ಶಿಶು ಮರಣದಂತಹ ಮಹಾಪಾಪದಿಂದ ಆರೋಗ್ಯ ಇಲಾಖೆಯನ್ನು ಕಾಪಾಡಿ

0
49

 ಚಳ್ಳಕೆರೆ:

      ಕಳೆದ ಹಲವಾರು ವರ್ಷಗಳಿಂದ ಆರೋಗ್ಯ ಇಲಾಖೆ ನಿರಂತರವಾಗಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಸಹಯೋಗದೊಂದಿಗೆ ಬಾಂಣತಿ ಮತ್ತು ಮಗುವಿನ ಸಾವಿವನ್ನು ನಿಯಂತ್ರಿಸಲು ಹಲವಾರು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ. ಹುಟ್ಟಿದ ಮಗು ತಾಯಿಯ ಮಡಿಲಲ್ಲೇ ಮೃತಪಟ್ಟರೆ ಮಗುವಿನ ಮಹಾಶಾಪ ಎಲ್ಲರನ್ನೂ ಕಾಡುತ್ತದೆ. ಇಂತಹ ಅಪಖ್ಯಾತಿಗಳು ಇಲಾಖೆಗೆ ಸೊಂಕದಂತೆ ಎಲ್ಲರೂ ಜಾಗ್ರತೆ ವಹಿಸಬೇಕೆಂದು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ, ಮಕ್ಕಳ ತಜ್ಞ ಡಾ.ಜಿ.ಎಸ್.ತಿಪ್ಪೇಸ್ವಾಮಿ ತಿಳಿಸಿದರು.

      ಅವರು ಮಂಗಳವಾರ ಆಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ ಮತ್ತು ಶಿಶು ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮುನ್ನೆಚ್ಚರಿಕೆಯ ನಡುವೆಯೂ ಸಹ ತಾಯಿ ಮರಣ ಸಂಭವಿಸುತ್ತಿರುವುದು ನೋವಿನ ಸಂಗತಿ. ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಹಾಗೂ ಕಾರ್ಯಕರ್ತರು ಜಾಗ್ರತೆ ವಹಿಸಿ ಕೆಲಸ ಮಾಡಿದಲ್ಲಿ ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ಜಾಗ್ರತೆ ವಹಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸೋಣವೆಂದರು.

      ಮಕ್ಕಳ ತಜ್ಞ ಹಾಗೂ ನಿವೃತ್ತ ಆಡಳಿತಾಧಿಕಾರಿ ಡಾ.ಬಿ.ಚಂದ್ರನಾಯ್ಕ ಮಾತನಾಡಿ, ಪ್ರತಿಯೊಂದು ಹಂತದಲ್ಲೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಅಧಿಕಾರಿಗಳ ತಂಡ ಹಲವಾರು ತರಬೇತಿ ಕಾರ್ಯಕ್ರಮಗಳ ಮೂಲಕ ತಾಯಿ ಮತ್ತು ಶಿಶು ಮರಣದ ಬಗ್ಗೆ ಜಾಗೃತಿ ವಹಿಸುವಂತೆ ನಿರಂತರವಾಗಿ ಒತ್ತಡ ಹೇರುತ್ತಲೇ ಬಂದಿದೆ. ಪ್ರತಿಯೊಬ್ಬ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಅಧಿಕಾರಿಗಳಿಗೆ ನೀಡುವ ಸಲಹೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಂಡಲ್ಲಿ ಶಿಶು ಮತ್ತು ತಾಯಿ ಮರಣ ಸಂಭವಿಸುವೂದೇ ಇಲ್ಲ. ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಮಾರ್ಗದರ್ಶನ ನೀಡುವಂತೆ ಮನವಿ ಮಾಡಿದರು.

      ಮಕ್ಕಳ ತಜ್ಞ ಡಾ.ಟಿ.ಎಂ.ನಟರಾಜು ಮಾತನಾಡಿ, ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯರಿಗೆ ಪ್ರಾರಂಭದ ಹಂತದಲ್ಲೇ ಸಂಬಂಧಪಟ್ಟ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪೂರ್ಣ ಪ್ರಮಾಣದ ಮಾಹಿತಿ ನೀಡಿ ಅವರನ್ನು ಜಾಗೃತೆಗೊಳಿಸಿದಲ್ಲಿ ಅವರು ಆರೋಗ್ಯ ಇಲಾಖೆಯ ಸಲಹೆ ಸೂಚನೆಯಂತೆ ನಡೆದುಕೊಳ್ಳುವರು. ಇದರಿಂದ ಯಾವುದೇ ಅಪಾಯ ಅವರಿಗೆ ಎದುರಾಗದು. ಆದರೆ, ಗ್ರಾಮೀಣ ಭಾಗಗಳಲ್ಲಿ ಮನೆಯ ಅಜ್ಜಿ ಮತ್ತು ತಾಯಂದಿರು ಸಂಪ್ರದಾಯದಂತೆ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ತಾಯಿ ಹಾಲು ಕುಡಿಸುವುದನ್ನು ವಿರೋಧಿಸುತ್ತಾರೆ, ಇದರಿಂದ ಬೆಳೆಯುವ ಮಗುವಿನ ಮೇಲೆ ಕೆಟ್ಟ ಪರಿಣಾಮಬೀರಿ ಅನೇಕ ಪೌಷ್ಠಿಕಾಂಶದ ಕೊರತೆಯಿಂದ ಮಗುವಿನ ಬೆಳವಣಿಗೆ ಕುಂಠಿತವಾಗುತ್ತದೆ. ಪ್ರತಿಯೊಂದು ಮಗು ಮತ್ತು ಗರ್ಭಿಣಿ ಮೇಲೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ನಿರಂತರವಾಗಿ ಸಂಪರ್ಕವನ್ನಿಟ್ಟುಕೊಂಡು ಅವರಿಗೆ ಆರೋಗ್ಯ ಇಲಾಖೆಯ ಸಲಹೆಗಳ ಪರಿಣಾಮದ ಬಗ್ಗೆ ವಿವರಣೆ ನೀಡಬೇಕೆಂದರು.

      ಅಂಗನವಾಡಿ ಮೇಲ್ವಿಚಾರಕಿ ಶಾಂತವೀರಮ್ಮ ಮಾತನಾಡಿ, ವೈದ್ಯರ ತಂಡ ಹಲವಾರು ವಿಚಾರಗಳ ಬಗ್ಗೆ ಜಾಗೃತಿಗೊಳಿಸಿದ್ಧಾರೆ. ಇವುಗಳೆಲ್ಲವನ್ನೂ ನಾವು ಪಾಲಿಸಿದಲ್ಲಿ ಕಂಡಿತವಾಗಿಯೂ ಶಿಶು ಮತ್ತು ಗರ್ಭಿಣಿ ತಾಯಿಯ ಸಾವು ದೂರವಾಗಿಸಲು ಸಾಧ್ಯವಿದೆ. ಮುಖ್ಯವಾಗಿ ಗರ್ಭಿಣಿ ಮಹಿಳೆ ಆರೋಗ್ಯದ ಬಗ್ಗೆ ಅಲಕ್ಷ ವಹಿಸುವುದು ದುರಂತವೇ ಸರಿ. ಮುಂದಿನ ದಿನಗಳಲ್ಲಾದರೂ ಈ ಬಗ್ಗೆ ಎಲ್ಲರೂ ಜಾಗೃತರಾಗಬೇಕು ಎಂದರು.

      ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್.ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಗುವಿಗೆ ಜೀವನದ ಬುನಾದಿಯೇ ತಾಯಿ ಹಾಲು, ತಾಯಿಯ ಹಾಲಿನಲ್ಲಿ ಮಗುವಿನ ಆರೋಗ್ಯವನ್ನು ವೃದ್ದಿಸ ಬಲ್ಲ ಮತ್ತು ಮಗುವನ್ನು ಸಂಪೂರ್ಣವಾಗಿ ಆರೋಗ್ಯಂತನಾಗಿ ಬೆಳೆಸುವ ಪೌಷ್ಠಿಕಾಂಶಗಳು ಅಡಗಿವೆ. ಪ್ರತಿ ತಾಯಿಯು ತಾನು ಹೆತ್ತ ಮಗುವಿಗೆ ಕನಿಷ್ಠ ಪಕ್ಷ 6 ತಿಂಗಳಾದರೂ ಎದೆ ಹಾಲು ನೀಡಬೇಕು ಎಂದರು. ಡಾ.ಬಾಷೀರ್, ಡಾ. ಜಬೀವುಲ್ಲಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಆಶಾ ಕಾರ್ಯಕರ್ತೆ ಮೇಲ್ವಿಚಾರಕಿ ರಶ್ಮಿಸ್ವಾಗತಿಸಿದರು. ಆರೋಗ್ಯ ಇಲಾಖೆಯ ತಿಪ್ಪೀರಮ್ಮ ವಂದಿಸಿದರು. 

LEAVE A REPLY

Please enter your comment!
Please enter your name here