಪು ಬಸ್ಸನ್ನೇ ಕಾಣದ್ದರಿಂದ ಈ ಹಿಂದೆ ಸಚಿವರಾಗಿದ್ದ ಸತ್ಯನಾರಾಯಣ್ ಶಿರಾ ಸಾರಿಗೆ ಘಟಕದ ಬಗ್ಗೆ ಕಾಳಜಿ ವಹಿಸಿದ್ದರು.

ರಾಜ್ಯವಷ್ಟೇ ಅಲ್ಲದೆ ಹೊರ ನಾಡಿಗೂ ಶಿರಾ ಘಟಕದ ಸರ್ಕಾರಿ ಬಸ್ಸುಗಳು ಸಂಚಾರಗೊಂಡು ಶಿರಾ ಸಾರಿಗೆ ಘಟಕದ ಹೆಸರು ಶಾಶ್ವತವಾಗುಳಿಯಲು ಸತ್ಯನಾರಾಯಣ್ ಪ್ರಮುಖ ಕಾರಣರಾಗಿದ್ದು ನಿಜಕ್ಕೂ ಶ್ಲಾಘನಾರ್ಹ ಸಂಗತಿಯೇ ಸರಿ. ನೂತನ ಬಸ್ ನಿಲ್ದಾಣ, ಘಟಕದ ಕಟ್ಟಡಕ್ಕೆ ಜಾಗದಿಂದಾ ಹಿಡಿದು ಆರಂಭದಲ್ಲಿಯೇ ಸರ್ಕಾರಿ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡ ಅಂದಿನ ಶಾಸಕರಾಗಿದ್ದ ಸತ್ಯನಾರಾಯಣ್ ಘಟಕದ ಬಗ್ಗೆ ಕಾಳಜಿ ಇಟ್ಟಿದ್ದರು.

ಅತ್ತ ಸತ್ಯನಾರಾಯಣ್ ಎರಡು ಚುನಾವಣೆಗಳಲ್ಲೂ ಸೋತು ಸುಣ್ಣವಾದ ನಂತರ ಸಾರಿಗೆ ಘಟಕದ ಬಗ್ಗೆ ಈ ಹಿಂದಿನ ಶಾಸಕರಿಗೆ ಕಾಳಜಿಯೇ ಇಲ್ಲವಾಯಿತು. ಸದರಿ ಘಟಕವು ನನ್ನ ಅವಧಿಯದ್ದಲ್ಲ ಅನ್ನುವ ಸಂಕುಚಿತ ಭಾವನೆಯೋ ಅಥವ ಘಟಕದ ಅಭಿವೃದ್ಧಿಯ ಬಗ್ಗೆ ಇಲ್ಲದ ನಿರಾಸಕ್ತಿಯೋ ಒಟ್ಟಾರೆ ವಿವಿಧ ಅಭಿವೃದ್ಧಿಗೆ ಒಂದಷ್ಟು ಒತ್ತು ನೀಡುತ್ತಿದ್ದ ಶಾಸಕ ಜಯಚಂದ್ರ ಅವರು ಇಲ್ಲಿನ ಸಾರಿಗೆ ಘಟಕದ ಬಗ್ಗೆ ಆಸಕ್ತಿಯನ್ನೇ ಕಳೆದುಕೊಂಡರು.

ಇಷ್ಟೇ ಅಲ್ಲದೆ ಸದರಿ ಘಟಕದ ಆಡಳಿತ ವ್ಯವಸ್ಥೆ ಚಿತ್ರದುರ್ಗ ಜಿಲ್ಲಾ ಘಟಕಕ್ಕೆ ವರ್ಗಾವಣೆಗೊಳ್ಳುವ ಹಂತ ತಲುಪಿದರೂ ಈ ಬಗ್ಗೆ ಮಾಜಿ ಸಚಿವ ಜಯಚಂದ್ರ ನಿಜಕ್ಕೂ ಕೈ ಚೆಲ್ಲಿ ಕೂತಿದ್ದರು. ಶಿರಾ ಘಟಕದ ಆಡಳಿತ ಯಂತ್ರವು ಚಿತ್ರದುರ್ಗಕ್ಕೆ ವರ್ಗಾವಣೆಗೊಳ್ಳುತ್ತದೆ ಅನ್ನುವ ಮಾಹಿತಿ ತಿಳಿದ ಕೂಡಲೇ ಸಾರ್ವಜನಿಕರು ಹಾಗೂ ವಿದ್ಯಾರ್ಥಿ ಸಂಘಟನೆಗಳಿಂದ ಅನೇಕ ಪ್ರತಿಭಟನೆಗಳೂ ನಡೆದು ಘಟಕದ ಆಡಳಿತವನ್ನು ಇಲ್ಲಿಯೇ

ಉಳಿಸುವಂತೆ ಒತ್ತಡವನ್ನೂ ಹೇರಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಶಿರಾ ಘಟಕದ ಆಡಳಿತ ಯಂತ್ರ ಎತ್ತ ಸಾಗಲಿದೆ ಅನ್ನುವುದು ಈಗಲೂ ಗುಟ್ಟಾಗಿಯೇ ಉಳಿದಿದೆ.
ಇದೆಲ್ಲಕ್ಕಿಂತಲೂ ಮಿಗಿಲಾಗಿ ರಾತ್ರಿ ವೇಳೆಯಲ್ಲಿ ಬೆಂಗಳೂರು ಹಾಗೂ ತುಮಕೂರಿನಿಂದ ಶಿರಾ ನಗರಕ್ಕೆ ಬರುವ ಪ್ರಯಾಣಿಕರಿಗೆ ಚಿತ್ರದುರ್ಗ, ಹುಬ್ಬಳ್ಳಿ, ದಾರವಾಡ, ದಾವಣಗೆರೆ ಸೇರಿದಂತೆ ವಿವಿಧ ಘಟಕಗಳ ಚಾಲಕ, ನಿರ್ವಾಹಕರ ವರ್ತನೆಯಿಂದ ಸಾಕು ಸಾಕಾಗಿ ಹೋಗಿದೆ. ಅಂದರೆ ಬೆಂಗಳೂರಿನ ಕಡೆಯಿಂದ ಶಿರಾ ನಗರದೊಳಕ್ಕೆ ಬರುವ ಪ್ರಯಾಣಿಕರನ್ನು ಚಿತ್ರದುರ್ಗ, ದಾವಣಗೆರೆ ಕಡೆಗೆ ಹೋಗುವ ಯಾವುದೇ ಸರ್ಕಾರಿ ಬಸ್ಸುಗಳಲ್ಲಿ ಹತ್ತಿಸಿಕೊಳ್ಳುವುದೇ ಇಲ್ಲ.
ನಂಬಿದರೆ ನಂಬಿ ಬಿಟ್ಟರೆ ಒಂದಂತೂ ಸತ್ಯ…ಬೆಂಗಳೂರಿನಿಂದ ರಾತ್ರಿ 8 ಗಂಟೆಯ ಮೇಲೆ ಬಸ್ಸನ್ನು ಹತ್ತುವ ಪ್ರಯಾಣಿಕರಿಗೆ ಶಿರಾ ನಗರದೊಳಕ್ಕೆ ಬಸ್ ಹೋಗುವುದಿಲ್ಲ…ಬೈಪಾಸ್ ಮೂಲಕ ಹೋಗುತ್ತೆ, ಶಿರಾ ಪ್ರಯಾಣಿಕರು ಬಸ್ ಹತ್ತಬೇಡಿ ಎಂದು ನಿರ್ವಾಹಕರು ನಿಷ್ಠೂರವಾಗಿಯೇ ಹೇಳುತ್ತಾರೆ. ಶಿರಾ ನಗರದ ಜನತೆಗೆ ಇಂತಹ ಅದೆಷ್ಟೋ ಅನುಭವಗಳಾಗಿವೆ.

ತಿಳಿದೋ ಅಥವ ತಿಳಿಯದೆಯೋ ಶಿರಾಕ್ಕೆ ಬರುವ ಪ್ರಯಾಣಿಕರು ರಾತ್ರಿ ವೇಳೆ ಸರ್ಕಾರಿ ಬಸ್ಸನ್ನು ಹತ್ತಿ ಕೂತರಂತೂ ದೇವರೇ ಗತಿ. ನಡು ರಾತ್ರಿಯಲ್ಲಿಯೇ ಪುರುಷರು, ಮಹಿಳೆಯರು ಎನ್ನದೆ ಬೈಪಾಸ್‍ನಲ್ಲಿ ಪ್ರಯಾಣಿಕರನ್ನು ಕೆಳಗಿಳಿಸಿ ಶಿರಾ ನಗರದೊಳಕ್ಕೆ ಬಾರದೆ ಹೋಗುವ ಸರ್ಕಾರಿ ಬಸ್ಸುಗಳ ಬಗ್ಗೆ ಯಾವ ಅಧಿಕಾರಿಗಳೂ ಈತನಕವೂ ಕ್ರಮ ಕೈಗೊಳ್ಳದಂತಾಗಿದ್ದಾರೆ.

ಇದು ಪ್ರಯಾಣಿಕರ ಗತಿಯಾದರೆ, ಇನ್ನೂ ಪೋಲೀಸರಪ್ಪ ಗತಿಯೂ ಅಷ್ಟೇ. ಇಲಾಖೆಯ ಕಾರ್ಯ ನಿಮಿತ್ತ ಜಿಲ್ಲಾ ಕೇಂದ್ರದಿಂದ ರಾತ್ರಿ ವೇಳೆ ಶಿರಾಕ್ಕೆ ಬರಲು ಬೇರೆ ಡಿಪೋ ಬಸ್ಸುಗಳಲ್ಲಿ ಕೂತ ಆರಕ್ಷಕರಿಗೂ ಇದೇ ಗತಿ ಶತ ಸಿದ್ಧ. ಪೊಲೀಸರು ಹಾಗೂ ನಿರ್ವಾಹಕರೇ ಬೈಪಾಸ್‍ನಲ್ಲಿ ಬಸ್ ನಿಲ್ಲಿಸಿಕೊಮಡು ಜಗಳಕ್ಕೆ ಬಿದ್ದ ಅನೇಕ ನಿಧರ್ಶನಗಳು ಇಲ್ಲಿ ಉಂಟು.
ಒಟ್ಟಾರೆ ಶಿರಾ ನಗರಕ್ಕೆ ಇಂದು ಅಪರೂಕ್ಕೆಂಬಂತೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಭೇಟಿ ನೀಡಲಿದ್ದಾರೆ. ಇಂದು ಮಧ್ಯಾನ್ಹ 2 ಗಂಟೆಗೆ ಶಿರಾ ನಗರದ ಸಾರಿಗೆ ಡಿಪೋಗೆ ಸಚಿವರು ಭೇಟಿ ನೀಡಲಿದ್ದು ನಿಲ್ದಾಣದ ವೀಕ್ಷಣೆಯನ್ನೂ ಮಾಡಲಿದ್ದಾರೆ. ಶಿರಾ ಸರ್ಕಾರಿ ಬಸ್ ನಿಲ್ದಾಣವನ್ನೂ ನವೀಕರಣಗೊಳಿಸುವುದರಿಂದಾ ಹಿಡಿದು. ಹೆಚ್ಚುವರಿ ಬಸ್‍ಗಳನ್ನು ಗ್ರಾಮೀಣ ಪ್ರದೇಶಕ್ಕೆ ಒದಗಿಸುವ ಕೆಲಸವನ್ನು ಸಚಿವರು ಮಾಡಬೇಕಿದೆ.

ಇಷ್ಟೇ ಅಲ್ಲದೆ ಬೆಂಗಳೂರು, ತುಮಕೂರು ಕಡೆಯಿಂದ ರಾತ್ರಿ ವೇಳೆ ಶಿರಾ ನಗರದೊಳಕ್ಕೆ ಸರ್ಕಾರಿ ಬಸ್ಸುಗಳು ಕಡ್ಡಾಯವಾಗಿ ಬಮದು ಹೋಗುವಂತೆ ಮಾಡುವ ಹಾಗೂ ಶಿರಾ ಘಟಕದ ಆಡಳಿತ ವ್ಯವಸ್ಥೆಯನ್ನು ಇಲ್ಲಿಯೇ ಉಳಿಸುವಂತಹ ಕೆಲಸವನ್ನೂ ಸಾರಿಗೆ ಸಚಿವರು ಮಾಡಬೇಕಿದೆ.
ಸಾರಿಗೆ ಘಟಕದ ಮಂಜೂರಾತಿಯಿಂದಾ ಹಿಡಿದು ಘಟಕದ ಅಭಿವೃದ್ಧಿಗೆ ಈ ಹಿಂದೆ ಹೆಚ್ಚು ಒತ್ತು ನೀಡಿದ್ದ ಈಗಿನ ಶಾಸಕ ಸತ್ಯನಾರಾಯಣ್ ಕೂಡಾ ಈ ಬಗ್ಗೆ ಎಷ್ಟರಮಟ್ಟಿಗೆ ಕಾಳಜಿ ವಹಿಸುವರು ಅನ್ನುವುದನ್ನು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here