ಶ್ರೀಸಾಮಾನ್ಯನ ಬದುಕಿನ ಮೂಲ ಅವಶ್ಯಕತೆಗಳನ್ನು ಒದಗಿಸಿಕೊಟ್ಟದ್ದು ಶಿವಶರಣ ಸಿದ್ಧರಾಮರು

0
43

ಕಂಪ್ಲಿ:

      ಸಮಾಜ ಜೀವನವೇ ಸಿದ್ಧರಾಮರ ಜೀವನವಾಗಿದೆ. ಶ್ರೀಸಾಮಾನ್ಯನ ಬದುಕಿನ ಮೂಲ ಅವಶ್ಯಕತೆಗಳನ್ನು ಒದಗಿಸುವಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದವರಲ್ಲಿ ಶಿವಯೋಗಿ ಸಿದ್ಧರಾಮ ಅಗ್ರಗಣ್ಯನಾಗಿದ್ದಾರೆ. ಶಿವಯೋಗಿ ಸಿದ್ಧರಾಮ ಶ್ರಮಜೀವಿಯಾಗಿ ಕೆರೆ ಕಟ್ಟೆ, ದೇವಸ್ಥಾನಾದಿಗಳನ್ನು ನಿರ್ಮಿಸುವ ಮೂಲಕ ತನ್ನ ಹಾಗೂ ಅನ್ಯ ಸಮಾಜದ ಜನತೆಗೆ ಶ್ರಮದ ಬದುಕನ್ನು ತೋರಿದ ಶರಣನಾಗಿದ್ದಾರೆ. ಸಿದ್ಧರಾಮರ ವಚನಗಳಲ್ಲಿ ಮಿಥ್ಯಾಚಾರಗಳನ್ನು ಖಂಡಿಸಿ, ಸ್ತ್ರೀ ಪುರುಷ ಸಮಾನತೆಯನ್ನು, ಮಾನವೀಯ ನೆಲೆಯಲ್ಲಿ ಪ್ರೀತಿ, ಪ್ರೇಮ, ವಿಶ್ವಾಸಗಳನ್ನು ಬೆಳೆಸಿಕೊಳ್ಳಬೇಕೆನ್ನುವ ಭಾವನೆಗಳನ್ನು ಕಾಣಬಹುದು. ಭೋವಿಗಳು ಸಿದ್ಧರಾಮರ ವೈಚಾರಿಕೆ ಪ್ರಜ್ಞೆ ಬೆಳೆಸಿಕೊಳ್ಳುವಲ್ಲಿ ಮುಂದಾಗಬೇಕು. ಬದುಕಿಗೆ ಆದರ್ಶವಾಗಿ ಗುಣ, ವ್ಯಕ್ತಿತ್ವಗಳನ್ನು ರೂಢಿಸಿಕೊಳ್ಳಬೇಕು ಎಂದು ಅಖಿಲಭಾರತ ಶರಣಸಾಹಿತ್ಯ ಪರಿಷತ್ತಿನ ಬಳ್ಳಾರಿ ಜಿಲ್ಲಾಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪರವರು ಅಭಿಪ್ರಾಯ ಪಟ್ಟರು.

      ಅವರು ಇಲ್ಲಿನ ಭೋವಿ ಕಾಲೋನಿಯ ನಾಗಪ್ಪನ ಕಟ್ಟೆಯಲ್ಲಿ ಭಾನುವಾರ ಸಂಜೆ ಶರಣಸಾಹಿತ್ಯ ಪರಿಷತ್ತು ಕಂಪ್ಲಿ ತಾಲೂಕುಘಟಕ ಹಮ್ಮಿಕೊಂಡಿದ್ದ 96ನೇ ಮಹಾಮನೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಅವರು ‘ಶಿವಯೋಗಿ ಸಿದ್ಧರಾಮೇಶ್ವರರ ವಚನ ಚಿಂತನ’ ಕುರಿತು ವಿಶೇಷ ಉಪನ್ಯಾಸ ನೀಡಿ, ಸಿದ್ಧರಾಮರು ಬದುಕಿನ ಕನ್ನಡಿಯಾಗಿದ್ದಾರೆ. 12ನೇ ಶತಮಾನದಲ್ಲಿ ಮೊದಲ ಬಾರಿಗೆ ಸಾಮೂಹಿಕ ವಿವಾಹ ನೆರವೇರಿಸಿದ ಶಿವಶರಣನಾಗಿದ್ದಾರೆ ಎಂದು ಹೇಳಿದರು.

      ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ರಾಮಸಾಗರದ ರೈತ ಮುಖಂಡ ಬಿ.ನಾರಾಯಣಪ್ಪರು ಭೋವಿ ಸಮಾಜವು ಶ್ರಮದಾನ ಕಾರ್ಯನಿರ್ವಹಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಮನೆ, ಕಟ್ಟಡಗಳಿಗೆ ತಲಾಬಾಗಿಲು ಇಡುವುದರಿಂದ ಇಡಿದು ಪ್ರತಿ ಹಂತದಲ್ಲೂ ಆ ಸಮಾಜದವರ ಕೈ ಚಳಕ ಶ್ರೇಷ್ಠತೆಯನ್ನು ಮೆರೆದಿದ್ದನ್ನು ಕಾಣಬಹುದು. ಭೋವಿ ಸಮಾಜವು ಶ್ರಮಜೀವಿಗಳಿಂದ ಕೂಡಿದ್ದು, ಅನ್ಯ ಸಮುದಾಯದವರಿಗೂ ನಿರ್ಮಾಣ ತಂತ್ರ ಹಾಗೂ ಶ್ರಮ ಕೌಶಲ್ಯವನ್ನು ಕಲಿಸುವ ಬದುಕನ್ನು ಕಟ್ಟಿಕೊಟ್ಟಿದೆ. ಮಹಾರಾಷ್ಟ್ರದ ಸೊಲ್ಲಾಪುರ ಜಾಗೃತ ಕ್ಷೇತ್ರವಾಗಿದ್ದು, ಶಿವಯೋಗಿ ಸಿದ್ಧರಾಮರು ಆ ಸ್ಥಳವನ್ನು ಭೂಕೈಲಾಸವನ್ನಾಗಿ ನಿರ್ಮಿಸಿದ್ದಾರೆ ಎಂದು ಹೇಳಿದರು.

       ಇನ್ನು ರಂಗಭೂಮಿ ಕಲಾವಿದ ಬೂದಗುಂಪಿ ಹುಸೇನ್‍ಸಾಬ್ ಮಾತನಾಡಿ, ಭೋವಿ ಸಮುದಾಯದವರು ದುಶ್ಚಟಗಳಿಂದ ದೂರವಾಗಿ ಆದರ್ಶ ಬದುಕು ಸಾಗಿಸಬೇಕೆಂದರು. ಮಕ್ಕಳಿಗೆ ಸಮಾನ ಶಿಕ್ಷಣ, ಪೋಷಣೆ ನೀಡುವಲ್ಲಿ ಜಾಗೃತಿವಹಿಸಿ ನವೀನ ತಂತ್ರಜ್ಞಾನದ ತಿರುಳನ್ನು ಅರಿತು ತಮ್ಮ ವೃತ್ತಿಯಲ್ಲಿ ನೈಪುಣ್ಯತೆ ಗಳಿಸಬೇಕು ಎಂದು ಹೇಳಿದರು.
ಭೋವಿ ಸಮಾಜದ ವಿ.ಬಿ.ನಾಗರಾಜ ಇವರ ಜ್ಞಾನದಾಸೋಹದಡಿಯಲ್ಲಿ 96ನೇ ಮಹಾಮನೆ ಕಾರ್ಯಕ್ರಮ ಸಡಗರ ಸಂಭ್ರಮಗಳಿಂದ ಜರುಗಿದ್ದು ವಿಶೇಷವೆನಿಸಿತು.

      ಶರಣಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಜಿ.ಪ್ರಕಾಶ್ ಪ್ರಾಸ್ತಾವಿಕ ಮಾತಾಡಿದರು. ಪರಿಷತ್ತಿನ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ ಸ್ವಾಗತಿಸಿ, ವಂದಿಸಿದರು. ಸತೀಶ್ ನಿರೂಪಿಸಿದರು. ಪರಿಷತ್ತಿನ ಕಾರ್ಯದರ್ಶಿ ಕೆ.ಎಂ.ರುದ್ರಮುನಿ, ಇಟಗಿಯ ಸಹಿಪ್ರಾ ಶಾಲೆ ಮುಖ್ಯಗುರು ವಿ.ಪಕ್ಕೀರಪ್ಪ, ಭೋವಿ ಸಮಾಜದ ಮುಖಂಡರಾದ ವಿ.ಟಿ.ನಾಗರಾಜ, ಎ.ವಿ.ಗೋವಿಂದರಾಜು, ವಿ.ಬಿ.ನಾಗರಾಜ ವೇದಿಕೆ ಮೇಲಿದ್ದು ಮಾತನಾಡಿದರು. ಶಿಕ್ಷಕ ಸಿ.ರಮೇಶ್, ಪಿ.ಸಿ.ಅಂಜಿ, ಪಿ.ಶಂಭುಲಿಂಗ, ಗೋವಿಂದರಾಜು, ಎಚ್.ಎಂ.ತಿಪ್ಪೆಸ್ವಾಮಿ, ಸಂದೀಪ್, ಮಾರುತಿ, ಸತೀಶ್, ವಾಸು, ನಾಗರಾಜ, ನಿರಂಜನ್, ಭಾಸ್ಕರ್, ಚಿತ್ರಗಾರ್ ಪ್ರಶಾಂತ್, ಲೋಕೇಶ್, ವಿಶ್ವ, ರಮೇಶ್ ಸೇರಿ ಭೋವಿ ಸಮುದಾಯದವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here