ಶ್ರೀಗಳ ಬಗ್ಗೆ ಹಗುರ ಮಾತು: ಹೆಚ್‍ಡಿಕೆ ಪ್ರತಿಕೃತಿ ದಹನ

 -  -  1


ದಾವಣಗೆರೆ:

ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಸುದ್ದಿಗೋಷ್ಠಿ ನಡೆಸಿ, ಮಠಾಧೀಶರ ವಿರುದ್ಧ ಹಗುರವಾಗಿ ಮಾತನಾಡಿರುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಖಂಡಿಸಿ, ನಗರದಲ್ಲಿ ಗುರುವಾರ ಸಂಜೆ ಕರ್ನಾಟಕ ಮಠಾಧೀಶ್ವರರ ಭಕ್ತ ಮಂಡಳಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಕರ್ನಾಟಕ ಮಠಾಧೀಶ್ವರರ ಭಕ್ತ ಮಂಡಳಿಯ ಕಾರ್ಯಕರ್ತರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪ್ರತಿಕೃತಿ ದಹಿಸಿ, ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಂಡಳಿಯ ಶಶಿಧರ ಹೆಮ್ಮನಬೇತೂರು, ಹೆಚ್.ಡಿ.ಕುಮಾರಸ್ವಾಮಿಯವರು ಚುನಾವಣೆಯ ಸಂದರ್ಭದಲ್ಲಿ ಮೂರು ತಿಂಗಳ ಕಾಲ ಸತತವಾಗಿ ದೇವಸ್ಥಾನಗಳನ್ನು ಸುತ್ತುತ್ತಿದ್ದುದ್ದನ್ನು ನೋಡಿ, ಹೆಚ್‍ಡಿಕೆ ಕರ್ನಾಟಕದಲ್ಲಿ ಭಾವೈಕ್ಯತೆ ಉಳಿಸಲು ಪ್ರಯತ್ನಿಸುತ್ತಿದ್ದಾರೆಂಬುದಾಗಿ ಭಾವಿಸಿದ್ದೇವು. ಆದರೆ, ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕುಮಾರಸ್ವಾಮಿ ಮೊದಲ ಸುದ್ದಿಗೋಷ್ಠಿಯಲ್ಲಿಯೇ ನಾಡಿನ ಮಠಾಧೀಶರ ಕುರಿತು ಹಗುರವಾಗಿ ಮಾತಾಡಿರುವುದರಿಂದ ಮಠಾಧೀಶರರ ಭಕ್ತರಿಗೆ ಆಘಾತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಮುಖ್ಯಮಂತ್ರಿಯಾಗಿರುವ ಹೆಚ್.ಡಿ.ಕುಮಾರಸ್ವಾಮಿಯವರು ನಾಡಿನಲ್ಲಿ ಭಾವೈಕ್ಯತೆ ನೆಲೆಸಲು ಅನುವಾಗುವಂತೆ ಕೆಲಸ ಮಾಡಿ, ತಮ್ಮ ಜವಾಬ್ದಾರಿಯನ್ನು ಮೆರೆಯಬೇಕು. ಆದರೆ, ಅವರು ಅಧಿಕಾರ ಸ್ವೀಕರಿಸಿ ಕೆಲವೇ ಗಂಟೆಗಳಲ್ಲಿ ಮಠಾಧೀಶರ ವಿರುದ್ಧ ಹಗುರವಾಗಿ ಮಾತನಾಡಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಇವರ ಹೇಳಿಕೆಯು ನಾಡಿನ ಜನತೆಯಲ್ಲಿ ಬೇಸರವನ್ನು ಉಂಟು ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣವೇ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಮಠಾಧೀಶರ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

ಮಂಡಳಿಯ ಮುಖಂಡ ವಡ್ನಳ್ಳಿ ಸಿದ್ದಪ್ಪ ಮಾತನಾಡಿ, ಅಧಿಕಾರದ ಮದ ಏರಿರುವ ಹೆಚ್.ಡಿ.ಕುಮಾರಸ್ವಾಮಿ, ಮಠಾಧೀಶರ ಬಗ್ಗೆ ಬಾಯಿಯನ್ನು ಮನಬಂದಂತೆ ಹರಿಬಿಟ್ಟಿದ್ದಾರೆ. ಇನ್ನೂ ಮುಂದೆ ಕಾವಿಧಾರಿಗಳ ಬಗ್ಗೆ ಮಾತನಾಡಬೇಕಾದರೆ ನಾಲಿಗೆ ಬೀಗಿ ಹಿಡಿದು ಮಾತನಾಡಬೇಕು ಹಾಗೂ ಮಠಾಧೀಶರ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ, ರಾಜ್ಯಾದ್ಯಂತ ಅವರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮಂಡಳಿಯ ರವಿ ನುಗ್ಗೆಹಳ್ಳಿ, ಸುನೀಲ್, ಲಿಂಗರಾಜ್ ಅಗಸನಕಟ್ಟೆ, ಆನೆಕೊಂಡ ಲಿಂಗರಾಜು, ಕುಮಾರ ಮೆಳ್ಳೆಕಟ್ಟೆ, ಕಾಶೀಪುರ ಸುರೇಶ್, ಕುರುಡಿ ಬಣಕಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

comments icon 0 comments
0 notes
3 views
bookmark icon

Write a comment...

Your email address will not be published. Required fields are marked *