ಶಿಲಾಯುಗದ ಪ್ರಮುಖ ನೆಲೆ ‘ಸಂಗನಕಲ್ಲು’ – ರಾಮದಾಸ್

0
117

ಬಳ್ಳಾರಿ:

      ಆದಿ ಮಾನವನು ಬದಲಾವಣೆ ಹಾಗೂ ವಿಕಾಸ ಹೊಂದಿದ ಚಹರೆಗಳನ್ನು ಸಂಗನಕಲ್ಲು ಬೆಟ್ಟದಲ್ಲಿರುವ ದೊರೆತಿರುವ ಅವಶೇಷಗಳು ಸಾರಿ ಹೇಳುತ್ತಿವೆ ಎಂದು ಸಂಗನಕಲ್ಲು ಗ್ರಾಮದ ಸ್ಥಳೀಯ ಚರಿತ್ರೆ ಅನ್ವೇಷಕ ರಾಮದಾಸ್ ಅವರು ಹೇಳಿದರು.

      ನಗರದ ರೇಡಿಯೋ ಪಾರ್ಕ್ ಪ್ರದೇಶದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರಾಚ್ಯ ಪರಿಚಯ ಕಾರ್ಯಕ್ರಮದಲ್ಲಿ ಸಂಗನಕಲ್ಲು ಪ್ರಾಗೈತಿಹಾಸಿಕ ಮಹತ್ವ ಕುರಿತು ಮಾತನಾಡಿದರು. ಸಂಗನಕಲ್ಲಿನ ಸಾವಿರ ಎಕರೆಯ ವಿಸ್ತೀರ್ಣದಲ್ಲಿ ಆಗಿನ ಆದಿಮಾನವರು ವಾಸಿಸುತ್ತಿದ್ದ ಗುಹೆಗಳಲ್ಲಿ ಜಿಂಕೆ, ಹೋರಿ, ಮೂರು ಕೋಡಿನ ಬಸವ, ನೃತ್ಯ ಹೀಗೆ ಆಗಿನ ಜೀವನದ ಘಟನೆಗಳನ್ನು ಭಾವಸ್ಪರ್ಶಿಯಾಗಿ ಚಿತ್ರಿಸಿದ್ದಾರೆ. ಹಾಗಾಗಿ ಸಂಗನಕಲ್ಲು ಶಿಲಾಯುಗದ ಪ್ರಮುಖ ನೆಲೆಯಾಗಿ ಕಂಡು ಬರುತ್ತಿದೆ ಎಂದು  ಸಂಗನಕಲ್ಲು ಬೆಟ್ಟಗಳಲ್ಲಿ ಆದಿಮಾನವನ ಬದುಕಿನ ಅವಶೇಷಗಳಾದ ಕೈಗೊಡಲಿ, ಮಸೆಗಲ್ಲು, ಮಡಿಕೆ ಚೂರು, ಬಂಡೆ ಚಿತ್ರ, ಬೂದಿ ದಿಬ್ಬ, ಅಸ್ತಿಪಂಜರಗಳು ದೊರೆತಿವೆ. ಪ್ರತಿ ಅವಶೇಷವು ನಮ್ಮ ಪೂರ್ವಜರ ಬದುಕಿನ ಇತಿಹಾಸವನ್ನು ನಿರೂಪಿಸುತ್ತವೆ. ಸಂಗನಕಲ್ಲು ಕರ್ನಾಟಕದ ಮತ್ತು ಭಾರತದ ಚರಿತ್ರೆಯ ದೃಷ್ಟಿಯಿಂದ ಅಲ್ಲದೆ ಜಗತ್ತಿನ ನಾಗರೀಕತೆಯ ಚರಿತ್ರೆಯ ದೃಷ್ಟಿಯಿಂದಲೂ ಅತ್ಯಂತ ಮಹತ್ವದ ನೆಲೆ. ಕೃಷಿ ಮಾಡುವ,ಪಶುಪಾಲನೆ ಮಾಡುವ ಆ ತಿರುವಿನ ಘಟ್ಟದಲ್ಲಿ ಉದಯಿಸಿದ ಸ್ಥಳಗಳಲ್ಲಿ ಸಂಗನಕಲ್ಲು ಒಂದು ಎಂದು ಹೇಳಿದರು.

      ಕಾರ್ಯಕ್ರಮವನ್ನು ಉದ್ಘಾಟಿಸಿದ ಇತಿಹಾಸ ಸಂಶೋಧಕ ವೈ.ಹನುಮಂತರೆಡ್ಡಿ ಮಾತನಾಡಿ, ಸಂಗನಕಲ್ಲು ಪ್ರಾಚೀನ ಕಾಲದ ಅನೇಕ ವಸ್ತುಗಳು ದೊರೆತಿರುವ ಮಹತ್ವದ ಪ್ರದೇಶ. ಹಳೇ ಶಿಲಾಯುಗದಲ್ಲಿ ಕಲ್ಲುಗಳಿಂದ ಆಯುಧಗಳನ್ನು ತಯಾರಿಸುತ್ತಿದ್ದ ಪ್ರಮುಖ ಪ್ರದೇಶವಾಗಿತ್ತು. ಸಾಮಾನ್ಯವಾಗಿ ಹಾಳು, ಕಲ್ಲು ಹೆಸರುಳ್ಳ ಊರುಗಳಿಗೆ ಪ್ರಾಚೀನ ಕಾಲದ ಇತಿಹಾಸವಿರುತ್ತದೆ. ಇಂತಹ ಊರುಗಳು ಬಳ್ಳಾರಿ ಜಿಲ್ಲೆಯಲ್ಲಿ ಸಾಕಷ್ಟು ಕಾಣುತ್ತವೆ. ಈ ದೃಷ್ಟಿಯಿಂದ ಸಂಗನಕಲ್ಲು ಅತ್ಯಂತ ಪ್ರಾಚೀನವಾದ ಜನವಸತಿ ಪ್ರದೇಶವೆಂದು ತಿಳಿಸಿದರು.
ಕರ್ನಾಟಕದ ಇತಿಹಾಸ ಅಶೋಕನ ಶಾಸನಗಳಿಂದ ಕ್ರಿ.ಪೂ.3 ಆರಂಭವಾಗುವುದು. ಸಂಗನಕಲ್ಲು ಅದಕ್ಕೂ ಹಿಂದಿನ ಕಾಲಘಟ್ಟದ್ದು. ನಮ್ಮ ಪೂರ್ವಜರ ಚರಿತ್ರೆಯನ್ನು ತಿಳಿಸುವ ಪ್ರಾಗೈತಿಹಾಸಿಕ ಸ್ಥಳವಾಗಿದೆ ಎಂದರು.

      ಇತಿಹಾಸ ಅಧ್ಯಾಪಕ ರಫೀಕ್ ಶಿಡಿಗಿನಮೊಳೆ ಮಾತನಾಡಿ, ಬ್ರೂಸ್‍ಫೂಟ್ ಅವರು ಹೇಳುವಂತೆ ಕರ್ನಾಟಕದ ಶಿಲಾಯುಗದ 77 ನೆಲೆಗಳಲ್ಲಿ 11 ಪ್ರಮುಖವಾಗಿದ್ದು, ಅದರಲ್ಲಿ ಸಂಗನಕಲ್ಲು ಪ್ರಾಗೈತಿಹಾಸಿಕ ಕಾಲದ ಮಹತ್ವದ ಪಳಿಯುಳಿಕೆಗಳನ್ನು ಒಳಗೊಂಡಿದೆ. ಇದು ಕ್ರಿ.ಶ.ಪೂರ್ವ. 10 ದಿಂದ ಕ್ರಿ.ಪೂ.3000ದ ವರೆಗೆ ದಕ್ಷಿಣ ಭಾರತದ ಇತಿಹಾಸದಲ್ಲಿಯೇ ಪ್ರಮುಖ ಕೇಂದ್ರ ಇದಾಗಿದ್ದು, ಕಲ್ಲಿನ ಉಪಕರಣಗಳನ್ನು ತಯಾರು ಮಾಡುವ ಕಾರ್ಯಾಗಾರ ಇಲ್ಲಿತ್ತು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಂ.ಮೋಹನರೆಡ್ಡಿ ಮಾತನಾಡಿ, ಅತ್ಯಂತ ಪ್ರಾಚೀನ ಇತಿಹಾಸವನ್ನು ಹೊಂದಿರುವ ಸಂಗನಕಲ್ಲಿನಲ್ಲಿ ದೊರೆತಿರುವ ಅನೇಕ ವಸ್ತುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಾಗಿದೆ. ಅಂತಹ ಪಳೆಯುಳಿಕೆಗಳನ್ನು ಒಂದೆಡೆ ಸಂಗ್ರಹಿಸಿ ವಸ್ತುಸಂಗ್ರಹಾಲಯ ಮಾಡಿದಾಗ ಮಾತ್ರ ನಾವು ಇತಿಹಾಸಕ್ಕೆ ಸೂಚಿಸುವ ಗೌರವ ಸಾರ್ಥಕವಾಗುತ್ತದೆ ಎಂದು ಹೇಳಿದರು.

      ಕಸಾಪ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಅವರು ಮಾತನಾಡಿದರು. ಉಪನ್ಯಾಸಕ ಖಾಸಿಂ ಸಾಬ್ ಪ್ರಾರ್ಥಿಸಿದರು. ಗೌರವ ಕಾರ್ಯದರ್ಶಿ ಕೋಳೂರು ಚಂದ್ರಶೇಖರಗೌಡ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಹನುಮಂತಪ್ಪ ನಿರೂಪಿಸಿದರು. ಕೋಶಾಧ್ಯಕ್ಷ ಟಿ.ಎಂ.ಪಂಪಾಪತಿ ವಂದಿಸಿದರು.

 

       ಸಂಗನಕಲ್ಲು ಪ್ರಾಚೀನ ಕಾಲದ ಅನೇಕ ವಸ್ತುಗಳು ದೊರೆತಿರುವ ಮಹತ್ವದ ಪ್ರದೇಶ. ಹಳೇ ಶಿಲಾಯುಗದಲ್ಲಿ ಕಲ್ಲುಗಳಿಂದ ಆಯುಧಗಳನ್ನು ತಯಾರಿಸುತ್ತಿದ್ದ ಪ್ರಮುಖ ಪ್ರದೇಶವಾಗಿತ್ತು. ಸಾಮಾನ್ಯವಾಗಿ ಹಾಳು, ಕಲ್ಲು ಹೆಸರುಳ್ಳ ಊರುಗಳಿಗೆ ಪ್ರಾಚೀನ ಕಾಲದ ಇತಿಹಾಸವಿರುತ್ತದೆ. ಇಂತಹ ಊರುಗಳು ಬಳ್ಳಾರಿ ಜಿಲ್ಲೆಯಲ್ಲಿ ಸಾಕಷ್ಟು ಕಾಣುತ್ತವೆ. ಈ ದೃಷ್ಟಿಯಿಂದ ಸಂಗನಕಲ್ಲು ಅತ್ಯಂತ ಪ್ರಾಚೀನವಾದ ಜನವಸತಿ ಪ್ರದೇಶವಾಗಿದೆ.

-ಸಿದ್ಧರಾಮ ಕಲ್ಮಠ- ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಳ್ಳಾರಿ.

LEAVE A REPLY

Please enter your comment!
Please enter your name here